ಹದಿಮೂರು ಶ್ರೇಷ್ಠ ಕಥೆಗಳು
ಭಾರತದ 13 ಭಾಷೆಗಳ ಶ್ರೇಷ್ಠ ಮಕ್ಕಳ ಕತೆಗಳ ಸಂಕಲನ ಇದು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದೀ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಕತೆಗಳು ಇದರಲ್ಲಿವೆ.
ಇವನ್ನು ಎಲ್. ಎಸ್. ಶೇಷಗಿರಿರಾಯರು ಕನ್ನಡಕ್ಕೆ ಅನುವಾದಿಸಿದ್ದಾರೆ.
ವಿಶೇಷ ಬಹುಮಾನ (ಅಸ್ಸಾಮಿ) ಕತೆ ವಿದ್ಯಾರ್ಥಿಯೊಬ್ಬ ತುಂಟನಂತೆ ಕಂಡರೂ ಅಂತಃಕರಣದ ಹುಡುಗ ಎಂಬುದನ್ನು ಪ್ರಸ್ತುತಪಡಿಸುತ್ತದೆ. ಆತನನ್ನು ಶಿಕ್ಷಿಸಿದ ಮುಖ್ಯೋಪಾಧ್ಯಾಯರೇ ಅವನ ಸನ್ನಡತೆ ಕಂಡಾಗ ಬೆನ್ನು ತಟ್ಟುತ್ತಾರೆ. ಶಾಲಾ ವಾರ್ಷಿಕೋತ್ಸವದಲ್ಲಿ ಅತ್ಯುತ್ತಮ ಗುಣನಡತೆಗಾಗಿ ಅವನಿಗೇ ವಿಶೇಷ ಬಹುಮಾನ ನೀಡುತ್ತಾರೆ. ವ್ಯಕ್ತಿಯೊಬ್ಬನು ಏನು ಮಾಡುತ್ತಾನೆ ಎಂಬುದರಿಂದ ಅವನ ಗುಣನಡತೆ ಅಳೆಯಬೇಕು ಎಂಬ ದೊಡ್ಡ ಪಾಠ ಇದರಲ್ಲಿದೆ.
ಎರಡನೆಯದು ಸತ್ಯಜಿತ್ ರೇ ಬರೆದಿರುವ ಹಸಿದ ಸೆಪ್ಟೊಪಸ್ ಎಂಬ ಬಂಗಾಳಿ ಕತೆ. ಮಾಂಸಾಹಾರಿ ಸಸ್ಯಗಳ ಸಂಗ್ರಾಹಕನೊಬ್ಬ ದಕ್ಷಿಣ ಅಮೇರಿಕಾದ ಕಾಡಿನಿಂದ ಭಯಂಕರ ಮಾಂಸಾಹಾರಿ ಸಸ್ಯವೊಂದನ್ನು ಬಂಗಾಳದ ತನ್ನ ಮನೆಗೆ ತಂದು ಸಾಕುತ್ತಿದ್ದ. ರಕ್ಕಸನಂತೆ ಬೆಳೆದ ಅದರಿಂದ ಏನೆಲ್ಲ ಅನಾಹುತಗಳಾದವು ಎಂಬ ರೋಚಕ ವಿವರಗಳಿರುವ ಕತೆ.
ಮೂರನೆಯದು ಪ್ರಸಿದ್ಧ ಲೇಖಕ ರಸ್ಕಿನ್ ಬಾಂಡ್ ಅವರ ಇಂಗ್ಲಿಷ್ ಕತೆ: ಸೀತೆ ಮತ್ತು ನದಿ. ಅಜ್ಜ ಮತ್ತು ಅಜ್ಜಿಯೊಂದಿಗೆ ನದಿಯಿಂದ ಸುತ್ತುವರಿದಿರುವ ದ್ವೀಪದಲ್ಲಿ ವಾಸಿಸುವ ಸೀತೆ ಎಂಬ ಹುಡುಗಿಯ ಕತೆ. ಅದೊಂದು ದಿನ ಅನಾರೋಗ್ಯದಿಂದ ಬಳಲುವ ಅಜ್ಜಿಯನ್ನು ಚಿಕಿತ್ಸೆಗಾಗಿ ದೂರದ ಊರಿಗೆ ಕರೆದೊಯ್ಯುತ್ತಾನೆ ಅಜ್ಜ. ಸೀತೆ ಒಬ್ಬಳೇ ದ್ವೀಪದಲ್ಲಿ ಉಳಿಯುತ್ತಾಳೆ. ಆ ದಿನ ಶುರುವಾದ ಎಡೆಬಿಡದ ಜಡಿಮಳೆಯಿಂದಾಗಿ ನದಿಯಲ್ಲಿ ನೆರೆ ಬಂದು, ಸೀತೆಯ ಮಣ್ಣಿನ ಗುಡಿಸಲು ಕೊಚ್ಚಿ ಹೋಗುತ್ತದೆ. ಸೀತೆ ಹತ್ತಿ ಕುಳಿತಿದ್ದ ಅಶ್ವತ್ಥ ಮರವೂ ನದಿಗೆ ಬಿತ್ತು. ಮುಂದೇನಾಯಿತು ಎಂಬುದನ್ನು ಮನಮುಟ್ಟುವಂತೆ ಚಿತ್ರಿಸುವ ಕತೆ.
ಅದಲ್-ಬದಲ್ ಎಂಬ ಗುಜರಾತಿ ಕತೆ ಹಿಂದೂ ಮತ್ತು ಮುಸ್ಲಿಂ ಹುಡುಗರ ನಡುವಿನ ಆಪ್ತ ಸ್ನೇಹವನ್ನು ಮನಮುಟ್ಟುವಂತೆ ತಿಳಿಸುವ ಕತೆ. ಮಕ್ಕಳಿಂದ ಹಿರಿಯರೂ ಪ್ರೀತಿಯ ಶಕ್ತಿಯನ್ನು ಕಲಿಯಬಹುದು ಎಂಬ ಸಂದೇಶ ಇದರದ್ದು.
ಹೆಸರುವಾಸಿ ಹಿಂದೀ ಸಾಹಿತಿ ಭೀಷಮ್ ಸಹಾನಿ ಬರೆದ ಕತೆ: ಕವಣೆ ಇಟ್ಟುಕೊಂಡಿದ್ದ ಹುಡುಗ. ಇದು ಮತ್ತು ಮಲಯಾಳಂ ಕತೆ ಸುಂದರ ಮತ್ತು ಚುಕ್ಕೆ ಬಾಲ (ಒಂದು ದನದ ಹೆಸರು) - ಇವೆರಡು ಕತೆಗಳು ಮನುಷ್ಯ ಮತ್ತು ಪ್ರಾಣಿಪಕ್ಷಿಗಳ ಸಂಬಂಧವನ್ನು ನಮ್ಮೆದುರಿಗಿಡುವ ಪರಿ ನಮ್ಮ ಕಣ್ಣುಗಳನ್ನು ತೇವಮಯವಾಗಿಸುತ್ತವೆ.
ರಾಹುಲ ಕತೆ ಅದೇ ಹೆಸರಿನ ನಾಯಿಯ ಬಗ್ಗೆ ಕನ್ನಡದ ಪ್ರಸಿದ್ಧ ಕತೆಗಾರ್ತಿ ತ್ರಿವೇಣಿ ಬರೆದ ಕತೆ. ಹದಿಮೂರು ಭಾಷೆಗಳ ಮಕ್ಕಳ ಕಥಾಸಂಕಲನದಲ್ಲಿ ಸ್ಥಾನ ಪಡೆದಿರುವ ಈ ಕತೆ ಮನುಷ್ಯ ಮತ್ತು ನಾಯಿಯ ಸಂಬಂಧವನ್ನು ತೆರೆದಿಡುವ ಪರಿಯನ್ನು ಓದಿಯೇ ತಿಳಿಯಬೇಕು. ಹಾಗೆಯೇ ಬಮ್ ಬಹಾದುರ್ (ಪಂಜಾಬಿ) ಕತೆ ಅದೇ ಹೆಸರಿನ ಆನೆಯೊಂದು ರಾಣಿಯ ಪ್ರೀತಿಗೆ ಸ್ಪಂದಿಸುವುದನ್ನು ಮನಕರಗುವಂತೆ ವಿವರಿಸುತ್ತದೆ.
ಬಹುವೇಗದ ಫನೆ ಎಂಬ ಮರಾಠಿ ಕತೆ ದೊಡ್ಡ ಬೆಲೂನಿನ ಹಗ್ಗಕ್ಕೆ ಸಿಕ್ಕಿ ಹಾಕಿಕೊಂಡು ಆಕಾಶಕ್ಕೆ ನೆಗೆದವನ ಫಜೀತಿಯ ಕಥನ.
ಸ್ವರ್ಗಕ್ಕೆ ಏಳು ಮೆಟ್ಟಿಲುಗಳು (ಒರಿಯಾ) ಎಂಬುದು ಅಂತರಿಕ್ಷಯಾನಕ್ಕೆ ಆಯ್ಕೆಯಾಗುವ ಯುವಕನೊಬ್ಬನ ಪರೀಕ್ಷೆಯ ಕತೆ.
ಅಂಚೆ ಚೀಟಿ ಸಂಗ್ರಹ ಪುಸ್ತಕ (ತಮಿಳು) ಮತ್ತು ಅಪ್ಪುವಿನ ಕಥೆ (ತೆಲುಗು) - ಇವು ಕೆಟ್ಟ ಗುಣದ ಇಬ್ಬರು ಹುಡುಗರ ಮನಪರಿವರ್ತನೆಯ ಕತೆಗಳು. ಕೊನೆಯ ಕತೆ: ಅಹಂಕಾರದ ಬೆಲೆ (ಉರ್ದು)
ಎಲ್ಲ 13 ಕತೆಗಳೂ ಕತೆಗಾರರ ಕಲ್ಪನಾವಿಲಾಸಕ್ಕೆ ಕನ್ನಡಿ ಹಿಡಿಯುವುದರ ಜೊತೆಗೆ ಮಕ್ಕಳಿಗೆ ಉತ್ತಮ ಬದುಕಿನ ಸಂದೇಶವನ್ನು ಪರಿಣಾಮಕಾರಿಯಾಗಿ ನೀಡುತ್ತವೆ. ಹಾಗಾಗಿ, ಇವು ಎಲ್ಲ ವಯಸ್ಸಿನವರಿಗೂ ಒಳ್ಳೆಯ ಓದು.