ಹನುಕಿಯಾ

ಹನುಕಿಯಾ

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಷನ್ಸ್, ರಾಜಾಜಿನಗರ, ಬೆಂಗಳೂರು -೫೬೦೦೧೦
ಪುಸ್ತಕದ ಬೆಲೆ
ರೂ. ೪೯೫.೦೦, ಮುದ್ರಣ: ೨೦೨೩

ಎರಡನೆಯ ವಿಶ್ವಯುದ್ಧ ಕಾಲದ ನೋವು, ನಲಿವು ಮತ್ತು ಗೆಲುವಿನ ಸತ್ಯ ಕಥೆಯ ಎಳೆಯನ್ನು ಹಿಡಿದುಕೊಂಡು ಅದಕ್ಕೆ ತಮ್ಮದೇ ಆದ ಕಲ್ಪನೆಯನ್ನು ಬೆರೆಸಿ ಹದವಾಗಿ ರುಚಿಕರವಾದ ಪಾಕ ಮಾಡಿ ನಮಗೆ ಉಣ ಬಡಿಸಿದ್ದಾರೆ ‘ನಿಗೂಢ ನಾಣ್ಯ' ಖ್ಯಾತಿಯ ಕಾದಂಬರಿಕಾರ ವಿಠಲ್ ಶೆಣೈ. ಈ ಕಾದಂಬರಿಗೆ ಅವರು ಇಟ್ಟ ಹೆಸರು ‘ಹನುಕಿಯಾ - ಆರಿ ಹೋಗದ ದೀಪ' ಎಂದು. ಈ ಕಾದಂಬರಿಯಲ್ಲಿರುವ ಘಟನೆಗಳು ನಡೆಯುವುದು ೧೯೩೯ ರಿಂದ ೨೦೧೫ರ ಕಾಲಘಟ್ಟದಲ್ಲಿ. ‘ಹನುಕಿಯಾ’ ಎನ್ನುವುದು ಯಹೂದಿಗಳ ಪವಿತ್ರ ದೀಪ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಪೋಲಾಂಡ್ ನ ಯಹೂದಿಗಳ ಮೇಲೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನಡೆಸಿದ ದೌರ್ಜನ್ಯಗಳ ಕಥನ ಇದು. ಈ ಕಾದಂಬರಿಯಲ್ಲಿ ತಂದೆ - ತಾಯಿ- ಅಣ್ಣ- ತಂಗಿಯರ ನೋವಿದೆ, ನಲಿವಿದೆ, ತಂದೆಯ ಆಸೆ ತೀರಿಸಲು ಹೊರಟ ಮಗಳ ಸಾಹಸದ ಕಥೆಯಿದೆ. ಪ್ರೀತಿ, ಪ್ರೇಮ, ಅಗಲುವಿಕೆಯ ನೋವು, ಸಾವು, ಗೆಲುವು ಎಲ್ಲವೂ ಸಮ್ಮಿಳಿತವಾದ ಕಾದಂಬರಿ ಇದು.

ಕಾದಂಬರಿಯ ಬೆನ್ನುಡಿಯಲ್ಲಿ ಖ್ಯಾತ ಕಾದಂಬರಿಕಾರ ಹಾಗೂ ಅಂಕಣಕಾರರಾದ ಸಂತೋಷಕುಮಾರ್ ಮೆಹೆಂದಳೆಯವರ ಮಾತುಗಳಿವೆ. ಅವರು “ಕನ್ನಡದಲ್ಲಿ ಯುದ್ಧ ಕಥಾನಕದ ಇತಿಹಾಸವನ್ನು ಬಳಸಿ ಸಾಹಿತ್ಯ ರಚನೆಯ ಕೆಲಸಕ್ಕೆ ಕೈ ಹಾಕಿದವರು ತುಂಬ ಕಡಿಮೆ. ಅದರಲ್ಲೂ ಸ್ವದೇಶದ್ದಲ್ಲದ, ಲಭ್ಯವಿರುವ ವಿದೇಶದ ಇತಿಹಾಸವನ್ನು ಕೈಗೆತ್ತಿಕೊಂಡು, ಸಾಕ್ಷೀಕೃತ ಘಟನಾವಳಿಗಳ ಮೂಲ ರೂಪ ಕೆಡದಂತೆ ಪ್ರಯೋಗಕ್ಕೆ ಇಳಿಯುವಾಗ ಅಪಾಯಗಳು ಜಾಸ್ತಿ. ಅಂಥಾ ರಿಸ್ಕನ್ನು ಮೈಮೇಲೆ ಎಳೆದುಕೊಂಡು ದೊಡ್ಡ ಅಳತೆಯ ಕಾದಂಬರಿಗೆ ಕೈ ಹಾಕಿ ಗೆದ್ದಿರುವ ಆತ್ಮೀಯ ಮಿತ್ರ, ಲೇಖಕ ವಿಠಲ ಶೆಣೈ ಓದುಗರನ್ನು ಅಕ್ಷರಶಃ ಎರಡನೇ ಮಹಾಯುದ್ಧದ ರಣಾಂಗಣಕ್ಕೆ ಒಯ್ದು ಕೂರಿಸಿಬಿಡುತ್ತಾರೆ.

ಓದುಗನನ್ನು ಪ್ರಕ್ಷುಬ್ಧಗೊಳಿಸುವ ಮಟ್ಟಿಗೆ ಯುದ್ಧಾನುಭವದ ಕಥಾನಕ ಬಿಚ್ಚಿಡುವ ಕಾದಂಬರಿ ಹುನುಕಿಯಾ ಓದಿ ಮುಗಿದ ಮೇಲೂ ಒಳಗೊಳಗೇ ದೀಪದಂತೆ ಉರಿಯುತ್ತಲೇ ಇರುತ್ತದೆ. ಎಲ್ಲ ಪಾತ್ರಗಳು ಕಾದಂಬರಿಯ ಅಗತ್ಯಕ್ಕೆ ತಕ್ಕಂತೆ ಕಾದಂಬರಿಕಾರನ ಕಲ್ಪನೆಯಲ್ಲಿ ಮೂಡಿದ್ದರೂ, ನಮ್ಮನ್ನು ಎಂಟು ದಶಕಗಳ ಹಿಂದಕ್ಕೆ ಕರೆದೊಯ್ಯುವಲ್ಲಿ ಸಫಲವಾಗುತ್ತವೆ. ಕಥನ ಭಾಗವಾಗಿ ಭಾಷೆಯನ್ನು ಶಕ್ತಿಯುತವಾಗಿ ಬಳಸಿಕೊಂಡಿರುವ ಲೇಖಕರು, ಅಲ್ಲಲ್ಲಿ ನಿರೂಪಕನಾಗಿ ಇಣುಕುವ ಪರಿ ಕೆಲವೊಮ್ಮೆ ಓದುಗನನ್ನು ಮುಖ್ಯವಾಹಿನಿಯ ಆಚೆಗೆ ಎಳೆದೊಯ್ಯುತ್ತದೆ. ಕಲ್ಪನೆ ಇತಿಹಾಸದಷ್ಟೇ ಉದ್ದವಾಗಿಬಿಡುತ್ತದೆ” ಎಂದು ಕಾದಂಬರಿಯ ಬಗ್ಗೆ ಕುತೂಹಲ ಮೂಡಿಸುತ್ತಾರೆ.

ಕಾದಂಬರಿಯು ಭಾರತದ ದೇಶದ ಬೆಂಗಳೂರಿನ ವೈಟ್ ಫೀಲ್ಡ್ ನ ಅಪಾರ್ಟ್ ಮೆಂಟ್ ಒಂದರಲ್ಲಿ ಶುರುವಾಗುತ್ತದೆ. ಪೋಲೆಂಡ್ ನಲ್ಲಿ ಹುಟ್ಟಿ ಬೆಳೆದ ಅಜ್ಜಿಯ (ಮಿರಿಯಂ ಅಥವಾ ಮೀರಾ) ಆಸೆಯನ್ನು ತೀರಿಸಲು ಮೊಮ್ಮಗ ಆನಂದ್ ತಾನು ಕೆಲಸ ಮಾಡುವ ಸಂಸ್ಥೆಯ ಪ್ರಾಜೆಕ್ಟ್ ಒಂದರ ನೆಪದ ಮೇಲೆ ಹೊರಡುತ್ತಾನೆ. ಅವರು ಹುಡುಕಲು ಹೊರಟದ್ದು ಎರಡನೇ ಮಹಾಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಮಿರಿಯಂ ಕಾಫ್ಮನ್ ಎಂಬ ಬಾಲಕಿಯ ತಂದೆ ಸುರಕ್ಷಿತವಾಗಿರಿಸಲು ಅಡಗಿಸಿಟ್ಟ ಅವರ ಕುಟುಂಬದ ಪ್ರಮುಖ ವಸ್ತುಗಳು. ಅದರಲ್ಲಿ ಒಂದು ‘ಹನುಕಿಯಾ’ ಎನ್ನುವ ದೀಪ ಮತ್ತು ಸೊಗಸಾಗಿ ಪೈಂಟಿಂಗ್ ಮಾಡುತ್ತಿದ್ದ ಮಿರಿಯಂ ರಚಿಸಿದ ಚಿತ್ರಗಳು. ಯಹೂದಿಗಳನ್ನು ಕಂಡರಾಗದ ನಾಜಿಗಳು (ಹಿಟ್ಲರ್ ಸೈನಿಕರು) ಅವರ ಪವಿತ್ರ ಸ್ಥಳವಾದ ಸಿನೆಗಾಗ್ ಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡುವ ಮತ್ತು ನಾಶ ಮಾಡುವ ಹುನ್ನಾರವನ್ನು ಅರಿತ ಯಹೂದಿಗಳು ಅದನ್ನು ಸುರಕ್ಷಿತವಾದ ಸ್ಥಳದಲ್ಲಿ ಬಚ್ಚಿಡುವ ಬಗ್ಗೆ ಯೋಚನೆ ಮಾಡುತ್ತಿದ್ದರು. ಇದರ ಪರಿಣಾಮವೇ ‘ಬಂಗಾರದ ರೈಲು’. ಇದರಲ್ಲಿ ಯಹೂದಿಗಳು ತಮ್ಮ ಬೆಲೆ ಬಾಳುವ ಚಿನ್ನದ ಉಂಗುರಗಳು, ಸರಗಳು, ವಜ್ರದ ಕಲ್ಲುಗಳು, ದುಡ್ಡಿನ ನೋಟುಗಳು, ದುಬಾರಿ ವಾಚುಗಳು, ಕ್ಯಾಮರಾಗಳು, ಬೆಲೆಬಾಳುವ ಪೈಂಟಿಂಗ್ ಗಳು, ರಜತ ಪಾತ್ರೆಗಳು, ಮೆನೋರಾಗಳು ಇವೆಲ್ಲವನ್ನು ರೈಲಿನ ಹದಿನೈದು ಬೋಗಿಗಳಲ್ಲಿ ಸಾಗಿಸಿ ಅದನ್ನು ಗುಪ್ತವಾಗಿ ಪರ್ವತವೊಂದರ ಅಡಿಯಲ್ಲಿ ಅಡಗಿಸಿಟ್ಟಿದ್ದಾರೆ ಎನ್ನುವ ದಾಖಲೆಗಳು ಸಿಗುತ್ತವೆ. ಆದರೆ ಯುದ್ಧದ ಸಮಯದಲ್ಲಿ ಅಥವಾ ನಂತರವೂ ಇದಕ್ಕಾಗಿ ಹುಡುಕಾಟ ನಡೆದಿದೆ. ಹಲವು ಸಿನೆಮಾ, ಸಾಕ್ಷ್ಯ ಚಿತ್ರಗಳು ಬಂದಿವೆ. ಆದರಿನ್ನೂ ಆ ಬಂಗಾರದ ರೈಲು ಸಿಕ್ಕಿಲ್ಲ. ಇಂದಿನ ಲೆಕ್ಕಾಚಾರದಲ್ಲಿ ಆ ರೈಲಿನಲ್ಲಿದ್ದ ಸೊತ್ತಿನ ಬೆಲೆ ಸುಮಾರು ನಾಲ್ಕು ಬಿಲಿಯನ್ ಡಾಲರ್ ಗಳು.

ತಮ್ಮ ಕುಟುಂಬದ ಅಮೂಲ್ಯ ಸೊತ್ತುಗಳನ್ನು ಹುಡುಕ ಹೊರಟ ಅಜ್ಜಿ ಮತ್ತು ಮೊಮ್ಮಗನ ಭೇಟಿ ಟಿವಿ ಚಾನೆಲ್ ಒಂದರ ರಿಪೋರ್ಟರ್ ಗಳಾದ ಮ್ಯಾಟ್ ಮತ್ತು ಹಿಲರಿಯವರದ್ದಾಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಅತ್ಯದ್ಭುತ ಕಥನ. ತಮ್ಮ ಚಾನೆಲ್ ಗೆ ಅಜ್ಜಿಯ ಹಿಂದಿನ ಕತೆಯನ್ನು ಪ್ರಸಾರ ಮಾಡಿದರೆ ಖ್ಯಾತಿ ಸಿಗಬಹುದು ಎನ್ನುವ ಉದ್ದೇಶದಿಂದ ಅವರು ಅಜ್ಜಿ - ಮೊಮ್ಮಗನನ್ನು ಒಪ್ಪಿಸುತ್ತಾರೆ. ಆಗ ಶುರುವಾಗುತ್ತದೆ ‘ನೋವು’ ಎಂಬ ಮೊದಲ ಅಧ್ಯಾಯ. ಬೆಂಜಮಿನ್ ಕಾಫ್ಮನ್ ಎಂಬ ಯಹೂದಿ ಪ್ರೀತಿಸಿ ಮದುವೆಯಾದದ್ದು ಇಸಬೆಲ್ ಎನ್ನುವ ಕ್ರೈಸ್ತ ಮತದ ಮಹಿಳೆಯನ್ನು. ಇವರಿಗೆ ನೇಥನ್ ಕಾಫ್ಮನ್ ಮತ್ತು ಮಿರಿಯಂ ಕಾಫ್ಮನ್ ಎನ್ನುವ ಅವಳಿ ಮಕ್ಕಳು. ಜರ್ಮನಿಯು ಪೋಲೆಂಡ್ ಮೇಲೆ ಆಕ್ರಮಣ ನಡೆಸಿದಾಗ ಅದರ ಸರ್ವಾಧಿಕಾರಿ ಹಿಟ್ಲರ್ ಎಷ್ಟು ಕ್ರೂರತೆಯಿಂದ ಯಹೂದಿಗಳನ್ನು ಹತ್ಯೆ ಮಾಡುತ್ತಾನೆ ಎಂಬುದನ್ನು ಈ ಕಾದಂಬರಿ ಬಹಳ ವಿವರವಾಗಿ ಹೇಳುತ್ತದೆ. ಈ ಬೆಂಜಮಿನ್ ಸೇರಿ ನಾಲ್ಕು ಮಂದಿಯ ಸುಖ ಸಂಸಾರಕ್ಕೆ ಒಂದು ದಿನ ತಮ್ಮ ಮನೆಯನ್ನೇ ತೊರೆಯಬೇಕಾದ ಅನಿವಾರ್ಯತೆ ಬರುತ್ತದೆ. ಯಹೂದಿಕೇರಿ ಎಂಬ ಯಾವುದೇ ಹೆಚ್ಚಿನ ಮೂಲಭೂತ ಸೌಕರ್ಯವಿಲ್ಲದ ಸ್ಥಳದಲ್ಲಿ ಜರ್ಮನ್ ಸೈನಿಕರ ಕಿರುಕುಳ ಅನುಭವಿಸುತ್ತಾ ಬಡವಾಗುತ್ತಾರೆ. ನಂತರ ಒಂದು ದಿನ ಅವರನ್ನೆಲ್ಲಾ ಆಶ್ವಿಟ್ಸ್ ನ ಕ್ರೂರ ಸೆರೆ ಶಿಬಿರಕ್ಕೆ ಕರೆತರಲಾಗುತ್ತದೆ. ಅಲ್ಲಿ ನಡೆಯುವುದು ಪ್ರಪಂಚದಲ್ಲೇ ಎಂದೂ ನಡೆದಿರದ ಭಯಾನಕ ಹತ್ಯೆಗಳು. ಯಹೂದಿಗಳನ್ನು ಒಬ್ಬೊಬ್ಬರಾಗಿ ನಿಲ್ಲಿಸಿ ಗುಂಡು ಹೊಡೆಯುವುದು ಸಮಯ ಹಾಗೂ ಬುಲೆಟ್ ನ ನಷ್ಟ ಎಂದು ಅವರನ್ನು ಕೊಲ್ಲಲೇ ಗ್ಯಾಸ್ ಚೇಂಬರ್ ಒಂದನ್ನು ನಿರ್ಮಾಣ ಮಾಡುತ್ತಾರೆ. ಇದರಷ್ಟು ಕ್ರೂರ ಸಂಗತಿ ಬೇರೇನೂ ಇರಲಿಕ್ಕಿಲ್ಲ. ಈ ಗ್ಯಾಸ್ ಚೇಂಬರ್ ನ ವಿಷಯಗಳನ್ನು ಕಾದಂಬರಿಕಾರ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಇದನ್ನು ಓದುವಾಗ ಕಣ್ಣು ಒದ್ದೆಯಾಗುವುದು ಸಹಜ.

ಈ ಗ್ಯಾಸ್ ಚೇಂಬರ್ ನಿಂದ ಮಿರಿಯಂ ಹೊರತು ಪಡಿಸಿ ಆಕೆಯ ಕುಟುಂಬದ ಯಾರೆಲ್ಲಾ ತಪ್ಪಿಸಿಕೊಳ್ಳುತ್ತಾರೆ? ಯಾರು ಸಾಯುತ್ತಾರೆ? ಮಿರಿಯಂ ಭಾರತಕ್ಕೆ ಹೇಗೆ ಬರುತ್ತಾಳೆ? ಭಾರತದಲ್ಲಿ ಆಕೆ ಮಾಡುವ ಕೆಲಸವಾದರೂ ಏನು? ಆಕೆಗೆ ಆಸರೆ ನೀಡುವ ಚಂದ್ರಕಾಂತ್ ಯಾರು? ಈ ಕಾದಂಬರಿಯಲ್ಲಿ ಬರುವ ಗುಜರಾತಿನ ಜಾಮ್ ನಗರದ ಮಹಾರಾಜ ಜಾಮ್ ಸಾಹೇಬ್ ದಿಗ್ವಿಜಯ್ ಸಿಂಗ್ ಜೀ ಅವರ ಪಾತ್ರವೇನು? ಈಗಲೂ ಜಾಮ್ ನಗರದಲ್ಲಿ ಪೋಲೆಂಡ್ ಮೂಲದ ವ್ಯಕ್ತಿಗಳು ಕಾಣಿಸುವುದು ಏಕೆ? ಕೊನೆಗೂ ಮಿರಿಯಂ ಯಾನೆ ಮೀರಾಗೆ ತಮ್ಮ ಕುಟುಂಬದ ಪವಿತ್ರ ‘ಹನುಕಿಯಾ’ ಸಿಕ್ಕಿತೇ? ಇದನ್ನೆಲ್ಲಾ ಓದಿಯೇ ತಿಳಿದುಕೊಳ್ಳಬೇಕು. ಈ ಕಾದಂಬರಿಯ ತುಂಬೆಲ್ಲಾ ಕಾಣ ಸಿಗುವ ವಿವಿಧ ಪಾತ್ರಗಳನ್ನು ಕಾದಂಬರಿಕಾರರಾದ ವಿಠಲ್ ಶೆಣೈ ಬಹಳ ಸೊಗಸಾಗಿ ರೂಪಿಸಿದ್ದಾರೆ. ಮಿರಿಯಂ ಪರಿಚಯದ ರುತ್ ಆಂಟಿ, ಆಕೆಯ ಮಗಳು ಸ್ಟೆಲ್ಲಾ, ಜೊಸೆಫ್ ಮೆಂಗಲ ಎಂಬ ನಾಜಿ ವೈದ್ಯ, ಆಕೆಯ ತಂದೆಯ ಗೆಳೆಯ ಸ್ಯಾಮ್ಯುಯೆಲ್, ಆಕೆಯ ಕ್ರೂರಿ ಸೋದರ ಮಾವ ವಾಲ್ಟರ್, ಆಕೆಯ ಅಣ್ಣನ ಗೆಳೆಯ ರಾಲ್ಫ್, ಬೊಂಬಾಯಿಯ ವೈದ್ಯ ಡಾ. ಜೋಷಿ, ಶಿಕ್ಷಕಿ ಸಾರಾ, ಕೀರಾ, ಚಂದ್ರಕಾಂತ್ ನ ತಾಯಿ ಸುಮಿತ್ರಾ ಮೊದಲಾದ ಹಲವಾರು ಪಾತ್ರಗಳು ಕಂಡು ಬರುತ್ತವೆ. ಎಲ್ಲಾ ಪಾತ್ರಗಳು ಮಿರಿಯಂ ಸುತ್ತಲೇ ಸುತ್ತುತ್ತಾ ಕಥೆಗೆ ಹೊಸ ಭಾಷ್ಯವನ್ನು ಬರೆದಿವೆ. 

ಇಂತಹ ಒಂದು ಅದ್ಭುತ ಕಾದಂಬರಿಯನ್ನು ಬರೆಯಲು ಲೇಖಕರಾದ ವಿಠಲ್ ಶೆಣೈ ಅವರಿಗೆ ದೊರೆತ ಪ್ರೇರಣೆಯಾದರೂ ಯಾವುದು? ಅವರ ನುಡಿಯಲ್ಲೇ ಕೇಳುವ… “ ಎಪ್ರಿಲ್ ೨೦೨೦ರ ಒಂದು ಸಂಜೆ ನನ್ನ ವಾಟ್ಸಾಪ್ ನಲ್ಲಿ ಎರಡನೇ ಮಹಾಯುದ್ಧದ ಕಾಲಾವಧಿಯಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ನಡೆದ ಘಟನೆಯ ಒಂದು ವಿಡಿಯೋ ಹರಿದು ಬಂತು. ಚರಿತ್ರೆಯನ್ನು ಶಾಲಾದಿನಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಓದಿದ್ದರೂ ಆ ವಿಡಿಯೋದಲ್ಲಿ ನೋಡಿದ ಮಹಾಯುದ್ಧದ ವಿಷಯ ಯಾಕೆ ಜನಜನಿತವಾಗಿಲ್ಲ ಎಂದು ಅದನ್ನು ನೋಡಿ ವಿಸ್ಮಯನಾದೆ. ಈ ವಿಷಯದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದಾಗ ಅದರ ಬಗ್ಗೆ ಪೂರ್ತಿ ವಿವರಗಳು ಮಾತ್ರವಲ್ಲ, ಮಹಾಯುದ್ಧಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ನನ್ನ ಗಮನಕ್ಕೆ ಬಂದವು. ಎರಡನೆಯ ವಿಶ್ವಯುದ್ಧ ಎನ್ನುವುದು ಎಷ್ಟು ಆಳವಾದ ವಿಷಯ, ಅದು ಜಗತ್ತು ಹಾಗೂ ಭಾರತದ ಭವಿಷ್ಯವನ್ನು ಪರೋಕ್ಷವಾಗಿ ಬದಲಿಸಿದ ಕಾಲಘಟ್ಟ ಎಂದು ಅರಿವಾಯಿತು. ನನ್ನ ಮುಂದಿನ ಕಾದಂಬರಿಗೆ ಇದೇ ವಸ್ತು ಎಂದು ಒಂದೆರಡು ದಿನಗಳಲ್ಲಿ ನಿರ್ಧಾರ ಮಾಡಿದೆ.”  

‘ಹನುಕಿಯಾ’ ಕಾದಂಬರಿಯುದ್ದಕ್ಕೂ ಲೇಖಕರು ಲಭ್ಯ ಇರುವ ಐತಿಹಾಸಿಕ ದಾಖಲೆಗಳನ್ನು, ವಿಡಿಯೋ ಲಿಂಕ್ ಗಳನ್ನು ಒದಗಿಸಿದ್ದಾರೆ. ಪುಟದ ಕೊನೆಯಲ್ಲಿ ಅದನ್ನು ನೀಡುವ ಮೂಲಕ ಕಾದಂಬರಿಗೆ ನ್ಯಾಯ ಒದಗಿಸಿದ್ದಾರೆ. ಸುಮಾರು ೪೦೦ ಪುಟಗಳ ಬೃಹತ್ ಕಾದಂಬರಿಯನ್ನು ಓದಲು ಶುರು ಮಾಡಿದರೆ ನಿಲ್ಲಿಸಲು ಮನಸ್ಸಾಗದು. ಪುಟಗಳ ಸಂಖ್ಯೆ ಕಡಿಮೆ ಮಾಡಲು ಬಹುಷಃ ಅಕ್ಷರಗಳ ಗಾತ್ರವನ್ನು ಸ್ವಲ್ಪ ಸಣ್ಣದು ಮಾಡಿದ್ದಾರೆ ಅನಿಸುತ್ತೆ. ಅಕ್ಷರಗಳು ಸ್ವಲ್ಪ ದೊಡ್ಡ ಗಾತ್ರದಲ್ಲಿದ್ದರೆ ಓದಲು ಇನ್ನಷ್ಟು ಸರಾಗವಾಗಿರುತ್ತಿತ್ತು. ಏನೇ ಆದರೂ ಇಂತಹ ಐತಿಹಾಸಿಕ ಸಂಗತಿಯನ್ನು ಕಾದಂಬರಿ ರೂಪದಲ್ಲಿ ಎಲ್ಲೂ ಪ್ರಮುಖ ವಿಷಯಕ್ಕೆ ಚ್ಯುತಿ ಬಾರದಂತೆ ನಿರೂಪಿಸಿದ ಕಾದಂಬರಿಕಾರ ವಿಠಲ್ ಶೆಣೈ ಅಭಿನಂದನಾರ್ಹರು.