ಹನಿ ಹನಿಗಳ ನಡುವೆ

ಹನಿ ಹನಿಗಳ ನಡುವೆ

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು
ಕಥಾಬಿಂದು ಪ್ರಕಾಶನ, ಕುಂಜತ್ ಬೈಲ್, ಮಂಗಳೂರು
ಪುಸ್ತಕದ ಬೆಲೆ
ರೂ. ೬೦.೦೦, ಮುದ್ರಣ; ೨೦೨೪

ನಿವೃತ್ತ ಮುಖ್ಯ ಶಿಕ್ಷಕಿ, ಕವಯತ್ರಿ ಶ್ರೀಮತಿ ರತ್ನಾ ಕೆ ಭಟ್ ತಲಂಜೇರಿ ಇವರ ನೂತನ ಕೃತಿ 'ಹನಿ ಹನಿಗಳ ನಡುವೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಯ ಪ್ರಮುಖ ಅಂಶವೆಂದರೆ ಇದೊಂದು ‘ಆಲ್ ಇನ್ ಒನ್' ಎನ್ನುವಂಥ ಪುಸ್ತಕ. ಏಕೆಂದರೆ ಹನಿ ಕವನದ ಎಲ್ಲಾ ಪ್ರಕಾರಗಳು ಇದರಲ್ಲಿವೆ. ಹಾಯ್ಕು, ಟಂಕಾ, ಅಬಾಬಿ, ಚುಟುಕು, ರುಬಾಯಿ, ಶಿಶುಗೀತೆ, ಮಿನಿ ಕವನ ಎಲ್ಲಾ ಈ ಸಂಕಲನದಲ್ಲಿ ಅಡಕವಾಗಿದೆ. 

‘ಹನಿ ಹನಿಗಳ ನಡುವೆ' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಿ, ಸಾಹಿತಿ, ಶಿಕ್ಷಕರಾದ ಹಾ ಮ ಸತೀಶ್. ಇವರು ರತ್ನಾ ಭಟ್ ಅವರ ಸಹೋದರನೂ ಹೌದು. ತಮ್ಮನಾದ ಸತೀಶರು ಅಕ್ಕನ ಪುಸ್ತಕದ ಬಗ್ಗೆ ಹೇಳಿರುವುದು ಹೀಗೆ - “ಕನಸುಗಳು ಹೀಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ನಮ್ಮ ರತ್ನಕ್ಕನವರು ತಮ್ಮಲ್ಲಿರುವ ಕನಸುಗಳನ್ನು ನನಸನ್ನಾಗಿ ಮಾಡುವುದರಲ್ಲಿ ನಿಷ್ಣಾತರು. ಪ್ರಾಥಮಿಕ ಶಾಲಾ ಅಧ್ಯಾಪಕಿಯಾಗಿ ಸಮರ್ಥ ಲೇಖಕಿಯಾಗಿ ಅದಕ್ಕಿಂತಲೂ ಹೆಚ್ಚಾಗಿ ಸೌಜನ್ಯ ಮೂರ್ತಿಯಾಗಿರುವ ಇವರು ಸಹನಾಶೀಲರು. ಈ ಸಂಕಲನದಲ್ಲಿರುವ ಹನಿಗಳನ್ನು ಕೂಲಂಕುಷವಾಗಿ ನೋಡಿದಾಗ ಬಾಳಿನ ಪಲ್ಲವಿಗೆ ನಡೆ ನುಡಿ ಹೇಗಿರಬೇಕೆಂಬುದನ್ನು ತಿಳಿಸಿದ್ದಾರೆ. ‘ಸಿಟ್ಟಾಗದಿರು ಸಂಯಮ ಮನಸ್ಸನ್ನು ಅಣಿಗೊಳಿಸು' ಎಷ್ಟೊಂದು ಚೆಂದದ ಟಂಕಾ ಇಡೀ ಬದುಕಿನ ನಡೆಯನ್ನು ಒಂದು ಸಣ್ಣ ಹನಿಯಲ್ಲಿ ಹಿಡಿದಿಟ್ಟಿದ್ದಾರೆ. ‘ಮನ ಮರ್ಕಟ ಒಳಗೊಳಗೆ ಧ್ಯಾನ ನಿಷ್ಪ್ರಯೋಜಕ’ ಮನ ಮರ್ಕಟವಾದರೆ ಬಾಳು ನಿಷ್ಪ್ರಯೋಜಕ ಎಂದು ಹನಿಯ ಮೂಲಕ ಹೇಳಿದ್ದಾರೆ. ತತ್ವ ಪದಗಳಂತೆ ಇವರು ಬರೆದಿರುವ ಹನಿಗಳು ಪ್ರಬುದ್ಧ ರೀತಿಯಲ್ಲಿ ಸಾಗುತ್ತವೆ. ‘ನರನ ಸ್ವಾರ್ಥ ಪ್ರಕೃತಿ ಬಲಿಪಶು ವಿಕೃತಿ ನೋಡು' ಪ್ರಕೃತಿ ನಾಶದ ಬಗ್ಗೆ ಹನಿಯಲ್ಲಿ ಚೆನ್ನಾಗಿ ತಿಳಿಸಿದ್ದಾರೆ. ಹನಿಗಳೆಂದರೆ ‘ಹನಿ ಹನಿಗಳ ನಡುವೆ, ಜೇನ ಸವಿಯು ಹರಿದಿದೆ ಹೊಸ ಬೆಸುಗೆಯೊಳು ನವ ಪಲ್ಲವಿ ಹೊಳೆದಿದೆ' ಎನ್ನುವ ಸುಂದರ ಪದ ವಿನ್ಯಾಸದ ಮುಖಾಂತರ ಅರುಹಿದ್ದಾರೆ. ಹೀಗೆ ನವ ನವೀನ ನೂರಾರು ವಿವಿಧತೆಯ ನೀತಿಯುಕ್ತ ಹನಿಗಳ ರಸಗವಳವನ್ನು ಓದುಗರಿಗೆ ನೀಡುವುದರ ಜೊತೆಗೆ ಮನಮುಟ್ಟುವಂತೆ ತಟ್ಟುವಂತೆ ಮಾಡಿದ್ದಾರೆ. ಯಾವುದೇ ವಿಷಯವನ್ನಾದರೂ ನೇರವಾಗಿ ಜನಮನಕ್ಕೆ ತಿಳಿಸುವ ಕಲೆ ರತ್ನಕ್ಕನವರಿಗೆ ಸಿದ್ಧಿಸಿದೆ."

'ಹನಿ ಹನಿಗಳ ನಡುವೆ' ರತ್ನಾ ಭಟ್ ಅವರ ಎರಡನೇ ಕವನ ಸಂಕಲನ. ಅವರೇ ತಮ್ಮ ಮಾತಿನಲ್ಲಿ ಹೇಳುವಂತೆ “ ಇದರೊಳಗೆ ಚೌ ಚೌ ರಚನೆಗಳನ್ನು ಬರೆಯಲಾಗಿದೆ. ಒಂದು ರೀತಿಯಲ್ಲಿ ಸಮ್ಮಿಶ್ರ ಎನ್ನಬಹುದು. ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎಂಬ ಹಾಗೆ ನನ್ನೀ ರಚನೆಗಳಿಗೆ ಮೂರ್ತ ಸ್ವರೂಪ ನೀಡಿ ಸಂಕಲನಕ್ಕೆ ಕಾರಣಕರ್ತರಾದ ಕಥಾಬಿಂದು ಪ್ರಕಾಶನದ ಸಂಪಾದಕರಾದ ಸನ್ಮಾನ್ಯ ಪಿ ವಿ ಪ್ರದೀಪ್ ಕುಮಾರ್ ರವರಿಗೆ ನಾನು ಚಿರಋಣಿ.” ಎಂದಿದ್ದಾರೆ. ಈ ಕೃತಿಯ ಎಲ್ಲಾ ರಚನೆಗಳು ಹನಿಗವನದ ಬೇರೆ ಬೇರೆ ಸ್ವರೂಪಗಳೇ. ಓದಲು ಬಹಳವೇನೂ ಸಮಯ ಹಿಡಿಯುವುದಿಲ್ಲ ಆದರೆ ಪುಟ್ಟ ಹನಿಗಳನ್ನು ಓದಿ ಅದರ ಅರ್ಥವನ್ನು ಮನನ ಮಾಡಿಕೊಳ್ಳಲು ಮಾತ್ರ ಬಹಳ ಸಮಯ ಬೇಕಾದೀತು. ಅಷ್ಟೊಂದು ಅರ್ಥಗರ್ಭಿತವಾಗಿವೆ. ಒಂದೆರಡು ಮಾದರಿ ಹನಿಗಳು ಇಲ್ಲಿವೆ…

ದಾಂಪತ್ಯದಲಿ 

ಅನುರಾಗ ಸಂಗಮ

ಹರ್ಷೋಲ್ಲಾಸವು

*

ತಾಯಿಯೊಡಲು 

ಕರುಳ ಕುಡಿಗಳ

ಕಣ್ರೆಪ್ಪೆಯಂತೆ

*

ಪ್ರಾಮಾಣಿಕತೆ

ನಿವೇದನೆಯ ಹಾದಿ

ನೈತಿಕ ಮೌಲ್ಯ

*

ಇಲ್ಲೊಂದು ‘ಶ್ವೇತ ಸುಂದರಿ' ಎನ್ನುವ ಚುಟುಕು ಇದೆ ಓದಿ…

ಶ್ವೇತ ಸುಂದರಿ

ದುಂಡು ಮಲ್ಲಿಗೆ

ಅರಳಿ ನಿಂತಿಹೆ ಸುಮ್ಮನೆ

ದೇವನೊಲುಮೆಯ

ಸಹಜ ಚೆಲುವಲಿ

ಹರಡು ಪರಿಮಳ ಘಮ್ಮನೆ

*

ಹೀಗೆ ಹಲವಾರು ಹನಿಗಳ ರಚನೆ ಈ ಕೃತಿಯಲ್ಲಿದೆ. ಸುಮಾರು ೪೦ ಪುಟಗಳ ಈ ಪುಸ್ತಕವನ್ನು ರತ್ನಾ ಭಟ್ ಅವರು ತಮ್ಮ ತಂದೆ ಪುತ್ರೋಡಿ ಈಶ್ವರ ಭಟ್ ಹಾಲುಮಜಲು ಮತ್ತು ತಾಯಿ ಪುತ್ರೋಡಿ ಶಂಕರಿ ಅಮ್ಮ ಹಾಲುಮಜಲು ಇವರಿಗೆ ಅರ್ಪಣೆ ಮಾಡಿದ್ದಾರೆ.