ಹನ್ನೆರಡು ಜ್ಯೋತಿರ್ಲಿಂಗಗಳು - ೮ [ನಾಶಿಕದ ತ್ರ್ಯಂಬಕೇಶ್ವರ].

ಹನ್ನೆರಡು ಜ್ಯೋತಿರ್ಲಿಂಗಗಳು - ೮ [ನಾಶಿಕದ ತ್ರ್ಯಂಬಕೇಶ್ವರ].

ಬರಹ

ನಾಶಿಕದ ತ್ರ್ಯಂಬಕೇಶ್ವರ.
ನಾಷಿಕದ ತ್ರ್ಯಂಬಕೇಶ್ವರ.
ಎಲ್ಲಿದೆ?
ಮಹಾರಾಷ್ಟ್ರದ ನಾಶಿಕದಲ್ಲಿದೆ. ಇದು ಗೋದಾವರಿ ನದಿಯ ಉಗಮ ಸ್ಥಾನ. ತ್ರ್ಯಂಬಕೇಶ್ವರದ ವಿಶೇಷವೆಂದರೆ ಒಂದೇ ಪಾಣಿಪೀಠದ ಕುಳಿಯೊಳಗೆ ಬ್ರಹ್ಮ - ವಿಷ್ಣು - ಮಹೇಶ್ವರರು ಮೂವರು ಕೂಡಿದ ಲಿಂಗ.

ದೇವಸ್ಥಾನದ ಸ್ವರೂಪ.
ಇದು ಭವ್ಯವಾದ ದೇಗುಲ. ಎತ್ತರದ ಕಂಬಗಳು ದೇವಾಲಯಕ್ಕೆ ಮೆರುಗು ನೀಡಿದೆ. ದೇವಾಲಯದ ಆವರಣದಲ್ಲಿ ಅಮೃತಕುಂಡ ಸರೋವರವಿದೆ. ದೇವಾಲಯದ ಸ್ವಲ್ಪ ದೂರದಲ್ಲೇ ಕುಶಾವರ್ತಿ ಎಂಬ ಪುಷ್ಕರಣಿ ಇದೆ. ದೇವಾಲಯವಿರುವ ಬ್ರಹ್ಮಗಿರಿ ಪರ್ವತದ ಬುಡದಲ್ಲಿ ವರಾಹ ತೀರ್ಥ ಮತ್ತು ನರಸಿಂಹ ತೀರ್ಥಗಳೆಂಬ ಪವಿತ್ರ ಕ್ಷೇತ್ರಗಳಿವೆ.

ಸ್ಥಳ ಪುರಾಣ.
ಬ್ರಹ್ಮಗಿರಿ ಪರ್ವತದ ತಪ್ಪಲಿನಲ್ಲಿ ಮಳೆಯಾಗದ್ದರಿಂದ ಗೌತಮ ಋಷಿಯು ದೀರ್ಘ ತಪಸ್ಸು ನಡೆಸಿದ. ಅವನ ತಪಸ್ಸಿಗೆ ಒಲಿದ ವರುಣನು ಶಾಶ್ವತವಾಗಿ ಹರಿಯುವ ಜಲಧಾರೆಯನ್ನು ಕರುಣಿಸಿದ. ಇದೇ ಗೋದಾವರೀ ನದಿ ಆಯಿತು. ಗೌತಮನ ಕೀರ್ತಿಗೆ ಅಸೂಯೆಗೊಂಡ ಋಷಿಗಳು ಅವನ ಮೇಲೆ ಹಸುವನ್ನು ಕೊಂದ ಆಪಾದನೆಯನ್ನು ಹೊರಿಸಿ ಬಹಿಷ್ಕರಿಸಿದರು. ಇದರಿಂದ ನೊಂದ ಗೌತಮನು ತನ್ನ ಸತಿಯೊಂದಿಗೆ ತಪಸ್ಸನ್ನಾಚರಿಸಿ ಶಿವನನ್ನು ಒಲಿಸಿಕೊಂಡಾಗ ಅವನು ಜ್ಯೋತಿರ್ಲಿಂಗ ರೂಪಧಾರಿಯಾಗಿ ಪ್ರತ್ಯಕ್ಷನಾಗಿ ತ್ರ್ಯಂಬಕೇಶ್ವರನಾಗಿ ಇಲ್ಲಿ ನೆಲೆಸಿದನೆಂದು ಪುರಾಣ ಹೇಳುತ್ತದೆ.

ಭೇಟಿ ನೀಡುವ ಸಮಯ.
ಮಾಘ ಶುದ್ಧ ದಶಮಿಯಂದು ಇಲ್ಲಿ ವಿಶೇಷ ರಥೋತ್ಸವ ನೆರವೇರುತ್ತದೆ. ಗುರು ಉಚ್ಚನಾಗಿರುವಾಗ ಸಿಂಹ ಮಾಸದ ಹುಣ್ಣಿಮೆಯಂದು ಇಲ್ಲಿ ೧೨ ವರ್ಷಗಳಿಗೊಮ್ಮೆ ಕುಂಭಮೇಳ ನೆರವೇರುತ್ತದೆ. ಗೋದಾವರಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಿಶೇಷವೆಂದು ನಂಬಿಕೆ. ಶಿವರಾತ್ರಿಯಂದು ವಾರ್ಷಿಕ ಉತ್ಸವ ನೆರವೇರುತ್ತದೆ.

ಸೇರುವ ಬಗೆ.
ನಾಶಿಕ್ ಹತ್ತಿರದ ರೈಲು ನಿಲ್ದಾಣದಿಂದ ಕೇವಲ ೮ ಕಿ.ಮೀ. ದೂರದಲ್ಲಿ ತ್ರ್ಯಂಬಕೇಶ್ವರ ದೇವಾಲಯವಿದೆ. ವಾಹನ ಸೌಕರ್ಯವಿದ್ದರೂ ಪಾದಯಾತ್ರೆ ಮೂಲಕ ಕ್ರಮಿಸುವ ಭಕ್ತರೇ ಹೆಚ್ಚು. ಮುಂಬೈಯಿಂದ ೧೮೮ ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಬಸ್ ಸೌಲಭ್ಯವಿದೆ.

ವಸತಿ.
ತ್ರ್ಯಂಬಕೇಶ್ವರದಲ್ಲಿ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ವಸತಿ ಗೃಹವಿದೆ. ನಾಶಿಕ್ ಅಲ್ಲಿ ಸಾಕಷ್ಟು ಸುಸಜ್ಜಿತವಾದ ವಸತಿ ಗೃಹಗಳಿವೆ.

---------------------------------------------
ಚಿತ್ರ ಕೃಪೆ: www.skyscrapercity.com