ಹಲಸಿನ ಹಣ್ಣಿನ ಉಪ್ಪಿನಕಾಯಿ ರುಚಿ ನೋಡಿರುವಿರಾ?
ನಾವು ಮಳೆಗಾಲದ ಮಧ್ಯ ಭಾಗದಲ್ಲಿದ್ದೇವೆ. ಹಲಸಿನ ಹಣ್ಣುಗಳು ಇನ್ನೂ ಕೆಲವು ಮರಗಳಲ್ಲಿ ನೇತಾಡುತ್ತಿವೆ. ನಮ್ಮಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಹಣ್ಣು ಎಂದರೆ ಹಲಸಿನ ಹಣ್ಣು. ನಿಜಕ್ಕೂ ನೋಡಲು ಹೋದರೆ ಬಹು ಉಪಯೋಗಿಯಾದ ಈ ಹಣ್ಣು ಎಳೆಯದಾಗಿದ್ದರೆ ತರಕಾರಿಯಂತೆಯೂ ಬಳಕೆಗೆ ಯೋಗ್ಯ. ಹಲಸಿನ ಸೊಳೆಯನ್ನು ಉಪ್ಪು ನೀರಿನಲ್ಲಿ ಹಾಕಿಟ್ಟು ರುಚಿಕರವಾದ ಖಾದ್ಯವನ್ನೂ ತಯಾರಿಸ ಬಹುದು. ಹಲಸಿನ ಬೀಜವನ್ನು ಬೇಯಿಸಿ, ಕೆಂಡದಲ್ಲಿ ಸುಟ್ಟು ತಿನ್ನಲೂ ಬಹುದು. ಹಪ್ಪಳ, ಚಿಪ್ಸ್ ಮಾಡಿಟ್ಟು ಮಳೆಗಾಲದಲ್ಲಿ ತಿಂದರೆ ಅದರ ರುಚಿಯೇ ಬೇರೆ. ಇಷ್ಟೆಲ್ಲಾ ಬಹು ಉಪಯೋಗಿಯಾದ ಹಲಸು ಬೆಳೆಯುವಷ್ಟು ಬಳಕೆಯಾಗುತ್ತಿಲ್ಲ. ಅವಿಭಜಿತ ದಕ್ಷಿಣ ಕನ್ನಡದಾದ್ಯಂತ ಈಗಲೂ ಮರದಲ್ಲೇ ಹಲಸು ಹಣ್ಣಾಗಿ ಕೊಳೆಯುವುದನ್ನು ನೋಡಬಹುದು.
ಮಳೆ ಬಂದಾಕ್ಷಣ ಹಲಸಿನ ಹಣ್ಣಿನ ಮಾರುಕಟ್ಟೆ ದರ ಕುಸಿಯುತ್ತದೆ. ಮಳೆಗೆ ಹಲಸಿನ ಹಣ್ಣಿನ ಒಳಗಡೆ ಮಳೆ ನೀರು ಹೋಗಿ ರುಚಿ ಕೆಡುತ್ತದೆ. ಬೀಜ ಮೊಳಕೆಯೊಡೆಯುತ್ತದೆ. ಹೀಗಾಗಿ ಮಳೆಗಾಲದಲ್ಲಿ ಹಲವಾರು ಮಂದಿ ಹಲಸಿನ ಹಣ್ಣಿನಿಂದ ತಿಂಡಿಗಳನ್ನು ಮಾಡುತ್ತಾರೆ. ಹಲಸಿನ ಗಟ್ಟಿ, ಹಲಸಿನ ಗಾರಿಗೆ, ಹಲ್ವ, ಪಾಯಸ ಹೀಗೆ ಹತ್ತು ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಾರೆ. ಈ ಉತ್ಪನ್ನಗಳಿಗೆ ಸೇರುತ್ತಿರುವ ಇನ್ನೊಂದು ಬಗೆ ಹಲಸಿನ ಹಣ್ಣಿನ ಮತ್ತು ಕಾಯಿಯ ಉಪ್ಪಿನಕಾಯಿ.
ಕಳೆದ ಸುಮಾರು ೬-೭ ವರ್ಷಗಳಿಂದ ಹಲಸಿಗೆ ಬೆಲೆ ಬರುವಂತೆ ಹಲವಾರು ಸಂಘ ಸಂಸ್ಥೆಗಳು ಹಲಸು ಹಬ್ಬವನ್ನು ಆಚರಿಸುತ್ತಾ ಬರುತ್ತಿರುವುದರಿಂದ ಹಲಸಿನ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳು ಬೆಳಕಿಗೆ ಬಂದಿವೆ. ಕಬಾಬ್, ಬಿರಿಯಾನಿ, ಬೀಜದ ಪಾನೀಯ, ಹಲ್ವ, ಜಾಮ್, ಚಿಲ್ಲಿ, ದೋಸೆ, ಹೋಳಿಗೆ ಹೀಗೆ ಹಲಸು ನಾನಾ ರೂಪವನ್ನು ಪಡೆದುಕೊಂಡಿದೆ. ಹಲಸಿನ ಕಾಯಿಗೆ ಮಾವಿನ ಕಾಯಿಯನ್ನು ಸೇರಿಸಿ ಅಡ್ಗಾಯಿ ಎಂಬ ವಿಶೇಷ ಉಪ್ಪಿನಕಾಯಿಯನ್ನು ಮಂಗಳೂರಿನ ಕೊಂಕಣಿಗರು ತಯಾರು ಮಾಡುತ್ತಾರೆ. ಈ ಉತ್ಪನ್ನಗಳಿಗೆ ಹೊಸ ಸೇರ್ಪಡೆಯೇ ಹಲಸಿನ ಉಪ್ಪಿನಕಾಯಿ. ಇದರಲ್ಲಿ ಹಲಸಿನ ಹಣ್ಣಿನ ಸಿಹಿ-ಖಾರ ಉಪ್ಪಿನಕಾಯಿ, ಹಲಸಿನ ಕಾಯಿಯ (ಗುಜ್ಜೆ) ಉಪ್ಪಿನಕಾಯಿ ಮತ್ತು ಹಲಸಿನ ಬೀಜದ ಉಪ್ಪಿನಕಾಯಿಯನ್ನು ತಯಾರು ಮಾಡಿ ಮೆಚ್ಚುಗೆ ಗಳಿಸಿದವರು ಮಂಗಳೂರು ಕಾವೂರು ಗ್ರಾಮದ ಪೇರ್ಲಗುರಿಯ ವಿನೋದ್ ಕುಮಾರ್ ಇವರು.
ಕಳೆದ ಎರಡು ದಶಕಗಳಿಂದ ಉಪ್ಪಿನಕಾಯಿ ಮತ್ತು ಹಣ್ಣಿನ ಸ್ಕ್ವಾಷ್ನ ಜ್ಯೋತಿ ಹೋಮ್ ಇಂಡಸ್ತ್ರೀಸ್ ಎಂಬ ಗೃಹ ಉದ್ದಿಮೆಯನ್ನು ನಡೆಸುತ್ತಾ ಬಂದಿರುವ ವಿನೋದ್ ಕುಮಾರ್ ಇವರಿಗೆ ಹೊಸ ಹೊಸ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸುವುದರಲ್ಲಿ ಆಸಕ್ತಿ. ಇವರು ಸುಮಾರು ೬೦ ವಿವಿಧ ಬಗೆಯ ಉಪ್ಪಿನಕಾಯಿಗಳನ್ನು ಮಾಡಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಉಪ್ಪಿನಕಾಯಿಯ ಪಟ್ಟಿಗೆ ಹೊಸ ಸೇರ್ಪಡೆಯೇ ಹಲಸಿನ ಕಾಯಿಯ ಉಪ್ಪಿನಕಾಯಿ, ಎರಡು ವರ್ಷಗಳ ಹಿಂದೆ ವಿನೋದ್ ಕುಮಾರ್ ಹಲಸಿನ ಹಣ್ಣಿನ ಹಾಗೂ ಕಾಯಿಯ ಉಪ್ಪಿನಕಾಯಿಯನ್ನು ಪ್ರಯೋಗಾರ್ಥವಾಗಿ ಮಾಡಿ ಮಂಗಳೂರಿನಲ್ಲಿ ನಡೆದ ಹಲಸಿನ ಹಬ್ಬದಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಮದ್ಯಾಹ್ನದ ಒಳಗಡೆಯೇ ಅವರ ಈ ಉತ್ಪನ್ನಗಳು ಖಾಲಿಯಾಗಿದ್ದವು. ಆರ್ಡರ್ ಮಾಡಿ ಬುಕ್ ಮಾಡಿದವರ ಸಂಖ್ಯೆಯೇ ಸಾಕಷ್ಟಿತ್ತು. ಇದರಿಂದ ಉತ್ಸಾಹಿತರಾದ ವಿನೋದ್ ಮುಂದಿನ ವರ್ಷ ಸಾಕಷ್ಟು ಉಪ್ಪಿನಕಾಯಿಗಳನ್ನು ತಯಾರು ಮಾಡಿ ಮಾರಾಟ ಮಾಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಹಲಸಿನ ಕಾಯಿಯ ಉಪ್ಪಿನಕಾಯಿ ತಯಾರಿಸಿದ್ದೆ. ಸೀಸನ್ನಲ್ಲಿ ಉತ್ತಮವಾಗಿ ಮಾರಾಟವಾಯಿತು. ಇದರಿಂದ ಪ್ರೇರಿತನಾಗಿ ಈ ವರ್ಷ ಹಲಸಿನ ಹಣ್ಣಿನ ಸಿಹಿ-ಖಾರ ಉಪ್ಪಿನಕಾಯಿ ತಯಾರಿಸಿದೆ. ಹಾಗೆಯೇ ಹಲಸಿನ ಬೀಜದ್ದೂ ಮಾಡಿದೆ. ಈ ಹಿಂದೆ ಮಂಗಳೂರಿನಲ್ಲಿ ನಡೆದ ಹಲಸಿನ ಹಬ್ಬದಲ್ಲಿ ಎಲ್ಲಾ ಮೂರು ಬಗೆಯ ಹಲಸಿನ ಉಪ್ಪಿನಕಾಯಿಗಳು ಒಂದೂ ಬಾಟಲಿ ಉಳಿಯದೇ ಖಾಲಿಯಾಗಿ ಹೋಗಿತ್ತು ಎಂದು ಹರ್ಷದಿಂದ ಹೇಳುತ್ತಾರೆ ವಿನೋದ್ ಕುಮಾರ್.
ಆದರೆ ಪ್ರಸ್ತುತ ೨೦೨೦ ಕೋವಿಡ್ ೧೯ರ ಕಾರಣದಿಂದ ಎಲ್ಲಾ ಸಮಾರಂಭಗಳು ರದ್ದಾಗಿವೆ. ಆದರೂ ವಿನೋದ್ ಕುಮಾರ್ ಅವರನ್ನು ಅವರ ಹಳೆಯ ಗ್ರಾಹಕರು ಸಂಪರ್ಕಿಸಿ ಹಲಸಿನ ಉಪ್ಪಿನಕಾಯಿ ಮಾಡಿಕೊಡುವಂತೆ ಹೇಳಿದ್ದಾರೆ. ಅದರಂತೆ ಹಲಸಿನ ಉಪ್ಪಿನಕಾಯಿಯನ್ನು ಗ್ರಾಹಕರಿಗಾಗಿ ತಯಾರಿಸಿ ಕೊಟ್ಟಿದ್ದಾರೆ. ಸ್ವಲ್ಪ ಪ್ರಮಾಣದ ಹಲಸಿನ ಉಪ್ಪಿನಕಾಯಿ ಈಗಲೂ ಇವರ ಸಂಗ್ರಹದಲ್ಲಿ ಇವೆ. ಸುಮಾರು ಒಂದು ತಿಂಗಳವರೆಗೆ ಹಾಳಾಗದೇ ಉಳಿಯುತ್ತದೆ. ರೆಫ್ರಿಜರೇಟರ್ನಲ್ಲಿ ಇಟ್ಟರೆ ಆರು ತಿಂಗಳವರೆಗೂ ಬಳಸಬಹುದಂತೆ. ಇವರು ತಮ್ಮ ಬಹಳಷ್ಟು ಉತ್ಪನ್ನಗಳಿಗೆ ರಾಸಾಯನಿಕ ಸಂರಕ್ಷಕಗಳನ್ನು ಬಳಸುವುದಿಲ್ಲ. ಹಲಸಿನ ಹಣ್ಣು ಸಿಗುವ ಸಮಯದಲ್ಲಿ ಮಾತ್ರ ಸಿಗುವ ಈ ಉತ್ಪನ್ನಗಳ ರುಚಿ ನೋಡ ಬೇಕೆಂದಿದ್ದರೆ ವಿನೋದ್ ಕುಮಾರ್ (೯೯೪೫೭೨೨೭೩೦) ಸಂಪರ್ಕಿಸಿರಿ.