ಹಳೇ ಲೋಪಗಳು ಸಂಭವಿಸದಿರಲಿ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಹಲವು ಬದಲಾವಣೆ, ಸುಧಾರಣೆಗಳು ಕಾಣುತ್ತಿವೆ. ಮುಖ್ಯವಾಗಿ, ಪದವಿ ಶಿಕ್ಷಣದ ಸ್ವರೂಪವೂ ಬದಲಾಗಿದ್ದು, ಜ್ಞಾನದ ಜತೆಗೆ ಕೌಶಲವೃದ್ಧಿಗೆ ಅಷ್ಟೇ ಪ್ರಾಮುಖ್ಯ ನೀಡಲಾಗಿರುವುದು ವಿಶೇಷ. ೨೦೩೦ರ ಹೊತ್ತಿಗೆ ಶಿಕ್ಷಣ ಸಂಸ್ಥೆಗಳಲ್ಲಿ ನಿವ್ವಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಆನ್ ಲೈನ್ ಹಾಗೂ ದೂರಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಇದರ ಭಾಗವಾಗಿಯೇ, ಮುಕ್ತ ವಿಶ್ವವಿದ್ಯಾನಿಲಯ ಸ್ಥಾಪನೆ ನಿಯಮ ಸರಳಗೊಳಿಸಿದ್ದು, ಸಂಸ್ಥೆಗಳು ಹೊಂದಿರಬೇಕಾದ ಅಭಿವೃದ್ಢಿಪಡಿಸಿದ ಭೂಮಿಯ ಅಗತ್ಯವನ್ನು ಕಡಿತಗೊಳಿಸಿದೆ.
ಈ ಮೊದಲು ಮುಕ್ತ ವಿವಿಗಳ ಸ್ಥಾಪನೆಗೆ ೪೦-೬೦ ಎಕರೆ ಭೂಮಿಯನ್ನು ಹೊಂದಿರುವುದು ಕಡ್ಡಾಯವಾಗಿತ್ತು. ಆದರೆ ಈಗ ಆ ಮಿತಿಯನ್ನು ೫ ಎಕರೆಗೆ ಇಳಿಸಲಾಗಿದೆ. ಹೆಚ್ಚು ವಿದ್ಯಾರ್ಥಿಗಳಿಗೆ ವ್ಯಾಸಂಗ ಅವಕಾಶ ದೊರೆಯುವಂತಾಗಲು ಇನ್ನಷ್ಟು ವಿಶ್ವವಿದ್ಯಾನಿಲಯಗಳು ಈ ಕ್ಷೇತ್ರದಲ್ಲಿ ಸಕ್ರಿಯಗೊಳಿಸಲು ಸರ್ಕಾರ ಮುಂದಾಗಿದೆ. ಉದ್ದೇಶವೇನೋ ಸೂಕ್ತವಾಗಿದೆ. ಶಿಕ್ಷಣದ ಪರಿಧಿಯಲ್ಲಿ ಹೆಚ್ಚೆಚ್ಚು ಜನರು ಬರಬೇಕು ಮತ್ತು ದೈನಂದಿನ ತರಗತಿಗೆ ಹಾಜರಾಗಲು ಸಾಧ್ಯವಾಗದ ಉದ್ಯೋಗಿಗಳಿಗೆ ಮತ್ತು ಅನಿವಾರ್ಯ ಕಾರಣಗಳಿಂದ ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿದ ಯುವಸಮೂಹಕ್ಕೆ ಮುಕ್ತ ವಿಶ್ವವಿದ್ಯಾನಿಲಯಗಳ ಮೂಲಕ ಕಲಿಕೆಯ ದ್ವಾರ ತೆರೆದುಕೊಳ್ಳಲಿದೆ.
ಪ್ರಮುಖವಾದ ಕಳವಳ ಎಂದರೆ ಇಂಥ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಪಡೆದ ಪದವಿ, ಸ್ನಾತಕೋತ್ತರ ಪದವಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಯಾವುದೇ ಬೆಲೆ ಇಲ್ಲದಿರುವುದು. ಸರ್ಕಾರಿ ನೇಮಕಾತಿಗಳ ಸಂದರ್ಭದಲ್ಲೂ ಮುಕ್ತ ವಿವಿಗಳ ಪದವಿಯನ್ನು ಪರಿಗಣಿಸುವುದಿಲ್ಲ. ಖಾಸಗಿ ವಲಯವೂ ಇದರಿಂದ ಹೊರತೇನಲ್ಲ. ಹೀಗಿರುವಾಗ ಅಭ್ಯರ್ಥಿಗಳು ಸಾವಿರಾರು ರೂಪಾಯಿ ಖರ್ಚು ಮಾಡಿ, ಸಮಯ ಹಾಕಿ ಪದವಿಯನ್ನೋ, ಸ್ನಾತಕೋತ್ತರ ಶಿಕ್ಷಣವನ್ನೋ ಪಡೆಯುವುದರಲ್ಲಿ ಯಾವ ಅರ್ಥವಿದೆ? ಹಾಗಾಗಿಯೇ, ಶಿಕ್ಷಣ ಪಡೆಯಬೇಕೆಂಬ ಇಚ್ಛೆ ಇದ್ದರೂ ಬಹಳಷ್ಟು ವಿದ್ಯಾರ್ಥಿಗಳು ಮುಕ್ತ ವಿವಿಯಿಂದ ದೂರ ಉಳಿಯುತ್ತಿದ್ದಾರೆ. ಮತ್ತೊಂದು ಸಮಸ್ಯೆ ಭ್ರಷ್ಟಾಚಾರ. ಅವ್ಯವಸ್ಥೆ, ಅಸಮರ್ಪಕ ಆಡಳಿತದ್ದು. ಶೈಕ್ಷಣಿಕ ಚಟುವಟಿಕೆಯ ಸಣ್ಣ ಕೆಲಸವಾಗಬೇಕಾದರೂ ವಿದ್ಯಾರ್ಥಿಗಳು ಆಡಳಿತ ಕಚೇರಿಗೆ ಹತ್ತಾರು ಬಾರಿ ಎಡತಾಕಬೇಕು. ಅಷ್ಟೇ ಅಲ್ಲ, ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕು. ಕರ್ನಾಟಕ ಮೈಸೂರು ಮುಕ್ತ ವಿಶ್ವವಿದ್ಯಾಲಯ ಈ ಹಿಂದೆ ಎಷ್ಟೊಂದು ವಿವಾದಗಳಿಗೆ ಸಿಲುಕಿತು. ಎಷ್ಟೊಂದು ಅಪಸವ್ಯಗಳು ಅಲ್ಲಿ ಜರುಗಿದವು ಎಂಬುದು ಗೊತ್ತಿರುವಂಥದ್ದೇ. ಹೀಗಿರುವಾಗ ಯಾವ ಪುರುಷಾರ್ಥಕ್ಕೆ ಹೊಸ ಮುಕ್ತ ವಿವಿಗಳನ್ನು ಸ್ಥಾಪಿಸಬೇಕು. ದೇಶದಲ್ಲಿ ಈಗಾಗಲೇ ಇರುವ ಇಂಥ ವಿವಿಗಳ ಅಮೂಲಾಗ್ರ ಅಭಿವೃದ್ಧಿಗೆ, ಆಡಳಿತದ ಶುಧ್ಧೀಕರಣಕ್ಕೆ ಸರ್ಕಾರ ಗಮನ ನೀಡಬೇಕು. ಹೊಸ ಮುಕ್ತ ವಿಶ್ವವಿದ್ಯಾನಿಲಯಗಲ ಬಗೆಗಿನ ನಿಯಮ ಸರಳಗೊಳಿಸುವುದಲ್ಲದೆ, ಅಲ್ಲಿ ಅವ್ಯವಹಾರ, ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ಶೈಕ್ಷಣಿಕ ವಾತಾವರಣ ಅರಳಿಸುವಂಥ, ಕಲಿಕೆಗೆ ಹೆಚ್ಚು ಜನ ತೊಡಗಿಸುವಂಥ ಪೂರಕ ಪ್ರಯತ್ನಗಳು ಹೆಚ್ಚೆಚ್ಚು ನಡೆಯಬೇಕು. ಅಂದಾಗಲೇ, ಇಂಥ ಹೊಸತನಗಳಿಗೆ ನಿಜವಾದ ಸಾರ್ಥಕತೆ ಬಂದೀತು.
(ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೩-೦೫-೨೦೨೨)