ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್
ಎಲ್ಲರ ಭವಿಷ್ಯವಾಣಿ ಸುಳ್ಳಾಗಿದೆ. ಮಾಧ್ಯಮಗಳ ಎಕ್ಸಿಟ್ ಪೋಲ್ ಗಳು ಠುಸ್ಸೆಂದಿವೆ. ಹರ್ಯಾಣದಲ್ಲಿ ಬಿಜೆಪಿ ಬಹುಮತ ಗಳಿಸಲು ಶಕ್ತವಾಗುವುದರೊಂದಿಗೆ ಸರಕಾರ ರಚನೆಯಲ್ಲಿ ಹ್ಯಾಟ್ರಿಕ್ ಸಾಧನೆಗೈದಿದೆ. ಆ ಮೂಲಕ ಆಡಳಿತ ವಿರೋಧಿ ಅಲೆ ತನ್ನನ್ನು ಬಾಧಿಸಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಇದು ಬಿಜೆಪಿಯ ಅಮೋಘ ಸಾಧನೆ ಎಂಬುದರಲ್ಲಿ ಅನುಮಾನವಿಲ್ಲ. ಸರಕಾರವೊಂದು ಸತತ ಮೂರನೇ ಅವಧಿಗೆ ಆಯ್ಕೆಯಾಗುವುದು ಅಷ್ಟು ಸುಲಭವೇನಲ್ಲ. ಆದರೆ ಬಿಜೆಪಿ ಸರಕಾರ ಅದನ್ನು ಸಾಧಿಸಿ ತೋರಿಸಿದೆ. ಜನರ ಆಶೋತ್ತರಗಳಿಗೆ ಬಿಜೆಪಿ ಸರಕಾರ ಸ್ಪಂದಿಸಿದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು.
ಚುನಾವಣಾ ಪಂಡಿತರೆಲ್ಲ ಹರ್ಯಾಣದಲ್ಲಿ ಕಾಂಗ್ರೆಸ್ ಗೆಲುವಿನ ಭವಿಷ್ಯ ನುಡಿದಿದ್ದರು. ಎಕ್ಸಿಟ್ ಪೋಲ್ ಗಳು ಬಿಜೆಪಿ ಸೋತು ಸುಣ್ಣವಾಗುವುದೆಂದು ಬಣ್ಣಿಸಿದ್ದವು. ಆದರೆ ಜನರ ನಾಡಿಮಿಡಿತವನ್ನು ಕೇವಲ ಸಮೀಕ್ಷೆಗಳಿಂದ ಅರಿಯಲು ಸಾಧ್ಯವಿಲ್ಲ ಎಂಬುದು ಈಗ ಅರಿವಾಗಿದೆ. ತಳಮಟ್ಟದಲ್ಲಿ ಜನರು ಬಿಜೆಪಿ ಜತೆಗೇ ಇರುವರೆಂದು ತಿಳಿದುಬಂದಿದೆ. ಹರ್ಯಾಣದಲ್ಲಿ ನಿರಂತರ ನಡೆಯುತ್ತಿರುವ ರೈತರ ಪ್ರತಿಭಟನೆಗಳು ಬಿಜೆಪಿ ಪಾಲಿಗೆ ವಿನಾಶಕಾರಿಯಾಗಲಿದೆ, ರೈತರು ಬಿಜೆಪಿ ಸರಕಾರದಿಂದ ರೋಸಿದ್ದಾರೆನ್ನುವುದಕ್ಕೆ ಇದು ನಿದರ್ಶನ ಎಂದೆಲ್ಲಾ ಬಣ್ಣಿಸಲಾಗಿತ್ತು. ಆದರೆ ಅದು ರಾಜಕೀಯ ಪ್ರತಿಭಟನೆಯಾಗಿತ್ತು ಹಾಗೂ ಪ್ರತಿಭಟನೆ ನಡೆಸುತ್ತಿದ್ದವರು ಸಾಕಷ್ಟು ಉಳ್ಳ ರೈತರಷ್ಟೇ ಎಂಬುದು ಹರ್ಯಾಣದ ಶ್ರೀಸಾಮಾನ್ಯನಿಗೂ ಗೊತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಹರ್ಯಾಣದ ಮತದಾರರು ತಾವು ಕಾಂಗ್ರೆಸಿನ ಪುಕ್ಕಟೆ ಭಾಗ್ಯಗಳಿಗೆ ಮರುಳಾಗುವವರಲ್ಲ ಎಂಬಂತಹ ಮಹತ್ವದ ಸಂದೇಶವೊಂದನ್ನು ರಾಜಕೀಯ ಪಕ್ಷಗಳಿಗೆ ರವಾನಿಸಿದ್ದಾರೆ. ಆ ಮೂಲಕ ದೇಶದ ಮತದಾರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸಬೇಕು. ಕಾಂಗ್ರೆಸ್ ಸೋತಾಗಲೆಲ್ಲ ಚುನಾವಣಾ ವ್ಯವಸ್ಥೆಯನ್ನು ದೂರುವುದು ಸಾಮಾನ್ಯವಾಗಿದೆ. ಈಗಲೂ ಅಷ್ಟೇ. ಹರ್ಯಾಣ ಫಲಿತಾಂಶ ವಿರುದ್ಧವಾಗಿ ಚುನಾವಣಾ ಆಯೋಗಕ್ಕೆ ದ್ರು ನೀಡುವ ಮೂಲಕ ತನ್ನ ನಿಷೃಷ್ಟತೆಯನ್ನು ತೋರ್ಪಡಿಸಿದೆ.
ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಸರಕಾರ ರಚಿಸುವ ಸಾಧ್ಯತೆಗಳು ಉಜ್ವಲವಾಗಿವೆ. ಆ ಮೂಲಕ ಅಲ್ಲಿಯ ಜನರು ಹಳೆಯ ಆಡಳಿತಗಾರರನ್ನೇ ನೆಚ್ಚಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಆಗಿರುವ ಬದಲಾವಣೆಗಳು, ಅಭಿವೃದ್ಧಿಗಳು ಜನರಿಗೆ ನಗಣ್ಯವಾಗಿ ಕಂಡುಬಂದಿದೆ. ಮತ್ತೆ ಅಭಿವೃದ್ಧಿ ವಿರೋಧಿ ಮತ್ತು ಪ್ರತ್ಯೇಕವಾದಿ ಮನಸ್ಥಿತಿಯ ಪಕ್ಷವನ್ನೇ ಆರಿಸುವ ಮೂಲಕ ತಮ್ಮ ಮನದಿಂಗಿತವನ್ನೂ ಬಹಿರಂಗಪಡಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಆದರೋ ೩೭೦ನೇ ವಿಧಿಯ ರದ್ಧತೆಯನ್ನು ವಿರೋಧಿಸಿತ್ತು. ಅದನ್ನು ಮತ್ತೆ ಸ್ಥಾಪಿಸಲು ಯತ್ನಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿತ್ತು. ಈ ನಿಟ್ಟಿನಲ್ಲಿ ಅದರ ಮಿತ್ರ ಪಕ್ಷವಾದ ಕಾಂಗ್ರೆಸ್ ನಿಲುವೇನೆಂಬುದನ್ನು ಬಹಿರಂಗ ಪಡಿಸಬೇಕಾಗಿದೆ. ಇದೇ ವೇಳೆ ಕಾಶ್ಮೀರದಲ್ಲಿ ಬಿಜೆಪಿ ಸಾಧನೆಯೇನೂ ನಗಣ್ಯವಲ್ಲ. ಗಣನೀಯ ನಿರ್ವಹಣೆಯನ್ನು ಬಿಜೆಪಿ ತೋರಿಸಿದೆ. ಪಾಕಿಸ್ತಾನ ಪರವಾದ ನಿಲುವು ತಳೆದಿದ್ದ ಪಿಡಿಪಿಯನ್ನು ತಿರಸ್ಕರಿಸುವ ಮೂಲಕ ಜನರು ಅದಕ್ಕೆ ತಕ್ಕ ಪಾಠ ಕಲಿಸಿದ್ದಾರೆನ್ನಬಹುದು.
-ಹೊಸ ದಿಗಂತ, ಸಂಪಾದಕೀಯ, ದಿ: ೦೯-೧೦-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ