ಹನಿಗವನಗಳ ಲೋಕ

ಹನಿಗವನಗಳ ಲೋಕ

ಕವನ

ಧಾರಾವಾಹಿಗಳ ಧಾಳಾಧೂಳಿ 

ಏನು ಧಾರಾವಾಹಿಗಳ

ಧಾಳಾಧೂಳಿ...

ಅದರಲಿ

ಎಲ್ಲರೂ

ಒಳ್ಳೆಯವರೇ

ಆದರೂ ಕೋಲಾಹಲ...

 

ನಿರ್ದೇಶಕರಿಗೆ

ಅಭಿನಂದನೆಗಳು

ಸಲ್ಲಲೇಬೇಕು...

ಏನಿಲ್ಲದಿದ್ದರೂ

ಸೇರಿಸಿಬಿಡುವರು

ಸನ್ನಿವೇಶಕೊಂದು ಹಾಲಾಹಲ!

***

ನನ್ನದೂ....

ಅವನದೆನಿಸಿದ್ದರೆ

ಅವ ತೆಗೆದುಕೊಂಡು

ಹೋಗಬೇಕಿತ್ತು...

ಹೋಗುವಾಗ

ಅವನೇನನೂ

ಒಯ್ಯಲಿಲ್ಲೋ...

 

ಇಂತಿರ್ಪೊಡೆ-

ಇಲ್ಲಿರುವುದೆಲ್ಲಾ

ನನ್ನದೆಂದು

ಎದೆಯುಬ್ಬಿಸಿ

ಕುಣಿ-ಕುಣಿದು

ಆರ್ಭಟಿಸುವೆಯಲ್ಲೋ!

***

ಶರಣಾರ್ಥಿ 

ಸೋತು

ಹೋದರೆ

ಸಂಸಾರ...

ಬೀಗಿ

ನಿಂತರೆ

ವಿಕಾರ...

 

ಶರಣನಾಗಿ

ಕರುಣನಾಗಿ

ಜೀವನಕೆ

ಶರಣೆಂದು-

ತೋರಿಬಿಡಿ

ಮಮಕಾರ!

***

ಪರ-ವಿರೋಧ 

ಹುಲಿಯುಗುರು

ಧರಿಸಿದವನು ನಮ್ಮವನೇ? 

ಹೌದಾ;ಹಾಗಾದರೆ

ಅದು ಸತ್ತ ಹುಲಿಯ

ಸಾಧಾರಣ ಉಗುರು..!

ಬಿಟ್ಟು ಬಿಡಿ ಪಾಪ...

 

ಅವನು ನಮ್ಮ

ವಿರೋಧ ಪಕ್ಷದವನೇ?

ಅಂತಿರ್ಪೊಡೆ-

ಅದು ಜೀವಂತ ಹುಲಿಯ 

ಭಯಾನಕ ಉಗುರಿರಲೇಬೇಕು...

ಸೇರಲಿ ಜೈಲಿನ ಕೂಪ!!

***

ಇರಲೊಂದು ಥ್ಯಾಂಕ್ಸ್ 

ಜೀವನದಲಿ-

ತಪ್ಪುಗಳಿಂದಲೇ

ನಾವು

ತಿದ್ದಿಕೊಂಡು

ಪಡೆಯುವುದು

ಪುರಸ್ಕಾರ...

 

ಆದುದರಿಂದ

ಆ ತಪ್ಪೆಂಬ

ಮಹಾಶಯನಿಗೆ

ಸಲ್ಲಿಬಿಡಲಿ

ನಮ್ಮದೊಂದು

ನಮಸ್ಕಾರ!

***

ಅಂತರ್ಗತ ಶ್ರಮ... 

ಸಿನಿಮಾಗಳಲಿ

ಆ ಸುಂದರಿ

ಅಸಾಮಾನ್ಯ

ನೃತ್ಯ ಮಾಡಿ

ಸೂರೆಗೊಳ್ಳುವಳು

ಎಲ್ಲರ ಮನಸ...

 

ಅದಕವಳು ಮಾಡಿದ ತ್ಯಾಗವ

ನೀವೇನಾದರೂ ಬಲ್ಲಿರಾ?

ಅವಳ ಸುಖ-ಸಂತೋಷ ತ್ಯಜಿಸಿ

ಕಟ್ಟು ಪಾಡುಗಳ ಮಾಡಿ- 

ಪಡೆದಿದ್ದು ಕೇವಲ ಹಣ!

ನಿಮ್ಮದು ನೂರ್ಮಡಿ ಸಂತೋಷ!!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್