ಹದ್ದಿನ ಕವನ

ಹದ್ದಿನ ಕವನ

ಪುಸ್ತಕದ ಲೇಖಕ/ಕವಿಯ ಹೆಸರು
ಸಂ: ಹಳೆಕೋಟೆ ಸುಂದರ ಬಂಗೇರಾ
ಪ್ರಕಾಶಕರು
ಈಗಲ್ ಪ್ರಕಾಶನ, ಕೆ.ಎಂ. ರಸ್ತೆ, ಬಿಳಗುಳ, ಹೆಸಗಲ್ ಅಂಚೆ, ಮೂಡಿಗೆರೆ-577132, ಚಿಕ್ಕಮಗಳೂರು
ಪುಸ್ತಕದ ಬೆಲೆ
ರೂ.70.00, ಮುದ್ರಣ : 2019

*ಹಳೆಕೋಟೆ ಸುಂದರ ಬಂಗೇರಾ ಅವರು ಸಂಪಾದಿಸಿದ ಕವನ ಸಂಕಲನ "ಹದ್ದಿನ ಕವನ"*

ಇಪ್ಪತ್ತಮೂರು ಮಂದಿ ಕವಿಗಳ ಇಪ್ಪತ್ತೇಳು ಕವನಗಳಿರುವ ಸಂಕಲನ " ಹದ್ದಿನ ಕವನ". ಕವಿ, ಪತ್ರಕರ್ತ ಹಳೆಕೋಟೆ ಸುಂದರ ಬಂಗೇರಾ ಅವರು ಸಂಕಲನವನ್ನು ಸಂಪಾದಿಸಿದ್ದಾರೆ. ಈಗಲ್ ಪ್ರಕಾಶನ, ಕೆ. ಎಂ. ರಸ್ತೆ, ಬಿಳಗುಳ, ಹೆಸಗಲ್ ಅಂಚೆ, ಮೂಡಿಗೆರೆ- 577 132, ಚಿಕ್ಕಮಗಳೂರು ಜಿಲ್ಲೆ ಸಂಸ್ಥೆಯು 2019 ರಲ್ಲಿ ಪ್ರಕಾಶಿಸಿದ ಸಂಕಲನದಲ್ಲಿ 44 + 4 ಪುಟಗಳಿದ್ದು, ಬೆಲೆ 70 ರೂಪಾಯಿ.

ಸಂಕಲನದ 23 ಮಂದಿ ಕವಿಗಳಲ್ಲಿ ಒಬ್ಬರಾಗಿರುವ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಕುಂದೂರು ಅಶೋಕ ಇವರ ಮುನ್ನುಡಿ ಮತ್ತು ಕವನಗಳನ್ನು ಸಂಪಾದಿಸಿದ, ಪ್ರಕಾಶಕರೂ ಆದ ಸುಂದರ ಬಂಗೇರಾರವರ 'ನನ್ನ ಮಾತು' ಸಂಕಲನದಲ್ಲಿದೆ.

ಸುಂದರ ಬಂಗೇರಾ ಅವರು ಮೂಲತಹಾ ತುಳುನಾಡಿನವರು. ಕಳೆದ ಹಲವು ವರ್ಷಗಳಿಂದ ಮೂಡಿಗೆರೆಯ ಖಾಯಂ ನಿವಾಸಿಯಾಗಿರುವ ಇವರು ಮೊದಲು "ಹದ್ದಿನ ಕಣ್ಣು" ಎಂಬ ಪತ್ರಿಕೆಯನ್ನೂ, ಪ್ರಸ್ತುತ "ಈಗಲ್" ಎಂಬ ಪತ್ರಿಕೆಯನ್ನೂ ನಡೆಸಿಕೊಂಡು ಬರುತ್ತಿದ್ದಾರೆ. ಪತ್ರಕರ್ತರಾಗಿ ಮಲೆನಾಡಿನಲ್ಲಿ ಒಳ್ಳೆಯ ಹೆಸರು ಮಾಡಿರುವ ಸುಂದರ ಬಂಗೇರಾ ಅವರು ಬಹುಭಾಷಾ ಕವಿಯಾಗಿಯೂ ಖ್ಯಾತರು.

"ಹದ್ದಿನ ಕವನ" ಸಂಕಲನದಲ್ಲಿ, "ಈಗಲ್" ಪತ್ರಿಕಾ ಬಳಗದ ವತಿಯಿಂದ ಆಯೋಜಿಸಿದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕವಿಗೋಷ್ಟಿಯಲ್ಲಿ, ಧಾರವಾಡದಲ್ಲಿ ನಡೆದ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಮತ್ತು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಯುಗಾದಿ ಕವಿಗೋಷ್ಟಿಯಲ್ಲಿ ಕವಿಗಳು ವಾಚಿಸಿದ ಕವನಗಳನ್ನು ಆಯ್ದ ಕವನಗಳಿವೆ.

ಎಂ.ಎಸ್. ನಾಗರಾಜ್ ಮೂಡಿಗೆರೆ ಇವರ "ಕಾಣಿಯಾಲ" ಕವನ, ರೈತನ ಕಷ್ಟ - ನಷ್ಟ, ಧರಣಿಗೆ ಮತ್ತು ಮನುಕುಲಕ್ಕೆ ಅವನ ಅನಿವಾರ್ಯತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಯಾಂತ್ರೀಕರಣ ಮತ್ತು ಕಂಪೆನಿಗಳ ಭರಾಟೆಯಿಂದ ನಲುಗಿರುವ ರೈತ, ತನ್ನ ಸಹಜ ಕೃಷಿ ಕಾಯಕದಿಂದ ವಿಮುಖನಾಗುತ್ತಿದ್ದು, ರೈತ ಹೀಗೆ ಕೃಷಿಗೆ ವಿಮುಖನಾಗುತ್ತಾಹೋದರೆ ಅಂತಿಮವಾಗಿ ಭೂಮಿ ನರಕವಾಗಲಿದೆ ಎಂಬ ಎಚ್ಚರಿಕೆಯನ್ನು ಕವಿ ಇಲ್ಲಿ ಕೊಡುತ್ತಾರೆ. ನೆಲ, ಜಲ ಎಲ್ಲವೂ ನಿನ್ನದಾಗಿದ್ದು, ಹತಾಶೆಗೊಂಡು ನೇಣಿಗೆ ಕೊರಳೊಡ್ಡುವುದರ ಬದಲು ಧರಣಿ ಎಂಬ ದೇಗುಲದ ಹಸಿರು ಮತ್ತು ಉಸಿರು ಉಳಿಸುವ ಸಲುವಾಗಿ ರೈತನಾಗಿಯೇ ಉಳಿದು, ಗಟ್ಟಿಯಾಗಿ ನಿಂತು ಜೇವನವನ್ನು ಗೆಲ್ಲು ಎಂಬ ಅತ್ಯಂತ ಆಪ್ತತೆಯ ಸಂದೇಶವನ್ನು "ಕಾಣಿಯಾಲ" (ರೈತ) ಕವನ ರೈತ ಸಮುದಾಯಕ್ಕೆ ನೀಡುತ್ತದೆ. ಕವಿಯ ಜನಪರ ಮತ್ತು ಪರಿಸರಪರ ಕಾಳಜಿಗೆ ಕವನ ದ್ಯೋತಕವಾಗಿದೆ.

ರಾಜಕಾರಣಿಗಳ, ಆಳುವವರ, ಧರ್ಮ, ಸಂಸ್ಕೃತಿ, ಪರಂಪರೆಗಳ ಸ್ವಯಂಘೋಷಿತ ವಕ್ತಾರರ ದ್ವಂದ್ವ, ಇಬ್ಬಂದಿತನ ಇತ್ಯಾದಿಗಳ ಮುಖವಾಡವನ್ನು ಕಳಚಿ ಹಾಕಿ ವಾಸ್ತವದ ಕರಾಳ ಮುಖವನ್ನು ಬಟಾಬಯಲು ಮಾಡುತ್ತದೆ ವಿಶ್ವ ಹಾರ್ಲಗದ್ದೆಯವರ "ಹೇಳೋದು ಆಚಾರ" ಕವನ. 

"ಪುರಾತನ, ಸಂಸ್ಕಾರವಂತ, ಸಿರಿವಂತ ದೇಶವಂತೆ

ಜಾತಿ, ಮತ, ತಾರತಮ್ಯ, ಮೇಲು ಕೀಳಿನ ಅಪ್ಪನೆಂಬಂತೆ

ತನ್ನದೇ ಮರಿಯನ್ನು ತಾನೇ ತಿನ್ನುವ 

ಹೆಣ್ಣು ನಾಯಿಯಂತೆ

ಸ್ವದೇಶಿಗರನ್ನು ಮಡಿ ಮೈಲಿಗೆಯ ದಾಹಕ್ಕೆ ಭದ್ರಾ ಅಭಯಾರಣ್ಯದ ಅಭದ್ರ ಜಿಂಕೆಯನ್ನು ಬೆನ್ನತ್ತಿ

ಬಗೆ ಬಗೆದು ತಿನ್ನುವ ಹೆಬ್ಬುಲಿಯಂತೆ

ತಿಂದು ತೇಗುತ್ತಿಹುದೋ"

ಹೀಗೆ ಇಡೀ ಕವನ ನಮ್ಮ ನಯ ನಾಜೂಕಿನ ಮುಖ್ಯ ವಾಹಿನಿಯ ವ್ಯವಸ್ಥೆಯ ಹುಳುಕುಗಳನ್ನು, ಹಗಲು ವೇಷವನ್ನು ನೇರಾನೇರಾ ಕಳಚಿಹಾಕುವಲ್ಲಿ ಸಫಲವಾಗುತ್ತದೆ.

 

ಮೂರು ತಿಂಗಳು ಬಾರದ ಬೀದಿದೀಪ

ನೂರಡಿ ದುಡ್ಡಲ್ಲಿ ಮೂರಡಿ ಚರಂಡಿ

ನಾಲ್ಕು ಗುಂಟೆ ಜಾಗದಲ್ಲಿ ಒಂದೇ ಗುಂಟಿಗೆ ಹಕ್ಕುಪತ್ರ ಕೊಡುವವರು ನಾವೇನೇ...

ಮೇಲಿನ ಒಂದು ಚರಣ, ಕೇಶವ ಕಡುವಳ್ಳಿಯವರ "ಈ ಸಮಯ" ಕವನದ್ದು. ವ್ಯವಸ್ಥೆಯ ಅವ್ಯವಸ್ಥೆಯನ್ನು ಕಣ್ಣೆದುರಿಗೆ ತಂದು ನಿಲ್ಲಿಸುತ್ತದೆ.   ಚುನಾವಣೆ, ಮತದಾರನಿಗೆ ಅಂಡು ಸುಟ್ಟುಕೊಳ್ಳುವ ಸಮಯ ಎನ್ನುವುದುನ್ನು ವಿವಿಧ ವ್ಯಾಖ್ಯಾನಗಳ ಮೂಲಕ ಸಮರ್ಥವಾಗಿ ಅನಾವರಣಗೊಳಿಸುತ್ತದೆ.

ಸಂಕಲನದ ಸಂಪಾದಕರಾದ ಸುಂದರ ಬಂಗೇರಾ ಅವರ "ಜಾತಿ ಭೇದ ಸಲ್ಲದು" ಮಾನವೀಯ ಆಶಯಗಳುಳ್ಳ ಉತ್ತಮ ನೀಳ್ಗವನ. ಸಾಕಷ್ಟು ಸಂಕೇತಗಳನ್ನು, ಉಪಮೆಗಳನ್ನು ಬಳಸಿಕೊಂಡು ಕವನ ರಚಿಸಿದ ಕವಿ ಇಲ್ಲಿ ಆಶಾವಾದಿಯಾಗಿದ್ದಾನೆ. ಈ ಕವನದ ಒಂದು ಚರಣ ಹೀಗಿದೆ:

ಯೌವ್ವನದಲ್ಲಿ ಅವ್ವನು ಧರಿಸಿದ ಕುಪ್ಪಸವೀಗ

ಬೆಳೆದ ಮಗಳ ಮಾನವನ್ನು ಕಾಯುತ್ತಿದೆ

ಅಪ್ಪನ ಕಾಲ್ಗಳ ಹರಿದ ಯಕ್ಕಡವೀಗ

ಮಧು ಮಗನ ಪಾದಕ್ಕೂ ಸರಿಹೊಂದುತ್ತಿದೆ

ಬಡತನವೆಂಬುದು ಅಳಿದಿಲ್ಲ. ನಡೆಯಲಿ ಕದನವೀಗ...

ಒಬ್ಬೊಬ್ಬರಿಗೆ ಒಂದೊಂದು ಹಸಿವು. ಹೊಟ್ಟೆಯ ಹಸಿವು ಎಲ್ಲರದೂ ಹೌದು. ಈ ಹಸಿವು ಹೇಗೆಲ್ಲಾ ಕಾಡುತ್ತದೆ ಎನ್ನುವುದನ್ನು ಅಲ್ತಾಫ್ ಬಿಳಗುಳ ಬಹಳ ಮಾರ್ಮಿಕವಾಗಿ, ಆರ್ದೃತೆಯಿಂದ "ನಿಮ್ಮ ಸಂಗಾತಿ" ಯಲ್ಲಿ ಪಡಿಮೂಡಿಸಿದ್ದಾರೆ. ಹಸಿವನ್ನು 'ಕ್ರೂರ ಹಿಂಸೆ" ಎಂದು ವ್ಯಾಖ್ಯಾನಿಸಿರುವ ಕವಿ, ಇಂಥ ಹಸಿವೆಯೇ ಲೋಕಪ್ರಿಯವೂ ಆದ ಎಲ್ಲರ ಭಯಾನಕ ಸಂಗಾತಿ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. 

ಕುಂದೂರು ಅಶೋಕ್ ಅವರ "ಕನ್ನಡಕ್ಕೆ ಬದ್ಧರು" ಮತ್ತು ಹೊಸಕೊಪ್ಪ ಸುಬ್ಬಣ್ಣ, ಕೊಪ್ಪ ಅವರ "ಉಳಿದೀತೆ ಕನ್ನಡ" ಕನ್ನಡ ಭಾಷಾಭಿಮಾನದ ಮೇಲೆ ಮೂಡಿಬಂದ ಎರಡು ಅತ್ಯುತ್ತಮ ಕವನಗಳು.

ಕೇಶವ ನಾಯರ್ ದೇವರಮಕ್ಕಿ, ನಂದೀಶ್ ಬಂಕೇನಹಳ್ಳಿ, ಆರ್. ಪ್ರಕಾಶ್ ಮೂಡಿಗೆರೆ, ರಶ್ಮಿ ರಜಿತ್ ಸಿದ್ರುಭನ, ಬಿ. ಡಿ. ಅನ್ವಿತಾ ಬಿಳಗುಳ, ಮೋಹನ್ ರಾಜಣ್ಣ ಗೋಣಿಬೀಡು, ಆಶಿಕ್ ಹಂಡುಗುಳಿ, ಸನ್ಮತಿ ಹಾರ್ಮಕ್ಕಿ, ಯಗಟಿ ಶಂಕರ್, ಮಲ್ಲಿಕಾ ವಿ. ಮತ್ತಿಕಟ್ಟೆ, ಯಜ್ಞಪುರುಷ ಭಟ್ ಬಾಳೆಹೊನ್ನೂರು, ಉಮೇಶ್ ಹೊಸಳ್ಳಿ, ಮಂಜುಳಾ ಹುಲ್ಲಹಳ್ಳಿ, ಚಾವಲ್ಮನೆ ಸುರೇಶ್ ನಾಯಕ್ ಹಾಲ್ಮುತ್ತೂರು, ಎ. ಎಸ್. ಮಕಾನದಾರ ಗದಗ ಹಾಗೂ ಡಾ. ಅಪ್ಪಾಜಿ ಗೌಡ ಬೆಂಗಳೂರು ಇವರ ಕವನಗಳು "ಹದ್ದಿನ ಕವನಗಳು" ಸಂಕಲನವನ್ನು ಅಲಂಕರಿಸಿವೆ.

~ ಶ್ರೀರಾಮ ದಿವಾಣ