ಹನಿಗವನ ಏನು? ಏಕೆ? ಹೇಗೆ?
ದುಂಡಿರಾಜರ ಹನಿಗವನ ಎಂದರೆ ಮುಖದಲ್ಲಿ ಮಂದಹಾಸ ಮೂಡುತ್ತದೆ. ನಾಲ್ಕೈದು ಸಾಲುಗಳಲ್ಲೇ ಪಂಚ್ ನೀಡಿ ಮುದಗೊಳಿಸುವ ಹನಿಗವನ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ದುಂಡಿರಾಜ್ ಅವರು ಈ ಹನಿಗವನಗಳನ್ನು ಹೇಗೆ ರಚನೆ ಮಾಡುತ್ತಾರೆ ಎಂಬ ಬಗ್ಗೆ ಆಲೋಚನೆ ಮಾಡಿದ್ದೀರಾ? ಹನಿಗವನದ ಬಗ್ಗೆ ನಿಮಗಿರುವ ಸಂಶಯವನ್ನು ನಿವಾರಣೆ ಮಾಡಲು ಅಂಕಿತ ಪುಸ್ತಕ ಪ್ರಕಾಶನದವರು ನಿಮಗಾಗಿ ದುಂಡಿರಾಜ್ ಅವರ 'ಹನಿಗವನ ಏನು? ಏಕೆ? ಹೇಗೆ?' ಎಂಬ ಪುಸ್ತಕವನ್ನು ಹೊರತಂದಿದ್ದಾರೆ.
ಕೃತಿಕಾರರಾದ ಎಚ್ ದುಂಡಿರಾಜ್ ಅವರು ತಮ್ಮ ಮಾತುಗಳಲ್ಲಿ ಹೀಗೆ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಾರೆ- "ಪ್ರೀತಿ ಮಾಡುವುದು ಮತ್ತು ಕವನ ಬರೆಯುವುದು ನಾವೇ ಕಲಿತುಕೊಳ್ಳಬೇಕಾದ ವಿದ್ಯೆ ಎಂದು ನನ್ನ ಭಾವನೆ. ಆದ್ದರಿಂದಲೇ ನಾನೊಮ್ಮೆ ಹೀಗೊಂದು ಹನಿಗವನ ಬರೆದಿದ್ದೆ.
ಪ್ರೀತಿಸುವುದು
ಹೇಗೆ ಎಂದು
ಕಲಿಸಬೇಕಿಲ್ಲ ಯಾರೂ
ಲವ್ ವಿಷಯದಲ್ಲಿ
ನಾವೆಲ್ಲರೂ
ಏಕ ಲವ್ಯರು!
ಹಾಗಾದರೆ ಈ ಪುಸ್ತಕ ಏಕೆ ಅನ್ನುವಿರಾ? ಅದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು:
೧. ಹನಿಗವನ ಬರೆಯಲು ಆಸಕ್ತಿ ಇರುವವರಿಗೆ ಮತ್ತು ಈಗಾಗಲೇ ಬರೆಯುತ್ತಿರುವ ಹೊಸಕವಿಗಳಿಗೆ ಉಪಯೋಗವಾಗುವಂಥ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವುದು.
೨. ಬರೆಯುವವರಿಗೆ ಮಾತ್ರವಲ್ಲದೆ ಹನಿಗವನಗಳ ಓದುಗರಿಗೆ ಅವುಗಳ ಸ್ವಾರಸ್ಯವನ್ನು ಇನ್ನಷ್ಟು ಚೆನ್ನಾಗಿ ಆಸ್ವಾದಿಸಲು ಅನುಕೂಲವಾಗುವಂಥ ಸಂಗತಿಗಳನ್ನು ಚರ್ಚಿಸುವುದು.
೩. ಹನಿಗವನಗಳ ಬಗ್ಗೆ ಮಾತನಾಡುವವರಿಗೆ ಮತ್ತು ಲೇಖನ ಬರೆಯುವವರಿಗೆ ಅಗತ್ಯವಾದ ಮಾಹಿತಿ ಒಂದೆಡೆ ಸಿಗುವಂತೆ ಮಾಡುವುದು.
ಇದೊಂದು ಅಕಡೆಮಿಕ್ ಶೈಲಿಯ ಪಾಂಡಿತ್ಯಪೂರ್ಣ ಗ್ರಂಥವಾಗಿದೆ. ಎಲ್ಲರೂ ಆಸಕ್ತಿಯಿಂದ ಓದಿ ಸುಲಭವಾಗಿ ಅರ್ಥಮಾಡಿಕೊಳ್ಳುವ ಪುಸ್ತಕವಾಗಬೇಕೆಂಬ ದೃಷ್ಟಿಯಿಂದ ಈ ಕೃತಿಯನ್ನು ರಚಿಸಿರುವೆ. ಹೇಳಬೇಕಾದ ವಿಷಯಗಳನ್ನು ನನಗೆ ಸೂಕ್ತವೆನ್ನಿಸಿದ ಹನಿಗವನಗಳನ್ನು ಉಲ್ಲೇಖಿಸುವ ಮೂಲಕ ಹೇಳಿದ್ದೇನೆ. ಈ ಕೃತಿಯಲ್ಲಿ ಅಂದಿನ ಹಾಗೂ ಇಂದಿನ ೭೫ಕ್ಕೂ ಹೆಚ್ಚು ಕವಿಗಳು ರಚಿಸಿದ ೨೭೮ಕ್ಕೂ ಅಧಿಕ ಹನಿಗವನಗಳು ಒಂದೆಡೆ ದೊರೆಯುತ್ತವೆ. ಇವುಗಳನ್ನು ಓದುವುದರಿಂದ ಕಾವ್ಯ ಪ್ರಿಯರಿಗೆ ಸಿಗುವ ಆನಂದ ಈ ಕೃತಿಯ ಬೈಪ್ರಾಡಕ್ಟ್ ಅನ್ನಬಹುದು !
ಹನಿಗವನಗಳನ್ನು ಕುರಿತ ಪುಸ್ತಕ ಮಹಾಕಾವ್ಯ ಅಥವಾ ಕಾದಂಬರಿಯಷ್ಟು ಭಾರವಾಗಬಾರದು ಎಂದು ವಿಷಯಗಳನ್ನು ಆದಷ್ಟು ಚುಟುಕಾಗಿ ಹೇಳಿದ್ದೇನೆ. ಇದು ಹನಿಗವನಗಳಿಗೊಂದು ಕೈಪಿಡಿ."