ಹಳ್ಳಿಗೆ ನೀರು ತಂದ ಮಹಿಳೆಯರು
ಬೆಂಗಳೂರಿನವರು ಪುಣ್ಯವಂತರು! ಮಂಗಳೂರಿನವರೂ ಪುಣ್ಯವಂತರು! ಯಾಕೆಂದರೆ ಮನೆಯ ನಳ್ಳಿ ತಿರುಗಿಸಿದರೆ ನೀರು ಬರುತ್ತದೆ, ಅಲ್ಲವೇ? ಬೆಂಗಳೂರಿನ ಮನೆಮನೆಗಳಿಗೆ ನೀರು ತರಲಿಕ್ಕಾಗಿ ಕಾವೇರಿಯಿಂದ ಕುಡಿಯುವ ನೀರು ಸರಬರಾಜು ಮಹಾಯೋಜನೆಯ ವಿವಿಧ ಹಂತಗಳಿಗಾಗಿ ಸರಕಾರವು ರೂಪಾಯಿ ೧,೦೦೦ ಕೋಟಿಗಳಿಗಿಂತ ಜಾಸ್ತಿ ವೆಚ್ಚ ಮಾಡಿದೆ.
ಆದರೆ ನಮ್ಮ ದೇಶದ ಸಾವಿರಾರು ಹಳ್ಳಿಗಳ ಲಕ್ಷಗಟ್ಟಲೆ ಮನೆಗಳಿಗೆ ಇಂದಿಗೂ ಕುಡಿಯುವ ನೀರು ಒದಗಿಸುವ ವ್ಯವಸ್ಥೆಯಿಲ್ಲ. ಅಂತಹ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಿಕ್ಕಾಗಿ ಕೆಲವು ಕೋಟಿ ರೂಪಾಯಿಗಳನ್ನು ಸರಕಾರ ಬಜೆಟಿನಲ್ಲಿ ಒದಗಿಸಿದರೆ ಅದುವೇ ವಿಶೇಷ. ಅಂತಹ ಒಂದು ಹಳ್ಳಿಯ ಮಹಿಳೆ ಕಮಲಾ ಹೆಂಟಾಲಾ. ಗುಡ್ಡದ ತೊರೆಯಿಂದ ಮನೆಗೆ ನೀರು ತರಲಿಕ್ಕಾಗಿ ಪ್ರತಿ ದಿನ ೨ ಕಿಲೋಮೀಟರ್ ದೂರ ಕಲ್ಲುಮುಳ್ಳಿನ ಹಾದಿ ನಡೆಯುವಾಗ ಅವಳಿಗೆ ಒಂದೇ ಯೋಚನೆ, ’ಇದಕ್ಕೇನು ಪರಿಹಾರ?’
ಕಮಲಾಳ ಹಳ್ಳಿ ಮಹುಪದರ್ ಒರಿಸ್ಸಾದ ಮೈಕನ್ಗಿರಿ ಜಿಲ್ಲೆಯಲ್ಲಿದೆ. ಯೋಜನಾ ಆಯೋಗದ ಪ್ರಕಾರ ಭಾರತದ ಹತ್ತು ಅತ್ಯಂತ ಬಡ ಜಿಲ್ಲೆಗಳಲ್ಲಿ ಅದೊಂದು. ಅವಳ ಹಳ್ಳಿ ತಲಪಬೇಕಾದರೆ ತಾರ್ಕೋಟೆ ಗ್ರಾಮ ಪಂಚಾಯತಿನಿಂದ ೧೨ ಕಿಮೀ ನಡೆದು ಹೋಗಬೇಕು.
ಒರಿಸ್ಸಾದ ಮುಚ್ಚುಕೊಂಡ ನೀರಾವರಿ ಯೋಜನೆಗಾಗಿ ಹಲವಾರು ಕುಟುಂಬಗಳನ್ನು ಅವರ ಪೂರ್ವಿಕರ ಜಮೀನಿನಿಂದ ಒಕ್ಕಲೆಬ್ಬಿಸಲಾಯಿತು. ಅವರೆಲ್ಲರ ಜಮೀನು ಜಲಾಶಯದ ನೀರಿನಲ್ಲಿ ಮುಳುಗಡೆಯಾಯಿತು. ಮೈಕನ್ಗಿರಿ ಜಿಲ್ಲೆಯೊಂದರಲ್ಲೇ ೮೦೦ ಕುಟುಂಬಗಳು ಹೀಗೆ ನಿರ್ವಸಿತವಾದವು.
ಕಮಲಾ ಮತ್ತು ಇತರ ಮಹಿಳೆಯರು ಕಾಡಿನ ಹಾದಿಯಲ್ಲಿ ನೀರು ತರಲಿಕ್ಕಾಗಿ ನಡೆದೇ ಹೋಗಬೇಕು. ಕಾಡು ಪ್ರಾಣಿಗಳಿಂದ ಅವರನ್ನು ಕಾಪಾಡಲಿಕ್ಕಾಗಿ ಬಿಲ್ಲುಬಾಣ ಹಿಡಿದ ಗಂಡಸರು ಅವರೊಂದಿಗೇ ನಡೆಯುತ್ತಿದ್ದರು. ನೀರಿಗಾಗಿ ಅವರು ಕೆಲವು ತಿಂಗಳು ಹೀಗೇ ಪಡುಪಾಟಲು ಪಟ್ಟರು. ಅನಂತರ ಕಮಲಾ ಹಳ್ಳಿಯ ಮಹಿಳೆಯರ ಸಭೆ ಕರೆದಳು. "ಇದಕ್ಕೇನು ಪರಿಹಾರ?" ಎಂಬುದೇ ಚರ್ಚೆಯ ವಿಷಯ. ಅಂತಿಮವಾಗಿ ಅವರೆಲ್ಲ ನಿರ್ಧರಿಸಿದರು: ಬಿದಿರು ಗಳಗಳನ್ನು ಜೋಡಿಸಿ ತೊರೆಯಿಂದ ಹಳ್ಳಿಗೆ ನೀರು ಹಾಯಿಸಬೇಕೆಂದು.
ಮಹುಪದರ್ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಸುಮಾರು ೧೦೦ ಮಹಿಳೆಯರು ಕೆಲಸ ಮಾಡಿ ಬಿದಿರು ಗಳಗಳನ್ನು ಒಂದಕ್ಕೊಂದು ಜೋಡಿಸಿದರು. ದೂರದ ತೊರೆಯಿಂದ ಬಿದಿರು ಕೊಳವೆ ಸಾಲಿನಲ್ಲಿ ತಮ್ಮ ಹಳ್ಳಿಗೆ ನೀರು ಹರಿದು ಬಂದಾಗ ಅವರ ಮುಖಗಳಲ್ಲಿ ಗೆಲುವಿನ ನಗು.
ಮುಂದಿನ ಬೇಸಗೆಯಲ್ಲಿ ಅವರಿಗೊಂದು ಸಮಸ್ಯೆ ಎದುರಾಯಿತು. ತೊರೆಯಲ್ಲಿ ಸಾಕಷ್ತು ನೀರಿದ್ದರೂ ಬಿದಿರು ಕೊಳವೆ ಸಾಲಿನಲ್ಲಿ ಹಳ್ಳಿಗೆ ಹರಿದು ಬರುವ ನೀರು ದಿನನಿತ್ಯದ ಬಳಕೆಗೆ ಸಾಕಾಗುತ್ತಿರಲಿಲ್ಲ. ಆ ಮಹಿಳೆಯರು ಈ ಸಮಸ್ಯೆಗೂ ಪರಿಹಾರ ಕಂಡುಕೊಂಡರು.
ಒಣ ಮರಗಳ ಕಾಂಡಗಳನ್ನು ಸಂಗ್ರಹಿಸಿ, ಉದ್ದಕ್ಕೆ ಎರಡು ಭಾಗಗಳಾಗಿ ಸೀಳಿದರು. ಅವುಗಳ ತಿರುಳನ್ನು ಕೆತ್ತಿ ತೆಗೆದು, ಅರ್ಧ ವರ್ತುಲಾಕಾರದ ಪೈಪ್ಗಳಾಗಿ ಜೋಡಿಸಿ ಕಾಲುವೆ ರಚಿಸಿ, ತೊರೆಯಿಂದ ಹಳ್ಳಿಗೆ ನೀರು ಹಾಯಿಸಿದರು. ಮಾತ್ರವಲ್ಲ, ಹಳ್ಳಿಯಲ್ಲಿ ಹೊಂಡಗಳನ್ನು ತೋಡಿ ನೀರು ಸಂಗ್ರಹಿಸಿದರು. ಜೊತೆಗೆ, ನೀರಿನ ಸಂಗ್ರಹ ತೊಟ್ಟಿಗಳಿಂದ ತಮ್ಮ ಮನೆಗಳಿಗೆ ನೀರು ಹಾಯಿಸಲು ಬಿದಿರಿನ ಪೈಪ್ಲೈನ್ ಜೋಡಿಸಿದರು.
ಮಹುಪದರ್ ಹಳ್ಳಿಯ ಪ್ರಧಾನ ಬಲರಾಂ ಹೆಂಟಾಲಾ ಹೇಳುತ್ತಾರೆ, "ನಮ್ಮ ಸಹಾಯವೇ ಇಲ್ಲದೆ ಈ ಮಹಿಳೆಯರು ಭಾರೀ ಸಾಧನೆ ಮಾಡಿದ್ದಾರೆ." ಮಹಿಳೆಯರ ಸಾಹಸದಿಂದಾಗಿ ಹಳ್ಳಿಗರಿಗೆ ಕುಡಿಯುವ ನೀರು ಸಿಗುತ್ತಿದೆ ಹಾಗೂ ಭತ್ತ, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳನ್ನು ಬೆಳೆಯಲು ಸಾಧ್ಯವಾಗಿದೆ.
ಇದೀಗ ಆ ಹಳ್ಳಿಯ ಮಹಿಳೆಯರು ಸ್ವಸಹಾಯ ಸಂಘ ಕಟ್ಟಿದ್ದಾರೆ. ತಮ್ಮ ಹಳ್ಳಿಯ ನೀರು ಸರಬರಾಜು ಯೋಜನೆ ಸುಧಾರಿಸಲಿಕ್ಕಾಗಿ ಪ್ರತಿ ದಿನವೂ ಸ್ವಲ್ಪ ಅಕ್ಕಿ ಮತ್ತು ಹಣ ಉಳಿತಾಯ ಮಾಡುತ್ತಿದ್ದಾರೆ.
ಮಹುಪದರ್ ಹಳ್ಳಿಯ ಮಹಿಳೆಯರಿಗೆ ಕನಸುಗಳಿವೆ. ಬಂಗಲೆ ಕಟ್ಟುವ ಅಥವಾ ದುಬಾರಿ ಕಾರು ಕೊಳ್ಳುವ ಕನಸುಗಳಲ್ಲ. ತಮ್ಮ ಹಳ್ಳಿಗೊಂದು ಶಾಲೆ ಮತ್ತು ಆರೋಗ್ಯ ಕೇಂದ್ರ ಬೇಕೆಂಬ ಕನಸು. ಮನೆಮನೆಗೂ ಕುಡಿಯುವ ನೀರು ಒದಗಿಸಲು ಸರಿಯಾದ ವ್ಯವಸ್ಥೆ ಮಾಡಬೇಕೆಂಬುದು ಅವರ ಅತಿ ದೊಡ್ಡ ಕನಸು. ಅವರ ಎಲ್ಲ ಕನಸುಗಳೂ ನನಸಾಗಲಿ.