ಹಲ್ಲಿ ಬಿದ್ದ ಫಲ -ಒಂದು ಕಲ್ಪನಾ ವಿಡಂಬಣೆ

ಹಲ್ಲಿ ಬಿದ್ದ ಫಲ -ಒಂದು ಕಲ್ಪನಾ ವಿಡಂಬಣೆ

ಬೆಳಗ್ಗೆ ಎದ್ದ ತಕ್ಷಣ ಎಲ್ಲರಿಗೂ ಇರುವಂತೆ ನನಗೂ ಮುಖ ತೊಳಿಯೋ ಅಭ್ಯಾಸ ಇರೋದ್ರಿಂದ ಅಂದು ಬಾನುವಾರ ಎದ್ದು ಬಚ್ಚಲು ಮನೆ ಕಡೆ ನಿದ್ದೆಗಣ್ಣಲ್ಲಿ ಹೆಜ್ಜೆ ಹಾಕಿದೆ ಬಚ್ಚಲ ಮನೆ ಮುಂದೆ ನಿಂತೆ, ಎನೋ ಅಡ್ಡ ಇದೆಯಲ್ಲ ಅನ್ನುಸ್ತು ಕನ್ನಡಕ ಬೇರೆ ಹಾಕಿರಲಿಲ್ಲ  ಕತ್ತಲೆ ಬೇರೆ ಇದದ್ದರಿಂದ ಏನೋ ಒಂದು ದೊಡ್ಡ ಹಲಗೆ ಇದ್ದಂತೆ ಕಾಣಿಸಿತು, ಏನೇನೋ ತಂದು ಒಳಗೆ ಇಡ್ತಾರೆ ಅನ್ಕೊಂಡು ಮಲಗಿದ್ದ ಮನೆಯಾಕೆ ಗೆ ಕೂಗಿ ಕೇಳಿದೆ “ ಇಲ್ಲಿ ಯಾಕೆ ಹಲಗೆ ತಂದು ನಿಲ್ಸಿದಿಯ “ 

ನಿದ್ದೆಯಲ್ಲಿದ್ದ ನನ್ನಾಕೆ ಅವಳ ನಿದ್ದೆ ಕೆಡಿಸಿದೆ ಅನ್ನೊ ಕೋಪದಲ್ಲಿ “ ಸರಿಯಾಗಿ ನೋಡ್ರಿ ಅದು ಹಲಗೆ ಅಲ್ಲ ಬಚ್ಚಲ ಮನೆ ಬಾಗಿಲು ಇರಬೇಕು “   ಹೌದು ಅದು ಬಾಗಿಲು ಆಗ ನನಗೆ ಜ್ಞಾಪಕಕ್ಕೆ ಬಂತು ಬಚ್ಚಲಮನೆ ನೀರಿನ ನಲ್ಲಿ ಸ್ವಲ್ಪ ಲೂಸ್ ಆಗಿರೊದ್ರಿಂದ ನೀರು ತೊಟ್ಟಿಕ್ಕೋ ಶಬ್ದಕ್ಕೆ ನಿದ್ದೆ ಬರಲ್ಲ ಅಂತ ಹೇಳಿ ನಾನೆ ರಾತ್ರಿ ಬಾಗಿಲು ಹಾಕಿ ಮಲಗಿದ್ದೆ ಮರತೆ ಹೋಗಿತ್ತು.  ಹೀಗೆ ನೋಡಿ ಜೀವನದಲ್ಲಿ ನಾವು ಮಾಡಿದ ಕೆಲ್ಸ ನಮಗೆ ಮರೆತು ಹೋಗಿರುತ್ತೆ, ಬಾಗಿಲ ಚಿಲಕ ತೆಗೆದು ಬಾಗಿಲನ್ನು ದಬ್ಬಿ ಒಂದು ಹೆಜ್ಜೆ ಒಳಗಿಟ್ಟೆ ತಲೆ ಮೇಲೆ ಏನೋ ಬಿದ್ದು ಕೆಳಗೆ ಬಿತ್ತು ಎನು ಅಂತ ಗೊತ್ತಾಗ್ಲಿಲ್ಲ ಲೈಟ್ ಹಾಕಣ ಅಂದರೆ ಕರೆಂಟ್ ಬೇರೆ ಹೋಗಿತ್ತು, ಹೊತ್ತಿಲ್ಲ ಗೊತ್ತಿಲ್ಲ ಯಾವಾಗ ಅಂದರೆ ಅವಾಗ್ಲೆ ಕರೆಂಟ್ ತೆಗಿತಾರೆ ಅಂತ ಬೈಕಂಡೆ ಬೈದಿದ್ದು ಕೆಇಬಿ ಅವರಿಗೆ ಕೇಳಿಸಿತೋ ಏನೋ ತಕ್ಷಣ ಕರೆಂಟ್ ಬಂತು ನೋಡಿದರೆ ತಲೆ ಮೇಲೆ ಬಿದ್ದಿದ್ದು ಹಲ್ಲಿ  ಕೆಳಗೆ ಬಿದ್ದಿತ್ತು ಬಾಲಬೇರೆ ಕಟ್ ಆಗಿತ್ತು .

ಪಂಚಾಗದಲ್ಲಿ ಓದಿದ್ದು ನೆನಪಾಯಿತು ನೆತ್ತಿ ಮೇಲೆ ಹಲ್ಲಿ ಬಿದ್ದರೆ ಮರಣ ಅಂತ ಸ್ವಲ್ಪ ಭಯ ಆಯಿತು, ಹಲ್ಲಿ ತಲೆ ಮೇಲೇನೋ ಬಿತ್ತು ನೆತ್ತಿ ಮೇಲೆ ಬಿದ್ದಿಲ್ಲ ಅಂತ ಅನ್ಸುತ್ತೆ ಅನ್ಕೊಂಡು ಸಮಾದಾನ ಮಾಡ್ಕೊಂಡೆ ಆದರು ಭಯ ಹೋಗಲಿಲ್ಲ ಯಾಕೆಂದರೆ ಸಾಯಕ್ಕೆ ಯಾರು ಇಷ್ಠ ಪಡಲ್ಲ ನೋಡಿ ಹಾಗೆ ನನಗೂ ಇಷ್ಟು ಬೇಗ ಸಾಯಕ್ಕೆ ಇಷ್ಠ ಇಲ್ಲದೆ ಇರೋದ್ರಿಂದ ಮುಖ ತೊಳ್ಕಂಡ್ ಬಂದು ಸ್ವಲ್ಪ ಮಂಕಾಗಿ ಹಾಲ್ ನಲ್ಲಿ ಸೋಫಾದ ಮೇಲೆ  ಕುಳುತ್ಕಂಡೆ,  ಅಷ್ಠರಲ್ಲಿ ಎದ್ದು ಬಂದ ನನ್ನ ಹೆಂಡತಿ “ ಯಾಕ್ರಿ ಹೀಗ್ ಕುತ್ಕೊಂಡಿದೀರಾ, ತಲೆ ತಿರಗ್ತಾ ಇದೀಯ “ ಅಂದಳು (ನನಗೆ ಗ್ಯಾಸ್ಟ್ರಿಕ್ ತೊಂದರೆ ಇರೋದ್ರಿಂದ ಒನ್ ಒನ್ಸತಿ ಬೆಳಗ್ಗೆ ಎದ್ದ ತಕ್ಷಣ ತಲೆ ತಿರುಗು ಬರುತ್ತೆ ಹಾಗಾಗಿ ಹಾಗೆ ಕೇಳಿದಳು )    “ ತಲೇನು ತಿರುಗ್ತಾ ಇಲ್ಲ ಏನು ಇಲ್ಲ ಬಚ್ಚಲಮನೆ ಬಾಗಿಲು ತೆಗೆದ ತಕ್ಷಣ ಹಲ್ಲಿ ತಲೆ ಮೇಲೆ ಬಿತ್ತು “ ಅಂದೆ ತಕ್ಷಣನೇ 

“ ನಾನು ಈ ಮನೆಗೆ ಬಂದಾಗ್ಲಿಂದ ಹೇಳ್ತಾ ಇದ್ದೀನಿ ಸಿಕ್ಕಾಪಟ್ಟೆ ಹಲ್ಲಿಗಳು ಸೇರ್ ಕೊಂಡಿದೆ ಜೊತೆಗೆ ಮನೆ ಭರ್ತಿ ದೇವರು ಫೋಟೋಗಳನ್ನ ಬೇರೆ ಹಾಕಿದೀರಿ ಏರಿಯಾದಲ್ಲಿರೋ ಎಲ್ಲಾ ಹಲ್ಲಿಗಳು ನಮ್ಮನೆ ಈ ಫೋಟೋಗಳ ಹಿಂದೆ ಸಂಸಾರ ಮಾಡಿಕೊಂಡು ಹಾಯಾಗಿದೆ ಆಚೆ ಓಡ್ಸೋಕೆ ಏನಾದರು ಮಾಡಿ ಅಂದರೆ ನೀವು ತಲೆ ಕೆಡಿಸಿಕೊಳ್ಳಲ್ಲ ಇವತ್ತು ನಿಮ್ಮ ತಲೆ ಮೇಲೆ ಬಿದ್ದಿದೆ ಎಂದೋ ಒಂದಿವ್ಸ ಮಾಡಿರೋ ಸಾರಿಗೋ, ಹುಳಿಗೋ ಬಿದ್ದರೆ ಆವಾಗ ಗೊತ್ತಾಗುತ್ತೆ”  ಅಂತ ಹೇಳಿ ಹಲ್ಲಿ ಮೇಲಿರೋ ಕೋಪನೆಲ್ಲಾ ನನ್ನ ಮೇಲೆ ತೋರಿಸಿದಳು   

ನಮ್ಮ ಮನೇಲಿ ಜಿರಲೆ, ಇಲಿಗಳ ಕಾಟ ಇಲ್ಲ ( ಗೋಪಾಲ್ ಮತ್ತು ಚೇತನ್ ಹೊನ್ನವಿಲೆ ಇವರ ಮನೇಲಿದಂತೆ) ಆದರೆ ಹಲ್ಲಿಗಳು ಮಾತ್ರ ಹೇರಳವಾಗಿದೆ, ಈ ಹಲ್ಲಿಗಳಿಗೋಸ್ಕರ ದೇವರ ಪೋಟುಗಳನ್ನು ಯಾಕೆ ತೆಗಿಬೇಕು ಅಲ್ಲದೆ ಹಲ್ಲಿಗಳಿಂದ ನಮಗೇನು ತೊಂದರೆ ಇಲ್ಲ ಅವೇನು ನೆಲದ ಮೇಲೆ ಬರಲ್ಲ ಗೋಡೆ ಮೇಲೆ ಓಡಾಡಿಕೊಂಡು ಇರುತ್ವೆ ಜೊತೆಗೆ ಮಳೆಗಾಲದಲ್ಲಿ ಮನೆ ಒಳಗೆ ಬರೋ ಹುಳ ಹುಪ್ಪಟೆಗಳನ್ನೆಲ್ಲ ತಿಂದುಹಾಕುತ್ತೆ ಹಾಗಾಗಿ ಅವುಗಳ ಬಗ್ಗೆ ನಾನು ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ ಆದರೆ ನನ್ನ ಹೆಂಡತಿಗೆ ಅವುಗಳನ್ನ ಕಂಡರೆ ಕೋಪ .

 ಹೀಗಾಗಿ ತನ್ನ ಕೋಪಾನೆಲ್ಲ ಒಂದೆ ಬಾರಿ ಹೊರಗೆಡಹಿದ್ದಳು, ಆಮೇಲೆ ಸಮಾದಾನ ಮಾಡಿಕೊಂಡು “ ಅದು ಸರಿ ಹಲ್ಲಿ ತಲೆ ಮೇಲೆ ಬಿದ್ದರೆ ನೀವ್ ಯಾಕೆ ಹೀಗ್ ಕೂತಿದೀರಿ “ ಅಂತ ಕೇಳಿದಳು “ ಅಲ್ಲವೇ ಹಲ್ಲಿ ತಲೆ ಮೇಲೆ ಬಿದ್ದರೆ ಮರಣ ಅಂತ ಫಲ ಇದೆಯಲ್ಲೇ ಪಂಚಾಂಗದಲ್ಲಿ ಅದಕ್ಕೆ ……” 

“ ಅಯ್ಯೋ ಅದೆಲ್ಲ ಎಲ್ಲಿ ನಿಜಾ ಆಗುತ್ತೆ “ ಅನ್ಕೊಂಡು ಕಾಪಿ ಮಾಡಕ್ಕೆ ಅಂತ ಹೊರಟಳು ಇವಳೇನು ನಾನು ಸಾಯಲ್ಲ ಅನ್ನೋ ಬೇಸರಕ್ಕೆ ಹಾಗಂದಳೋ ಅಥವಾ ಜೋತಿಷ್ಯ ನಿಜ ಆಗಲ್ಲ ಅಂಥ ಹಾಗಂದಳೋ ತಿಳಿಯಲಿಲ್ಲ , ಬೇರೆಯವರ ಮನಸ್ಸಿನಲ್ಲಿ ಯಾವ ಭಾವನೆ ಇದೆ ಎಂದು ತಿಳಿಯುವ ಶಕ್ತಿಯನ್ನು ದೇವರು ಕೊಟ್ಟಿಲ್ಲ, ಕೊಡದೆ ಇದ್ದದ್ದೆ ಒಳ್ಳೆಯದಾಯಿತು ಅನ್ಸುತ್ತೆ ಕೊಟ್ಟಿದ್ದರೆ ಪ್ರಪಂಚದಲ್ಲಿ ಏನೇನು ಅನಾಹುತಗಳು ಸಂಭವಿಸುತಿತ್ತೋ ಅಲ್ಲವೇ.

ಅಡುಗೆ ಮನೆಯಿಂದ “ ಕಂಚಿಗೆ ಹೋಗಿ ಅಲ್ಲಿರುವ ಹಲ್ಲಿ ಮುಟ್ಟಿ ಬಂದಿರೋರಿಗೆ ಕಾಲಿಗೆ ನಮಸ್ಕಾರ ಮಾಡಿದರೆ ದೋಷ ಪರಿಹಾರ ಆಗುತ್ತಂತೆ , ನಾನು ಎಂಟನೆ ಕ್ಲಾಸನಲ್ಲಿ ದ್ದಾಗ ನಮ್ಮಪ್ಪ ನನ್ನನ್ನು ಕಂಚಿಗೆ ಕರ್ಕೊಂಡು ಹೋಗಿದ್ರು ನಾನು ಆ ಕಂಚಿ ಹಲ್ಲಿನ ಮುಟ್ಟಿ ಬಂದಿದಿನಿ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ದೋಷ ಪರಿಹಾರ ಆಗುತ್ತೆ“   ಅಂದಳು ನನ್ನ ಹೆಂಡತಿ

ದೋಷ ಪರಿಹಾರಕೋಸ್ಕರ ಹೆಂಡತಿ ಕಾಲಿಗೆ ನಮಸ್ಕಾರ ಮಾಡಕ್ಕೆ ನನಗ್ಯಾಕೋ ಇಷ್ಠ ಆಗಲಿಲ್ಲ, ಕಂಚಿಗೆ ಹೋಗಿ ಹಲ್ಲಿ ಮುಟ್ಟಿ ಬಂದಿರೋರನ್ನ ಮಾತನಾಡಿಸಿದರೆ ದೋಷ ಪರಿಹಾರ ಆಗುತ್ತೆ ಅಂತ ನಮ್ಮ ತಾಯಿ ಇದ್ದಾಗ ಹೇಳ್ತಾ ಇದ್ದಿದ್ದು ಜ್ಞಾಪಕ ಬಂತು ಸರಿ ನಮ್ಮನೆ ಮುಂದಿನ ರೋಡ್ ನಲ್ಲಿರೋ ನಮ್ಮ ಚಿಕ್ಕಪ್ಪನ ಮಗ ಕಂಚಿಗೆ ಹೋಗಿ ಬಂದಿದ್ದು   ಜ್ಞಾಪಕಕ್ಕೆ ಬಂದು ಅವನನ್ನೆ ಮಾತಾಡಿಸಿಕೊಂಡು ಬಂದರಾಯಿತು ಅದ್ಕೊಂಡು ಎದ್ದೆ

ಅದೇ ವೇಳೆಗೆ ಕಾಫಿ ಲೋಟ ತಗೊಂಡು ಅಡುಗೆ ಮನೆಯಿಂದ ಹೊರಕ್ಕೆ ಬಂದಳು ನನ್ನ ಹೆಂಡತಿ ನಾನು ಸೋಫಾದಿಂದ ಎದ್ದತಕ್ಷಣ ಕಾಲಿನ ಬೆರಳುಗಳು ಪಂಚೆಗೆ ಸಿಕ್ಕಿ ಕೊಂಡು ಬ್ಯಾಲೆನ್ಸ್ ತಪ್ಪಿ ಕರೆಕ್ಟ್ ಆಗಿ ಅವಳ ಮುಂದೆ ಕೈಊರಿ ಬಿದ್ದೆ “ ಅಯ್ಯೋ ನಾನು ತಮಾಷೆಗೆ ರೀ ಹೇಳಿದ್ದು ನನ್ನ ಕಾಲಿಗೆ ಯಾಕೆ ಬೀಳ್ತಾ ಇದೀರಿ” ಅಂದಳು       “ ಪಂಚೆ ತೊಡರಿ ಬಿದ್ದೆ ಕಣೇ ನಾನೇನು ನಮಸ್ಕಾರ ಮಾಡಲಿಲ್ಲ “ ಅಂದೆ ಅದನ್ನು ಅವಳು ನಂಬಿದಂತೆ ಕಾಣಲಿಲ್ಲ “ ಅದು ಸರಿ ಎಲ್ಲಿಗೆ ಹೊರಟ್ರಿ “ ಅಂದಳು “ ಅದೇ ಪ್ರಸನ್ನ ಕಂಚಿಗೆ ಹೋಗಿ ಬಂದಿಯನಲವ ಅವನನ್ನ ಮಾತಾಡಿಸಿ ಬರ್ತೇನೆ ದೋಷ ಪರಿಹಾರ ಆಗುತ್ತೆ ಇನ್ನು ಲೇಟಾಗಿ ಹೋದರೆ ಅವನು ಸಿಗಲ್ಲ” ಅಂದೆ 

“ಅಲ್ರಿ ಅವಾಗಲೇ ಹೇಳಿದ್ನಲ್ಲ ನಾನು ಕಂಚಿಗೆ ಹೋಗಿ ಹಲ್ಲಿ ಮುಟ್ಟಿ ಬಂದಿದಿನಿ ಅಂತ ಅವಾಗ್ಲಿಂದ ನನ್ನ ಮಾತಾಡುಸ್ತನೆ ಇದ್ದೀರ ಜೊತೆಗೆ ನಮಸ್ಕಾರ ಬೇರೆ ಮಾಡಿದೀರ ದೋಷ ಪರಿಹಾರ ಆಗಿದೆ ಬಿಡಿ ಬೇಕಾದರೆ ಸ್ನಾನ ಮಾಡಿ ಇನ್ನೊಂದ್ಸತಿ ನಮಸ್ಕಾರ ಮಾಡಿವ್ ರಂತೆ “ ಅಂದಳು ತಮಾಷೆಯಾಗಿ, ಹೌದಲ್ವ ಈ ಜೀವ ಭಯ ಬಂದರೆ ಬುದ್ದಿನೇ ಓಡಲ್ಲ ಅನ್ನಿಸಿ ಅವಳು ಕೊಟ್ಟ ಕಾಫಿ ತಗೊಂಡು ಸೋಫಾದ ಮೇಲೆ ಕುತ್ಕೊಂಡೆ.

ರೂಂನಿಂದ ಎದ್ದು ಬಂದ ನನ್ನ ಮಗಳು ಬಚ್ಚಲಮನೆಗೆ ಹೋದೋಳು “ ಅಮ್ಮ ಬಾಯಿಲ್ಲಿ ಇಲ್ಲೊಂದು ಹಲ್ಲಿ ಬಿದ್ದಿದೆ ಬಾಲಬೇರೆ ಕಟ್ ಆಗಿದೆ ಸತ್ತು ಹೋಗಿರು ಹಾಗಿದೆ” ಅಂತ ಕೂಗಿದಳು ಅವರಮ್ಮನ ಜೊತೆ ನಾನು ಹೋದೆ ಅಲ್ಲಿ ಹೋಗಿ ನೋಡಿದರೆ ನನ್ನ ತಲೆ ಮೇಲೆ ಬಿದಿದ್ದ ಅದೇ ಹಲ್ಲಿ “ ನೋಡಿ ನಿಮ್ಮ ಮೇಲೆ ಬಿದ್ದಿದಕ್ಕೆ ಹಲ್ಲಿನೇ ಸತ್ತು ಹೋಗಿದೆ , ಅಂತು ಭವಿಷ್ಯ ಹಲ್ಲಿ ಪಾಲಿಗೆ ನಿಜ ಆಗಿದೆ “ ಅಂತ ತಮಾಷೆ ಮಾಡಿದಳು ನನ್ನ ಹೆಂಡತಿ……..,

Comments