ಹಳ್ಳಿಯ ವಿಚಾರ

ಹಳ್ಳಿಯ ವಿಚಾರ

ಊರ ದಾರಿ ಬರೀ ಕಪ್ಪು ವಾಸನೆ ಹಬ್ಬಿ

ಹೊಳೆಯುತ್ತಿದೆ; ಬಿಸಿಲ ಝಳ ನೆಲ ತಬ್ಬಿ

ಬರುವ ಮಂತ್ರಿಯ ಕಾರು ಕುಲುಕದಿರಲಿ

ಬಂದು ಹೋದಾಗ ದಾರಿ ಉಳಿಯದಿರಲಿ ||೦೧||

 

ಗಬ್ಬೆದ್ದು ನಾರುತ್ತಿರುವ ಮೋರಿಗೂ ಮುಕ್ತಿ

ತೋರುತ ಅಭಿಮಾನಿಗಳು ಒಗ್ಗಟ್ಟಿನಾ ಶಕ್ತಿ;

ಜನಕೆ ಹಡಗು ನೀಡಿರೆಂದು ಕೇಳಿದರಾಯ್ತು,

ಮಳೆಗಾಲಕ್ಕೆ ದಾರಿಯೂ ಹೊಳೆಯಾಯ್ತು ||೦೨||

 

ಓಲೈಸಲು ಇಲ್ಲಸಲ್ಲದಾ ಬೀಜದ ಮೊಳಕೆ

ಚಿಗುರಿ ತಿಳಿದಿದೆ ಮಾವಲ್ಲ ಬೇವು ಯಾಕೆ?

ಪ್ರಗತಿಯ ಪಥಕ್ಕೆ ಸಾಣೆ ಹಿಡಿವ ಬಯಕೆ

ತಿರುಗೋ ರಾಟೆವೂ ಜಡವಿಟ್ಟಿದೆ ಮನಕೆ ||೦೩||

 

ಛಾವಣಿ ಸೂರು ಸೋರುತ ಹಾಡಿದೆ ರಾಗ

ಜೋಗುಳ ಸದ್ದಿಗೆ ಬಿದ್ದಿರುವ ಆಲಸಿ ಮಗ 

ರವಿಯ ಮುಖ ಸ್ಪಷ್ಟದಲಿ ಕಾಣುವ ಜಾಗ

ನಕ್ಷತ್ರ ಎಣಿಸಲೂ ಸರಳ ಒಳಗೆ ಮಲಗೀಗ ||೦೪||

 

ಹಳ್ಳಿಯ ಸೊಬಗು ಸವಿಯಲು ಅಂದವಿದೆ;

ಕೊರತೆಯ ನೀಗಿಸುವ ಛಲವಿರೆ ಸುಖವಿದೆ

ದೂರದ ಬೆಟ್ಟವೂ ಕಾಣಿಸುವುದು ಸುಂದರ;

ಹತ್ತುವ ವ್ಯಕ್ತಿಗೆ ಕೇಳಬೇಕು ಅದರ ವಿಚಾರ||೦೫||

-ದ್ಯಾವಪ್ಪ ಮಾದರ, ಕಾರವಾರ

ಚಿತ್ರ ಕೃಪೆ: ಇಂಟರ್ನೆಟ್ ತಾಣ