ಹತ್ತೇ ದಿನಗಳಲ್ಲಿ ನಿಮ್ಮ ಮುಖಸೌಂದರ್ಯ ವರ್ಧಿಸಿಕೊಳ್ಳಿ
ಹತ್ತೇ ದಿನಗಳಲ್ಲಿ ನಿಮ್ಮ ಮುಖಸೌಂದರ್ಯ ವರ್ಧಿಸಿಕೊಳ್ಳಿ
ಧಾವಂತದ ಈ ಯುಗದಲ್ಲಿ ಎಲ್ಲರಿಗೂ ಯಾವುದಕ್ಕೂ ಸಮಯದ ಅಭಾವ. ಹದಿಹರೆಯದವರು ತಮ್ಮ ಆರೋಗ್ಯವನ್ನು ಧನ ಆರ್ಜಿಸುವುದಕ್ಕಾಗಿ ವ್ಯಯಿಸಿದರೆ ನಂತರ ಅದೇ ಹಣವನ್ನು ತಮ್ಮ ಕಳೆದ ಆರೋಗ್ಯವನ್ನು ಸಂಪಾದಿಸುವುದಕ್ಕಾಗಿ ಹೆಚ್ಚಿನಂಶ ವ್ಯಯಿಸುತ್ತಾರೆ.
ನಮ್ಮ ಆರೋಗ್ಯ ಕಾಪಾಡಬೇಕಾದರೆ ಬೇಕಾಗಿರೋದು ಸ್ವಲ್ಪ ವ್ಯಾಯಾಮ ಸಮತೋಲಿತ ಆಹಾರ ಮತ್ತು ಪ್ರಶಾಂತ ಜೀವನ.
ಸುಂದರವಾಗಿ ಕಾಣಲು ನಮ್ಮ ಸಂಪಾದನೆಯ ಮತ್ತಷ್ಟು ಭಾಗ ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಪ್ರಸಾಧನಗಳಿಗೇ ಮೀಸಲಿಡಬೇಕೆಂದಿಲ್ಲ.
ನಮ್ಮ ಮನೆಯಲ್ಲಿಯೇ ಇರುವ ಪ್ರಾಕೃತಿಕ ವಸ್ತುಗಳನ್ನೇ ಉಪಯೋಗಿಸಿ ಕೊಂಡೂ ನಮ್ಮ ಮುಖ ಸೌಂದರ್ಯವನ್ನು ವರ್ಧಿಸಿಕೊಳ್ಳಬಹುದು.
ಈ ಕೆಳಗೆ ಅಂತಹ ಒಂದು ಉತ್ತಮ ಉಪಾಯವಿದೆ.
ಇದನ್ನು ನಾನು ನನ್ನ ಮನೆಯವರು ಉಪಯೋಗಿಸುತ್ತ ಬಂದಿದ್ದು ಹತ್ತೇ ದಿನಗಳಲ್ಲಿ ನೀವು ಆಶ್ಚರ್ಯಪಡುವಷ್ಟು ಬದಲಾವಣೆ ನಿಮ್ಮ ಮುಖದಲ್ಲಿ ಕಂಡು ಬರುತ್ತದೆ
ಪ್ರಯತ್ನಿಸಿ ನೋಡಿ ತಿಳಿಸಿ
ದಿನ ೧:
ಮುಖವನ್ನು ಸ್ವಚ್ಚವಾಗಿ ತಣ್ಣೀರಿನಲ್ಲಿ ತೊಳೆದು, ಒರೆಸದೇ ಹಾಗೇ ಆರಲು ಬಿಡಿ. ಆರಿದ ಕೂಡಲೇ ೪ ಚಮಚ ಹಾಲಿಗೆ ಚಿಟಿಕೆ ಸಕ್ಕರೆ, ಎರಡು ತೊಟ್ಟು ನಿಂಬೆ ರಸ ಕಲಸಿ ಮುಖ ಕತ್ತುಗಳ ಮೇಲೆ ಸವರಿ ಬಿಟ್ಟು ಬಿಡಿ, ಮತ್ತೆ ಯಾವ ಅಲಂಕಾರಿಕ ಸಾಧನಗಳನ್ನೂ ಬಳಸಬೇಡಿ.ಕಣ್ಣಿನ ಸುತ್ತ ಮತ್ತು ತುಟಿಯಡಿಯಲ್ಲಿಸ್ವಲ್ಪ ಹೆಚ್ಚಾಗಿಯೇ ಹಚ್ಚಿರಿ. ರಾತ್ರೆ ಮಲಗುವ ಮುನ್ನ ಹತ್ತಿಯನ್ನು ಒದ್ದೆ ಮಾಡಿ ಮುಖವನ್ನೂ ಕತ್ತನ್ನೂ ಒರೆಸಿ ೧ ಚಮಚ ಹಿಪ್ಪೆ ಎಣ್ಣೇ ಅಥವಾ ಬಾದಾಮಿ ಎಣ್ಣೆಯನ್ನು ಮುಖ ಕತ್ತುಗಳಿಗೆ ಹಚ್ಚಿ ಮಲಗಿ.
ದಿನ ೨:
ಎಂದಿನಂತೆ ಮುಖ ತೊಳೆದು ನಿಮ್ಮ ಕಾರ್ಯದಲ್ಲಿ ತೊಡಗಿ, ಸಂಜೆ ಸ್ವಚ್ಚವಾಗಿ ಮುಖ ತೊಳೆದು ಹಾಗೇ ಆರಲು ಬಿಡಿ. ನಂತರ ಗಟ್ಟೀ ಮೊಸರು೪ ಚಮಚ ತೆಗೆದು ಕೊಂಡು ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಧಾರಾಳವಾಗಿ ಮುಖ ಕತ್ತಿಗೆ ಹಚ್ಚಿ ಆರಲು ಬಿಡೀ. ಅರ್ಧ ಘಂಟೆಯ ನಂತರ ತಣ್ಣೀರಿನಲ್ಲಿ ಮುಖ ತೊಳೆದು ಹತ್ತಿ ಅಥವಾ ಸ್ವಚ್ಚವಾದ ಟವೆಲಿನಲ್ಲಿ ಒತ್ತಿ ಒರೆಸಿ, ಯಾವ ಅಲಂಕಾರವೂ ಬೇಡ.
ದಿನ ೩.:
ಎಂದಿನಂತೆ ನಿಮ್ಮ ಕಾರ್ಯದಲ್ಲಿ ತೊಡಗಿ. ಸಂಜೆ ಮಾಮೂಲಿನಂತೆ ಸ್ವಚ್ಚವಾಗಿ ಮುಖ ತೊಳೆದು ೨ ಚಮಚ ನಿಂಬೆ ರಸಕ್ಕೆ ೪ ಚಮಚ ಪನ್ನೀರು ಸೇರಿಸಿ ಮುಖ ಕತ್ತಿಗೆ ಧಾರಾಳವಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದು ಬಿಡಿ. ರಾತ್ರೆ ಮಲಗುವ ಮುನ್ನ ಹಸಿ ಸೌತೆಕಾಯಿಯನ್ನು ಬಿಲ್ಲೆಗಳಾಗಿ ಮಾಡಿ ಮುಖಕ್ಕೆ ಅದರ ರಸವನ್ನೆಲ್ಲಾ ತಿಕ್ಕಿ ಮಲಗಿ.
ದಿನ ೪:
ಸಂಜೆ ಮುಖ ತೊಳೆದು ಹಾಗೇ ಆರಲು ಬಿಡಿ. ೪ ಚಮಚ ಹಾಲಿಗೆ ಅರಶಿನ ಸೇರಿಸಿ, ಮುಖ ಕತ್ತುಗಳಿಗೆ ಹಚ್ಚಿ ಅರ್ಧ ಘಂಟೆಯ ನಂತರ ತಣ್ಣೀರಿನಲ್ಲಿ ತೊಳೆದು ಬಿಡಿ.ಮಲಗುವಾಗ ಬಾದಾಮಿ ಅಥವಾ ಹಿಪ್ಪೆ ಎಣ್ಣೆಯನ್ನು ಮುಖ ಕತ್ತುಗಳಿಗೆ ಹಚ್ಚಿ ಮಲಗಿ.
ದಿನ ೫:
ಸಂಜೆ ಮುಖ ಚೆನ್ನಾಗಿ ತೊಳೆದು ಒಂದು ಚೆಂಬು ನೀರಿಗೆ ೪ ಚಮಚ ಹಾಲು ಸೇರಿಸಿ ಮುಖದ ಮೇಲೆ ಸಿಂಪಡಿಸಿ ಕೊಳ್ಳೂತ್ತಾ ಅರುತ್ತಲೇ ಮತ್ತೆ ಮತ್ತೆ ಸಿಂಪಡಿಸಿ ಆ ಚೆಂಬಿನ ನೀರು ಖಾಲಿಯಾಗುವವರೆಗೆ ಮತ್ತು ಹಾಗೇ ಆರಲು ಬಿಡಿ. ನಂತರ ಅಗಲವಾದ ಪಾತ್ರೆಯಲ್ಲಿ ಕೊಂಚ ನೀರನ್ನು ಕುದಿಯಲು ಇಟ್ಟು ಅದಕ್ಕೆ ಒಂದು ಚಮಚ ನಿಂಬೆ ರಸ ಸೇರಿಸಿ ಕುದಿಯುತ್ತಿರುವ ಬಿಸಿ ಹಬೆಗೆ ೫-೧೦ ನಿಮಿಷ ನಿಮ್ಮ ಮುಖ ಒಡ್ಡಿ. ಅನಂತರ ಶುಭ್ರವಾದ ಹತ್ತಿಯಿಂದ ಮುಖವನ್ನು ಒರೆಸಿಕೊಳ್ಳಿ. ರಾತ್ರೆ ಮಲಗುವ ಮುನ್ನ ಕಣ್ಣು ರೆಪ್ಪೆಯ ಮೇಲೆ,ಕಣ್ಣುಗಳ ಕೆಳಗೆ ಮತ್ತು ತುಟಿಯ ಸುತ್ತ ಹಿಪ್ಪೆ ಎಣ್ಣೆ ಅಥವಾ ಹರಳೆಣ್ಣೆ ಸವರಿಕೊಂಡು ಮಲಗಿ.
ದಿನ ೬
ಸಂಜೆ ಮುಖ ತೊಳೆದು ೧ ಬಟ್ಟಲು ಗಟ್ಟಿ ಮೊಸರಿಗೆ ಅರ್ಧ ಬಟ್ಟಲು ಅಕ್ಕಿ ಹಿಟ್ಟು ಅಥವಾ ಕಡಲೇ ಹಿಟ್ಟು ಸೇರಿಸಿ ಮುಖ ಕತ್ತುಗಳಿಗೆ ಹಚ್ಚಿ ೪೫ ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ.ರಾತ್ರೆ ಮಲಗುವ ಮುನ್ನ ಸೌತೆ ಕಾಯಿಯ ತಿರುಳನ್ನು ಮುಖ ಕತ್ತುಗಳಿಗೆ ಹಚ್ಚಿ ಮಲಗಿ.
ದಿನ ೭
ಎಂದಿನಂತೆ ಸಂಜೆ ಮುಖ ತೊಳೆದು ಆಲೂಗಡ್ಡೆ ಅಥವಾ ಕ್ಯಾರೆಟ್ ( ಗಜ್ಜರಿ) ಚೆನ್ನಾಗಿ ಬೇಯಿಸಿ ಹಿಟ್ಟಿನಂತೆ ಮಾಡಿ ಅದಕ್ಕೆ ಕೊಂಚ ನಿಂಬೆ ರಸ ಸೇರಿಸಿ ಮುಖ ಕತ್ತುಗಳಿಗೆ ಧಾರಾಳವಾಗಿ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಿರಿ. ರಾತ್ರೆ ಮಲಗುವ ಮುನ್ನ ಹಸೀ ಆಲೂ ಗಡ್ಡೆ ಅಥವಾ ಕ್ಯಾರೆಟ್ಟಿನ ( ಗಜ್ಜರಿ) ರಸವನ್ನು ಮುಖಕ್ಕೆ ಹಚ್ಚಿ ಮಲಗಿ.
ದಿನ ೮
ಸಂಜೆ ಮುಖವನ್ನು ತೊಳೆದು ನೀರು ಆರಲು ಬಿಡಿ ೧ ಚಮಚ ಲಿಂಬೆ ರಸಕ್ಕೆ ೨ ಚಮಚ ಹಿಪ್ಪೆ ಎಣ್ಣೆ ಅಥವಾ ಹರಳೆಣ್ಣೆಯನ್ನು ಸೇರಿಸಿ ಕಲಸಿ ಕೆನ್ನೆ ಕತ್ತು ಮತ್ತು ಹಣೆಯ ಮೇಲೆ ತೋರು ಬೆರಳಿನಿಂದ ಸವರಿ ಎಲ್ಲಾ ಮಿಶ್ರಣ ಮುಗಿಯುವ ವರೆಗೂ ಹಾಗೇ ಮರ್ಧಿಸುತ್ತಾ ಇರಿ. ೧ ಗಂಟೆಯ ಕಾಲ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಒದ್ದೆಯಾದ ಹತ್ತಿಯಿಂದ ಮುಖ ಕತ್ತುಗಳನ್ನು ಒತ್ತಿ ನೀರು ಒಣಗಿಸಿಕೊಳ್ಳಿ. ರಾತ್ರೆ ಒಂದಿಷ್ಟು ಲಿಂಬೆ ರಸವನ್ನು ಮುಖ ಕತ್ತುಗಳಿಗೆ ಹಚ್ಚಿ ಮಲಗಿ.
ದಿನ ೯.
ಚೆನ್ನಾಗಿ ಮುಖ ತೊಳೆದು ಆರಿಸಿ, ೨ ಚಮಚ ಪನ್ನೀರಿಗೆ ೧ ಸಣ್ಣ ಗಡ್ಡೆ ಐಸ್ ಗಡ್ಡೆ ಹಾಕಿ ಮುಖ ಕತ್ತುಗಳಿಗೆ ಸವರಿ ಹಾಗೆಯೇ ಬಿಡಿ. ಮಲಗುವ ಮುನ್ನ ೪ ಚಮಚ ಲಿಂಬೆ ರಸಕ್ಕೆ ೪ ತೊಟ್ಟು ಬಾದಾಮಿ ಎಣ್ಣೆ ಹಾಕಿ ಕಲಸಿ ಮುಖ ಕತ್ತುಗಳಿಗೆ ಹಚ್ಚಿ ಮಲಗಿ.
ದಿನ ೧೦.
ಮುಖ ತೊಳೆದು ಗಟ್ಟಿ ಮೊಸರಿಗೆ ಕಡಲೆ ಹಿಟ್ಟನ್ನು ಸೇರಿಸಿ ಮುಖ ಕತ್ತುಗಳ ಮೇಲೆ ನಯವಾಗಿ ಉಜ್ಜಿ ೫ ನಿಮಿಷ ಬಿಟ್ಟು ಮುಖ ತೊಳೆದು ಒರೆಸಿ ಕೊಳ್ಳಿ. ಮಲಗುವ ಮುನ್ನ ೨ ಚಮಚ ನಿಂಬೆ ರಸಕ್ಕೆ ೧ ಚಮಚ ಗ್ಲಿಸರೀನ್ ಸೇರಿಸಿ ಮುಖ ಕತ್ತುಗಳಿಗೆಲ್ಲಾ ಹಚ್ಚಿ ಮಲಗಿ.
ಮರುದಿನ ನಿಮ್ಮ ಮುಖದ ಕಾಂತಿ ಹೆಚ್ಚಾಗಿರುವುದನ್ನು ಗಮನಿಸಿ. ಮೂರು ತಿಂಗಳಿಗೊಮ್ಮೆ ಈ ಪದ್ಧತಿಯನ್ನು ಅನುಸರಿಸಿ ನಿಮ್ಮ ಮುಖ ಸೌಂದರ್ಯವನ್ನು ವರ್ಧಿಸಿಕೊಳ್ಳಿ