ಹದ್ದಿನ ಕಣ್ಣಿನಿಂದ ನೋಡುತ್ತಲೇ ಇರಬೇಕು...!

ಹದ್ದಿನ ಕಣ್ಣಿನಿಂದ ನೋಡುತ್ತಲೇ ಇರಬೇಕು...!

ವಿದೇಶಿ ಸಂಸ್ಥೆಗಳ ಆರೋಪಗಳನ್ನು ಒಪ್ಪಬೇಕಿಲ್ಲ ಆದರೆ ಆಂತರಿಕ ನಿಸ್ಪಕ್ಷಪಾತ ತನಿಖೆ ಅತಿ ಅವಶ್ಯಕ ಮತ್ತು ಅನಿವಾರ್ಯ. ಕೆಲವೇ ತಿಂಗಳುಗಳ ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ವೇಗವಾಗಿ ಮುನ್ನಡೆ ಸಾಧಿಸುತ್ತಿದ್ದ ಗೌತಮ್ ಅದಾನಿಯವರ ಬಗ್ಗೆ ಒಂದು ಎಚ್ಚರಿಕೆಯ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ಏಕೆಂದರೆ ದಿಢೀರ್ ಶ್ರೀಮಂತಿಕೆಯ ಹಿಂದೆ ಏನಾದರೂ ಲೋಪ ಇರಬಹುದು ಎಂಬ ಸಣ್ಣ ಅನುಮಾನ.

ಅದು ಈಗ ನಿಜಾಗುತ್ತಿರುವ ಲಕ್ಷಣಗಳು ಕಾಣುತ್ತಿದೆ. ಹಾಗೆಂದು ಕಿಂಗ್ ಫಿಶರ್ ನ ವಿಜಯ್ ಮಲ್ಯ ಅಥವಾ ಸಹರಾ ಕಂಪನಿಯ ಸುಭ್ರತೊ ಬ್ಯಾನರ್ಜಿ ರೀತಿಯಲ್ಲಿ ಅವರನ್ನು ನಡೆಸಿಕೊಂಡು ಅವರ ಇಡೀ ವ್ಯಾಪಾರ ವ್ಯವಹಾರಗಳನ್ನು ಹಾಳು ಮಾಡಬಾರದು. ಏನೇ ಆದರೂ ಆತ ನಮ್ಮ ದೇಶದ ದೊಡ್ಡ ಉದ್ಯಮಿ.‌ ಒಂದು ವೇಳೆ ಆತ ಕೆಲವು ತಾಂತ್ರಿಕ ಅಂಕಿಅಂಶಗಳ ವಂಚನೆ ಮಾಡಿದ್ದರೆ ಅದಕ್ಕೆ ದೊಡ್ಡ ಮಟ್ಟದ ದಂಡ ವಿಧಿಸಿ ಮತ್ತೊಮ್ಮೆ ತಪ್ಪು ಮಾಡದಂತೆ ಎಚ್ಚರಿಕೆ ನೀಡಿ ಆತನ ವ್ಯವಹಾರಗಳು ಕಾನೂನಿನ ರೀತಿಯಲ್ಲಿ ಮತ್ತೆ ಮುನ್ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು. 

ಇಲ್ಲದಿದ್ದರೆ ದೊಡ್ಡ ಉದ್ಯಮಿಗಳನ್ನು ಅಕ್ರಮವಾಗಿ ಬೆಳೆಯಲು ಬಿಟ್ಟು ಅವರು ದೇಶದ ಆರ್ಥಿಕ ವ್ಯವಹಾರಗಳ ಮೇಲೆ ಸಾಕಷ್ಟು ಪ್ರಭಾವ ಹೊಂದಿದ ಮೇಲೆ ಅವರನ್ನು ಶಿಕ್ಷಿಸಿದರೆ ದೇಶದ ಅರ್ಥವ್ಯವಸ್ಥೆ ಕುಸಿಯುತ್ತದೆ ಮತ್ತು ಅದರಿಂದ ಅನೇಕ ಅಮಾಯಕರಿಗೆ ತೊಂದರೆ ಆಗುತ್ತದೆ.

(ಆಗ ಬರೆದ ಲೇಖನದ ಯಥಾವತ್ತು ಕೆಳಗೆ ನೀಡಲಾಗಿದೆ. ಅಂಕಿ ಅಂಶಗಳು ಕೆಲವು ತಿಂಗಳ ಹಿಂದಿನದು )

ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತರು ಮತ್ತು ಇಡೀ ಏಷ್ಯಾದಲ್ಲಿ ಆ ಸ್ಥಾನ ಪಡೆದ ಮೊದಲಿಗರು ಎಂಬ ಸುದ್ದಿ ಪ್ರಕಟವಾಗಿದೆ. ಅದಕ್ಕಾಗಿ ಭಾರತೀಯರಾಗಿ ಹೆಮ್ಮೆ ಪಡೋಣ. ಬಹುಶಃ ಇದೇ ವೇಗದಲ್ಲಿ ಅವರ ಆದಾಯ ಸಾಗಿದರೆ ಕೆಲವೇ ತಿಂಗಳುಗಳಲ್ಲಿ ಅವರು ಎರಡನೇ ಸ್ಥಾನವನ್ನು ಪಡೆಯಬಹುದು. ಎಲಾನ್ ಮಸ್ಕ್ ಮತ್ತು ಜೆಫ್ ಜೆಜಾಸ್ ನಂತರದ ಸ್ಥಾನದಲ್ಲಿ ಸದ್ಯಕ್ಕೆ ಇವರಿದ್ದಾರೆ. 

ಯಾವುದೇ ಕ್ಷೇತ್ರವೇ ಇರಲಿ, ಯಾವುದೇ ಕಾರಣವಿರಲಿ ಒಟ್ಟಿನಲ್ಲಿ ವಿಶ್ವ ಮಟ್ಟದಲ್ಲಿ ನಂಬರ್ 1-2-3-4-5.... ಹೀಗೆ ಸ್ಥಾನ ಗಳಿಸುವುದು ಒಂದು ಅದ್ಬುತ ಸಾಧನೆಯೇ ಸರಿ. ಅದಕ್ಕೆ ವಿಶೇಷ ಸಾಮರ್ಥ್ಯ ಇರಲೇ ಬೇಕಾಗುತ್ತದೆ. ಬೇರೆ ಶಕ್ತಿಗಳು ನಮ್ಮ ಬೆಂಬಲಕ್ಕೆ ಬರಬೇಕಾದರೂ ನಮ್ಮಲ್ಲಿಯೂ ಅದನ್ನು ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಇರಬೇಕಲ್ಲವೇ? ಅವರಿಗೆ ಶುಭ ಹಾರೈಸುತ್ತಾ...

ಈಗ ಭಾರತದ ಆರ್ಥಿಕತೆಗೆ ಸಂಬಂಧಿಸಿದ ಅಧೀಕೃತ ಸಂಸ್ಥೆಗಳ ಜವಾಬ್ದಾರಿ ತುಂಬಾ ದೊಡ್ಡದಿದೆ. ಅದಕ್ಕೆ ಕಾರಣ.. ಭಾರತದ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಸುಮಾರು 38 ಲಕ್ಷ ಕೋಟಿ.  ಆದಾಯ ಸುಮಾರು 26 ಲಕ್ಷ ಕೋಟಿ. ಅದಾನಿಯವರ ಶ್ರೀಮಂತಿಕೆಯ ಹಣದ ಮೊತ್ತ ಸುಮಾರು 11 ಲಕ್ಷ ಕೋಟಿ. ಅಂದರೆ ಭಾರತದ ಆರ್ಥಿಕತೆಯ ದೃಷ್ಟಿಯಿಂದ ಬಹಳ ಮಹತ್ವದ ಹಣದ ವಹಿವಾಟು ಇವರು ನಡೆಸುತ್ತಿದ್ದಾರೆ. ಜೊತೆಗೆ ಟಾಟಾ ಬಿರ್ಲಾ ಅಂಬಾನಿ ಮುಂತಾದವರ ರೀತಿಯಲ್ಲಿ ಇವರಿಗೆ ದೀರ್ಘ ಇತಿಹಾಸವಿಲ್ಲ. ಇವರ ಶ್ರೀಮಂತಿಕೆಯ ಏರಿಕೆ ಕಳೆದ 8 ವರ್ಷಗಳಲ್ಲಿ ಸುಮಾರು 1 ಲಕ್ಷ ಕೋಟಿಯಿಂದ 11 ಲಕ್ಷ ಕೋಟಿಗೆ ಏರಿದೆ. ಅಂದರೆ ವರ್ಷಕ್ಕೆ ಸುಮಾರು 1 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ.

ಇರಲಿ ಅವರು ಅದ್ಬುತ ವ್ಯಾಪಾರಿ ಕುಶಲಗಾರರೇ ಇರಬೇಕು. ಅದಕ್ಕೆ ಮತ್ತಷ್ಟು ಸಂತೋಷ ಪಡೋಣ.ಆದರೆ ಈಗ ಮುಖ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ,( RBI ) ಎನ್ಪೋರ್ಸ್ಮೆಂಟ್ ಡೈರೆಕ್ಟೋರೇಟ್, ( ED ) ಕೇಂದ್ರ ತನಿಖಾ ದಳ, ( CBI ) ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆ ( ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ) ( RAW ) ಸೆಕ್ಯೂರಿಟೀಸ್ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ   ( SEBI ) ಕೇಂದ್ರ  ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ( C A G ) ಮುಂತಾದ ಭಾರತದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಇಲಾಖೆಗಳು ಆಂತರಿಕವಾಗಿ ದಯವಿಟ್ಟು ಇವರ ವ್ಯವಹಾರದ ಮೂಲಗಳನ್ನು ಪರಿಶೀಲಿಸಬೇಕು. 

ದಯವಿಟ್ಟು ಗಮನಿಸಿ..ನಾನು ಇವರ ಮೇಲೆ ದಾಳಿ ಮಾಡಬೇಕೆಂದು ಹೇಳುತ್ತಿಲ್ಲ. ಒಂದು ಬೆಳೆಯುತ್ತಿರುವ ಸಂಸ್ಥೆಯ ಮೇಲೆ ದಾಳಿ ಒಳ್ಳೆಯದಲ್ಲ. ಆದರೆ ಆಂತರಿಕವಾಗಿ ಆಡಿಟಿಂಗ್ ಮಾಡಬೇಕು. ಅಂದರೆ ಒಂದು ಕಣ್ಣಿಡಬೇಕು ಎಂಬ ಅರ್ಥದಲ್ಲಿ ಹೇಳುತ್ತಿದ್ದೇನೆ. ಏಕೆಂದರೆ ಎಲ್ಲವೂ ಮುಗಿದು ಮುಂದೊಂದು ದಿನ ಅವರು ಮುಳುಗುವ ಹಂತ ತಲುಪಿ ಇಡೀ ದೇಶದ ಅರ್ಥ ವ್ಯವಸ್ಥೆ ಅಲುಗಾಡುವಂತಾಗಬಾರದು ಎಂಬ ಎಚ್ಚರಿಕೆಯಿಂದ ಈ ಮನವಿ.

ಏಕೆಂದರೆ ಇವರ ಶ್ರೀಮಂತಿಕೆ ದಿಢೀರ್ ಎಂದು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಆಗ ಅದರ ಚಟುವಟಿಕೆಗಳ ಪರಿಶೀಲನೆ ಅಗತ್ಯ. ನಮ್ಮ ಕೆಲವು ಸರ್ಕಾರಿ ಸಂಸ್ಥೆಗಳ  ಕಾರ್ಯ ಚಟುವಟಿಕೆ ಹೇಗಿದೆಯೆಂದರೇ ಏನಾದರೂ ಅನಾಹುತ ಆದ ಮೇಲೆಯೇ ಅದರ ಬಗ್ಗೆ ಗಮನಿಹರಿಸುತ್ತವೆ. ಮೊದಲೇ ಒಂದಷ್ಟು ಜಾಗೃತಿ ವಹಿಸಿದರೆ ಮುಂದೆ ಸಂಭವಿಸಬಹುದಾದ ದೊಡ್ಡ ನಷ್ಟ ತಡೆಯಬಹುದು. ಒಂದು ವೇಳೆ ಅವರ ಎಲ್ಲಾ ‌ಸಾಲ‌ - ಆದಾಯ - ತೆರಿಗೆ ಮುಂತಾದವು ಉತ್ತಮ ಗುಣಮಟ್ಟದಲ್ಲಿ ಇದ್ದು ಪಾರದರ್ಶಕವಾಗಿದ್ದರೆ ಅದನ್ನು ಒಮ್ಮೆ ‌ಸಾಧ್ಯವಿರುವ ಮತ್ತು ‌ಹಂಚಿಕೊಳ್ಳಬಹುದಾದ ಮಾಹಿತಿಗಳನ್ನು ‌ಸಾರ್ವಜನಿಕವಾಗಿ ಬಹಿರಂಗ ಪಡಿಸಿದರೆ ಉತ್ತಮವಲ್ಲವೇ?

ನಮ್ಮಂತ ಸಾಮಾನ್ಯ ವ್ಯಕ್ತಿಗಳ ಆರ್ಥಿಕ ಅವ್ಯವಹಾರಗಳು ಒಟ್ಟು ವ್ಯವಸ್ಥೆಯ ಮೇಲೆ ಯಾವುದೇ ‌ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ ಬೃಹತ್ ಸಂಸ್ಥೆಗಳ ದಿಢೀರ್ ಶ್ರೀಮಂತಿಕೆ ಯಾವಾಗ ಬೇಕಾದರೂ ಕುಸಿಯಬಹುದು. ಮತ್ತೆ ಹೇಳುತ್ತೇನೆ ಅವರ ಮೇಲೆ ದಾಳಿ ಮಾಡಿ ಕೆಟ್ಟ ಹೆಸರು ತರುವುದು ಬೇಡ. ಅತ್ಯಂತ ಗೌಪ್ಯವಾಗಿಯೇ ಮಾಡಲಿ. ತದನಂತರ ಅದರ ಬಗ್ಗೆ ಮಾಹಿತಿ ನೀಡಲಿ.

ಗೌತಮ್ ಅದಾನಿ ಗುಜರಾತಿನವರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಪ್ತರು ಎಂದು ಹೇಳಲಾಗುತ್ತದೆ. ಆದರೆ ದೇಶದ ಅರ್ಥ ವ್ಯವಸ್ಥೆ ಒಬ್ಬ ವ್ಯಕ್ತಿ ಅಥವಾ ಪಕ್ಷಕ್ಕೆ ಸೇರಿದ್ದಲ್ಲ. ಇದರಲ್ಲಿ ಇಡೀ ದೇಶದ ಆರ್ಥಿಕ ಆರೋಗ್ಯ ಅಡಗಿರುತ್ತದೆ. ಮುಂದೆ ಇದು ನಮ್ಮ ದೇಶದ ಆರ್ಥಿಕತೆಯ ಅಲ್ಲೋಲ ಕಲ್ಲೋಲ ಆಗದೇ ಇರಬೇಕಾದರೆ ಎಲ್ಲಾ ಮುನ್ನೆಚ್ಚರಿಕೆ ಅಗತ್ಯ. ಜೊತೆಗೆ ಈ‌ ರೀತಿಯ ಇತರ ಬೃಹತ್ ಉದ್ದಿಮೆಗಳ ಬಗ್ಗೆ ಸಹಾ ತೀವ್ರ ನಿಗಾ ಇಡಬೇಕು. ಮೇಲೆ ಹೇಳಿದ ಇಲಾಖೆಗಳು ಸಾಮಾನ್ಯ ಜನರ ತನಿಖೆಗೇ ತಮ್ಮ ಸಮಯ ವ್ಯರ್ಥ ಮಾಡದೆ ದೊಡ್ಡ ಕುಳಗಳನ್ನು ಸದಾ ತಮ್ಮ ಹದ್ದಿನ ಕಣ್ಣಿನಿಂದ ನೋಡುತ್ತಲೇ ಇರಲಿ.

ಎಷ್ಟೋ ಪ್ರಕರಣಗಳಲ್ಲಿ ಭ್ರಷ್ಟರು ಸಾವಿರಾರು ಕೋಟಿ ಅವ್ಯವಹಾರ ಮಾಡಿದ ಮೇಲೆ ಇವರು ದಾಳಿ ಮಾಡುತ್ತಾರೆ. ಆದರೆ ಮೊದಲೇ ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ದೊಡ್ಡ ಮಟ್ಟದ ಭ್ರಷ್ಟಾಚಾರ ತಡೆಯಬಹುದು. ಆ ಕಾರಣದಿಂದಾಗಿ ಈ ಒಂದು ಮನವಿ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ