"ಹಲಸು: ಭವಿಷ್ಯದ ಬೆಳೆ" ಪುಸ್ತಕ ಬಿಡುಗಡೆ
“ಅಲಕ್ಷಿತ ಕಲ್ಪವೃಕ್ಷ ಹಲಸು: ಭವಿಷ್ಯದ ಬೆಳೆ” ಶ್ರಿಪಡ್ರೆಯವರಹ ಹೊಸ ಪುಸ್ತಕ. ಈ ಅಪರೂಪದ ಪುಸ್ತಕದ ಬಿಡುಗಡೆ ಸಮಾರಂಭ ಜರುಗಿದ್ದು ದಕ್ಷಿಣ ಕನ್ನಡದ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦ ನವಂಬರ್ ೨೦೧೬ರಂದು.
“ಅಡಿಕೆ ಪತ್ರಿಕೆ"ಯ ಸಂಪಾದಕರಾದ ಶ್ರೀಪಡ್ರೆಯವರ ದೊಡ್ಡ ಕನಸು “ಹಲಸು”. ಹಲಸಿನ ವಿಷಯದಲ್ಲಿ ಅಪಾರ ಆಸಕ್ತಿಯಿಂದ ಅವರು ದೇಶವಿದೇಶಗಳಿಂದ ಸಂಗ್ರಹಿಸಿರುವ ಜನೋಪಯೋಗಿ ಮಾಹಿತಿ ಪುಸ್ತಕದ ಪುಟಪುಟದಲ್ಲೂ ತುಂಬಿದೆ. ಈ ವರೆಗೆ “ಅಡಿಕೆ ಪತ್ರಿಕೆ”ಯಲ್ಲಿ ಪ್ರಕಟವಾಗಿರುವ ಹಲಸಿನ ಕತೆ ಹೇಳುವ ಮುಖಪುಟ ಲೇಖನಗಳು ಒಂದೆರಡಲ್ಲ, ಒಟ್ಟು ೨೭! ಶ್ರೀಪಡ್ರೆಯವರು ಕಳೆದ ಹತ್ತು ವರುಷಗಳಲ್ಲಿ ಕಲೆಹಾಕಿರುವ ಈ ಅಗಾಧ ಮಾಹಿತಿಯನ್ನು ಅಚ್ಚುಕಟ್ಟಾಗಿ ಪುಸ್ತಕದಲ್ಲಿ ಚಿತ್ರಿಸಿರುವ ಶಿವರಾಮ್ ಪೈಲೂರರ ಕೈಚಳಕವೂ ಗಮನಾರ್ಹ. “ಹಸಿವು ಬೇಡವೆಂದಾದರೆ ಹಲಸು ನೆಡಿ” ಎಂಬ ಪುಸ್ತಕದ ಮುಖಪುಟದ ಘೋಷವಾಕ್ಯ ನಂಬುವರಿಗೆಲ್ಲ ಇದೊಂದು ಮಾಹಿತಿ ಕಣಜ.
ಈ ಹೊಸಪುಸ್ತಕವನ್ನು ಅನಾವರಣ ಮಾಡಿದ ಬೆಂಗಳೂರಿನ ಹಿರಿಯ ತೋಟಗಾರಿಕಾ ತಜ್ನ ಡಾ. ಎಸ್.ವಿ. ಹಿತ್ತಲಮನಿಯವರು ಈ ಸಂದರ್ಭದಲ್ಲಿ ಹೇಳಿದ್ದು: “ಹಲಸು ಎಂದರೆ ನಮಗೆಲ್ಲ ಏನೋ ಕೀಳರಿಮೆ. ನಾವು ಹಲಸಿನ ಮಹತ್ವ ಅರ್ಥ ಮಾಡಿಕೊಂಡಿಲ್ಲ. ಆದರೆ, ಶ್ರೀಲಂಕಾದಲ್ಲಿ, ಮಲೇಷ್ಯದಲ್ಲಿ, ವಿಯೆಟ್ನಾನಲ್ಲಿ ಹಲಸನ್ನು ಹೇಗೆ ಬಳಸುತ್ತಿದ್ದಾರೆ ಎಂದು ತಿಳಿದರೆ ನಾವು ತಲೆತಗ್ಗಿಸಬೇಕಾಗುತ್ತದೆ. “ಅಡಿಕೆ ಪತ್ರಿಕೆ”ಯಲ್ಲಿ ಅದನ್ನೆಲ್ಲ ತಿಳಿಸಿ ಶ್ರೀಪಡ್ರೆಯವರು ನಮ್ಮ ಕಣ್ಣು ತೆರೆಸಿದ್ದಾರೆ.”
ಈ ವಿಶೇಷ ಪುಸ್ತಕ ರೂಪುಗೊಂಡ ಬಗೆಯನ್ನು ಕೃಷಿ ಮಾಧ್ಯಮ ಕೇಂದ್ರದ ಟ್ರಸ್ಟಿ ಶಿವರಾಮ ಪೈಲೂರು ಹಂಚಿಕೊಂಡದ್ದು ಹೀಗೆ: “ಎರಡು ವರುಷದ ಮುಂಚೆ ದೇವನಹಳ್ಳಿಯ ಶಾಮಣ್ಣರ ಹಲಸಿನ ತೋಟಕ್ಕೆ ಹೋಗಿದ್ದೆ. ಅಲ್ಲಿ ಗೊಂಚಲುಗೊಂಚಲು ಹಲಸು. ಅವರು ಬೆಳಗ್ಗೆಯಿಂದ ರಾತ್ರಿ ವರೆಗೆ ಕ್ಲಿನಿಕ್ಕಿನಲ್ಲಿ ಬಿಜಿ. ಅವರಿಗೆ ಹಲಸಿನ ಹುಚ್ಚು ಹಿಡಿದದ್ದು ಹೇಗೆ? ಕೊನೆಗೆ ಈ ಪ್ರಶ್ನೆ ಕೇಳಿಯೇ ಬಿಟ್ಟೆ. ಅವರು ಹೇಳಿದ್ದು, “ಶ್ರೀಪಡ್ರೆ ಅಂತ ಒಬ್ಬರಿದ್ದಾರೆ. ಅವರು “ತರಂಗ"ದಲ್ಲಿ ಬರೆದ ಹಲಸು ಲೇಖನ ಓದಿ ನನಗೆ ಈ ಹುಚ್ಚು ಹಿಡೀತು.” ಗಮನಿಸಿ: ಶ್ರೀಪಡ್ರೆಯವರನ್ನು ಶಾಮಣ್ಣ ಕಂಡೇ ಇಲ್ಲ. ಆಗಿನಿಂದ ನನಗೆ ಹಲಸಿನ ವಿಷಯದಲ್ಲಿ ಆಸಕ್ತಿ, ಕುತೂಹಲ ಹೆಚ್ಚಿತು. ಹಲಸಿನ ಸಮಗ್ರ ಮಾಹಿತಿ ತುಂಬಿದ ಪುಸ್ತಕ ಮಾಡುವ ಯೋಜನೆ ಹುಟ್ಟಿತು. ಅದಕ್ಕಾಗಿ ಕಳೆದ ಹತ್ತು ವರುಷಗಳ "ಅಡಿಕೆ ಪತ್ರಿಕೆ”ಯ ಸಂಚಿಕೆಗಳನ್ನು ತಂದೆ. ಅವುಗಳಲ್ಲಿರುವ ಹಲಸಿನ ಮಾಹಿತಿ ಸಾಗರ ನೋಡಿ ದಂಗಾದೆ. ಅವೆಲ್ಲ ಮಾಹಿತಿ ಜೋಡಿಸಿದೆ. ಈ ಪುಸ್ತಕದ ಬಹುಪಾಲು ಮಾಹಿತಿ ಶ್ರೀಪಡ್ರೆಯವರ ಮರುಬರಹ. ಇದೀಗ ಪುಸ್ತಕವಾಗಿ ನಿಮ್ಮೆದುರಿಗಿದೆ.”
ಶಿವರಾಮ ಪೈಲೂರ್ ಇನ್ನೂ ಒಂದು ಮಾತನ್ನು ಹೇಳಿದರು, “ಶ್ರೀಪಡ್ರೆಯವರು ಸಾಗರದಾಳಕ್ಕೆ ಹೋಗಿ ಮುತ್ತು ಹೆಕ್ಕಿ ತರುವ ಬರಹಗಾರ. ಇ-ಮೆಯಿಲ್, ಫೇಸ್ ಬುಕ್, ಸ್ಕೈಪೆ, ವಾಟ್ಸಪ್ - ಈ ಹೊಸ ತಂತ್ರಜ್ನಾನವನ್ನೆಲ್ಲ ಬಳಸಿ, ಜಗತ್ತನ್ನೆಲ್ಲ ಜಾಲಾಡಿಸಿ, ಹಲಸಿನ ಬಗ್ಗೆ ರಾಶಿರಾಶಿ ಮಾಹಿತಿ ಕಲೆ ಹಾಕಿದರು. ಒಂದು ಹಣ್ಣನ್ನು ಈ ರೀತಿ ಬೆಂಬತ್ತಿದವರು ಮುಂಚೆ ಇರಲಿಲ್ಲ; ಇನ್ನು ಮುಂದೆಯೂ ಬರಲಿಕ್ಕಿಲ್ಲ."
ಇದೇ ಸಂದರ್ಭದಲ್ಲಿ ಮಾತನಾಡಿದ ಪುಸ್ತಕದ ಲೇಖಕರಾದ ಶ್ರೀಪಡ್ರೆಯವರು ಒತ್ತಿ ಹೇಳಿದ ಮಾತು: ಕ್ಷಣಮಾತ್ರದಲ್ಲಿ ಮಾಹಿತಿ ವಿನಿಮಯ ಸಾಧ್ಯವಾಗಿಸಿರುವ ವಾಟ್ಸಪ್ ನಿಜವಾದ ಬೆರಳತುದಿಯ ತಂತ್ರಜ್ನಾನ. ಆದರೆ ಅದು ಎರಡಲಗಿನ ಕತ್ತಿ.
ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷರಾದ ಮಂಚಿ ಶ್ರೀನಿವಾಸ ಆಚಾರ್. ಮುಖ್ಯ ಅತಿಥಿಯಾಗಿ ಆಗಮಿಸಿದವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ವರ್ಗದ ಅಧ್ಯಕ್ಷರಾದ ವೆಂಕಟೇಶ್ವರ ಅಮೈ.
ಸಂಗ್ರಹಯೋಗ್ಯವಾದ ಈ ಪುಸ್ತಕವನ್ನು ಜಂಟಿಯಾಗಿ ಪ್ರಕಟಿಸಿದವರು “ಅಡಿಕೆ ಪತ್ರಿಕೆ"ಯ ಪ್ರಕಾಶಕರಾದ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರ, ಧಾರವಾಡ. ೧೦೮ ಪುಟಗಳ (೮ ವರ್ಣರಂಜಿತ ಪುಟ ಸಹಿತ) ಪುಸ್ತಕದ ಬೆಲೆ ರೂ.೧೫೦. ಆಸಕ್ತರು ಪ್ರತಿಗಳಿಗಾಗಿ 9448654177 ಮೊಬೈಲ್ ನಂಬರಿಗೆ ಎಸ್-ಎಮ್ಮೆಸ್ ಕಳಿಸಬಹುದು.