ಹಲ್ಲು ನೋವಿಗೆ ಕೆಲವು ಮನೆಮದ್ದುಗಳು

ಹಲ್ಲು ನೋವಿಗೆ ಕೆಲವು ಮನೆಮದ್ದುಗಳು

ಸಹಿಸಲಸಾಧ್ಯವಾದ ನೋವು ಎಂದರೆ ಹಲ್ಲು ನೋವು ಎನ್ನುತ್ತಾರೆ ನೋವು ತಿಂದವರು. ಈಗಿನ ಯುಗದಲ್ಲಿ ಎಲ್ಲರೂ ರಾಸಾಯನಿಕ ಭರಿತ ಆಹಾರವನ್ನು ಸೇವಿಸಿ, ಹಲ್ಲಿನ ಆರೋಗ್ಯವನ್ನು ಕಡೆಗಣಿಸಿದ ಪರಿಣಾಮ ಎಲ್ಲರ ಹಲ್ಲು ಹುಳ ತಿಂದಿದೆ. ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಹಲ್ಲಿನ ಸಮಸ್ಯೆ. ಬಹುತೇಕರಿಗೆ ಹಲ್ಲು ಜೊತೆಗೆ ಒಸಡೂ ಸಹ ಹಾನಿಗೊಳಗಾಗಿ ಹಲ್ಲು ನೋವು, ದವಡೆ ನೋವು, ಹಲ್ಲಿನೊಳಗೆ ಸೋಂಕು, ಗಾಯಗಳು ಮುಂತಾದುವುಗಳಿಂದ ನೋವು ಪ್ರಾರಂಭವಾಗಬಹುದು. ಈ ನೋವಿನ ಶಾಶ್ವತ ನಿವಾರಣೆಗೆ ತಜ್ಞ ದಂತ ವೈದ್ಯರನ್ನು ಕಾಣುವುದು ಅತ್ಯಂತ ಅವಶ್ಯಕ. ಆದರೆ ಅಪರಾತ್ರಿಯಲ್ಲಿ ಅಥವಾ ವೈದ್ಯರ ರಜಾ ದಿನಗಳಲ್ಲಿ ಹಲ್ಲು ನೋವು ಕಾಣಿಸಿಕೊಂಡರೆ ಅದಕ್ಕೆ ಮನೆಯಲ್ಲೇ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಲವಂಗದ ಎಣ್ಣೆ: ಲವಂಗವನ್ನು ಹಲ್ಲುನೋವಿನ ಸಂಜೀವಿನಿ ಎಂದೇ ಹೇಳಬಹುದಾಗಿದೆ. ಇದು ಅತ್ಯಂತ ಪರಿಣಾಮಕಾರಿಯಾದ ಫಲವನ್ನು ನೀಡುತ್ತದೆ. ಲವಂಗದ ಎಣ್ಣೆಯು ಯುಜೆನಾಲ್ ಎಂಬ ರಾಸಾಯನಿಕವನ್ನು ನೈಸರ್ಗಿಕವಾಗಿಯೇ ಹೊಂದಿರುತ್ತದೆ. ಇದು ಉತ್ತಮ ನೋವು ನಿವಾರಕ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿದೆ. ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವ ಗುಣ ಈ ಲವಂಗದ ಎಣ್ಣೆಗೆ ಇದೆ. ಶುದ್ಧವಾದ ಹತ್ತಿಯನ್ನು ತೆಗೆದುಕೊಂಡು ಅದಕ್ಕೆ ಲವಂಗದ ಎಣ್ಣೆಯ ಕೆಲವು ಹನಿಗಳನ್ನು ಹಾಕಿ ಅದನ್ನು ಹಲ್ಲು ನೋವಿರುವ ಜಾಗದಲ್ಲಿ ಉಜ್ಜಿರಿ. ಸ್ವಲ್ಪ ಹೊತ್ತು ಅಲ್ಲೇ ಇಟ್ಟರೂ ಆಗುತ್ತದೆ. ನಂತರ ಅದನ್ನು ತೆಗೆದು ಬಿಟ್ಟು ಬೆಚ್ಚಗಿನ ನೀರಿನಿಂದ ಬಾಯಿಯನ್ನು ತೊಳೆದುಕೊಳ್ಳಿರಿ. 

ಲವಂಗದ ಎಣ್ಣೆ ಇಲ್ಲದೇ ಇದ್ದರೆ ಲವಂಗವನ್ನೇ ಜಗಿಯಿರಿ. ಆದರೆ ಅದರಿಂದ ಬರುವ ಎಣ್ಣೆ ಅಥವಾ ರಸವನ್ನು ನುಂಗಬೇಡಿ. ಅತಿಯಾದ ಪ್ರಮಾಣದಲ್ಲಿ ಲವಂಗದ ಎಣ್ಣೆ ಅಥವಾ ಲವಂಗವನ್ನು ಬಳಕೆ ಮಾಡಬೇಡಿ. ನಿಮ್ಮ ಒಸಡು ಹಾನಿಗೊಳಗಾಗಬಹುದು. 

ಉಪ್ಪು: ನಮ್ಮ ಅಡುಗೆ ಮನೆಯಲ್ಲಿರುವ ಉಪ್ಪು ಅತ್ಯಂತ ಉತ್ತಮವಾದ ಸೋಂಕು ನಿವಾರಕ. ಹಲ್ಲು ನೋವು ಮತ್ತು ಹಲ್ಲಿನ ಸೋಂಕನ್ನು ಕಡಿಮೆ ಮಾಡಲು ಸುಲಭವಾದ ಮತ್ತು ಪರಿಣಾಮಕಾರಿಯಾದ ಉಪಾಯವೆಂದರೆ ಉಪ್ಪಿನ ನೀರಿನಿಂದ ಬಾಯಿಯನ್ನು ಮುಕುಳಿಸುವುದು. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾದ ಪ್ರಮಾಣ ಕಡಿಮೆಯಾಗುತ್ತದೆ. ಉರಿಯೂತ ಮತ್ತು ಊತವೂ ನಿಯಂತ್ರಣಕ್ಕೆ ಬರುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಮಿಶ್ರಣ ಮಾಡಿ ಸುಮಾರು ೩೦ ಸೆಕೆಂಡುಗಳ ಕಾಲ ಅದನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸಿ. ನಂತರ ಅದನ್ನು ಉಗುಳಿ, ಮತ್ತೊಂದು ಗುಟುಕು ಬಾಯಿಗೆ ಹಾಕಿ ಪುನರಾವರ್ತಿಸಿ. ಹೀಗೆ ಹಲವಾರು ಬಾರಿ ಮಾಡುವುದರಿಂದ ಒಸಡಿನ ಸೋಂಕು ಪ್ರಮಾಣ ನಿಯಂತ್ರಣಕ್ಕೆ ಬಂದು ಹಲ್ಲು ನೋವು ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ: ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿರುವ ವಸ್ತು. ಬೆಳ್ಳುಳ್ಳಿಯಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳಿವೆ. ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಮೈಕ್ರೋಬಿಯಲ್ ಗುಣಲಕ್ಷಣವನ್ನು ಬೆಳ್ಳುಳ್ಳಿ ಹೊಂದಿದೆ. ಇದು ಹಲ್ಲಿನ ನೋವನ್ನು ಕಡಿಮೆ ಮಾಡಿ ಬಾಯಿಯಲ್ಲಿರುವ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ತರಹ ಮಾಡಿ, ನಂತರ ಅದನ್ನು ಹಲ್ಲು ನೋವಿರುವ ಜಾಗಕ್ಕೆ ಇಟ್ಟುಬಿಡಿ. ಕೆಲ ನಿಮಿಷಗಳವರೆಗೆ ಹಾಗೇ ಬಿಟ್ಟು ನಂತರ ಬಿಸಿ ನೀರಿನಿಂದ ಚೆನ್ನಾಗಿ ಬಾಯಿ ತೊಳೆದುಕೊಳ್ಳಿರಿ. 

ಮಂಜುಗೆಡ್ಡೆ: ಐಸ್ ಪ್ಯಾಕ್ ಅಥವಾ ಮಂಜುಗೆಡ್ಡೆಯನ್ನು ಹಲ್ಲು ಊತವಿರುವ ಜಾಗಕ್ಕೆ ಬಳಸುವುದು ಬಹಳ ಹಳೆಯ ವಿಧಾನ. ಇದು ಉರಿಯೂತವನ್ನು ಕಡಿಮೆ ಮಾಡಲು ಬಹಳಷ್ಟು ಸಹಕಾರಿ. ಇದು ನೋವು ಉಂಟು ಮಾಡುವ ನರಗಳನ್ನು ನಿಶ್ಚೇತಗೊಳಿಸಿ ನೋವಿನಿಂದ ನಿಮಗೆ ಅಲ್ಪಾವಧಿಯ ನೆಮ್ಮದಿಯನ್ನು ನೀಡುತ್ತದೆ. ಈಗ ಸಾಧಾರಣವಾಗಿ ಎಲ್ಲರ ಮನೆಯಲ್ಲಿ ಫ್ರಿಡ್ಜ್ ಇದ್ದೇ ಇರುತ್ತದೆ. ಅದರಲ್ಲಿ ಮಂಜುಗೆಡ್ಡೆಯನ್ನು ತಯಾರಿಸಿ ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ. ನಂತರ ೧೫ ನಿಮಿಷಗಳ ಕಾಲ ನೋಯುತ್ತಿರುವ ಹಲ್ಲಿನ ಬಳಿಯ ಕೆನ್ನೆಯ ಮೇಲೆ ಹಿಡಿದುಕೊಳ್ಳಿ. ನಂತರ ಸ್ವಲ್ಪ ಸಮಯ ತೆಗೆದು, ಮತ್ತೆ ಇಟ್ಟು ಮತ್ತೆ ತೆಗೆದು ಪುನರಾವರ್ತಿಸುತ್ತಾ ಹೋಗಿ. ಹೀಗೆ ಮಾಡುತ್ತಾ ಹೋದಾಗ ಹಲ್ಲಿನೊಳಗಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಆ ಮೂಲಕ ನೋವು ನಿವಾರಣೆಯಾಗುತ್ತದೆ. ಉರಿಯೂತ ಕಡಿಮೆಯಾಗುತ್ತದೆ. ಇದು ತಾತ್ಕಾಲಿಕ ಪರಿಹಾರವಾದರೂ ಬಹಳಷ್ಟು ಪರಿಣಾಮಕಾರಿಯಾಗಿದೆ ಮತ್ತು ಶೀಘ್ರದಲ್ಲಿ ಮಾಡಲು ಸಾಧ್ಯ.

ಅರಸಿನ: ಅರಸಿನವು ಅತ್ಯಂತ ಪರಿಣಾಮಕಾರಿಯಾದ ಆಯುರ್ವೇದ ಮೂಲಿಕೆಯಾಗಿದೆ. ಇದು ಉತ್ತಮ ಸೋಂಕು ನಿವಾರಕ ಗುಣವನ್ನು ಹೊಂದಿದ್ದು ಹಲ್ಲು ನೋವಿಗೆ ಉತ್ತಮ ಪರಿಹಾರವಾಗಿದೆ. ಇದರಲ್ಲಿರುವ ಸಕ್ರಿಯ ಅಂಶ ಕುರ್ಕ್ಯುಮಿನ್ ಉರಿಯೂತದ ಮಟ್ಟವನ್ನು ಕಡಿಮೆ ಮಾಡಿ ಸೋಂಕನ್ನು ತಡೆಗಟ್ಟುತ್ತದೆ. ಕೆಲವು ಹನಿ ನೀರಿನಲ್ಲಿ ಒಂದು ಟೀ ಚಮಚ ಅರಸಿನ ಹುಡಿಯನ್ನು ಪೇಸ್ಟ್ ನಂತೆ ಮಿಶ್ರ ಮಾಡಿ. ಈ ಪೇಸ್ಟ್ ಅನ್ನು ನೋವಿರುವ ಹಲ್ಲಿನ ಮೇಲೆ ಹಚ್ಚಿ. ಕೆಲವು ನಿಮಿಷಗಳ ಕಾಲ ಹಾಗೇ ಬಿಟ್ಟು, ನಂತರ ಬಿಸಿ ನೀರಿನಿಂದ ಬಾಯಿಯನ್ನು ತೊಳೆಯಿರಿ. ಅರಸಿನವನ್ನು ಜೇನುತುಪ್ಪ ಅಥವಾ ತೆಂಗಿನ ಎಣ್ಣೆಯ ಜೊತೆಗೆ ಮಿಶ್ರ ಮಾಡಿಯೂ ಹಚ್ಚಬಹುದಾಗಿದೆ.

ಪೇರಳೆ ಎಲೆ: ನಮ್ಮ ಹಿಂದಿನ ಕಾಲದವರು ಹಲ್ಲು ಉಜ್ಜಲು ಪೇರಳೆ ಗಿಡದ ಎಲೆಯನ್ನು ಬಳಕೆ ಮಾಡುತ್ತಿದ್ದರು. ಪೇರಳೆ ಎಲೆಯಲ್ಲಿ ಉರಿಯೂತದ ನಿವಾರಣೆ ಮಾಡುವ ಆಂಟಿ ಮೈಕ್ರೋಬಿಯಲ್ ಗುಣವಿದೆ. ಬಾಯಿಯ ಆರೋಗ್ಯ ಮತ್ತು ನೋವಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪೇರಳೆ ಎಲೆ ಬಹಳಷ್ಟು ಉಪಯುಕ್ತವಾಗಿದೆ. ಕೆಲವು ತಾಜಾ ಪೇರಳೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ತೊಳೆದು ಬಾಯಿಗೆ ಹಾಕಿ ಜಗಿಯಿರಿ. ಪೇರಳೆ ಎಲೆಯ ರಸವನ್ನು ಹಿಂಡಿ ತೆಗೆದು ಬಾಯಿಯನ್ನು ಮುಕ್ಕಳಿಸಬಹುದು. ನೀರಿಗೆ ಎಲೆಯನ್ನು ಹಾಕಿ ಅದನ್ನು ಕುದಿಸಿ, ತಣ್ಣಗಾದ ಬಳಿಕ ಆ ನೀರಿನಿಂದಲೂ ಬಾಯಿಯನ್ನು ಸ್ವಚ್ಛಗೊಳಿಸಬಹುದು. ಈ ವಿಧಾನದಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಹಲ್ಲುನೋವು ಮತ್ತು ಒಸಡಿನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ಇಂಗು: ಆಯುರ್ವೇದದಲ್ಲಿ ಹಲ್ಲು ನೋವು ಮತ್ತು ಒಸಡು ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇಂಗು ಬಳಸಲಾಗುತ್ತದೆ. ಇದು ಉರಿಯೂತವನ್ನು ನಿವಾರಣೆ ಮಾಡುವುದರ ಜೊತೆಗೆ ಹಲ್ಲಿನ ನೋವನ್ನು ಶಮನಗೊಳಿಸುವ ಉತಮ ಮನೆಮದ್ದಾಗಿದೆ. ಸ್ವಲ್ಪ ಚಿಟಿಕೆ ಇಂಗು ತೆಗೆದುಕೊಂಡು ಅದಕ್ಕೆ ಕೆಲವು ಹನಿಗಳಷ್ಟು ನಿಂಬೆ ರಸವನ್ನು ಮಿಶ್ರ ಮಾಡಿ. ಈಗ ಆ ಪೇಸ್ಟ್ ಅನ್ನು ಹಲ್ಲುನೋವಿರುವಲ್ಲಿ ಹಚ್ಚಿ. ಇಂಗು ಹಲ್ಲುನೋವನ್ನು ಗುಣಪಡಿಸುವುದು ಮಾತ್ರವಲ್ಲದೇ ಬಾಯಿಗೆ ಸಂಬಂಧಿಸಿದ ಇತರ ಸೋಂಕುಗಳನ್ನೂ ನಿವಾರಣೆ ಮಾಡುತ್ತದೆ. 

ಹಲ್ಲು ನೋವಿನ ನಿವಾರಣೆಗೆ ಪುದೀನಾ ಟೀ ಬ್ಯಾಗ್ ಮತ್ತು ಈರುಳ್ಳಿಗಳನ್ನೂ ಬಳಕೆ ಮಾಡಬಹುದು. ಇವೆಲ್ಲಾ ತಾತ್ಕಾಲಿಕ ಉಪಶಮನ ನೀಡುವ ಮನೆಯಲ್ಲಿನ ಔಷಧೀಯ ಕ್ರಮಗಳು. ಶಾಶ್ವತ ಚಿಕಿತ್ಸೆಗಾಗಿ ಹಲ್ಲಿನ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಈ ಮೇಲಿನ ವಿಧಾನಗಳನ್ನು ಅನುಸರಿಸುವುದರಲ್ಲಿ ಆರೋಗ್ಯಕ್ಕೆ ತೊಂದರೆಯೇನಿಲ್ಲ. ಎಲ್ಲವೂ ಉತ್ತಮವಾದ ಆರೋಗ್ಯದಾಯಕ ವಿಧಾನಗಳೇ ಆಗಿವೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ