ಹಳಗನ್ನಡದ ಬಣ್ಣ
ದತ್ತ ಅಕ್ಷರ *ಲೇ*
ಹಳಗನ್ನಡದ ಬಣ್ಣ
( ಲಲಿತ ರಗಳೆ)
ಲೇಪಿಸುವೆ ಹಳಗನ್ನಡಕೆ ನೂತನದ ಬಣ್ಣ
ರೂಪದಲಿ ಕನ್ನಿಕೆಯು ನಳನಳಿಸುತಲಿ ಕಣ್ಣ|
ಬಸವಣ್ಣ ಬರೆದಿಹನು ವಚನದಾ ಹಾದಿಯಲಿ
ರಸಭರಿತ ಕಾವ್ಯವನ್ ಬರೆಯುವೆನು ತೋಷದಲಿ||
ಅಗ್ಗಳನು ಚಂದ್ರಪ್ರಭಪುರಾಣವನು ರಚಿಸಿರಲು
ರಿಗ್ಗವಣಿ ನಾದದೊಳು ಹೃದಯದಲಿ ಬಾರಿಸಿರಲು|
ಕವಿರಾಜಮಾರ್ಗದಲಿ ಕಂದದೊಳು ತಿಳಿಯುವೆನು
ಸವಿಗನ್ನಡದ ಕವಿಯ ಸಂಪೂರ್ಣ ಚರಿತೆಯನು||
ಸಾಧುಂಗೆ ಸಾಧುವಂ ನುಡಿಯನ್ನು ನೆನೆಯುವೆಂ
ಮಾಧುರ್ಯ ಮನವನಂ ಕಪ್ಪೆಯರಭಟ್ಟನಂ|
ತಿರುಳಗನ್ನಡದ ನಾಡುಗಳನ್ನು ತಿಳಿಸಿರಲ್
ಸರಳವಿಹ ಕಂದದಲಿ ಬಲ್ಮೆಯಂ ತೋರಿರಲ್||
ಜೇಷ್ಠನಿಹ ವೃಷಭನಾಥನ ಜನ್ಮಕಥೆಯನಂ
ಶ್ರೇಷ್ಠದಲಿ ಪಂಪಕವಿ ಚಂಪುದಲಿ ಬರೆದನಂ|
ರಗಳೆಯನು ಸುಲಭದಲಿ ಬಳಸಿಹನು ಹರಿಹರಂ
ಹೊಗಳಿದವು ದೇವರನು ನೂರೆಂಟು ರಗಳೆಯಂ||
ಶೋಧಿಸುತ ತಿರುಳನ್ನು ಕೊಡುತ್ತಿರುವೆನು ಮೆರುಗ
ಮೇದಿನಿಯನಾಳಿರುವ ರಾಜರುಗಳಂನೀಗ|
ಯುದ್ದಬಲ ಶೌರ್ಯವಂ ಸಾಹಸಂ ಪೇಳುವೆನು
ಗೆದ್ದಿರುವ ರಾಜ್ಯದಲಿ ನೆಟ್ಟಿರಲ್ ಸ್ಥಂಭವನು||
ದೇಗುಲದಿ ಶಿಲ್ಪವನು ವರ್ಣಿಸುವ ಗುಣವನಂ
ಮೇಗಡೆಯ ಮೇಲೆಯಲಿ ಶಾಸನವ ಬರೆಸಿದಂ|
ನೋಡಿರಲು ಕಣ್ಮನವು ಸೆಳೆದಿದೆ ಸ್ವಪ್ನದಲಿ
ಕಾಡುತಿದೆ ಹಳಗನ್ನಡವು ಚರಿತೆ ಪುಟಗಳಲಿ||
*ಶಂಕರಾನಂದ ಹೆಬ್ಬಾಳ*