*ಹರಿದ ಅಹಂಕಾರ*

*ಹರಿದ ಅಹಂಕಾರ*

ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ, ನಿಗರ್ವಿ, ತುಂಬ ಪ್ರಾಮಾಣಿಕ. ಆತ ಸಿಟ್ಟಾಗಿದ್ದನ್ನು ಆ ಊರಿನಲ್ಲಿ ಯಾರೂ ನೋಡೇ ಇರಲಿಲ್ಲ. ಆ ಊರಿನ ಕೆಲ ಯುವಕರಿಗೆ ಒಂದು ತರಲೆ ಹೊಳೆಯಿತು. ನೇಕಾರನಿಗೆ ಸಿಟ್ಟು ಬರಿಸಬೇಕು ಎಂದು ಅವರು ಮಾತಾಡಿಕೊಂಡರು. ಒಂದು ದಿನ ಯುವಕರ ಗುಂಪು ನೇಕಾರನ ಅಂಗಡಿಗೆ ಆಗಮಿಸಿತು. ಆ ಯುವಕರ ನಾಯಕ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ. 

ಅವನು ನೇಕಾರನ ಅಂಗಡಿಯಲ್ಲಿ ಒಂದು ಬೆಲೆ ಬಾಳುವ ಸೀರೆಯನ್ನು ಆಯ್ಕೆ ಮಾಡಿ ಅದರ ಬೆಲೆ ವಿಚಾರಿಸಿದ. ನೇಕಾರ, ಆ ಸೀರೆಗೆ ೧೦ ನಾಣ್ಯಗಳ ಬೆಲೆ ಕಟ್ಟಿದ. ನೇಕಾರನನ್ನು ಛೇಡಿಸುವ ಉದ್ದೇಶದಿಂದ ಆ ಶ್ರೀಮಂತ ಯುವಕ, ನನಗೆ ಪೂರ್ಣ ಸೀರೆ ಬೇಡ, ಅರ್ಧ ಸಾಕು ಎನ್ನುತ್ತ ಸೀರೆಯನ್ನು ಹರಿದು ಎರಡು ಭಾಗ ಮಾಡಿ, ಒಂದು ಭಾಗದ ಬೆಲೆ ವಿಚಾರಿಸಿದ.

ನೇಕಾರ ಶಾಂತ ಚಿತ್ತದಿಂದ ಆ ಅರ್ಧ ಸೀರೆಯ ಬೆಲೆ ೫ ನಾಣ್ಯಗಳು ಎಂದು ಉತ್ತರಿಸಿದ. ಯುವಕ ಮತ್ತೆ ಆ ಸೀರೆಯನ್ನು ಎರಡು ಭಾಗ ಮಾಡಿ, ಒಂದು ಭಾಗ ಸಾಕು ಅದರ ಬೇಲೆ ಹೇಳು ಎಂದು ನೇಕಾರನನ್ನು ಕೆಣಕಿದ. ನೇಕಾರ ಕೊಂಚವೂ ವಿಚಲಿತನಾಗದೇ ಸೀರೆಯ ಬೆಲೆ ಎರಡು ನಾಣ್ಯಗಳು ಎಂದು ಉತ್ತರಿಸಿದ. ಹೀಗೇ ಆ ಯುವಕ ಸೀರೆಯನ್ನು ತುಂಡು ಮಾಡುತ್ತಲೇ ಹೋದ. ಕೊನೆಗೆ “ ಈ ಸೀರೆ ನನಗೀಗ ಯಾವ ಉಪಯೋಗಕ್ಕೂ ಬಾರದು” ಎಂದು ಕೈಚೆಲ್ಲಿದ. ಆಗ ನೇಕಾರ “ಹುಡುಗಾ ಈಗ ಈ ಸೀರೆ ನಿನಗಷ್ಟೇ ಅಲ್ಲ ಯಾರ ಉಪಯೋಗಕ್ಕೂ ಬಾರದು” ಎಂದು ಶಾಂತಚಿತ್ತದಿಂದ ಮಾತನಾಡಿದ.

ಇಷ್ಟಾದರೂ ನೇಕಾರ ಸಿಟ್ಟಿಗೇಳದ್ದನ್ನು ಕಂಡು ಆ ಯುವಕನಿಗೆ ನಾಚಿಕೆಯಾಯಿತು. “ಕ್ಷಮಿಸಿ, ನನ್ನಿಂದಾಗಿ ನಿಮಗೆ ನಷ್ಟವಾಯಿತು, ದಯವಿಟ್ಚು ಸೀರೆಯ ಪೂರ್ತಿ ಬೆಲೆಯನ್ನು ನನ್ನಿಂದ ಸ್ವೀಕರಿಸಿ” ಎಂದು ಮನವಿ ಮಾಡಿಕೊಂಡ. ನೀನು ನನ್ನಿಂದ ಸೀರೆ ಕೊಂಡಿಲ್ಲ, ಆದ್ದರಿಂದ ನಿನ್ನಿಂದ ನಾನು ಹಣ ಪಡೆಯಲಾರೆ ಎಂದು ನೇಕಾರ ಹಣ ಸ್ವೀಕರಿಸಲು ನಿರಾಕರಿಸಿದ.

ನೇಕಾರನ ಈ ಮಾತು ಕೇಳುತ್ತಲೆ ಆ ಯುವಕನ ಅಹಂಗೆ ಪೆಟ್ಟು ಬಿದ್ದಿತು “ನಾನು ಶ್ರೀಮಂತನ ಮಗ, ಹಣ ಕೊಟ್ಟರೆ ನನಗೇನೂ ಅಂತಹ ವ್ಯತ್ಯಾಸವಾಗುವುದಿಲ್ಲ ಆದರೆ ನೀನು ಬಡವ ಈ ನಷ್ಟವನ್ನು ಹೇಗೆ ಭರಿಸುತ್ತೀಯ? ನಿನ್ನ ನಷ್ಟಕ್ಕೆ ನಾನು ಕಾರಣನಾಗಿದ್ದೇನೆ ಆದ್ದರಿಂದ ಅದರ ಹೊಣೆಯೂ ನನ್ನದೇ” ಎಂದು ಕೇಳಿಕೊಂಡ.

ನೇಕಾರ ನಗುತ್ತ ಮಾತನಾಡಿದ, “ಹುಡುಗಾ ನೀನು ನನಗಾದ ನಷ್ಟವನ್ನು ಭರಿಸಲಾರೆ. ಒಮ್ಮೆ ಯೋಚಿಸು, ಹತ್ತಿ ಬೆಳೆಯಲು ರೈತ ಎಷ್ಟು ಶ್ರಮ ಪಟ್ಟಿದ್ದಾನೆ, ಆ ಹತ್ತಿಯಿಂದ ನೂಲು ತೆಗೆಯುವಲ್ಲಿ, ಸೀರೆ ನೇಯುವಲ್ಲಿ ಬಣ್ಣ ಹಾಕುವಲ್ಲಿ ನನ್ನ ಮತ್ತು ನನ್ನ ಹೆಂಡತಿಯ ಎಷ್ಟು ಬೆವರು ಹರಿದಿದೆ. ಇಷ್ಟು ಶ್ರಮ ಸಾರ್ಥಕವಾಗೋದು ಈ ಸೀರೆಯನ್ನು ಯಾರಾದರೂ ಉಟ್ಟು ಸಂತೋಷಪಟ್ಟಾಗ ಮಾತ್ರ. ಆದರೆ ನೀನು ಸೀರೆಯನ್ನು ತುಂಡು ತುಂಡು ಮಾಡಿಬಿಟ್ಟೆ. ಕೇವಲ ಹಣ ಕೊಡುವುದರಿಂದ ನೀನು ಈ ನಷ್ಟವನ್ನು ತುಂಬಿಕೊಡಲಾರೆ.“ ನೇಕಾರನ ದನಿಯಲ್ಲಿ ಆಕ್ರೋಶಕ್ಕೆ ಬದಲಾಗಿ ಸೌಮ್ಯಭಾವ ಮತ್ತು ಅಂತಃಕರಣವಿತ್ತು.

ಆ ಶ್ರೀಮಂತ ಯುವಕ ನಾಚಿ ನೀರಾದ, ಅವನ ಕಣ್ಣುಗಳು ತುಂಬಿ ಬಂದವು, ನೇಕಾರನ ಕಾಲು ಹಿಡಿದು ಬಿಕ್ಕತೊಡಗಿದ. ನೇಕಾರ ಪ್ರೀತಿಯಿಂದ ಆ ಯುವಕನನ್ನು ಎಬ್ಬಿಸಿ, ಅಪ್ಪಿಕೊಂಡು ಮಾತನಾಡಿದ.

“ಮಗು, ನಾನು ನಿನ್ನಿಂದ ಹಣ ಪಡೆದುಕೊಂಡಿದ್ದರೆ ನನಗೇನೋ ಉಪಯೋಗವಾಗುತ್ತಿತ್ತು ಆದರೆ ನಿನ್ನ ಬದುಕಿನಲ್ಲಿ ಯಾವ ಬದಲಾವಣೆ ಆಗುತ್ತಿರಲಿಲ್ಲ. ಸೀರೆ ಒಂದು ಹೋದರೆ ಇನ್ನೊಂದು ಬರಬಹುದು ಆದರೆ ಈ ಬದುಕು ಇರುವುದೊಂದೇ. ಈ ಬದುಕು ಅಹಂಕಾರದಿಂದ ನಷ್ಟವಾದರೆ ಇನ್ನೊಂದು ಬದುಕನ್ನು ಎಲ್ಲಿಂದ ತರೋದು? ನಿನ್ನ ಪಶ್ಚಾತಾಪವೇ ನನ್ನ ಬಳುವಳಿ.

ತನ್ನ ಅಂತಃಕರಣ, ತಿಳುವಳಿಕೆಯಿಂದ ಆ ಶ್ರೀಮಂತ ಯುವಕ ಕಣ್ಣು ತೆರೆಸಿದ ನೇಕಾರ ಯಾರು ಗೊತ್ತೇ?

ಸಂತ ಕಬೀರ

ಇಂತಹ ಕತೆಗಳನ್ನು ನಾವು ತಿಳಿದು, ಮಕ್ಕಳಿಗೆ ಹೇಳಬೇಕಲ್ಲವೇ?!

*****

ಸೂ: ನೀವು ಈಗಾಗಲೇ ಈ ಕಥೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಓದಿರಲೂ ಬಹುದು. ಆದರೆ ಇಂಥಹ ಮಹಾತ್ಮರ ಕಥೆಗಳು ಇನ್ನಷ್ಟು ಜನರಿಗೆ, ಅವರ ಮನಸ್ಸುಗಳಿಗೆ ತಲುಪಬೇಕಾಗಿದೆ. ಏನೇನೋ ಶೇರ್ ಮಾಡುತ್ತೀರಿ. ಇಂತಹ ಪ್ರೋತ್ಸಾಹದಾಯಕ, ಸ್ಪೂರ್ತಿಯುತ ಕಥೆಯನ್ನು ಹಂಚಿರಿ. 

(ಸಂಗ್ರಹ)