ಹದಿಹರೆಯದ ಮನಸ್ಸು...

ಹದಿಹರೆಯದ ಮನಸ್ಸು...

"ಹುಚ್ಚುಕೋಡಿ ಮನಸ್ಸು... ಅದು ಹದಿನಾರರ ವಯಸ್ಸು..." ಎಂಬ ಹಾಡಿದೆ. ಲಂಗು ಲಗಾಮಿಲ್ಲದೆ ಓಡುವ ಕುದುರೆಯಂತಿರುವ ಮನಸ್ಸನ್ನು ನಿಯಂತ್ರಿಸುವುದು ನನ್ನ ಈ ವಯಸ್ಸಲ್ಲಿ ಬಹಳ ಕಷ್ಟವಾಯಿತು. ಮನಸ್ಸು ಏನು ಹೇಳುತ್ತದೆಯೋ ಅದನ್ನೇ ಮಾಡಬೇಕು ಎಂಬ ಆಸೆಗಳು ನನ್ನ  ಮನದಲ್ಲಿ ಮೂಡುತ್ತಿದ್ದವು. 

ಈ ವಯಸ್ಸಲ್ಲಿ ಮನೆಯವರು ಏನೇ ಹೇಳಿದರೂ ಅವರ ಮಾತುಗಳನ್ನು ತಿರಸ್ಕರಿಸುವುದು, ಅವರ ವಿರುದ್ಧವಾದ ಕೆಲಸ ಮಾಡುವುದು ನಾನು ಮಾಡುತ್ತಿದ್ದೆ. ತಿಂಗಳು ಕಳೆದಂತೆ ನನ್ನಲ್ಲಿ ಹಲವಾರು ಬದಲಾವಣೆಗಳು ನನ್ನಲ್ಲಿ ಮೂಡಿಬಂದವು. ದೈಹಿಕವಾಗಿ ಮೂಳೆ ಮಾಂಸ ಖಂಡಗಳು ಗಟ್ಟಿಯಾಗಲೂ, ಗಾಳಿ ಬಂದ ಬಲೂನಿನಂತೆ ಉಬ್ಬಿಕೊಂಡಾಗ ನನ್ನಲ್ಲಿ ಆಸೆ ಆಕಾಂಕ್ಷೆಗಳು  ಹೆಚ್ಚಾಗತೊಡಗಿದವು, ಈ ವಯಸ್ಸಿನಲ್ಲಿ ಯಾವುದು ತಪ್ಪು, ಯಾವುದು ಸರಿ ಅನ್ನೋದು ಅರ್ಥವಾಗಲು ತುಂಬಾ ಕಷ್ಟ ಕರವಾಯಿತು. 

ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋಗುವಾಗ ನನ್ನಲ್ಲಿ ನಾಚಿಕೆ ಮುಜುಗರ  ಆತಂಕ ಕಂಡು ಬಂದವು, ಸಮಾಜದಲ್ಲಿ ಹಲವಾರು ಮುಖಗಳು ಇರುತ್ತವೆ. ನಾವು ಎಷ್ಟೇ ಧೈರ್ಯಮಾಡಿ ಗುರಿ ಸಾಧಿಸಲು ಮುನ್ನಡೆಯುತ್ತಿದ್ದರೂ ಕೆಲವೊಂದು ಕೆಟ್ಟ ಹುಳುಗಳು ನಮ್ಮ ಬೆನ್ನಹಿಂದೆಯೇ ಇರುತ್ತವೆ. ನನ್ನ  ಆಕರ್ಷಣೆಗೆ ಬಿದ್ದು, ಬೆನ್ನ ಹಿಂದೆ ತಿರುಗುವ ಹುಡುಗರಿಗೇನು ಕಡಿಮೆ ಇರಲಿಲ್ಲ. ಹದಿಹರೆಯದ ಹುಡುಗಿಯರು ಎಂದ ಕೂಡಲೇ ಜೊಲ್ಲು ಸುರಿಸುವ ನಾಲಿಗೆಗಳಿಗೇನೂ ಕಡಿಮೆ ಇಲ್ಲ.

ಹೆಣ್ಣಾಗಿ ಹುಟ್ಟಿದ ಮಾತ್ರಕ್ಕೆ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಇರಬಾರದು ಎಂದು ಈ ಕೆಳಗಿನ ಒಂದು ಘಟನೆಯಿಂದ  ನಾನು ಕಲಿತುಕೊಂಡೆ.

ನಾನು ಒಂದು ದಿನ ನನ್ನ ಸಂಬಂಧಿಕರ ಮನೆಗೆ ಬೆಳಗಿನ ಹೊತ್ತು ಪ್ರಯಾಣಿಸುವಾಗ ಅಹಿತಕರ ಘಟನೆ ನಡೆಯಿತು, ಬೆಳಿಗ್ಗೆ  ಅಂದ ಕೊಡಲೇ ಸರ್ವೇ ಸಾಮಾನ್ಯ ಯಾವುದೇ ವಾಹನವಾಗಿರಲಿ ತುಂಬಾ ರಶ್ ಇದ್ದೇ ಇರುತ್ತೆ. ಅಂದರೆ ದೈನಂದಿನ ಕೆಲಸದ ಕಾರ್ಮಿಕರು, ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ಅದೊಂದು ದಿನ ಲೇಟಾಗಿತ್ತು. ಜನಜಂಗುಳಿ ತುಂಬಿದ ಸರ್ಕಾರಿ ಬಸ್ಸಿನಲ್ಲಿ  ಹೋಗಬೇಕಿತ್ತು. ಬಸ್ ಮೆಟ್ಟಿಲಲ್ಲೇ ಕಾಲಿಡಲಾಗದಷ್ಟು ಕಿಕ್ಕಿರಿದ ಜನ. ಹೇಗೋ ನುಗ್ಗಿ ಬಸ್ಸು ಹತ್ತಲು ಪ್ರಯತ್ನಿಸುತ್ತಿದ್ದೆ. ಯಾವುದೋ ಕೈ ಅಸಭ್ಯ ಎನಿಸುವ ರೀತಿ ನನ್ನ ಮೈಗೆ ಅಂಟಿಕೊಂಡು ಹಿಡಿದುಕೊಂಡಿತ್ತು. ನನಗೆ ಅಳು, ಭಯ, ಮುಜುಗರ ನೋವು ಒಟ್ಟಿಗೇ ಬಂದಿತ್ತು. ಕ್ಷಣದಲ್ಲೇ ಆ ಒರಟು ಕೈಯಿಂದ ಬಿಡಿಸಿ ಚಿವುಟಿ, ಬಿಡಿಸಿಕೊಂಡು ಸ್ವಲ್ಪ ಮುಂದೆ ಸಾಗಿದೆ. ಕೈ ಕಾಲುಗಳು ನಡುಗುತ್ತಿದ್ದವು. ಆ ಮನುಷ್ಯ ಮಾತ್ರ ಯಾರೆಂದು ಮುಖವೇ ನೋಡಲಾಗಲಿಲ್ಲ. ಬಸ್ ಅಲ್ಲಿ ನಾನು ಸ್ನಾನ ಮಾಡಿದ ರೀತಿಯಲ್ಲಿ ಬೆವತು ಹೋದೆ.

ಈ ತರಹದ ಅನಿರೀಕ್ಷಿತ ಅನುಭವಗಳು ಆದಾಗ ಹೆಣ್ಣಾದವಳು ಏನು ತಾನೇ ಮಾಡಲು ಸಾಧ್ಯ, ಯಾರಿಗೂ ಹೇಳುವಂತಿಲ್ಲ. ಬಿಡುವಂತಿಲ್ಲ. ಆದರೂ ಇಂತಹ ಕೆಲಸ ಯಾರು ಮಾಡಿದರೆಂದು ತಿಳಿದೂ ಸುಮ್ಮನಿದ್ದರೆ ನಮ್ಮ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಾ ಹೋಗುತ್ತದೆ. ಇಂತಹವರಿಗೆ  ಅಲ್ಲಿಯೇ ತಕ್ಕ ಪಾಠ ಕಲಿಸುವ ಧೈರ್ಯ ಮಾಡಬೇಕು.

-‘ನಂದಿನಿ’

ಇಂಟರ್ನೆಟ್ ಚಿತ್ರ ಕೃಪೆ