ಹಲವಾರು ಪ್ರಯೋಜನಗಳ ಒಂದೆಲಗ ಸಸ್ಯ
‘ಒಂದೆಲಗ' ಹೆಸರೇ ಹೇಳುವಂತೆ ಒಂದೇ ಎಲೆಯನ್ನು ಹೊಂದಿರುವ ಸಸ್ಯ. ಇದೊಂದು ಔಷಧೀಯ ಸಸ್ಯವಾಗಿಯೂ, ಆಹಾರ ಯೋಗ್ಯ ಸೊಪ್ಪಾಗಿಯೂ ಹಲವಾರು ವರ್ಷಗಳಿಂದ ಬಳಕೆಯಲ್ಲಿದೆ. ಆಡುಭಾಷೆಯಲ್ಲಿ ಇಲಿ ಕಿವಿ ಎಂದೂ, ತುಳು ಭಾಷೆಯಲ್ಲಿ ‘ತಿಮರೆ' ಎಂದೂ, ಕೊಂಕಣಿಯಲ್ಲಿ ‘ಏಕ್ ಪಾನೀ’ ಅಥವಾ ಏಕ್ ಪಾನ್ ಎಂದೂ ಕರೆಯುತ್ತಾರೆ. ಒಂದೆಲಗವು ನೆಲವನ್ನೇ ನೆಚ್ಚಿಕೊಂಡು ಬಳ್ಳಿಯಂತೆ ಬೆಳೆಯುವ ಒಂದು ಸಸ್ಯವಾಗಿದ್ದು. ಜೌಗುಪ್ರದೇಶಗಳಲ್ಲಿ ಮತ್ತು ನೀರು ಹೆಚ್ಚಾಗಿರುವ ಪ್ರದೇಶ ಅಂದರೆ ಗದ್ದೆ, ತೋಟಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತದೆ.
ಒಂದೆಲಗವು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ಇದನ್ನು ಆಹಾರವಾಗಿ, ಅದರಲ್ಲೂ ಕರಾವಳಿ ಭಾಗಗಳಲ್ಲಿ ಚಟ್ನಿಯ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ. ತಿಮರೆ ಚಟ್ನಿ ಎಂದರೆ ಗಂಜಿ ಊಟಕ್ಕೆ ಹೇಳಿ ಮಾಡಿಸಿದ ಖಾದ್ಯ ಎನ್ನಬಹುದು. ಇಂದಿನ ಜನಾಂಗ ಅನುಭವಿಸುವ ಮಾನಸಿಕ ಒತ್ತಡ ಮತ್ತು ಆತಂಕಗಳನ್ನು ದೂರ ಮಾಡುವ ಶಕ್ತಿ ಈ ಒಂದೆಲಗ ಸಸ್ಯಕ್ಕಿದೆ. ಮಾನಸಿಕ ಒತ್ತಡ ಹೆಚ್ಚುವುದರಿಂದ ನಮ್ಮ ದೇಹ ಇನ್ನಷ್ಟು ರೋಗಗಳ ತಾಣವಾಗುತ್ತದೆ. ಈ ಮಾನಸಿಕ ಒತ್ತಡದಿಂದ ಹೊರಬರಲು ಆಯುರ್ವೇದದಲ್ಲಿ ‘ಒಂದೆಲಗ'ದ ಬಳಕೆ ಮಾಡಲಾಗಿದೆ.
ಒಂದೆಲಗವನ್ನು ನಾವು ಆಹಾರದಲ್ಲಿ ನಿಯಮಿತವಾಗಿ ಬಳಸುತ್ತಾ ಬಂದರೆ ಒತ್ತಡ ನಿವಾರಣೆಯಾಗುತ್ತದೆ. ಖಿನ್ನತೆಯು ಪರಿಹಾರವಾಗುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ. ಈ ಕಾರಣದಿಂದ ಕೊರೋನಾ ಸಮಯದಲ್ಲಿ ಈ ಸಸ್ಯದ ಉಪಯೋಗ ಬಹಳವಾಗಿತ್ತು. ಒಂದೆಲಗ ಸಸ್ಯವನ್ನು ಬಳಸಿ ತಯಾರಿಸುವ ಎಣ್ಣೆಯಿಂದ ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸುಲಭವಾಗುತ್ತದೆ. ಇದು ರಕ್ತಪರಿಚಲನೆ ಮೂಲಕ ಚರ್ಮದ ಆರೋಗ್ಯ ಹೆಚ್ಚಿಸುತ್ತದೆ. ಅಲ್ಲದೇ ಸೊರಿಯಾಸಿಸ್, ತುರಿಕೆ, ಕೀವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಕೂದಲಿನ ಪ್ರತಿಯೊಂದು ಸಮಸ್ಯೆಗೆ ಒಂದೆಲಗ ರಾಮಬಾಣ. ಒಂದೆಲಗವನ್ನು ಪೇಸ್ಟ್ ರೂಪದಲ್ಲಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದಾಗಿದೆ. ತಲೆಹೊಟ್ಟು ನಿವಾರಣೆಗೂ ಒಂದೆಲಗ ಉಪಯುಕ್ತ. ತಲೆ ಹೊಟ್ಟಿನ ಮತ್ತು ಹೇನು ಸಮಸ್ಯೆಯಿಂದ ಕೆಲವರಲ್ಲಿ ಕೂದಲು ಉದುರುತ್ತದೆ. ಅದಕ್ಕೆ ಒಂದೆಲಗದ ಎಲೆಯನ್ನು ಮತ್ತು ಬೇರನ್ನು ಅರೆದು ತಲೆಗೆ ಹಚ್ಚಿ, ೨ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ತಲೆಯ ಹೊಟ್ಟು ನಿವಾರಣೆಯಾಗಿ ಕೂದಲು ಉದುರುವುದು ಹಾಗೂ ಕೂದಲು ಸೀಳುವಿಕೆ ಪ್ರಮಾಣ ಕಡಿಮೆಯಾಗುತ್ತದೆ. ಒಂದೆಲಗದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರಿಂದ ರಸ ತೆಗೆದು ಅದನ್ನು ಜೇನುತುಪ್ಪದ ಜೊತೆ ಬೆರೆಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
ಒಂದೆಲಗದ ಎಲೆಯ ರಸವನ್ನು ತೆಗೆದು ಪ್ರತೀದಿನ ಕುಡಿಯುವುದರಿಂದ ದೇಹದ ಆರೋಗ್ಯ ಹೆಚ್ಚುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ಒಂದೆಲಗದ ಬೇರನ್ನು ಅರೆದು ಅದನ್ನು ಆಕಳಿನ ಹಸಿ ಹಾಲಿನಲ್ಲಿ (ಬಿಸಿ ಮಾಡದೇ) ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ. ಮಕ್ಕಳು ಚುರುಕಾಗಿರುತ್ತಾರೆ. ಅಜೀರ್ಣತೆಯ ಸಮಸ್ಯೆ ಹೊಂದಿರುವವರು ಪ್ರತೀ ದಿನ ೫-೬ ಒಂದೆಲಗದ ಎಲೆಯನ್ನು ಸೇವಿಸುವುದರಿಂದ ಅವರ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಒಂದೆಲಗವು ರಕ್ತಹೀನತೆಯನ್ನೂ ನಿವಾರಿಸುತ್ತದೆ.
ದೇಹದ ಉಷ್ಣಾಂಶ ಅಧಿಕವಾದಾಗ ಒಂದೆಲಗದ ಎಲೆಯ ರಸವನ್ನು ಸೇವಿಸುವುದರಿಂದ ದೇಹ ತಂಪಾಗುತ್ತದೆ. ಎಳ್ಳು, ಒಂದು ಹಸಿಮೆಣಸು, ಸ್ವಲ್ಪ ತೆಂಗಿನ ಕಾಯಿ ತುರಿಯನ್ನು ಸ್ವಲ್ಪ ಎಣ್ಣೆ ಸೇರಿಸಿ ಹುರಿಯಬೇಕು. ನಂತರ ಒಂದೆಲಗದ ಎಲೆಯನ್ನು ಸ್ವಲ್ಪ ಬಾಣಲೆಯಲ್ಲಿ ಅದರ ಹಸಿ ವಾಸನೆ ಹೋಗುವಷ್ಟು ಹುರಿಯಬೇಕು. ನಂತರ ಮಿಕ್ಸಿಗೆ ಹಾಕಿ ರುಬ್ಬಿ ಆ ಮಸಾಲೆಗೆ ಸಾಸಿವೆ, ಉದ್ದಿನ ಬೇಳೆ, ಒಂದು ಒಣಮೆಣಸು, ೩-೪ ಬೆಳ್ಳುಳ್ಳಿ ಹಾಕಿ ಒಗ್ಗರಣೆ ತಯಾರಿಸಿ ಹಾಕಬೇಕು. ಇದು ಒಂದೆಲಗದ ರುಚಿಕರ ತಂಬುಳಿ ತಯಾರಿಸುವ ವಿಧಾನ. ಇದನ್ನು ಅನ್ನದ ಜೊತೆ ಸೇವನೆ ಮಾಡಿದರೆ ದೇಹವು ತಂಪಾಗುರುತ್ತದೆ.
ಒಂದೆಲಗದ ಪ್ರಮುಖ ಗುಣವೇನು ಗೊತ್ತೇ? ಅದರ ಸೇವನೆ ನಮ್ಮ ನೆನಪು ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಸಣ್ಣವರಿದ್ದಾಗ ಒಂದೆಲಗದ ಚಟ್ನಿ ಮಾಡಿ ನಮಗೆ ತಿನ್ನಿಸುತ್ತಿದ್ದರು. ಆಗ ಅಮ್ಮ ಹೇಳುತ್ತಿದ್ದ ಮಾತು ಈಗಲೂ ನೆನಪಾಗುತ್ತದೆ. ಒಂದೆಲಗ ಚಟ್ನಿ ತಿಂದರೆ ನೆನಪು ಶಕ್ತಿ ಹೆಚ್ಚಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕ ಬರುತ್ತದೆ ಎಂದು. ಆ ಕಾರಣಕ್ಕೆ ನಮಗೆ ಒಂದೆಲಗದ ಚಟ್ನಿ ಇಷ್ಟ ಇಲ್ಲದಿದ್ದರೂ ನಾವು ಅನ್ನದಲ್ಲಿ ಕಲಸಿ ತಿನ್ನುತ್ತಿದ್ದೆವು. ಈಗ ಒಂದೆಲಗದ ಸಿರಪ್ ಗಳು, ಮಾತ್ರೆಗಳು, ಜ್ಯೂಸ್ ಎಲ್ಲವೂ ಮಾರುಕಟ್ಟೆಗೆ ಬಂದಿವೆ. ನಿಮ್ಮ ಮನೆಯ ಕೈತೋಟದಲ್ಲಿ ಹೆಚ್ಚಾಗಿ ನೀರು ಬೀಳುವ ಸ್ಥಳದಲ್ಲಿ ಒಂದು ಸಸಿ ಒಂದೆಲಗ ನೆಟ್ಟು ಬಿಡಿ ಅದು ಬೇಗನೇ ಹರಡಿ ತುಂಬಾ ಸಸ್ಯಗಳಾಗುತ್ತವೆ. ಬೇಕಾದಾಗ ಕಿತ್ತು ಆಹಾರಕ್ಕೆ ಬಳಸಿಕೊಳ್ಳಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ