ಹನಿ ನೀರಾವರಿಗೆ ಸೂಕ್ತ ಸೋಸು ವ್ಯವಸ್ಥೆಗಳು

ಹನಿ ನೀರಾವರಿಗೆ ಸೂಕ್ತ ಸೋಸು ವ್ಯವಸ್ಥೆಗಳು

ಹನಿ ನೀರಾವರಿಯಲ್ಲಿ (Drip Irrigation) ಕಟ್ಟಿಕೊಳ್ಳುವ (Block) ಸಮಸ್ಯೆಗೆ ಕಾರಣ ನೀರಿನ ಮೂಲದಲ್ಲಿ ಸೇರಿರುವ ಕಶ್ಮಲಗಳು. ಅದನ್ನು ಸರಿಯಾಗಿ ತಿಳಿದು ಅದನ್ನು ತಡೆಯಲು ಸೂಕ್ತವಾದ ಸೋಸು ವ್ಯವಸ್ಥೆ ಅಳವಡಿಸಿಕೊಂಡರೆ ಹನಿ ನೀರಾವರಿ ಸಂಪೂರ್ಣ ಯಶಸ್ವಿ. ಹನಿ ನೀರಾವರಿ ಮಾಡುವಾಗ ನೀರಿನ ಮೂಲವನ್ನು ಸೋಸಿ ಕಶ್ಮಲ ರಹಿತ ನೀರನ್ನು  ಕೊಳವೆಗಳ ಮೂಲಕ ಸಾಗಿಸಲು ಬೇರೆಬೇರೆ ನಮೂನೆಯ ಸೋಸು ವ್ಯವಸ್ಥೆಗಳಿವೆ. ಅವುಗಳನ್ನು ಕಶ್ಮಲ ಮೂಲ ಗುರುತಿಸಿ ಅದಕ್ಕನುಗುಣವಾದ ಸೋಸು ವ್ಯವಸ್ಥೆ ಅಳವಡಿಸಿಕೊಂಡರೆ ಸಮಸ್ಯೆಗಳಿಲ್ಲ.

ಮೆಷ್  ಫಿಲ್ಟರ್: ಇದು ೮೦-೧೦೦-೧೨೦ ಮೈಕ್ರಾನ್ ಅಳತೆಯ ಮೆಶ್ ಮೂಲಕ ಸೋಸಿ ನೀರು ಹೊರ ಹರಿಯುವ ಸಾಧನ. ಇದು ಮಿತವ್ಯಯದ್ದಾಗಿದ್ದು, ಮೈಕ್ರೋ ಟ್ಯೂಬು ನೀರಾವರಿಗೆ ಅದರಲ್ಲೂ ೧.೫ ಎಂ ಎಂ ತೂತಿನಿಂದ ಮೇಲ್ಪಟ್ಟ ತೂತು ಉಳ್ಳದ್ದಕ್ಕೆ, ೧.೫ ರಿಂದ ೨ ಎಂ ಎಂ ತನಕದ ತೂತು ಉಳ್ಳ ಮಿಸ್ಟ್ ಸ್ಪ್ರೇ, ಮೈಕ್ರೋ ಸ್ಪ್ರಿಂಕ್ಲರ್‌ಗಳಿಗೆ ಇದನ್ನು ಬಳಕೆ ಮಾಡಬಹುದು. ಇದರಲ್ಲಿ ಕಲ್ಲಿನ ಸಣ್ಣ ಹುಡಿ ಹೊರ ಹೋಗುತ್ತದೆ. (ಚಿತ್ರ ೧)

ಸ್ಯಾಂಡ್ ಫಿಲ್ಟರ್ ಅಥವಾ ಗ್ರಾವೆಲ್ ಫಿಲ್ಟರ್ : ಇದರಲ್ಲಿ  ಸಾಧಾರಣ ಗಾತ್ರದ ಸಿಲ್ಟ್, ಮಣ್ಣು ತಡೆಹಿಡಿಯಲ್ಪಟ್ಟು ಶುದ್ಧ ನೀರು ಹೊರ ಹೋಗುತ್ತದೆ. ಇದನ್ನು ಪಂಪಿನ ಬುಡದಲ್ಲಿ ಅಳವಡಿಸುವ ಬದಲಿಗೆ ಎಲ್ಲಿ ವಿತರಣೆ ಪ್ರಾರಂಭವಾಗುತ್ತದೆಯೋ ಅಲ್ಲಿ ತನಕ ನೀರನ್ನು ಒಯ್ದು ನಂತರ ಅಳವಡಿಸುವುದು ಒಳ್ಳೆಯದು. ಈ ಫಿಲ್ಟರ್ ಒಳಗೆ ಪೆಟ್ರೋಲಿಯಂ ಮೂಲದ ಮರಳನ್ನು ತುಂಬಿಸಲಾಗುತ್ತದೆ. ಅದರಲ್ಲಿ ಈ ಸಿಲ್ಟ್ ಅಂಟಿಕೊಳ್ಳುತ್ತದೆ. ಇದನ್ನು ಪ್ಲಶ್ ಮಾಡುವ ಮೂಲಕ ಮತ್ತು ೧೫ ದಿನಕ್ಕೊಮ್ಮೆ ಹಿಚುಚಿ ಪ್ಲಷ್ ಮಾಡುವ ಮೂಲಕ ಸಿಲ್ಟ್ ಅನ್ನು ತೊಳೆದು ಬಿಡಲಾಗುತ್ತದೆ. ಇದರ ಒಳಗಡೆ ಇರುವ ಕ್ಯಾಂಡಲ್ ಮೂಲಕ ಸೋಸಿದ ನೀರು  ಮುಂದೆ ಹೋಗುತ್ತದೆ. (ಚಿತ್ರ ೨)

ಡಿಸ್ಕ್ ಫಿಲ್ಟರ್: ಇದರಲ್ಲಿ ಒಳಗಡೆ ಪ್ಲೇಟಿನಂತೆ ಒತ್ತೊತ್ತಾಗಿ ಡಿಸ್ಕ್‌ಗಳಿದ್ದು ಅದರಲ್ಲಿ ನೀರು ಸುತ್ತಿ ಬಳಸಿ ಹೋಗುವ ಗೆರೆಗಳಿರುತ್ತವೆ. ಇದರ ಎಡೆಯಲ್ಲಿ  ನೀರು ಒಳ ಹೋಗುವಾಗ ಕಲ್ಮಶಗಳು ಒಳಗೆ  ಪ್ರವೇಶವಾಗಲಾರದು. ಇದರಲ್ಲಿ ಸಿಲ್ಟ್ ಮತ್ತು ಕಲ್ಲಿನ ಸೂಕ್ಷ್ಮ ಹುಡಿ, ಮಣ್ಣು ಮುಂದೆ ಹೋಗುವುದಿಲ್ಲ. (ಚಿತ್ರ ೩)

ಹೈಡ್ರೋ ಸೈಕ್ಲೋನ್ ಫಿಲ್ಟರ್: ಇದರಲ್ಲಿ ನೀರು ಒಳ ಪ್ರವೇಶಿಸಿ ಕೆಳಮುಖವಾಗಿ ನುಗ್ಗಲ್ಪಟ್ಟು ಅಲ್ಲಿಂದ ಅದು ಸುರುಳಿ ಕಟ್ಟಿ ಮೇಲಕ್ಕೆ ತಳ್ಳಲ್ಪಡುತ್ತದೆ. ಆಗ ಅದರಲ್ಲಿ ಸಿಕ್ಕಿ ಹಾಕಿಕೊಂಡ ಸಿಲ್ಟ್‌ಗಳು ಕೆಳ ಭಾಗದಲ್ಲಿ ಸಂಗ್ರಹವಾಗುತ್ತದೆ. ಇದು ಅತೀ ಸೂಕ್ಷ್ಮ ಸಿಲ್ಟ್ ಸಹ ಹೊರ ಹೋಗಲಾರದು. ಯಾವ ರೀತಿಯ ನೀರಿಗೆ ಯಾವ ಫಿಲ್ಟರ್‌ಗಳನ್ನು ಯಾವ ರೀತಿ ಅಳವಡಿಸಬೇಕು ಎಂಬುದನ್ನು ತಜ್ಞರ ಮೂಲಕ ತಿಳಿದು ಅಳವಡಿಸಬೇಕು. ಮಿತವ್ಯಯಕ್ಕೆಂದು ಸೂಕ್ತವಲ್ಲದ ಫಿಲ್ಟರನ್ನು ಅಳವಡಿಸಿಕೊಂಡರೆ ಹನಿ ನೀರಾವರಿ ವ್ಯವಸ್ಥೆಯೇ ಹಾಳಾಗುತ್ತದೆ. ಸಾಮಾನ್ಯವಾಗಿ ಸಿಲ್ಟ್ ಇರುವ ನೀರಿಗೆ ಸ್ಕ್ರೀನ್, ಸ್ಯಾಂಡ್ ಮತ್ತು ಡಿಸ್ಕ್ ಫಿಲ್ಟರ್ ಈ  ಮೂರೂ  ಬೇಕಾಗುತ್ತದೆ. (ಚಿತ್ರ ೪)

ಫುಟ್ ವಾಲ್ವ್ ಫಿಲ್ಟರ್: ಸಾಮಾನ್ಯವಾಗಿ ತೆರೆದ ಬಾವಿ, ಹೊಳೆ, ಹಳ್ಳ ಕೆರೆಗಳಿಂದ ನೀರನ್ನು ಸಕ್ಷನ್ ಪಂಪ್ ಮೂಲಕ ಎತ್ತಲಾಗುತ್ತದೆ. ಅದಕ್ಕೆ ಸಕ್ಷನ್ ಭಾಗದಲ್ಲಿ ಫುಟ್ ವಾಲ್ ಇರುತ್ತದೆ. ಈ ಮೂಲಕ ಕಶ್ಮಲಗಳು ಮುಂದೆ ಹೋಗುತ್ತದೆ. ಅಲ್ಲಿಗೆ ವಿಶೇಷವಾಗಿ ವಿನ್ಯಾಸ ಮಾಡಲಾದ ಮೆಶ್ ಫಿಲ್ಟರ್ ಅಳವಡಿಸಿದರೆ ಅಲ್ಲಿಂದ ಕಶ್ಮಲಗಳು ಮುಂದೆ ಹೋಗುವುದನ್ನು ತಡೆಯುತ್ತದೆ. (ಚಿತ್ರ ೫)

ಎಲ್ಲಾ ಫಿಲ್ಟರ್ ಗಳಲ್ಲಿ ಒಂದು ಪ್ಲಶ್ ವಾಲ್ವ್ ಇದೆ. ಕಶ್ಮಲ ಸಂಗ್ರಹಣೆ ಗಮನಿಸಿ ದಿನಾ ಇದನ್ನು ಒಮ್ಮೆ ತೆರೆದು ಬಿಟ್ಟರೆ  ಕೆಲವು ದಿನಗಳ ತನಕ ಮುಖ್ಯ ಫಿಲ್ಟರ್ ತೆರೆಯದೇ ನೀರಾವರಿ ಮಾಡಬಹುದು.

ಬರೇ ಪಿಲ್ಟರ್ ಒಂದೆ ನೀರನ್ನು ಮತ್ತು ನೀರು ಸಾಗಿಸುವ ದಾರಿಯನ್ನು ಸ್ವಚ್ಚವಾಗಿಡಲಾರದು. ವರ್ಷಕ್ಕೊಮ್ಮೆ ಹನಿ ನೀರಾವರಿಗೆ ಆಮ್ಲ ಉಪಚಾರ ಮಾಡಬೇಕು. ಹೈಡ್ರೋಕ್ಲೋರಿಕ್ ಆಸಿಡ್, ಸಲ್ಫ್ಯೂರಿಕ್ ಆಸಿಡ್ ಮೂಲಕ ಪೈಪು ಹಾಗೂ ಕೊಳವೆಗಳನ್ನು  ಸ್ವಚ್ಚಗೊಳಿಸಬೇಕು. ನೀರಿನೊಂದಿಗೆ ಈ ಆಮ್ಲವನ್ನು ಕರಗಿಸಿ ಒಳ ಬಿಡಬೇಕು. ಇದು ಎಲ್ಲಾ ಪೈಪು ಲೈನಿನ ಒಳಗೆ ಸೇರುವಷ್ಟು ಬಿಟ್ಟು ಒಂದು ದಿನ ಕಳೆದು ಎಲ್ಲಾ ಪ್ಲಶ್ ದ್ವಾರಗಳನ್ನು ತೆರೆದು ಬರೇ ನೀರನ್ನು  ಹರಿಯಲು ಬಿಟ್ಟರೆ ಅಂಟಿ ಹಿಡಿದ ಕಶ್ಮಲಗಳು ತೊಳೆದು ಹೊರ ಹೋಗುತ್ತವೆ. ಡ್ರಿಪ್ಪರುಗಳ ಎಡೆಯಲ್ಲಿ  ಸಿಕ್ಕಿಕೊಂಡ ಕಶ್ಮಲಗಳೂ ಸಹ ಕರಗಿ ಹೊರ ಹೋಗುತ್ತವೆ.

ವಾರಕ್ಕೊಮ್ಮೆ ಅಥವಾ ೧೫ ದಿನಕ್ಕೊಮ್ಮೆ ಪ್ರತೀ ಕೊಳವೆಯ ಎಂಡ್ ಕ್ಯಾಪ್ ತೆಗೆದು ೫ ನಿಮಿಷ ತನಕ ಪ್ಲಶ್ ಮಾಡುವುದರಿಂದ ಕಶ್ಮಲ ಶೇಖರಣೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಯಾವಾಗಲೂ ಮುಖ್ಯ ಪೈಪು ಲೈನು ಮತ್ತು ನೀರಿನ ವಿತರಣಾ ಪೈಪು ಲೈನನ್ನು ಪ್ರತ್ಯೇಕವಾಗಿ ಮಾಡಬೇಕು. ವಿತರಣಾ ಪೈಪು ಲೈನಿನ ಕೊನೆಯಲ್ಲಿ ಕನಿಷ್ಟ ೫ ಅಡಿಯಷ್ಟಾದರೂ ಹೆಚ್ಚುವರಿ ಪೈಪನ್ನು ಬಿಡಬೇಕು. ಅದಕ್ಕೆ ತಿರುಗಣೆಯ ಎಂಡ್ ಕ್ಯಾಪ್ ಹಾಕಿರಬೇಕು. ಮುಖ್ಯ ಕೊಳವೆಯಿಂದ ವಿತರಣಾ ಕೊಳವೆಗೆ ಬರುವ ನೀರು ಮೊದಲು ಈ ಭಾಗಕ್ಕೇ ತಲುಪಿ ನಂತರ ಅಲ್ಲಿಂದ ಒಂದೊಂದೇ ಕೊಳವೆಗಳಿಗೆ ತುಂಬಿಕೊಳ್ಳಬೇಕು. ಆಗ ಆ ಎಂಡ್ ಕ್ಯಾಪ್ ಸಮೀಪ ಕಶ್ಮಲಗಳು ಸಂಗ್ರಹವಾಗುತ್ತದೆ. ಅದನ್ನು ವಾರಕ್ಕೊಮ್ಮೆಯಾದರೂ ತೆರೆದು ಬಿಟ್ಟರೆ ಸಂಗ್ರಹ ಕಡಿಮೆಯಾಗುತ್ತದೆ. ಸರಿಯಾದ ವ್ಯವಸ್ಥೆಯನ್ನು ಮಾಡಿ ಅಳವಡಿಸಿಕೊಂಡ ಹನಿ ನೀರಾವರಿಗೆ ಸರಿ ಸಾಟಿ ಮತ್ತೊಂದಿಲ್ಲ. ಭವಿಷ್ಯದಲ್ಲಿ ನೀರಿನ ಕೊರತೆಯನ್ನು ನೀಗಿಸಿ ಕೃಷಿಮಾಡಲು ಇದೊಂದೇ ಪರಿಹಾರ.

ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ  ಹೊಳ್ಳ.