ಹಳ್ಳಿ ಜನ, ದಿಲ್ಲಿ ಮನ

ಹಳ್ಳಿ ಜನ, ದಿಲ್ಲಿ ಮನ

    ಹಳ್ಳೆಂಬೋ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಕೊನೆಗೊಳ್ಳೋ ಕತ್ತರಿ ರಸ್ತೆಗಳಲ್ಲಿ ವಕ್ಕರಿಸಿರುವ  ಮಹಾತ್ಮರ, ಹುತಾತ್ಮರ ನಾಮಧೇಯ ಹೊತ್ತ ಇಂಗ್ಲೀಷ್ ಮಯ ನಾಮಫಲಕಗಳು ಹಳ್ಳಿಗರ ಗುಂಪುಗಾರಿಕೆಯನ್ನೋ, ಒಗ್ಗಟ್ಟನ್ನೋ, ರಾಜಕೀಯಕ್ಕಾಗಿ ತುಡಿಯುವ  ಒಳಮನಸನ್ನೋ ಬಿಂಬಿಸುವಂತೆ ತೋರುತ್ತಿವೆ. ಇಷ್ಟಕ್ಕೇ ಸಾಲದೆಂಬಂತೆ ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿಯಂದೋ, ಊರದೇವರ ಉತ್ಸವಗಳಂದೋ  ಒಗ್ಗಟ್ಟಿನ ಭರಾಟೆಯಲ್ಲಿ  ಊರಿಂದ ಕೊನೆಗೊಳ್ಳುವ ರಸ್ತೆಗಳ ಇಕ್ಕೆಲಗಳಲ್ಲಿ ಹಗ್ಗ ಹಿಡಿದು ನಿಂತು ಬರುಹೋಗುವವರಿಂದ  ಪ್ರೀತಿಯಿಂದಲೋ, ಉಪಟಳದಿಂದಲೋ ಚಂದಾ ವಸೂಲುಮಾಡಿ ಧಾಂ ಧೂಮಿಸಿ ಸಡಗರದ ಉತ್ಸವ ಅಚರಿಸಿ ಬಾಡೂಟದೊಂದಿಗೆ ಸಂಭ್ರಮ ಮುಕ್ತಾಯಗೊಂಡು ಮತ್ತೆ ಮುಂದಿನ ಚುನಾವಣೆಯ ಚಿತಾವಣೆಯ ಗದ್ದಲಕ್ಕೋ, ಉತ್ಸವಕ್ಕೋ ಸದ್ದಿಲ್ಲದೆ ಕಾಯ್ದು ಕುಳಿತುಕೊಳ್ಳುತ್ತದೆ ಯುವಕರ ಒಂದು ಬಣ.
     ಇತ್ತೀಚಿನ ದಿನಗಳಲ್ಲಿ ರಾಜಕೀಯದ ಸುಳಿಗಾಳಿ ಹಳ್ಳಿಯಕಡೆಗೂ ಬೀಸಿ ಜನ ತಮ್ಮ ಮೂಲಕಸುಬನ್ನೇ ಸ್ವಲ್ಪಮಟ್ಟಿಗೆ ಮರೆತಿದ್ದಾರೆ. ಸರಕಾರ ಜನರಿಗೆ ಪುಕ್ಕಟೆಯಾಗಿ ಕೊಡುತ್ತಿರುವ "ಭಾಗ್ಯ"ಗಳು, ಮಾಶಾಸನಗಳು ಸಾಲದೆಂಬಂತೆ ಕೆಲಸ ಮಾಡಿದರೇನು ಬಿಟ್ಟರೇನು " ಸಿಕ್ಸ್ಟಿ-ಫಾರ್ಟಿ"ಯ ಪಾರ್ಟಿ ಲೆಕ್ಕದಲ್ಲಿ ಸಿಗುವ ಹಣವೂ ಇದಕ್ಕೆ ಕಾರಣ. ಹೇಗಿತ್ತು ಹೇಗಾತು ಹಳ್ಳಿಯ ಚಿತ್ರಣ ಎನ್ನುವುದರೊಳಗೆ ದಿಲ್ಲಿ, ಹಳ್ಳಿಯ ಹೋಟೆಲ್ ಗಳ ಚಾ ಕಪ್ಪಿನ ಸಿಪ್ ನೊಂದಿಗೆ ಬೆರೆತು ಹೋಗಿರುತ್ತದೆ. ಏಕೆಂದರೆ ಹಳ್ಳಿಯ ಹೋಟೆಲ್ಗಳು ಪ್ರಪಂಚದ ಸುದ್ಧಿಯನ್ನು ಹಂಚುವ ಬೈಠಕ್ ಗಳಾಗಿವೆ. ಬೆಳಗಾಗಿ ಯಾವುದೋ ಓಣಿಯ ಮನೆಯೊಂದರಲ್ಲಿ ಜನಿಸಿದ ಗಂಡೋ, ಹಣ್ಣೋ ಕೂಸಿನ ಸಡಗರದ ಸುದ್ಧಿಯೊಂದಿಗೆ ಪ್ರಾರಂಭವಾಗಿ; ದಿಲ್ಲಿಯ ಲೋಕಸಭೆಯಲ್ಲಿ ವಿರೋಧಪಕ್ಷದ ನಡೆಯಿಂದ ಸರಕಾರ ಬಿದ್ದುಹೋಗುವತನಕ, ರಾಜ್ಯದ ರಾಜಕಾರಣಿಗಳ ವಿಷಯಲಂಪಟತನ ಕಚ್ಚೆಹರುಕ ಸುದ್ಧಿಯವರೆಗೂ ನಿಲ್ಲದ ಬಿ.ಬಿ.ಸಿ. ನ್ಯೂಸ್ ಚಾನಲ್ ನ ಸುದ್ಧಿಯಂತೆ ಎಗ್ಗಿಲ್ಲದೆ ಸಾಗುತ್ತದೆ. ಕೇಳುಗರಿಗೆ ಒಂದಕ್ಕೊಂದು ಸೇರಿಸಿ ಭ್ರಾಮಕ ಲೋಕದ ಚಿತ್ರಣವನ್ನೇ ಕಟ್ಟಿಕೊಡುವ ಬಾತ್ಮೀದಾರರ ದಂಡೇ ಅಲ್ಲಿರುತ್ತದೆ.
    ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಬೇಸಾಯ, ಉತ್ತುಬಿತ್ತುವ ವಿಚಾರ, ಬೆಳೆದರ, ಲಾಭ-ಲುಕ್ಷಾನು, ಮಳೆ-ಬೆಳೆ, ಬರ ನಡುನಡುವೆ ಟಿ.ವಿ.ಯಲ್ಲಿನ ಜಾಹಿರಾತಿನಂತೆ ನಾಷ್ಟಾ, ಚಾ, ಕಾಫಿಗಳ ವಿಚಾರಣೆ ಸರಬರಾಜು, ಸ್ವಲ್ಪ ಮಾತಿಗೆ ಬಿಡುವುಕೊಟ್ಟು ಮತ್ತೆ ಹೊಸಬರ ಆಗಮನದಿಂದ ಇದೀಗ ಬಂದ ಸುದ್ಧಿ ಎಂಬಂತೆ ಮತ್ತೆ ಸುದ್ಧಿಗಳ ಪ್ರಸಾರ ಸುರುವಾಗುತ್ತದೆ. ಊರ ಪಂಚಾಯತಿಯ ಡಂಗೂರ ಸಾರಿದ ವಿಚಾರ, ಪಂಚಾಯತಿಯಲ್ಲಿ ಆಶ್ರಯ ಮನೆಗಳ ಹಂಚಿಕೆ ವಿಚಾರ, ನರೇಗಾದ ಅಡಿಯಲ್ಲಿ ಉದ್ಯೋಗ ಮಾಡದೆಯೇ ಕೂಲಿ ಕೊಡು-ತಗೊಳ್ಳೋ ವಿಚಾರ, ಪಂಚಾಯತಿ ಸದಸ್ಯರು ಅಷ್ಟು ರೊಕ್ಕಾ ಗುಳುಂ ಮಾಡಿದ, ಇಷ್ಟು ರೊಕ್ಕಾ ಗುಳುಂ ಮಾಡಿದ ಅನ್ನೋ ಸುದ್ಧಿ ಶೂರತನದ ಭರಾಟೆಯಲ್ಲಿ, ಚುನಾವಣೆ ಸಮಯದಲ್ಲಿ ತಾವು ಅವರಿಂದ ಪಡೆದ ಹಣ, ಸಾರಾಯಿ, ಬಾಡೂಟದ ವಿಚಾರವನ್ನೇ ಮರೆತುಬಿಡುತ್ತಾರೆ.
    ಹದಿವಯದ ಸಿನಿಮಾ ಸ್ಟಾರ್ ಗಳ ಅಭಿಮಾನಿ ಬಳಗವೋ, ಸ್ಟಾರ್ ಕ್ರಿಕೆಟಿಗರ ಅಭಿಮಾನಿಗಳೋ ಹಳ್ಳಿ ಮುಂದಿನ ಕಟ್ಟೆ ಹಿಡಿದು ಪಟ್ಟಾಂಗ ಹೊಡೆಯುತ್ತಿದ್ದರೆ, ಊರ ಹಿರೀಕರು ಅವರನ್ನು ಗದರಿಸಿಯೋ, ಅವರೇ ಜಾಗ ಖಾಲಿಮಾಡುವವರೆಗೆ ಕಾಯ್ದೋ ಅಲ್ಲಿ ತಳವೂರುತ್ತಾರೆ. ಪರ ವಿರೋಧ ಪಕ್ಷಗಳ ಚುನಾವಣೆಯ ಉಮೇದುವಾರಿಕೆಯಿಂದ ಮೊದಲ್ಗೊಂಡು, ಐದುವರ್ಷಗಳ ಅಧಿಕಾರಾವಧಿಯಲ್ಲಿ ನಡೆದ ನಡೆಯಬಹುದಾದ ರಾಜ್ಯ-ರಾಷ್ಟ್ರಗಳ ರಾಜಕಾರಣದ ವಿಷಯವಾಗಿ ತಾವೇ ವಾರಸುದಾರಿಕೆಯ ಜವಾಬ್ದಾರಿ ಹೊತ್ತವರಂತೆ ಮಾತುಗಳಲ್ಲಿ ತೊಡಗುತ್ತಾರೆ. ಮಾತುಗಳಲ್ಲೇ ಸರಕಾರ ಕಟ್ಟಿ ಉರುಳಿಸಿ ಪರ-ವಿರೋಧ ಪಕ್ಷದವರಾಗಿ ಅವರಿಗಿಲ್ಲದ ಉಸಾಬರಿಯನ್ನು ತಮ್ಮ ಮೈಮೇಲೆಳೆದುಕೊಂಡು ಮಾತಿನ ಕಾವೇರಿಸಿ ಟವಲ್ ಜಾಡಿಸಿ ಮನೆಯ ದಾರಿ ಹಿಡಿಯುವವರೆಗೂ ಇನ್ನಿಲ್ಲದ ರಾಜಕೀಯದ ಗುಲ್ಲೋ ಗುಲ್ಲು.
    ಇದೇ ಹಳ್ಳಿಯ ಮತ್ತೊಂದು ಗುಂಪೂ ಉಂಟು. ಹಳ್ಳಿಗೆ ಬರ ಬಿದ್ದಾಗ, ಕೆಲಸ ಸಿಗದಾದಾಗ, ದೂರದ ಕಾಫಿ ಸೀಮೆಗೋ, ಗೋವಾ, ಮಂಗಳೂರು, ಮುಂಬೈಗೋ ದುಡಿಯಲೆಂದು ಹೋಗಿ ಸದ್ದಿಲ್ಲದೇ ನಗರದ ಶೋಕಿಗೆ ಮಾರುಹೋಗಿ ದೇವದಾಸರೋ, ಸುರಾದಾಸರೋ ಅಗಿಯೇ ಹಿಂದಿರುಗುತ್ತಾರೆ. ನಗರದ ಚೋಟುದ್ದದ ಪ್ಯಾಂಟ್ ಕಾಲೇರಿದರೆ ಅಕ್ರಾಳ-ವಿಕ್ರಾಳ ಹೇರ್ಕಟ್ ಮುಡಿಗೇರಿ ಶೋಕಿವಾಲತನದಲ್ಲಿ ಬೀಗುತ್ತಾರೆ. ಸಂಜೆಯ ಮಬ್ಬುಗತ್ತಲು ಅವರಿಸುತ್ತಲೇ ಮೆಲ್ಲಗೆ ಗಡಂಗಿನ ಗೂಡು ಸೇರಿದರೆ ಮುಗಿಯಿತು, ಕತ್ತಲು ಗಂವ್ ಎನ್ನುವವರೆಗೆ ಸಾರಾಯಿಯ ಕಮಟು ವಾಸನೆಯೊಂದಿಗೆ ತೊದಲು ವಚನಾಮೃತದ ಜೋಲಿನಡಿಗೆಯೊಂದಿಗೋ ಜೊತೆಗಾರರ ಯಾ ಪರಿಚಿತ ಜನರ ತೋಳ್ತೆಕ್ಕೆಯಲ್ಲಿ ಮನೆಮುಟ್ಟಿದರೊಳಿತು. ಇಲ್ಲದಿದ್ದರೆ ಗಟಾರದ ತಟಾಕದಲ್ಲೋ, ಮೋರಿಯ ಆಳದಲ್ಲೋ ಆಳ ನೋಡಲು ಇಳಿದ ಭೂಪರಂತೆ ಬರು ಹೋಗುವವರಿಗೆ ಪೋಸು ಕೊಡುತ್ತ ನಾಯಿ ನೆಕ್ಕದಿದ್ದರೆ ಮಾನ ಉಳಿಯಿತು ಎಂಬಂತೆ, ನಶೆ ಇಳಿಯುವವರೆಗೆ ಕಾಯ್ದು ಮನೆದಾರಿಹಿಡಿದು ಚಳಿ-ಉರಿ ಲೆಕ್ಕಿಸದೇ ಹೆಂಡತಿ/ಮನೆಯವರ ಬೈಗುಳದ ಮಂಗಳಾರತಿಯೊಂದಿಗೆ ಎರಡೆರಡು ಕೊಡ ನೀರಿನ ಅಭಿಷೇಕ ಮಾಡಿಸಿಕೊಂಡು ಕಾಲೆಳಿಸಿಕೊಂಡೋ, ಕತ್ತುಹಿಡಿದು ದಬ್ಬಿಸಿಕೊಂಡೋ ಗೊಣಗುತ್ತ ಹಾಸಿಗೆಗೆ ಬೀಳುತ್ತಾರೆ.
    ಎತ್ತಿನ ಬಂಡಿಯಲ್ಲೇ ನಾಲ್ಕಾರು ಊರುಸುತ್ತಿ ಜಗತ್ತನ್ನೇ ಸುತ್ತಿದ ಗಣಪತಿಯ ಭ್ರಮೆಯಲ್ಲಿ ಬೀಗುತ್ತಿದ್ದ ಹಳ್ಳಿಗಳಿಗೆ ಕೆಂಬಣ್ಣದ ಬಸ್ಸುಗಳು ಭರ್ರ್ಗುಡುತ್ತಾ ಹೊಗೆಕಕ್ಕಿ ಹಳ್ಳಿಮನಸು ಕಕ್ಕಾಬಿಕ್ಕಿಯಾಗಿದೆ. ಹಳ್ಳ, ತಿಟ್ಟು, ಕಣಿವೆಗಳಾಗಿದ್ದ ಹಳ್ಳಿ ಹಾದಿಗಳೀಗ ಟಾರು ಕಂಡು ಹಳ್ಳಿ ಜನರ ಮಾತಲ್ಲಿ ರಂಭಾರೋಡುಗಳಾಗಿವೆ. ಮುಗಿಲಲ್ಲಿ ಎತ್ತರಕ್ಕೆ ಹಾರುತ್ತಿದ್ದ ಹದ್ದನ್ನು ಮಾತ್ರ ನೋಡಿದ ಜನ ಹಾರುವ ವಿಮಾನ ಕಂಡು, ಮುಂದೊಂದುದಿನ ತಾವೂ ಅದರಲ್ಲಿ ಪಯಣಿಸುವ ಸೋಜಿಗದ ಕನಸು ಕಾಣುತ್ತಾರೆ. ಪರಿಸರದ ಮಕ್ಕಳಾಗಿ, ಕುಲಗೋತ್ರ ಲೆಕ್ಕಿಸದೇ ಇನ್ನಿಲ್ಲದ ಬಂಧುತ್ವದಲ್ಲಿ ಬಂಧಿಯಾಗಿ ಬೀಗುತ್ತಿದ್ದ ಹಳ್ಳಿಯ ಬಿಗುಮಾನತೆ ಹೊಸ ತಲೆಮಾರಿನಿಂದ, ಜಾತಿ ರಾಜಕಾರಣದ ಅನುಕರಣೆ, ನಗರ ಯಾ ವಿದೇಶಿ ಸಂಸ್ಕೃತಿಯ ಅನುಕರಣೆಗೆ ಸಿಲುಕಿದ್ದನ್ನು ನೋಡಿ ಹಿರಿಜೀವಗಳು ಮನದಲ್ಲೇ ಕೊರಗುತ್ತವೆ. ಹಳ್ಳಿಗನೊಬ್ಬ ವಿಲಾಯಿತಿಗೆ ಓದುವುದಕ್ಕೋ, ಉದ್ಯೋಗಕ್ಕೋ ಹೋದರೆ ಅದೇ ದೊಡ್ಡ ಪುಣ್ಯವೋ ಭಾಗ್ಯವೋ ಎಂದು ಬೆರಗುಗೊಳ್ಳುತ್ತಿದ್ದ ಹಳ್ಳಿಗರಿಗೀಗ ಅದು ಸಾಮಾನ್ಯವಾಗಿದೆ. ಏನಿಲ್ಲವೆಂದರೂ ಪ್ರತಿ ಹಳ್ಳಿಗೂ ಒಬ್ಬೊಬ್ಬ ಇಂಜಿನಿಯರ್, ಕೃಷಿ, ವೈದ್ಯಕೀಯ ಪದವೀಧರರು ಕೆಲಸ ಪಡೆದು ದೂರದ ವಿದೇಶದಲ್ಲೋ, ಹತ್ತಿರತ್ತಿರದ ಬೆಂಗಳೂರು, ಮುಂಬೈ,, ಚನ್ನೈನಲ್ಲೋ ಕೆಲಸಕ್ಕಿದ್ದು ಊರ ಸಡಗರದ ಉತ್ಸವ, ಜಾತ್ರೆ, ಹಬ್ಬಗಳಿಗೆ ಬಂದುಹೋಗುವ ಸಂಬಂಧವಿಟ್ಟುಕೊಳ್ಳುವವರೆಗೆ ಹಳ್ಳಿ ಸಂಬಂಧ ಮುಂದುವರಿದಿದೆ. ಅಷ್ಟಲ್ಲದೆ ಎಷ್ಟೋ ಪದವಿಗಳು ಹಳ್ಳಿಯ ಮನೆಗಳಲ್ಲಿ ಕೆಲಸ ಸಿಗದೇ ಕಾಲ್ಮುರಿದುಕೊಂಡು ಬಿದ್ದಿವೆ. ಕಲಿಯುವ ಹೈಕಳ ಪದವಿ ಪಿ.ಹೆಚ್.ಡಿ.ಗಳು ಮುದಿವಯದ ಬೊಚ್ಚು ಬಾಯಲ್ಲೀಗ "ಪಚಡಿ" ಗಳಾಗಿ ಕೂತಿವೆ. ಅಂದಿನ ಮುಲ್ಕಿ ಪರೀಕ್ಷೆಯ ಮನಸುಗಳಿಗೆ ಇಂದಿನ ಡಾಕ್ಟರೇಟ್ ಪದವಿಗಳು ಸರಿಬಾರವು. ಬೋಧಿಸಿ ಹಳ್ಳಿಯ ಸಂಸ್ಕೃತಿಯ ತೊಟ್ಟಿಲನ್ನು ಕಟ್ಟುತ್ತಿದ್ದ ಅಂದಿನ "ಮಾಸ್ತರ" ರ ಸಂಸ್ಕೃತಿಗೆ ಒಗ್ಗಿದ ಮನಸುಗಳಿಗೆ ಗಂಟೆ ಹೊಡೆದು ಪಗಾರ ಎಣಿಸುತ್ತ ಕಾಲಿಗೆ ಗಾಲಿಕಟ್ಟಿಕೊಂಡು ಓಡಾಡುವ ಇಂದಿನ "ಸರ್" ಸಂಸ್ಕೃತಿ ಸರಿಬಾರದು.
    ಹಾಡು, ಹಸೆ, ಹಂದರ, ಲಾವಣಿ, ಗೀಗೀಪದ, ಹಂತಿಪದ, ಕುಟ್ಟು-ಬೀಸುವ ಪದ, ಸೋಬಾನೆ, ಸವಾಲ್-ಜವಾಬು, ಅಲಾಯಿಗಳ ಸಂಪದ್ಭರಿತ ಬೀಡಾಗಿದ್ದಹಳ್ಳಿಗಳೀಗ ಟಿ.ವಿ.ಗಳೆಂಬ ಭ್ರಾಮಕ ಲೋಕದ ಸುಳಿಗೆ ಸಿಲುಕಿ ತನ್ನತನ ಕಳೆದುಕೊಂಡಿದೆ. ಇನ್ನು ಉಡುಪೋ, ಸುಂದರ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದ ಗಂಡಸರ ಪಂಚೆ, ಅಂಗಿಗಳ ಜಾಗದಲ್ಲೀಗ ತರಹೇವಾರಿ ಚಿಂದಿ-ಚಿತ್ತಾರದ ಬಗ್ಗಿದರೆ ಕುಂಡಿ ಕಾಣಿಸುವ ಪ್ಯಾಂಟ್, ದೇಹವನ್ನೇ ಮುಚ್ಚದ ಅಂಗಿ; ಭೂಷಣವಾಗಿ ಕಾಣುವ ರುಮಾಲಿನ ಜಾಗದಲ್ಲೀಗ ಬಗೆ ಬಗೆಯ ವಿದೇಶಿ ಟೋಪಿಗಳು ತಲೆ ಏರಿ ಕೂತಿವೆ. ಇನ್ನು ತಲೆಗೂದಲೋ, ಮನೆಗೆ ಹಾಕಿದ ಮೇಲ್ಛಾವಣಿಯಂತೆಯೋ, ಯಾಣದ ಕಡಿದಾದ ಬೆಟ್ಟದಾಕಾರದಲ್ಲೋ, ಚಿತ್ರ ವಿಚಿತ್ರ ಚಿತ್ತಾರದ ಕಲೆಯ ಬಲೆಗಳಾಗಿವೆ. ಹೆಣ್ಣು ಮಕ್ಕಳ ಲಂಗ-ದಾವಣಿ, ಸೀರೆಗಳೀಗ ಚುಡಿ-ದಾರ್, ಷರ್ಟ್-ಪ್ಯಾಂಟ್, ಗಾಗರಾ, ಲೆಹಂಗಾಗಳಾಗಿ ಬದಲಾಗಿವೆ. ಬದಲಾದ ಪೋಷಾಕುಗಳಿಗೆ ವಯಸ್ಸು ಬದಲಾಗಬೇಕೆಂದೇನೂ ಇಲ್ಲ. ಹೇಗಿತ್ತು ನಮ್ಮಕಾಲ ಹೀಗೂ ಆಗುತ್ತದೆ ಎಂದೆಣಿಸಿರದ ಮನಗಳು ಕೆಲವೊಮ್ಮೆ ಮಿಡುಕುತ್ತವೆ. ಹಳ್ಳಿಯ ಜನರ ಸಂಸ್ಕೃತಿಯಲ್ಲಿ ದಿಲ್ಲಿಯ ಮನಸು ಸದ್ದಿಲ್ಲದೆ ಹಾಸುಹೊಕ್ಕಾಗಿ ಇಂದು ಹಳ್ಳಿಯ ಚಿತ್ರಣವೇ ಬದಲಾಗಿದೆ. ಅಷ್ಟಲ್ಲದೇ ಹಳ್ಳಿಯ ಹಿರೀಕರ ನ್ಯಾಯ ಪಂಚಾಯ್ತಿ ಕಟ್ಟೆಗಳಲ್ಲೇ ಮುಗಿಯುತ್ತಿದ್ದ ಜಗಳಗಳು ನಂಬಿಕೆಯನ್ನೇ ಕಳೆದುಕೊಂಡು ನ್ಯಾಯಾಲಯದ ಮೆಟ್ಟಿಲೇರುತ್ತಿವೆ. ಒಂದೇ ಕುಟುಂಬದ ಸದಸ್ಯರೇನೋ ಎಂಬಂತೆ ವೈಮನಸು ತೋರದೇ ಗುಟ್ಟಾಗಿದ್ದ ಮನಸುಗಳು ಒಬ್ಬರ ಕೈಯಲ್ಲಿ ಮತ್ತೊಬ್ಬರ ಜುಟ್ಟುಹಿಡಿದು ಜಟಾಪಟಿಗಿಳಿದಿವೆ.
      * ವೀರೇಶ.ಅ.ಲಕ್ಷಾಣಿ,ಬೆಟಗೇರಿ,ಕೊಪ್ಪಳ.