ಹಳ್ಳಿಮಕ್ಕಳ ಸಸ್ಯಜ್ಞಾನ - ಅಮೂಲ್ಯ ಪಾರಂಪರಿಕ ನಿಧಿ




ಹಳ್ಳಿಮಕ್ಕಳಿಗೇನು ಗೊತ್ತು? ಎಂದು ತಿಳಿಯಲು “ಜೀವವೈವಿಧ್ಯ ಗುರುತಿಸುವ ಸ್ಪರ್ಧೆ” ನಡೆಸಿದ ತಮಿಳ್ನಾಡಿನ ವಿವೇಕಾನಂದನ್ ಅವರಿಗೆ ದೊಡ್ಡ ಅಚ್ಚರಿ ಕಾದಿತ್ತು.
ಆ ಸ್ಪರ್ಧೆಯಲ್ಲಿ (1992) ಮೊದಲ ಸ್ಥಾನ ಪಡೆದ ಕೊಲುಂಚಿಪಟ್ಟಿಯ ಭೂಮಿನಾಲನ್ 116 ವಿವಿಧ ಸಸ್ಯಗಳನ್ನೂ ಅವುಗಳ ಉಪಯೊಗಗಳನ್ನೂ ಪಟ್ಟಿ ಮಾಡಿದ್ದ. ಆ ಪ್ರದೇಶದ ಹಿರಿಯರಿಗೆ ತಿಳಿದಿದ್ದ ವಿವಿಧ ಸಸ್ಯಗಳ ಸಂಖ್ಯೆ 246. ಅಂದರೆ 11 ವರುಷ ವಯಸ್ಸಿನಲ್ಲಿಯೇ ಈ ಬಾಲಕ ಸಸ್ಯಗಳ ಬಗ್ಗೆ ತನ್ನ ಸಮುದಾಯದ ಒಟ್ಟು ಜ್ಞಾನದ ಅರ್ಧ ಪಾಲನ್ನು ತನ್ನದಾಗಿಸಿಕೊಂಡಿದ್ದ!
ಇಂತಹ ಜೀವವೈವಿಧ್ಯ ಗುರುತಿಸುವ ಸ್ಪರ್ಧೆಗಳನ್ನು ಅಹ್ಮದಾಬಾದಿನ "ಸೃಷ್ಟಿ" ಸಂಸ್ಥೆ 1992ರಿಂದೀಚೆಗೆ ನಡೆಸಿಕೊಂಡು ಬಂದಿದೆ. ಅದರಿಂದಾಗಿ ಹಳ್ಳಿಮಕ್ಕಳ ಅಗಾಧ ಪಾರಂಪರಿಕ ಜ್ಞಾನ ದಾಖಲಾಗಿದೆ.
ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಪ್ರತಾಪ್‌ಗರ್ ಗ್ರಾಮದ ಗಿರಿರಾಜ್ ಕಿಶೋರ್ ಮಿನಾ ಅವನದು ಪ್ರಚಂಡ ಸಾಧನೆ. ಶೋಧಯಾತ್ರೆಯ ಸಂದರ್ಭದಲ್ಲಿ ಅವನ ಹಳ್ಳಿಯಲ್ಲಿಯೂ ಈ ಸ್ಪರ್ಧೆ ಜರಗಿತು. ಅವನು 70 ಸಸ್ಯಗಳನ್ನು ತಂದಿದ್ದ. ಅವುಗಳ ಹೆಸರು ಹಾಗೂ ಬಳಕೆಗಳನ್ನು ಸಲೀಸಾಗಿ ತಿಳಿಸಿದ. ಇಷ್ಟು ಕಡಿಮೆ ಸಸ್ಯಗಳನ್ನು ತಂದಿದ್ದೀಯಲ್ಲಾ! ಇನ್ನಷ್ಟು ತರಬೇಕಿತ್ತು ಎಂದಾಗ ಅವನ ಉತ್ತರ, “ಬಹಳ ಕಡಿಮೆ ಸಮಯ ಕೊಟ್ಟಿದ್ದೀರಿ. ಇನ್ನೆರಡು ದಿನ ಸಮಯ ಕೊಡಿ. ನಾನು 500ಕ್ಕಿಂತ ಜಾಸ್ತಿ ಸಸ್ಯಗಳನ್ನು ತರಬಲ್ಲೆ.” ಸ್ಪರ್ಧೆಯ ಸಂಘಟಕರು ಈ ಎಳೆಯನ ಮಾತು ನಂಬಲಿಲ್ಲ. ಎರಡು ದಿನಗಳ ನಂತರ, ತನ್ನ ಸಸ್ಯಸಂಗ್ರಹದ ಗಂಟು ಹೊತ್ತುಕೊಂಡು, ಸೈಕಲ್ ತುಳಿಯುತ್ತಾ ಗಿರಿರಾಜ್ ಬಂದೇ ಬಿಟ್ಟ. ಸಂಘಟಕರು ಆಶ್ಚರ್ಯದಿಂದ ಬಾಯಿ ಬಿಡಬೇಕಾಯಿತು. ಯಾಕೆಂದರೆ, ಅವನು 501 ಸಸ್ಯಗಳನ್ನು ಬಿಡಿಸಿಟ್ಟು, ಅವನ್ನೆಲ್ಲ ಗುರುತಿಸಿದ!
ಕಿಂಚಿತ್ ಪ್ರೋತ್ಸಾಹವೇ ಹಳ್ಳಿಮಕ್ಕಳ ಜ್ಞಾನಖಜಾನೆ ತೆರೆಯಬಲ್ಲ ಕೀಲಿಕೈ. “ಸೃಷ್ಟಿ"ಯ ಶೋಧಯಾತ್ರೆಗಳು ಇದನ್ನು ಮತ್ತೆಮತ್ತೆ ತೋರಿಸಿಕೊಟ್ಟಿವೆ. ಮೊದಲ ಶೋಧಯಾತ್ರೆ ನಡೆದದ್ದು ಗಿರ್ ಅಲ್ಲಿಂದ ಗಿಡದ್‌ಗೆ. ಆಗ ಜೀವವೈವಿಧ್ಯ ಗುರುತಿಸುವ ಸ್ಪರ್ಧೆ ಏರ್ಪಡಿಸಿದ್ದು ಖಿಜಾದಿಯಾ ಜಂಕ್ಷನಿನಲ್ಲಿ. ತುಂಡಿಯಾಕ್ಕೆ ಸಾಗಿದ ಎರಡನೆಯ ಶೋಧಯಾತ್ರೆಯಲ್ಲಿ ಸ್ಪರ್ಧೆಯ ಸ್ಥಳ ಸಂಬಲ್‌ಪಾನಿ. ಅನಂತರ ಐದು ಶೋಧಯಾತ್ರೆಗಳಲ್ಲಿ ಜೀವವೈವಿಧ್ಯ ಗುರುತಿಸುವ ಸ್ಪರ್ಧೆ ಜರಗಿಸಲಾಯಿತು.
ಬನಸ್‌ಕಾಂತ ಜಿಲ್ಲೆಯಲ್ಲಿ ಒಂಭತ್ತು ಸಲ ಈ ಸ್ಪರ್ಧೆ ನಡೆಸಲಾಯಿತು. ಇವುಗಳಲ್ಲಿ ಗೆದ್ದವರು 12 ಬಾಲಕಿಯರು ಮತ್ತು 15 ಬಾಲಕರು. ಅವರು ಗುರುತಿಸಿದ ಸಸ್ಯಗಳ ಸರಾಸರಿ ಸಂಖ್ಯೆ 377. ಬಾಲಕರಲ್ಲಿ ತಾಕೊರ್ ಭರತ್ ಕುಮಾರನ 559 ಅಂಕ ಅತ್ಯಧಿಕ. ಬಾಲಕಿಯರಲ್ಲಿ ಆ ಗೌರವ ಗಳಿಸಿದ್ದು ಮಾನಸ ರೇಷ್ಮಬೆನ್ ನಾನಾಭಾಯಿ. ಅವಳ ಅಂಕ 411. ರಾಪರ್ ಜಿಲ್ಲೆಯಲ್ಲಿ ಸಂಘಟಿಸಲಾದ ಅಂತಹ ಸ್ಪರ್ಧೆಗಳ ಸಂಖ್ಯೆ 11. ಅವುಗಳಲ್ಲಿ ವಿಜೇತರಾದವರು 29 ಬಾಲಕರು ಮತ್ತು 4 ಬಾಲಕಿಯರು. ಅವರು ಗುರುತಿಸಿದ ಸಸ್ಯಗಳ ಸರಾಸರಿ ಸಂಖ್ಯೆ 307. ಮೊದಲ ಸ್ಥಾನ ಗಳಿಸಿದವರು ಹಿನಾಲ್ ವಡಿಲಾಲ್ ಮೆಹ್ತಾ ಮತ್ತು ಶಿಲ್ಪಾ ರಾಂನಿಭಾಯಿ ವೆರಾಟ್.
ಜೀವವೈವಿಧ್ಯ ಗುರುತಿಸುವ ಸ್ಪರ್ಧೆ ನಡೆಸುವುದು ಹೇಗೆ? ಬಹಳ ಸುಲಭ. ಕೆಲವೇ ಜನರು ಆಸಕ್ತಿ ವಹಿಸಿದರೂ ಸಾಕು. ಒಂದು ಕರಪತ್ರ ಮುದ್ರಿಸಿ, ನಿಮ್ಮ ಹಳ್ಳಿಯ ಅಥವಾ ನಿಮ್ಮ ಊರಿನ ಶಾಲೆಗಳಲ್ಲಿ ಹಂಚಿ. ಸ್ಪರ್ಧೆಯ ದಿನಾಂಕ, ಸ್ಥಳ, ಉದ್ದೇಶ, ನಿಯಮಗಳು ಮತ್ತು ವಿಜೇತರಿಗೆ ನೀಡಲಾಗುವ ಬಹುಮಾನಗಳನ್ನು ಕರಪತ್ರದಲ್ಲಿ ಪ್ರಕಟಿಸಿ. ಸ್ಪರ್ಧೆಯ ದಿನ ಶಾಲಾಮಕ್ಕಳು ತಾವು ಸಂಗ್ರಹಿಸಿದ ಸಸ್ಯಗಳ ಎಲೆ ಇತ್ಯಾದಿ ಭಾಗಗಳೊಂದಿಗೆ ನಿಗದಿತ ಸ್ಥಳಕ್ಕೆ ಬರಬೇಕು. ಮಕ್ಕಳು ತಂದ ಸಸ್ಯಭಾಗಗಳ ಬಗ್ಗೆ ಅವರನ್ನು ಪ್ರಶ್ನಿಸಿ ವಿವರಗಳನ್ನು ದಾಖಲಿಸುವುದು ಅಗತ್ಯ. ತೀರ್ಪುಗಾರರ ತಂಡದ ಸದಸ್ಯರು ಯಾರ್ಯಾರು? ಹಳ್ಳಿಯ ಒಬ್ಬ ಹಿರಿಯ, ಒಬ್ಬ ಸ್ಥಳೀಯ ಸಸ್ಯಪರಿಣತ ಮತ್ತು ಒಬ್ಬ ಸ್ವಯಂಸೇವಕ.
ಅತ್ಯಧಿಕ ಸಸ್ಯಗಳ ಹೆಸರು, ಉಪಯೋಗಗಳು, ಅವು ಬೆಳೆಯುವ ಸ್ಥಳ - ಇವನ್ನು ಪಟ್ಟಿ ಮಾಡಿದ ಬಾಲಕ ಮತ್ತು ಬಾಲಕಿ ಸ್ಪರ್ಧೆಯ ವಿಜೇತರು. ಇದೇ ಸಂದರ್ಭದಲ್ಲಿ, ವಯಸ್ಕರಿಗಾಗಿ ಪ್ರತ್ಯೇಕ ಜೀವವೈವಿಧ್ಯ ಗುರುತಿಸುವ ಸ್ಪರ್ಧೆ ನಡೆಸಬಹುದು. ಇದರಿಂದ ಆ ಸಮುದಾಯದಲ್ಲಿ ಹಿರಿಯರ ಜ್ನಾನ ಎಷ್ಟರ ಮಟ್ಟಿಗೆ ಕಿರಿಯರಿಗೆ ವರ್ಗಾಯಿಸಲ್ಪಟ್ಟಿದೆ ಎಂದು ಅಂದಾಜು ಮಾಡಲು ಸಾಧ್ಯ. ಜೊತೆಗೆ ಈ ಸ್ಪರ್ಧೆಗಳನ್ನೂ ಜರಗಿಸಬಹುದು: ಸ್ಥಳದಲ್ಲೇ ಚಿತ್ರ ಬಿಡಿಸುವುದು, ಗಾದೆ ಹೇಳುವುದು, ಒಗಟು ಬಿಡಿಸುವುದು, ಜಾನಪದ ಹಾಡು ಹಾಡುವುದು, ಗ್ರಾಮೀಣ ಆಟಗಳು.
ಹಳ್ಳಿಮಕ್ಕಳ ಜ್ನಾನಭಂಡಾರ ಅಗಾಧ ಎಂಬುದನ್ನು ಈ ವರೆಗಿನ ಜೀವವೈವಿಧ್ಯ ಗುರುತಿಸುವ ಸ್ಪರ್ಧೆಗಳು ಸಾಬೀತು ಪಡಿಸಿವೆ. ಹಳ್ಳಿಮಕ್ಕಳಲ್ಲಿ ವಿವಿಧ ಪ್ರತಿಭೆಗಳು ಸುಪ್ತವಾಗಿರುವುದನ್ನೂ ಇವು ತೋರಿಸಿಕೊಟ್ಟಿವೆ. ಶಾಲಾಪಾಠಗಳಲ್ಲಿ ಅಧಿಕ ಅಂಕ ಗಳಿಸದ ಮಕ್ಕಳಲ್ಲಿಯೂ ಅಮೂಲ್ಯ ಪಾರಂಪರಿಕ ಜ್ನಾನ ಇರುವುದು ನಿಜ. ಆದರೆ ಇವರಿಗೆ ನಮ್ಮ ಶಾಲೆಗಳಲ್ಲಿ "ದಡ್ಡರು" ಎಂಬ ಹಣೆಪಟ್ಟಿ. ಯಾಕೆಂದರೆ ಅವರಿಗೆ “ಎ ಫಾರ್ ಆಪಲ್, ಬಿ ಫಾರ್ ಬಾಯ್” ಎಂದು ಹೇಳಲು ತಿಳಿಯದು. ಪ್ರತಿಭೆ ಅಳೆಯಲು ಎಲ್ಲರಿಗೂ ಒಂದೇ ಅಳತೆಗೋಲಿನ ಬಳಕೆ - ಇದು ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯ ದುರಂತ.
ತಮ್ಮ ಪ್ರತಿಭೆಯನ್ನು ಗುರುತಿಸದ ಮತ್ತು ಅದನ್ನು ಬಳಸದ ಯಾಂತ್ರಿಕ ಶಿಕ್ಷಣ ವ್ಯವಸ್ಥೆಯ ಹೊರೆಯಿಂದಾಗಿ ಇಂತಹ ಹಳ್ಳಿಮಕ್ಕಳು ನಲುಗುತ್ತಾರೆ. ಅವರ ಪಾರಂಪರಿಕ ಜ್ನಾನ ಹಾಗೂ ಪ್ರತಿಭೆಗೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬೆಲೆಯೇ ಇಲ್ಲ. ಇಂಥವರು ಅರಣ್ಯರಕ್ಷಕ ಹುದ್ದೆಗಳಿಗೆ ನೇಮಿಸಲ್ಪಟ್ಟರೆ ಎಷ್ಟು ಚೆನ್ನ! ಒಂದೆಡೆ ನಮ್ಮ ಅರಣ್ಯರಕ್ಷಕರು ಸಸ್ಯಗಳ ಬಗ್ಗೆ ಜ್ಞಾನ ಗಳಿಸಲು ಪರದಾಡುತ್ತಿರುತ್ತಾರೆ; ಇನ್ನೊಂದೆಡೆ ತಮ್ಮ ಬಾಲ್ಯದಲ್ಲಿ ಆ ಜ್ಞಾನ ಅರಗಿಸಿಕೊಂಡ ಹಳ್ಳಿಮಕ್ಕಳು ಕ್ರಮೇಣ ಅದನ್ನು ಮರೆತು ಬಿಡಲು ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣವಾಗುತ್ತಿದೆ.
ಇನ್ನಾದರೂ ನಮ್ಮ ಹಳ್ಳಿಗಳಲ್ಲಿ ಸ್ಥಳೀಯ ಸಂಸ್ಥೆಗಳು ಜೀವವೈವಿಧ್ಯ ಗುರುತಿಸುವ ಸ್ಪರ್ಧೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಿದರೆ, ನಮ್ಮ ಪಾರಂಪರಿಕ ಜ್ಞಾನ ಉಳಿದೀತು. ಮಾತ್ರವಲ್ಲ, ನಮ್ಮ ಹಳ್ಳಿಮಕ್ಕಳಿಗೆ ತಮ್ಮ ನೆಲದ ಬಗ್ಗೆ ಪ್ರೀತಿ ಹಾಗೂ ಅಭಿಮಾನ ಬೆಳೆದೀತು, ಅಲ್ಲವೇ?
ಔಷಧೀಯ ಸಸ್ಯಗಳ ಫೋಟೋಗಳು (ಲೇಖಕರ ಸಂಗ್ರಹದಿಂದ):
ಫೋಟೋ ೧: ಕೇಪಳೆ
ಫೋಟೋ ೨: ದೊಡ್ಡಪತ್ರೆ
ಫೋಟೋ ೩: ಎಕ್ಕ
ಫೋಟೋ ೪: ಆಡುಸೋಗೆ