ಹನಿಗಳು ಮತ್ತೊಂದು ಗಝಲ್ !
ಒದೆ ಕೊಡುವವರ
ಕಾಲವದು ಹೋಗಿದೆ
ಸ್ವಾತಂತ್ರ್ಯ ಸಿಕ್ಕಾಗಲೇ
ಮರೆಯಲ್ಲಿ ನಿಂತಿದೆ!
***
ತಲೆನೋವು ಬಂದಾಗ
ಝಂಡು ಬಾಂಬನು ಹಚ್ಚು
ಪ್ರೀತಿಯು ಸಿಗದಾಗ
ಮಂಡೆಯೊಳಗೇ ಹುಚ್ಚು !
***
ಮೌನವದು
ಮುರಿದರೆ
ಶಾಪಗಳೇ
ಮಾತುಗಳು !
***
ಉರಿದು
ಹೋದವರು
ಮನೆ
ಮನವನು
ಮುರಿದೇ
ಹೋದರು !
***
ಹಗಲಲ್ಲೂ
ಕೆಲವರು
ಎಡವುತ್ತಾರೆ
ಪಕ್ಕದವರು
ಕಾಲು
ಕೊಡುವುದರಿಂದ !
***
ಗಝಲ್
ಬದುಕ ಬೇಕೆನ್ನುತ್ತಲೇ ಒಂದರೆ ಘಳಿಗೆಯಲ್ಲಿ ಕಣ್ತೆರೆದು ಕಣ್ಮುಚ್ಚುತ್ತೇವೆ ಹುಟ್ಟುಸಾವುಗಳ ಹಾಗೆ
ಉತ್ತುಂಗದ ಪ್ರೀತಿಯಲೆಗಳಲಿ ತೇಲುತ್ತೇವೆ ಮತ್ಯಾಕೋ ದೂರವಾಗುತ್ತೇವೆ ಪ್ರೇಮಕತೆಗಳ ಹಾಗೆ
ಮೌಲ್ಯಗಳ ಬಗ್ಗೆ ಯಾರೂ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ ಕಾರಣವು ನಾವೇ ಅಲ್ಲವೆ
ಎಲ್ಲವೂ ಕಾಲಬುಡದಲ್ಲಿ ಸಿಗಬೇಕೆನ್ನುತ್ತೇವೆ ಸಿಗುವುದೇ ಇಲ್ಲ ಜೀವನಪಾಠಗಳ ಹಾಗೆ
ತಂಪೆನುವ ಹೊತ್ತಿನಲ್ಲಿ ಬಾಳಿಗಾಗಿ ಹೋರಾಡಿದ ದಿನಗಳದ್ದೇ ನೆನಪುಗಳಿಂದು
ಸವಿಮಾತುಗಳು ಹತ್ತಿರವೆಲ್ಲೋ ಕೇಳಿದಂತಾಗುತ್ತದೆ ಚೈತ್ರಕುಸುಮಗಳ ಹಾಗೆ
ತಮಗೆಲ್ಲ ತಿಳಿದಿದೆಯೆನ್ನುವರಿಗಿಲ್ಲಿ ಕೊರತೆಯಿಲ್ಲ ಸಹಾರಾ ಮರುಭೂಮಿಯಂತೆ
ಹಣ್ಣೆಲೆಗಳು ಉದುರಿ ಬೋಳಾಗಿರುವ ಮರಗಳಿರುವ ಕಾಡುಮೇಡುಗಳ ಹಾಗೆ
ಹುಚ್ಚುಗಳು ಎಂದಿಗೂ ತಾನಾಗಿಯೆ ಮನದೊಳಗೆ ಬರುವುದಿಲ್ಲ ತಿಳಿಯದೇನು ಈಶಾ
ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯಲ್ಲಿಯ ಬೆಟ್ಟ ಗುಡ್ಡ ಹಳ್ಳಕೊಳ್ಳಗಳ ಹಾಗೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ