ಹಳ್ಳಿಯ ಕಥೆ

ಹಳ್ಳಿಯ ಕಥೆ

ಕವನ

ಹಸಿರಿನ ಗಿಡಮರ ಪರಿಸರದಿಂದಲಿ

ಸುಂದರ ಎನಿಸುವ ಈ ತಾಣ

ಹರಿಯುವ ಶುದ್ಧದ ನದಿಯಿದೆ ಸನಿಹದೆ

ಹಳ್ಳಿಯ ಚೆಲುವಿನನಾವರಣ

 

ಹೆಂಚಿನ ಮಾಡಿನ ಕಟ್ಟಡವಿಲ್ಲಿದೆ

ವಾರಸುದಾರರು ಇಲ್ಲಿಲ್ಲ

ಕುಸಿಯಲು ತೊಡಗಿದ ಗೋಡೆಯು ಸಾರಿದೆ

ಇಂದಿನ ಮಂದಿಗೆ ಬೇಕಿಲ್ಲ

 

ಭದ್ರತೆಗಾಗಿಯೆ ಮಾಡಿದ ಬಾಗಿಲು

ಬಳಸಿದೆ ಮರಗಳ ಹಲಗೆಗಳು

ಮುಚ್ಚಿದೆ ಕದವನು ಜಡಿದಿದೆ ಬೀಗವ

ಕರಗಿವೆ ಹಿರಿಯರ ಸ್ವಪ್ನಗಳು

 

ಹಿಂದಿನ ಕಾಲದಿ ಅಂಗಡಿಯಿಲ್ಲಿಯೆ

ನಡೆಯುತಲಿದ್ದಿತು ವ್ಯಾಪಾರ

ಊರಿನ ಜನರಿಗೆ ಸಾಧನಕೊಳ್ಳಲು

ಮಾಡುತಲಿದ್ದರು ವ್ಯವಹಾರ

 

ಈಗಿನ ದುಸ್ಥಿತಿ ಹಳ್ಳಿಯಲೆಲ್ಲೆಡೆ

ಓದಿದ ಯುವಕರು ನಗರದಲಿ

ಪೇಟೆಗೆ ಒಗ್ಗಿದ ಮಂದಿಯು ಮರಳರು

ಸಕಲವು ಕಾಲನ ಉದರದಲಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್