ಹನಿ ನೀರಾವರಿ – ರೈತನ ಐಡಿಯಾ

ಹನಿ ನೀರಾವರಿ – ರೈತನ ಐಡಿಯಾ

ಸುಡು ಬೇಸಗೆಯ ಉರಿಬಿಸಿಲಿಗೆ ಕೆರೆಬಾವಿಗಳೆಲ್ಲ ಬತ್ತುತ್ತವೆ. ಅಲ್ಲಿಯ ವರೆಗೆ ಜತನದಿಂದ ಬೆಳೆಸಿದ ಗಿಡಮರಬಳ್ಳಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ರೈತರ ಚಿಂತೆ. ಬಾವಿ ಅಥವಾ ನೀರಿನಾಸರೆಯಲ್ಲಿರುವ ಚೂರುಪಾರು ನೀರನ್ನು ಹನಿ ನೀರಾವರಿಯಿಂದ ನಾಲ್ಕು ಪಟ್ಟು ಹೆಚ್ಚು ಜಮೀನಿಗೆ ಎರೆಯಬಹುದು. ಆದರೆ, ಅದಕ್ಕೆ ಹೆಕ್ಟೇರಿಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷ ರೂಪಾಯಿ ವೆಚ್ಚವಾದೀತು.
“ಇದು ತನ್ನಿಂದಾಗದು” ಎಂದು ಹತಾಶರಾಗಿದ್ದ ರೈತ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ರೋಟಲಾ ಗ್ರಾಮದ ರಮೇಶ್ ಪರ್ಮಾರ್. ಅವರು ಜಬುವಾದಲ್ಲಿ ಒಂದು ಕಾರ್ಯಾಗಾರಕ್ಕೆ ಹಾಜರಾಗಿದ್ದಾಗ, ಪರಿಣತರಿಗೆ ಪ್ರಶ್ನೆ ಕೇಳಿದ್ದರು, “ಕಡಿಮೆ ವಚ್ಚದ ಹನಿ ನೀರಾವರಿ ವಿಧಾನ ಇದೆಯೇ?” ಆಗ ಪರಿಣತರು ಅವರಿಗಿತ್ತ ಸಲಹೆ, “ಮಣ್ಣಿನ ಮಡಕೆಯ ತಳದಲ್ಲಿ ಸಣ್ಣ ತೂತು ಮಾಡಿ. ಆ ಮಡಕೆಯನ್ನು ಗಿಡದ ಬುಡದಲ್ಲಿಟ್ಟು ನೀರು ತುಂಬಿಸಿ. ಮಡಕೆಯಿಂದ ನೀರು ಹನಿಹನಿಯಾಗಿ ಮಣ್ಣಿನಲ್ಲಿ ಇಂಗುತ್ತದೆ. ಇದರಿಂದಾಗಿ ಗಿಡದ ಬುಡದಲ್ಲಿ ತೇವಾಂಶ ಉಳಿಯುತ್ತದೆ.” ರಮೇಶ ಪರ್ಮಾರ್ ಅವರಿಗೆ ಈ ಸಲಹೆ ಪ್ರಾಯೋಗಿಕವಲ್ಲ ಎಂದನಿಸಿತು. ಯಾಕೆಂದರೆ, ಮಡಕೆಗೆ ತೂತು ಮಾಡುವಾಗ ಮಡಕೆಯೇ ಒಡೆದು ಹೋದೀತು ಮತ್ತು ಮಡಕೆಯ ಬಾಳ್ವಿಕೆ ಕಡಿಮೆ. ಅದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವುದಂತೂ ಕಷ್ಟದ ಕೆಲಸ.
ಕಡಿಮೆ ವೆಚ್ಚದಲ್ಲಿ ಹನಿನೀರಾವರಿ ಹೇಗೆ ಮಾಡಬಹುದು? ಎಂದು ಮತ್ತೆಮತ್ತೆ ಯೋಚಿಸಿದ ೩೩ ವರುಷ ವಯಸ್ಸಿನ ರಮೇಶರಿಗೆ ಕೊನೆಗೊಂದು ಐಡಿಯಾ ಹೊಳೆಯಿತು. ಗುಜರಿ ವ್ಯಾಪಾರಿಯೊಬ್ಬನಿಂದ ೬೦೦ ಸಲೈನ್ ಬಾಟಲಿಗಳನ್ನು ಖರೀದಿಸಿದರು. ಹಾಗಲಕಾಯಿ ಬಳ್ಳಿಗಳ ಸಾಲಿಗೆ ಸಮಾಂತರವಾಗಿ, ನೆಲದಿಂದ ನಾಲ್ಕಡಿ ಎತ್ತರದಲ್ಲಿ ಗೂಟಗಳಿಗೆ ಹಗ್ಗ ಬಿಗಿದರು. ಆ ಹಗ್ಗದಿಂದ ನೀರು ತುಂಬಿದ ಸಲೈನ್ ಬಾಟಲಿಗಳನ್ನು, ಬಳ್ಳಿಗಳ ಪಕ್ಕದಲ್ಲಿ ನೇತಾಡಿಸಿದರು. ಸಲೈನ ಬಾಟಲಿಗಳಿಂದ ಹನಿಹನಿಯಾಗಿ ನೀರು ಬೀಳುತ್ತಿದ್ದಂತೆ ನೀರಿಲ್ಲದೆ ಬಾಡಿದ್ದ ಹಾಗಲಕಾಯಿ ಬಳ್ಳಿಗಳು ಚೇತರಿಸಿಕೊಂಡವು; ಉತ್ತಮ ಫಸಲು ನೀಡಿದವು. ಕಳೆದ ಹಂಗಾಮಿನಲ್ಲಿ ಹಾಗಲಕಾಯಿ ಮಾರಾಟದಿಂದ ಅವರು ಗಳಿಸಿದ ಆದಾಯ ರೂ.೨೫,೦೦೦.
“ಹೀಗೆ ಗಿಡಗಳಿಗೆ ನೀರುಣಿಸಲು ಕಷ್ಟ ಪಡಬೇಕು. ಆದರೆ ನನ್ನಂತಹ ಸಣ್ಣರೈತರಿಗೆ ಇದುವೇ ಸೂಕ್ತ ವಿಧಾನ” ಎನ್ನುತ್ತಾರೆ ರಮೇಶ್ ಪರ್ಮಾರ್. ನೆಲಮಟ್ಟದಲ್ಲಿ ಅವರೊಂದು ಟ್ಯಾಂಕ್ ಕಟ್ಟಿಸಿದ್ದು, ಅದಕ್ಕೆ ನೀರು ತುಂಬುತ್ತಾರೆ. ಅದರಿಂದ ಪೈಪಿನ ಮೂಲಕ ಗಿಡಗಳ ಹತ್ತಿರದಲ್ಲಿ ಬಕೆಟಿಗೆ ನೀರು ತುಂಬಿಕೊಳ್ಳುತ್ತಾರೆ. ಆ ಬಕೆಟಿನಿಂದ ನೀರೆತ್ತಿ ಸಲೈನ್ ಬಾಟಲಿಗಳಿಗೆ ಭರ್ತಿ ಮಾಡುತ್ತಾರೆ. ಹೌದು, ಇದು ತ್ರಾಸದಾಯಕ. ಆದರೆ, ಈ ವಿಧಾನಕ್ಕೆ ಅವರಿಗೆ ತಗಲಿದ ಒಟ್ಟು ವೆಚ್ಚ ರೂ.೨,೦೦೦ (ಸಿಮೆಂಟ್ ಟ್ಯಾಂಕ್ ನಿರ್ಮಿಸಲಿಕ್ಕಾಗಿ). ಆರು ಕಿಲೋ ಸಲೈನ್ ಬಾಟಲಿಗಳನ್ನು ಅವರು ಖರೀದಿಸಿದ್ದು ಕಿಲೋಕ್ಕೆ ರೂ.೨೦ರ ದರದಲ್ಲಿ.
ಮುಂದಿನ ಹಂಗಾಮಿನಲ್ಲಿ, ಈ ವಿಧಾನವನ್ನು ರಮೇಶ್ ಪರ್ಮಾರ್ ಇನ್ನಷ್ಟು ಸುಧಾರಿಸಿದರು. ಯಾಕೆಂದರೆ, ಈಗ ಅವರು ಪಪಾಯಿ ಗಿಡಗಳನ್ನು ಬೆಳೆಸಿದ್ದರು. ಸಲೈನ್ ಬಾಟಲಿಯಲ್ಲಿ ತುಂಬಿದ ನೀರು ಪಪ್ಪಾಯಿ ಗಿಡಗಳ ಬೆಳವಣಿಗೆಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ, ರಮೇಶ್ ಪರ್ಮಾರ್ ಹೆಚ್ಚು ನೀರು ತುಂಬಿಡಲು ಇನ್ನೊಂದು ಐಡಿಯಾ ಕಂಡುಕೊಂಡರು. ಮೂರ್ನಾಲ್ಕು ಲೀಟರ್ ನೀರು ತುಂಬಬಲ್ಲ ಪ್ಲಾಸ್ಟಿಕ್ ಕವರುಗಳನ್ನು ಖರೀದಿಸಿ ತಂದರು. ಇವುಗಳ ತಳದಲ್ಲೊಂದು ಚಿಕ್ಕ ತೂತು ಮಾಡಿ, ನೀರು ತುಂಬಿ, ಇವನ್ನು ಪಪ್ಪಾಯಿ ಗಿಡಗಳಿಗೆ ಬಿಗಿದು ಕಟ್ಟಿದರು. ವೈರಸ್ ರೋಗದಿಂದಾಗಿ ಬಹುಪಾಲು ಪಪ್ಪಾಯಿ ಗಿಡಗಳು ಸತ್ತವು. ಆದರೆ ತನ್ನ ಹನಿ ನೀರಾವರಿ ಐಡಿಯಾ ಪಪ್ಪಾಯಿ ಗಿಡಗಳಿಗೆ ಸಾಕಷ್ಟು ನೀರುಣಿಸುತ್ತದೆ ಎಂಬುದು ಅವರಿಗೆ ಖಾತರಿಯಾಗಿದೆ.
ಹನಿ ನೀರಾವರಿಯ ಮಾತೆತ್ತಿದರೆ, ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಲಕ್ಷಲಕ್ಷ ರೂಪಾಯಿ ವೆಚ್ಚ ಹಾಗೂ ಸಬ್ಸಿಡಿಯ ಸಲಹೆ. ಅವರ ಪ್ರಕಾರ, ಹನಿ ನೀರಾವರಿ ಅಳವಡಿಸಲು ಹೆಕ್ಟೇರಿಗೆ ಕನಿಷ್ಠ ರೂ.೮೦,೦೦೦ ವೆಚ್ಚ. (ಹನಿ ನೀರಾವರಿ ಜಾಲ ಜಮೀನಿನಲ್ಲಿ ಹಾಕಿದರೆ ಸಾಲದು; ಪ್ರತಿ ವರುಷವೂ ಅದು ಕೆಲಸ ಮಾಡಬೇಕಾದರೆ, ಬಿಡಿಭಾಗಗಳ ಬದಲಿ ಇತ್ಯಾದಿ ಬಾಬುಗಳಿಗಾಗಿ ವೆಚ್ಚ ಮಾಡುತ್ತಲೇ ಇರಬೇಕು.) ಈ “ರೈತರ ಉದ್ಧಾರ ಯೋಜನೆ”ಗೆ  ಕೇಂದ್ರ ಸರಕಾರದಿಂದ ಶೇಕಡಾ ೭೦ ಸಬ್ಸಿಡಿ ಮತ್ತು ರಾಜ್ಯ ಸರಕಾರದಿಂದ ಶೇಕಡಾ ೨೫ ಸಬ್ಸಿಡಿ. ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳಂತೂ ಕಳೆದ ಅರುವತ್ತು ವರುಷಗಳಿಂದ ಕಾರ್ಯಾಗಾರಗಳಲ್ಲಿ, ಸೆಮಿನಾರುಗಳಲ್ಲಿ ಹನಿ ನೀರಾವರಿ ಬಗ್ಗೆ ಮಾತಾಡುತ್ತಿದ್ದರೂ ಕಡಿಮೆ ವೆಚ್ಚದ ಯಾವುದೇ ವಿಧಾನ ಸೂಚಿಸಿಲ್ಲ.
ರಮೇಶ ಪರ್ಮಾರ್ಅವರಿಗೆ ಮುಂಚೆ ತನ್ನ ೨೫ ಎಕ್ರೆ ಜಮೀನಿನಲ್ಲಿ ಎರಡೆಕ್ರೆಗೆ ಮಾತ್ರ ನೀರು ಒದಗಿಸಲು ಸಾಧ್ಯವಾಗುತ್ತಿತ್ತು. ಈಗ ತನ್ನ ವಿನೂತನ ಹಾಗೂ ಸರಳ ವಿಧಾನದಿಂದ ೨೦ ಎಕ್ರೆಗೆ ನೀರುಣಿಸುತ್ತಿದ್ದಾರೆ!
ಹೀಗೆ, ರೈತರ ಸಮಸ್ಯೆಗಳಿಗೆ ರೈತರೇ ಸರಳ ಹಾಗೂ ಪರಿಣಾಮಕಾರಿ ಪರಿಹಾರ ಹುಡುಕಬಲ್ಲರು. ಯಾಕೆಂದರೆ, ಮಣ್ಣಿನ ಕಾಯಕದಲ್ಲಿ ಹಣ್ಣಾದ ಅವರಿಗೆ ಪರಿಹಾರ ಹುಡುಕಲೇ ಬೇಕಾದ ಅನಿವಾರ್ಯತೆ ಇದೆ.