ಹರೆಯ ನಿಲ್ಲುವುದೇನು?
ಕವನ
ತನಗೆ ತಾನೇ ಸಿಂಗರಿಸಿಕೊಳ್ಳುತಿಹ ಜಾಣೆ
ಒಂದಿಷ್ಟು ವ್ಯತ್ಯಾಸ ಸಹಿಸುವುದ ಕಾಣೆ||ಪ||
ನಯನಕಿಟ್ಟಳು ಕಪ್ಪು
ತುಟಿಗೆ ಲೇಪಿಸಿ ಕೆಂಪು
ಸರಿಸಾಟಿ ತನಗಿಲ್ಲ ಎಂಬ ನಿಲುವು
ಕೆನ್ನೆಗಂಟಿದ ಬಣ್ಣ
ಉಡುಪಿಗೊಪ್ಪುವ ವರ್ಣ
ದರ್ಪಣದೆ ಪ್ರತಿಬಿಂಬ ಸೆಳೆದು ಕಣ್ಣು
ಎಲ್ಲ ಮುಗಿಸಿದ ವನಿತೆ
ಉಳಿದುಕೊಂಡಿದೆ ಕೊರತೆ
ಅರಸಿ ನೋಡುವ ಛಲದಿ ಆಕೆ ನಿರತೆ
ಬೆಳ್ಳಗಾಗಿದೆ ಹೆರಳು
ಸುಕ್ಕುಗಟ್ಟಿದೆ ಕೊರಳು
ಕೆನ್ನೆ ಚುಂಬಿಸಲಿಲ್ಲ ಮುಂಗುರುಳು
ಏನು ಮಾಡಿದರೇನು
ಹರೆಯ ನಿಲ್ಲುವುದೇನು
ತೃಪ್ತಿ ಪಟ್ಟಳು ಮನದೆ ತನಗೆ ತಾನು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
