ಹರಿಯುವ ಹಣದ ಹೊಳೆ

ಹರಿಯುವ ಹಣದ ಹೊಳೆ

"ಕೌನ್ ಬನೇಗ ಕ್ರೋರ್ ಪತಿ?" ಎಲ್ಲರಿಗೂ ಗೊತ್ತು. ಆದರೆ "ಕೌನ್ ಬನಾಯೇಗಾ ಕ್ರೋರ್‍ಪತಿ?" ಎಂದರೆ ಉತ್ತರಕ್ಕೆ ತಡಕಾಡಬೇಕಿಲ್ಲ. ಈಮೇಲ್ ಮತ್ತು ಎಸ್.ಎಂ.ಎಸ್.ಗಳು ನಮ್ಮನ್ನು ಆಗಾಗ್ಗೆ ಕ್ರೋರ್‍ಪತಿಗಳನ್ನಾಗಿ ಮಾಡುತ್ತವೆ. ಅಥವಾ ಮಾಡುವ ಆಮಿಷವನ್ನೊಡುತ್ತವೆ. ಅದಕ್ಕೆ ಮರುಳಾಗಿ ಕ್ರೋರ್‍ಪತಿಯಾಗುವ ಆಸೆಯಲ್ಲಿ ಲಕ್ಷಗಟ್ಟಲೆ ಕಳೆದುಕೊಂಡಿರುವವರೂ ಇದ್ದಾರೆ.
ಮೊನ್ನೆ ನನಗೊಂದು ಎಸ್.ಎಂ.ಎಸ್.ಬಂದಿತು. ಅದರ ಪ್ರಕಾರ ನನ್ನ ಮೊಬೈಲ್ ನಂಬರ್‍ಗೆ 20 ಲಕ್ಷ ಡಾಲರ್ ಬಹುಮಾನ ನೀಡಲಾಗಿದೆ. ಅದು ಯಾವ ಪುಣ್ಯಾತ್ಮ(ರು) ನನ್ನ ಮೊಬೈಲ್ ನಂಬರನ್ನೇ ಆರಿಸಿಕೊಂಡರು ಎಂಬುದು ನಿಗೂಢ. "ಹೀಗೂ ಉಂಟೆ?" ಎಂದು ಅಚ್ಚರಿ ಪಡುತ್ತಲೇ ಕಂಪ್ಯೂಟರ್ ಆನ್ ಮಾಡಿದರೆ ನನ್ನ ಇನ್‍ಬಾಕ್ಸ್‍ನಲ್ಲಿ ಒಂದು ಸಂದೇಶ ನನ್ನ ಬರುವಿಕೆಗಾಗಿಯೇ ಕಾದು ಕುಳಿತಿತ್ತು. ಅದು ಬಿಬಿಸಿ ಲಾಟರಿಯಿಂದ ಬಂದ ಮಾಹಿತಿ - ಈ ಬಾರಿ ನನ್ನ ಈಮೇಲ್ ಐಡಿ 10 ಲಕ್ಷ ಪೌಂಡ್ ಬಹುಮಾನಕ್ಕೆ ಆಯ್ಕೆಯಾಗಿತ್ತು. ವ್ಹಾ! ಆಗ ಡಾಲರ್, ಈಗ ಪೌಂಡ್ಗಳ ಹೊಳೆ. ನನಗೆ ಶುಕ್ರದಶೆ. ಬಿಬಿಸಿ ಲಾಟರಿ ಚಾರಿಟಿ ಬೊನಾನ್ಜ 2011 ಲಕ್ಷಾಂತರ ಈಮೇಲ್ ಐಡಿಗಳಲ್ಲಿ ನನ್ನನ್ನೇ ಏಕೆ ಆಯ್ಕೆ ಮಾಡಿತು? ಗೊತ್ತಿಲ್ಲ.
ತದನಂತರ ಲಂಡನ್ನಿನ ಲೀ ಫ್ರಾಂಕ್ ಎಂಬ ಮಹಾಶಯ ನನಗೆ ಒಂದು ಸಂದೇಶ ಕಳಿಸಿದರು. ಇವರು ಬಿಬಿಸಿಯವರಲ್ಲ. ಬೇರೆ ಪಾರ್ಟಿ. ಚೀನಾದಲ್ಲಿ ಬ್ಯಾಂಕ್ ಮೇನೇಜರ್ ಆಗಿದ್ದರಂತೆ. ಇವರು ಹತ್ತು ದಶಲಕ್ಷ 750 ಸಾವಿರ ಡಾಲರ್ ಮೊತ್ತದಲ್ಲಿ ಶೇ.40ರಷ್ಟನ್ನು ನನಗೆ ಕೊಡಲು ತಯಾರಿದ್ದಾರಂತೆ. ಸರಿಯಾದ ಮೊತ್ತ ಎಷ್ಟೆಂದು ನೀವೇ ಲೆಕ್ಕ ಹಾಕಿ. ಏಕೆಂದರೆ ಅಷ್ಟೆಲ್ಲ ದೊಡ್ಡ ಮೊತ್ತದ ಜೊತೆ ನನಗೆ ವ್ಯವಹಾರ ಮಾಡಿ ಅಭ್ಯಾಸವಿಲ್ಲ. ಇದರಲ್ಲೇನು ಮೋಸವಿಲ್ಲ ಎಂದು ಶ್ರೀ ಫ್ರಾಂಕ್ ನನಗೆ ಆಶ್ವಾಸನೆ ನೀಡಿದ್ದಾರೆ. ಥ್ಯಾಂಕ್ಸ್.
ಇಂಗ್ಲೆಂಡಿನ ಎಸ್‍ಟಿ ಮೈಕ್ರೊ ಎಲೆಕ್ರ್ಟಾನಿಕ್ಸ್ ಕಂಪನಿಯ ಬಗ್ಗೆ ಕೇಳಿದ್ದೀರಾ? ನಾನಂತೂ ಕೇಳಿಲ್ಲ. ಆದರೆ ಇವರು ತಮ್ಮ ವಹಿವಾಟು ವಿಶ್ವದಾದ್ಯಂತ ವಿಸ್ತರಿಸಲು ಅನೇಕ ಯೋಜನೆಗಳನ್ನು ಹಾಕಿದ್ದು, ಅದರಲ್ಲಿ ಲಾಟರಿ ಯೋಜನೆ ಸಹ ಒಂದು. ಈ ಲಾಟರಿಯಲ್ಲಿ ನನಗೆ ಎರಡನೆ ಬಹುಮಾನ ಬಂದಿದೆಯಂತೆ. ಛೆ! ಮೊದಲನೆ ಬಹುಮಾನ ತಪ್ಪಿತಲ್ಲ ಎಂದು ದುಃಖವಾದರೂ, ನಷ್ಟವೇನಿಲ್ಲ ಬಿಡಿ. ಏಕೆಂದರೆ 2ನೆಯ ಬಹುಮಾನದ ಮೊತ್ತವೇ ಐದು ಲಕ್ಷ ಪೌಂಡ್! ಯಾರಿಗುಂಟು ಯಾರಿಗಿಲ್ಲ! ಇದು ನಿಮಗೆ ನಿರಾಸೆ ಮೂಡಿಸಿದ್ದರೆ ಕ್ಷಮಿಸಿ ಎಂದು ಕಂಪನಿಯ ಮಿಸ್ ಕೇಟ್ಸ್ ಎಂಬಾಕೆ ಅಲವತ್ತುಕೊಂಡಿದ್ದಾರೆ. ಡೋಂಟ್ ವರಿ, ಮಿಸ್. ಐದು ಲಕ್ಷ ಪೌಂಡ್ ಬೇಕಾದಷ್ಟು.
ನೈಜೀರಿಯಾದ ಯೂನಿಯನ್ ಬ್ಯಾಂಕ್ ನಿರ್ದೇಶಕರಾದ ಜಾನ್ ಎಝೆ ಎಂಬುವರು ಕಳಿಸಿದ ಈ ಮೇಲ್ ಪ್ರಕಾರ ನನ್ನನ್ನು ಸಂಪರ್ಕಿಸಿದ್ದಕ್ಕೆ ಅವರಿಗೆ ತುಂಬಾ ಹೆಮ್ಮೆ ಆಗಿದೆಯೆಂತೆ. ಹೀಗೆಂದು ಇದುವರೆಗೆ ಯಾರೂ ನನಗೆ ಹೇಳಿರಲಿಲ್ಲ. ಇರಲಿ, ಅವರ ಗೆಳೆಯರೊಬ್ಬರ ಬಳಿ 8550000 ಪೌಂಡ್‍ಗಳಿದ್ದು, ಇದರಲ್ಲಿ ನನಗೆ 2550000 ಪೌಂಡ್‍ಗಳಷ್ಟು ಕೊಡಲು ನಿರ್ಧರಿಸಿದ್ದಾರಂತೆ. ಎತ್ತಣ ನೈಜೀರಿಯಾ? ಎತ್ತಣ ಜಾನ್? ಎತ್ತಣ ಅವರ ಗೆಳೆಯ? ಎತ್ತಣ ನಾನು? ಆದುದರಿಂದಲೇ ಅವರೇ ಹೇಳಿರುವಂತೆ "ಇದರಿಂದ ನಿಮಗೆ ಆಶ್ಚರ್ಯ ಆಗಬಹುದು. ನೀವು ನಂಬದಿರಲೂಬಹುದು. ಆದರೆ ಇದು ಸತ್ಯ, ವಾಸ್ತವ" ಎಂದು ವಿವರಿಸಿದ್ದಾರೆ. ನಂಬಲೇಬೇಕಲ್ಲವೆ?
ಅಮೇರಿಕಾದ ಒಬಾಮ ಪ್ರತಿಷ್ಠಾನದ ಸರದಿ ಈಗ. ನನಗಾಗಿ ನೀಡಲು ಅದು ಇಂಗ್ಲೆಂಡಿನ ಎಚ್.ಎಸ್.ಬಿ.ಸಿ. ಬ್ಯಾಂಕ್‍ನಲ್ಲಿ ಐದು ಲಕ್ಷ ಪೌಂಡ್ ಜಮಾ ಮಾಡಿದ್ದು, ನಾನು ಅದರ ಎಂ.ಡಿ. ಕಾರವಾನ್ ಮಾರ್ವಿಸ್ ಎಂಬುವವರನ್ನು ಸಂಪರ್ಕಿಸಿದರೆ ಸಾಕಂತೆ. ಎಷ್ಟು ಅನಾಯಾಸವಾಗಿ ಹಣ ಬರಲಿದೆ!
ಕೋಕಾಕೋಲಾ ಕಂಪನಿ ಬಡತನ ನಿರ್ಮೂಲ ಮಾಡಲು ಒಂದು ಯೋಜನೆ ಹಾಕಿದ್ದು-ನಮ್ಮ ರಾಜಕೀಯ ಪಕ್ಷಗಳಂತೆ ಇರಬಹುದೆ? ಅದರಡಿ ನನ್ನ ಈಮೇಲ್‍ಗೆ 7.5 ಲಕ್ಷ ಪೌಂಡ್ ಸಂದಾಯವಾಗಲಿದೆ. ಆದರೆ ನಾನು ಬಡವ ಎಂದು ನನ್ನ ಈಮೇಲ್ ಐಡಿ ನೋಡಿಯೇ ಅವರಿಗೆ ಗೊತ್ತಾಯಿತೆ? ಎಷ್ಟು ಚಾಣಾಕ್ಷರಿರಬೇಕು ಅವರು? ಅಂದರೆ ನನ್ನ ಬಡತನ ಈಗ ನಿರ್ಮೂಲವಾದಂತೆ.
ಆದರೆ ಈ ಲಕ್ಷಾಂತರ ಡಾಲರ್/ಪೌಂಡ್‍ಗಳನ್ನು ಪಡೆಯಲು ನನಗೆ ಹೆದರಿಕೆ. ಇಷ್ಟು ಭಾರಿ ಮೊತ್ತ ನನ್ನ ಸಣ್ಣ ಖಾತೆಗೆ ಜಮಾ ಆದರೆ ನನ್ನ ಬ್ಯಾಂಕ್ ಶಾಖೆಯ ಗತಿ? ಹಾಗೆಯೇ, ನಾನು ಕ್ರೋರ್‍ಪತಿ ಆಗಿದ್ದೇನೆ ಎಂದು ತಿಳಿದ ಕೂಡಲೆ ನನ್ನಿಂದ ದಾನ ಪಡೆಯಲು ನೂರಾರು ಮಂದಿ ಮನೆಯ ಮುಂದೆ ಜಮಾಯಿಸುವುದು ನನಗೆ ಇಷ್ಟವಿಲ್ಲ. ಶನಿದೇವರ ದೇವಾಲಯ ನಿರ್ಮಾಣ ಮಾಡುವುದೂ ಸೇರಿದಂತೆ, ಹಲವು ಕಾರಣಗಳನ್ನು ನೀಡಿ ದಾನಕ್ಕಾಗಿ ನನ್ನನ್ನು ಪೀಡಿಸುತ್ತಾರೆ. ಅವರನ್ನು ನಿಭಾಯಿಸುವುದು ಹೇಗೆ?
ಆದುದರಿಂದ ನಾನು ಯಾವ ಬಹುಮಾನವನ್ನೂ ಪಡೆಯಲು ಹೋಗಿಲ್ಲ. ನನ್ನ ಬ್ಯಾಂಕಿನಲ್ಲಿರುವ ಹಣ ಅಷ್ಟೇ ಇದೆ. ಚೆಕ್ ಪುಸ್ತಕ ಕೊಡುವುದಿಲ್ಲ ಎನ್ನುತ್ತಾರೆ ಬ್ಯಾಂಕ್ ಸಿಬ್ಬಂದಿ.
ನನಗೆಷ್ಟು ನಷ್ಟ ಆಗಿದೆ ಎಂದು ತಿಳಿಯಲು ದಯವಿಟ್ಟು ಲೆಕ್ಕ ಹಾಕಿ-ಒಂದು ಪೌಂಡ್ 80 ರೂಪಾಯಿಗೆ, ಒಂದು ಡಾಲರ್ 54 ರೋಪಾಯಿಗೆ ಸಮ.
 
(ಚಿತ್ರ ಕೃಪೆ: ಗೂಗಲ್)