ಹಳ್ಳಿ ಹಕ್ಕಿಯ ಹಾಡು

ಹಳ್ಳಿ ಹಕ್ಕಿಯ ಹಾಡು

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್ ವಿಶ್ವನಾಥ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೧೨೫.೦೦, ಮುದ್ರಣ: ೨೦೦೭

ಹಿರಿಯ ರಾಜಕಾರಣಿ, ಮಾಜಿ ಸಚಿವರಾದ ಎಚ್ ವಿಶ್ವನಾಥ್ ಅವರ ಆತ್ಮಕಥನವೇ ‘ಹಳ್ಳಿ ಹಕ್ಕಿಯ ಹಾಡು' ಎಂಬ ಕೃತಿ. ವಿಶ್ವನಾಥ್ ಇವರು ಈ ಕೃತಿಯಲ್ಲಿ ತಮ್ಮ ಬಾಲ್ಯದ ದಿನಗಳಿಂದ ಹಿಡಿದು, ಕಲಿತ ಶಾಲೆ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಗೆ, ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ರೀತಿ ಇತ್ಯಾದಿಗಳನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಎಚ್ ವಿಶ್ವನಾಥ್ ಅವರು ಉತ್ತಮ ಬರಹಗಾರರೂ ಹೌದು. ಪುಸ್ತಕದ ಬೆನ್ನುಡಿಯಲ್ಲಿ ಅವರೇ ಬರೆದುಕೊಂಡಂತೆ “ಯಾವುದೇ ವ್ಯಕ್ತಿ ಶಾಸಕನಾಗಿ ಮಂತ್ರಿಯಾಗಿರುವ ಅವಧಿ ಪ್ರಚಂಡ ವೇಗದ, ಹಗಲು ರಾತ್ರಿಗಳ ವ್ಯತ್ಯಾಸ ತಿಳಿಯದ ಕಾಲವಾಗಿರುತ್ತದೆ. ಆಗ ಅವನನ್ನು ನಿಯಂತ್ರಿಸುವ, ಸರಿದಾರಿಯಲ್ಲಿ ನಡೆಸುವ ಪ್ರೇರಣೆ, ಪ್ರಚೋದನೆಗಳು ಅಗತ್ಯವಾಗಿರುತ್ತವೆ. ಈ ನಿಟ್ಟಿನಲ್ಲಿ ಆತ್ಮಾವಲೋಕನ ಒಂದು ಉತ್ತಮ ತಂತ್ರವಾದರೂ ಅದನ್ನು ಎಲ್ಲರೂ ಅಳವಡಿಸಿಕೊಳ್ಳಲಾರರು.

ಅನೇಕ ಬಾರಿ ನಾವೆಲ್ಲಾ ನಾಯಕರು ಪ್ರಬುದ್ಧರಂತೆ ನಟಿಸುತ್ತಾ ‘ಆತ್ಮಾವಲೋಕನ' ಎಂಬ ಪದವನ್ನು ಮನಸೋ ಇಚ್ಛೆ ಉಪಯೋಗಿಸುತ್ತೇವೆ. ಅದರಲ್ಲೂ ಚುನಾವಣೆಯಲ್ಲಿ ಎಷ್ಟೆಲ್ಲಾ ವಾಮಮಾರ್ಗಗಳನ್ನು ಹಿಡಿದು ಸೋಲಾದಾಗ ಅದನ್ನು ಮುಚ್ಚಿ ಹಾಕಲು ಮಹಾನ್ ಚಿಂತಕರಂತೆ ಮುಖವಾಡ ಧರಿಸಿ, ಮಾಧ್ಯಮದವರ ಮುಂದೆ ಅವರ ಸಹಾನುಭೂತಿ ಬಯಸಿ, ಆಗ ತಾನೆ ಜ್ಞಾನೋದಯವಾದ ಬುದ್ಧನ ಸೋಗಿನಲ್ಲಿ ‘ಆತ್ಮಾವಲೋಕನಕ್ಕೆ ಇದು ಸಕಾಲ' ಎಂದು ಬುರುಡೆ ಬಿಡುತ್ತೇವೆ. ಅದಕ್ಕೆಂದೇ ಇಂದು ರಾಜಕಾರಣಿಯ ಆತ್ಮಾವಲೋಕನ ನಗೆಪಾಟಲಾಗಿದೆ.” ಎಂದಿದ್ದಾರೆ. 

ವಿಶ್ವನಾಥರು ತಮ್ಮ ನೇರ ನಡೆ ನುಡಿಗಳಿಂದ ಹಲವಾರು ವಿವಾದಗಳನ್ನು ಬೆನ್ನಿಗೇರಿಸಿಕೊಂಡವರು. ತಾವು ಹೊತ್ತುಕೊಂಡ ವಿವಾದಗಳನ್ನು ಬರೆಯಲೇ ಒಂದು ಅಧ್ಯಾಯವನ್ನು ಮೀಸಲಾಗಿಟ್ಟಿದ್ದಾರೆ. 'ವಿವಾದಗಳ ಸುಳಿಯಲ್ಲಿ' ಅಧ್ಯಾಯದಲ್ಲಿ ‘ಕನ್ನಡವೆಂಬ ಅಂಗಡಿ'ಯಲ್ಲಿ ಬರೆಯುತ್ತಾರೆ “ ಕನ್ನಡ ಮಂತ್ರಿಯಾಗಿದ್ದಾಗಿನ ಸಂದರ್ಭ. ರಾಮನಗರದ ಬಳಿಯ ‘ಜಾನಪದ ಲೋಕ'ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮೊಯಿಲಿಯವರೊಂದಿಗೆ ಭಾಗವಹಿಸಿದ್ದೆ. ಜಾನಪದಲೋಕದ ರೂವಾರಿ, ಜಾನಪದ ಬ್ರಹ್ಮರೆಂದೆನಿಸಿದ್ದ ಎಚ್ ಎಲ್ ನಾಗೇಗೌಡರು ಜಾನಪದ ಲೋಕದ ಅಭಿವೃದ್ಧಿಗಾಗಿ ಆರ್ಥಿಕ ಸಹಾಯ ಬೇಡಿ ಮನವಿ ಅರ್ಪಿಸಿದರು. ಅದೂ ಭಾರೀ ಮೊತ್ತದ ಬೇಡಿಕೆ. ಮನವಿಯನ್ನು ಪಡೆದು ಮಾತನಾಡಿದ ನಾನು ‘ಕನ್ನಡ ಸಂಸ್ಕೃತಿ ಇಲಾಖೆ' ಯ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಾದರೆ ಅದೊಂದು ಬೀಡಿ ಅಂಗಡಿ ಇದ್ದಹಾಗೆ ಅಲ್ಲಿ ಕೆಲವೊಮ್ಮೆ ನಾಟಿ ಬೀಡಿಯೂ ಸಿಗುವುದು ಕಷ್ಟ. ಅಂತಹುದರಲ್ಲಿ ನಾಗೇಗೌಡರು ಕಿಂಗ್ ಸೈಜ್ ಸಿಗರೇಟು ಕೇಳಿ ಬಿಟ್ಟರೆ ಹೇಗೆ?’ ಎಂದಾಗ ಮುಖ್ಯಮಂತ್ರಿ ಸಮೇತ ಎಲ್ಲರೂ ನಕ್ಕರು. ಮುಖ್ಯಮಂತ್ರಿಗಳೂ ನನ್ನ ಸರ್ಕಾರ ಕನ್ನಡಕ್ಕಾಗಿ ಬಹಳಷ್ಟು ಹಣ ಕೊಡುತ್ತೇನೆ ಅಂತ ಹೇಳುತ್ತಲೇ ಇದ್ದರೂ, ನಾಗೇಗೌಡರ ಮನವಿಯನ್ನು ಪುರಸ್ಕರಿಸಲಿಲ್ಲ.

ಇತ್ತ ಕಡೆ ನಾನು ಹೇಳಿದ ಬೀಡಿ ಅಂಗಡಿ, ನಾಟಿ ಬೀಡಿ, ಕಿಂಗ್ ಸೈಜ್ ಸಿಗರೇಟ್ ಬಗ್ಗೆ ಅನೇಕರು ವಿರೋಧ ವ್ಯಕ್ತ ಪಡಿಸಿದರು. ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಮುಖ್ಯಮಂತ್ರಿಗಳೂ ಕೋಪಗೊಂಡರು. ಕಡೆಗೆ ಅದೊಂದು ವಿವಾದವೇ ಆಯಿತು. ಅನೇಕ ಸ್ನೇಹಿತರು ಕನ್ನಡ ಇಲಾಖೆಯ ವಾಸ್ತವವಾದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಬಾರದಿತ್ತೆಂದರು. ನಾನೇನೂ ನನ್ನ ಭಾಷೆಯ, ಇಲಾಖೆಯ ಬಗೆಗೆ ಲಘುಧೋರಣೆ ಹೊಂದಿ ಈ ಮಾತನ್ನು ಆಡಿರಲಿಲ್ಲ. ಕನ್ನಡ ಇಲಾಖೆಯ ಆರ್ಥಿಕ ಪರಿಸ್ಥಿತಿಯನ್ನು ಕನ್ನಡಿಗರಿಗೆ ಅರ್ಥೈಸುವ ಉದ್ದೇಶವೇ ವಿನಹ ಬೇರೇನೂ ಆಗಿರಲಿಲ್ಲ. ಇಲ್ಲದ ದುಡ್ದನ್ನು ಹೇಗೆ ಕೊಡುವುದು? ಎಂಬುದನ್ನೇ ಉದಾಹರಣೆಯ ಮೂಲಕ ಹೇಳಿದ್ದೆ.” ಎಂದಿದ್ದಾರೆ.

ಅದೇ ಅಧ್ಯಾಯದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಐ ಎ ಎಸ್ ಪಾಸ್ ಮಾಡಿ ಕರ್ನಾಟಕಕ್ಕೆ ಉದ್ಯೋಗಕ್ಕೆ ಬಂದವರ ಕನ್ನಡ ಜ್ಞಾನದ ಬಗ್ಗೆ, ಅಜೀಜ್ ಸೇಟ್ ಅವರ ಕನ್ನಡ ಭಾಷಾ ಜ್ಞಾನದ ಬಗ್ಗೆ, ಮಠಾಧೀಶರ ಜೊತೆಗಿನ ಗುದ್ದಾಟದ ಬಗ್ಗೆ ವಿವರವಾಗಿ ಬರೆಯುತ್ತಾ ಹೋಗಿದ್ದಾರೆ. ಸುಮಾರು ೧೮೦ ಪುಟಗಳ ಈ ಕೃತಿಯನ್ನು ವಿಶ್ವನಾಥ್ ಇವರು ತಮ್ಮ ತಾಯ್ತಂದೆಯರಿಗೆ ಹಾಗೂ ಕೃಷ್ಣರಾಜನಗರ ತಾಲೂಕಿನ ಸಮಸ್ತ ಜನತೆಗೆ ಅರ್ಪಿಸಿದ್ದಾರೆ.