ಹಳ್ಳಿ ಮರಗಳಲ್ಲಿ ಬೆಳ್ಳಿ ಬಂಗಾರ
ಡಾ. ಸತ್ಯನಾರಾಯಣ ಭಟ್ ಅವರು ಬರೆದ 'ಹಳ್ಳಿ ಮರಗಳಲ್ಲಿ ಬೆಳ್ಳಿ ಬಂಗಾರ' ಎಂಬ ಸಸ್ಯಲೋಕದ ವೈದ್ಯಕೀಯ ಗುಣಲಕ್ಷಣಗಳುಳ್ಳ ಮರ ಗಿಡಗಳ ಸಚಿತ್ರ ಪರಿಚಯವನ್ನು ನೀಡುವ ಕೃತಿ. ಪುಸ್ತಕದ ಬಗ್ಗೆ ಪ್ರಾಥಮಿಕ ವಿವರಗಳನ್ನು ನೀಡಬಹುದಾದ ಯಾವುದೇ ಮುನ್ನುಡಿ, ಬೆನ್ನುಡಿಗಳು ಈ ಪುಸ್ತಕದಲ್ಲಿಲ್ಲ. ಲೇಖಕರ ಪರಿಚಯವೂ ಇಲ್ಲವಾದುದರಿಂದ ಈ ಪುಸ್ತಕದ ಹಿಂದಿನ ಕಥೆಗಳು ತಿಳಿದುಬರುತ್ತಿಲ್ಲ. ಆದರೆ ಪುಸ್ತಕದಲ್ಲಿ ೫೦ ಬಗೆಯ ವಿವಿಧ ಉಪಕಾರಿ ಸಸ್ಯಗಳ ಪರಿಚಯವನ್ನು ಬಹಳ ಸೊಗಸಾಗಿ ನೀಡಿದ್ದಾರೆ.
ಅಗಸೆ, ಅಣಿಲೆ, ಅಶ್ವತ್ಥ, ಆಲ, ಕಕ್ಕಿ, ಕಂಪಿಲ್ಲಕ, ಕರಿಬೇವು, ಕಾಸರಕ, ಕೇದಿಗೆ, ಗಿರಿಕದಂಟ, ಗುಲಾಬಿ ಮರ, ಗೋರಕ್ಷ ಮರ, ಜಾರಿಗೆ, ತಾಪಸಿ, ತಾರೆ, ತೆಂಗು, ತೇಗ, ತೇಜಪತ್ರೆ, ನಾಗಸಂಪಿಗೆ, ನೀರಂಜಿ, ನುಗ್ಗೆ, ನೆಲ್ಲಿ, ನೇರಳೆ, ಪಗಡೆ, ಪಾರಿಜಾತ, ಪುತ್ರಂಜೀವಿ, ಪುನ್ನಾಗ, ಪೊಂಗಾರ, ಬನ್ನಿ, ಬಸರಿ, ಬಸವನ ಪಾದ, ಬಿಲ್ವ, ಬಿಳಿ ಮತ್ತಿ, ಬೂರುಗ, ಮದ್ದಾಲೆ, ಮರ ಬೆಂಡೆ, ಮಾವು, ಮುತ್ತುಗ, ಮುರುಗಲ, ಸುರಗಿ, ಸಿರಿಗಂಧ, ಹರಳು, ಹಲಸು, ಹೆಮ್ಮರ, ಹಂಗರಿಕೆ, ಹೊಂಗೆ, ಹೊಂಬಾಗೆ, ಹಿಪ್ಪೆ, ಹುಣಸೆ, ಲೋಧ್ರ ಹೀಗೆ ಐವತ್ತು ಬಗೆಯ ಉಪಯುಕ್ತ ಸಸ್ಯದ ಮಾಹಿತಿ ಇದೆ.
ನಾವೆಲ್ಲಾ ಹೆಸರೇ ಕೇಳಿರದ ಉಪಯುಕ್ತ ಆರೋಗ್ಯದಾಯಕ ಸಸ್ಯಗಳ ವಿವರ ಈ ಪುಸ್ತಕದಲ್ಲಿದೆ. ತಾರೆ ಮರದ ಬಗ್ಗೆ ತಿಳಿಸುತ್ತಾ ಅದರ ಪೌರಾಣಿಕ ಕಥೆಯನ್ನೂ ಹೇಳಿದ್ದಾರೆ. "ನಳನು ಜೂಜಿನಲ್ಲಿ ಎಲ್ಲಾ ಸೋಲುವನು, ದಮಯಂತಿ ಅನಾಥೆಯಾಗಿ ತಂದೆ ಮನೆ ಸೇರಿ ಮರು ಸ್ವಯಂವರಕ್ಕೆ ಏರ್ಪಾಡಾಗಿತ್ತು. ಅಕ್ಷ ಹೃದಯ (ಗಣಿತ) ಶಾಸ್ತ್ರಜ್ಞ, ಋತುಪರ್ಣ ಸ್ವಯಂವರಕ್ಕೆ ಹೊರಟಿದ್ದ. ಅಶ್ವ ಹೃದಯ (ಕುದುರೆ ಸಾಕುವ ವಿದ್ಯೆ) ಶಾಸ್ತ್ರಜ್ಞ ನಳನೇ ರಥಕ್ಕೆ ಸಾರಥಿ. ಶರವೇಗದಲ್ಲಿ ಕುದುರೆ ಓಡುತ್ತಿತ್ತು. ರಾಜ ಋತುಪರ್ಣನಿಗೆ ನಳಪಾಂಡಿತ್ಯ ತಿಳಿಯಿತು. ವಿದ್ಯೆ ವಿನಿಮಯ ಮಾಡಿಕೊಳ್ಳುವ ಒಡಂಬಡಿಕೆ ಆಯಿತು. ಪಕ್ಕದಲ್ಲಿ ತಾರೆ ಮರ. ರಾಜ ರೆಂಬೆ ತೋರಿಸಿ ಎಲೆ ಎಣಿಸಿದ. ಕವಲು ರೆಂಬೆ, ಒಟ್ಟು ರೆಂಬೆ, ಒಟ್ಟು ಮರದ ಎಲೆಗುಣಿತವಾಯಿತು. ನಳನಿಗೆ ವಿದ್ಯೆ ಫಲಿಸಿತು. ನಳನ ಕಲಿ ತೊಲಗಿತು. ಅಂದಿನಿಂದ ಆ ಕಲಿ ತಾರೆ ಮರ ಸೇರಿತಂತೆ ! ನಳನು ಸ್ವಯಂವರದಲ್ಲಿ ಮಡದಿಯನ್ನು ಮರು ವರಿಸಿ, ಜೂಜಿನಲ್ಲಿ ರಾಜ್ಯ ಮತ್ತೆ ಗೆದ್ದ." ಎಂಬ ಕಥೆ ಇದೆ. ಸುಮಾರು ೧೨೫ ಪುಟಗಳ ಈ ಪುಸ್ತಕ ಬಹಳ ಉಪಕಾರಿ.