ಹಸಿದ ಕಲ್ಲು ಮತ್ತು ಇತರ ಕಥೆಗಳು

ಹಸಿದ ಕಲ್ಲು ಮತ್ತು ಇತರ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ರವೀಂದ್ರನಾಥ ಠಾಕೂರ್, ಕನ್ನಡಕ್ಕೆ: ಶ್ರೀನಿವಾಸ್ ವಿ.ಸುತ್ರಾವೆ
ಪ್ರಕಾಶಕರು
ಸಾಹಿತ್ಯ ಸಿಂಧು ಪ್ರಕಾಶನ, ನೃಪತುಂಗ ರಸ್ತೆ, ಬೆಂಗಳೂರು - ೫೬೦೦೦೧
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ : ೨೦೧೬

ನೋಬೆಲ್ ಪುರಸ್ಕಾರ ದೊರೆತ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದವರು ಖ್ಯಾತ ಕವಿ ರವೀಂದ್ರನಾಥ ಠಾಕೂರ್ ಅಥವಾ ಠಾಗೋರ್ ಇವರು. ಇವರ ‘ಗೀತಾಂಜಲಿ' ಕವನ ಸಂಕಲನಕ್ಕೆ ಈ ಪುರಸ್ಕಾರ ದೊರೆಯಿತು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಠಾಗೋರರು ಸುಮಾರು ಮೂರು ಸಾವಿರ ಕವನಗಳನ್ನು ಬರೆದಿದ್ದಾರೆ. ಇದರ ಜೊತೆಗೆ ೯೪ ಕಥೆಗಳನ್ನೂ ಬರೆದಿದ್ದಾರೆ. ಠಾಗೋರರು ನಾಟಕಗಳನ್ನೂ, ಕಾದಂಬರಿಗಳನ್ನೂ, ಸಣ್ಣ ಕಥೆಗಳನ್ನೂ ಬರೆಯುತ್ತಿದ್ದುದು ಬಹುತೇಕರಿಗೆ ತಿಳಿದಿಲ್ಲ. ಅವರ ೧೨ ಕಥೆಗಳು ಕನ್ನಡಕ್ಕೆ ಅನುವಾದಗೊಂಡು ‘ಹಸಿದ ಕಲ್ಲು ಮತ್ತು ಇತರ ಕಥೆಗಳು’ ಎಂಬ ಹೆಸರಿನ ಪುಸ್ತಕವಾಗಿ ಹೊರಬಂದಿದೆ. 

ಹೆಚ್.ವಿ.ನಯನತಾರಾಮಣಿಯವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳನ್ನೇ ಬೆನ್ನುಡಿಯಲ್ಲೂ ಬಳಸಿಕೊಂಡಿದ್ದಾರೆ. ಅವರು ಬರೆಯುತ್ತಾರೆ “ರವೀಂದ್ರರ ಕೃತಿಗಳು ವಿಶ್ವಕಾವ್ಯಕ್ಕೆ ಸೇರಿದ ಅಮೂಲ್ಯ ಕಾಣಿಕೆಗಳು. ಅವುಗಳಿಗೆ ಯಾವುದೇ ಕಾಲದ ಅಥವಾ ಪ್ರಾದೇಶಿಕ ನಿರ್ಬಂಧವಿಲ್ಲ. ಜೀವನವನ್ನು, ಮಾನವೀಯತೆಯನ್ನು ಚಿತ್ರಿಸುತ್ತಾ ಜೀವನದ ಬಗೆಗೆ ಚಿರಂತನವಾದ ದರ್ಶನವನ್ನು ಅವರ ಕಥೆಗಳು ಮಾಡಿಸುತ್ತವೆ. ಜೀವನದ ಚಿತ್ರದೊಂದಿಗೆ ಜೀವನದ ಮಹತ್ತರವಾದ ಅರ್ಥವನ್ನೂ ಬಿತ್ತರಿಸುತ್ತವೆ. ಹೃದಯ ಹಾಗೂ ಮನಸ್ಸುಗಳ ಅನಾವರಣ ಮಾಡುತ್ತದೆ. ಅವು ಮಾನವರ ಬದುಕನ್ನು ರೂಪಿಸುವ ಆಸೆ-ಆಕಾಂಕ್ಷೆ, ಕಷ್ಟ-ನಷ್ಟ, ಸುಖ-ದುಃಖ, ಸಂತೋಷ, ಕಾಯಿಲೆ, ಮರಣ, ದ್ವೇಷ, ಅಸೂಯೆ, ಪ್ರೀತಿ, ಸ್ನೇಹ, ಕಾತರ, ಆಶೋತ್ತರ, ಶಕ್ತಿ-ದೌರ್ಬಲ್ಯ, ಪೂರ್ವಾಗ್ರಹಗಳು, ವೈಷಮ್ಯಗಳು, ಸಂಕುಚಿತ ದೃಷ್ಟಿ, ಮಾನಸಿಕ ತುಮುಲಗಳು, ಗೊತ್ತುಗುರಿಗಳು, ಬಾಳಿನ ಹೃದಯಂಗಮತೆ ಮತ್ತು ವಿಕ್ಷಿಪ್ತತೆ ಮೊದಲಾದ ಮಾನವ ವ್ಯಾಪಾರಗಳ, ಮನೋರಾಗಗಳ ಸಂಗಮವಾಗಿವೆ.

ರವೀಂದ್ರರ ಕಥೆಗಳಲ್ಲಿ, ಶ್ರೀನಿವಾಸ್ ವಿ.ಸುತ್ರಾವೆ ಅವರ ‘ಹಸಿದ ಕಲ್ಲು ಮತ್ತು ಇತರ ಕಥೆಗಳು' ಸಹ ಇಂತಹ ಆಶಯಗಳಿಂದ ಹೊರತಾಗಿಲ್ಲ. ಲೇಖಕರು ಬಂಗಾಳಿ ಹೂರಣಕ್ಕೆ ಕನ್ನಡದ ಹೊದಿಕೆ ಹೊದಿಸಿ ಸವಿಯಾದ ಹೋಳಿಗೆಯನ್ನು ಓದುಗರಿಗೆ ಉಣಬಡಿಸಿದ್ದಾರೆ. ಮೂಲದ ಧ್ವನಿಯನ್ನು, ಭಾವಪರಿಸರವನ್ನು ಓದುಗರಿಗೆ ಸಂವಹನ ಮಾಡಿಸುವ ಪ್ರಯತ್ನ ಇಲ್ಲಿಯದು. ಬಿಡಿಮುತ್ತಿನಂತಿರುವ ಇಲ್ಲಿನ ಒಂದೊಂದು ಕಥೆಯೂ ಸ್ಪರ್ಶಮಣಿಯಂತಾಗಿ ಕನ್ನಡ ಓದುಗರ ಹೃದಯದ ಮೂಲ ಭಾವಗಳನ್ನು ಉದ್ದೀಪನಗೊಳಿಸುವಂತಾಗಲಿ.” 

೨೦೦೫ರಲ್ಲಿ ಇದೇ ಲೇಖಕರು ರವೀಂದ್ರರ ೧೨ ಕಥೆಗಳ ಸಂಗ್ರಹವನ್ನು ಅನುವಾದಿಸಿ ‘ದಾಲಿಯಾ ಮತ್ತು ಇತರ ಕಥೆಗಳು' ಹೆಸರಿನಲ್ಲಿ ಹೊರತಂದಿದ್ದರು. ಈಗ ಮತ್ತೆ ೧೨ ಕಥೆಗಳನ್ನು ಅನುವಾದಿಸಿದ್ದಾರೆ. ಅವರು ತಮ್ಮ ಮಾತುಗಳಲ್ಲಿ ರವೀಂದ್ರರ ಕಥೆಗಳನ್ನು ಅನುವಾದಿಸುವುದರ ಕಷ್ಟ-ಸುಖಗಳ ಬಗ್ಗೆ ಬರೆದಿದ್ದಾರೆ. “ಈ ನನ್ನ ಅನುವಾದ ಕಾರ್ಯವು ನನಗೆ ತುಂಬ ಸಂತೋಷ ಕೊಟ್ಟಿದೆ. ನಾನು ಠಾಕೂರರ ಕಥೆಗಳ ಅನುವಾದದಲ್ಲಿ ಅತ್ಯಂತ ದೀರ್ಘಕಾಲ ತೆಗೆದುಕೊಂಡಿದ್ದೆಂದರೆ ‘ಹಸಿದ ಕಲ್ಲು' ಕಥೆಗಾಗಿ. ಏಕೆಂದರೆ ಈ ಕಥೆಯಲ್ಲಿನ ಠಾಕೂರರ ಭಾಷೆ ಅತ್ಯಂತ ಕಾವ್ಯಮಯವಾದುದು. ಅಂತಹ ಕಾವ್ಯಮಯ ಭಾಷೆಯ ಸೂಕ್ಷ್ಮತೆ ಹಾಗೂ ಸೌಂದರ್ಯವನ್ನು ಅನುವಾದದಲ್ಲಿ ತರಲು ಮತ್ತು ಆ ಕಥೆಯಲ್ಲಿನ ಅದ್ಭುತ ರಮ್ಯ ವಾತಾವರಣ ಹಾಗೂ ಭ್ರಮಾಲೋಕದ ಪುನಃಸೃಷ್ಟಿ ಮಾಡಲು ನಾನು ವಿಶೇಷ ಶ್ರಮವಹಿಸಬೇಕಾಯಿತು. ಆದರೆ ನನಗೆ ಅದೊಂದು ಅತ್ಯಂತ ರೋಮಾಂಚಕಾರಿ ಹಾಗೂ ಆನಂದದಾಯಕ ಅನುಭವವೂ ಆಯಿತು ಎಂದು ಹೇಳಬಲ್ಲೆ. " ಎಂದಿದ್ದಾರೆ.

ಈ ಪುಸ್ತಕದಲ್ಲಿರುವ ಎಲ್ಲಾ ೧೨ ಕಥೆಗಳು ರವೀಂದ್ರನಾಥ ಠಾಕೂರರ ಕಥಾ ಬರಹದ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ. ಪುಟ್ಟ ಪುಟ್ಟ ಕಥೆಗಳು ಬಹಳ ಅರ್ಥವನ್ನು ಕೊಡುತ್ತವೆ. ಪುಸ್ತಕದಲ್ಲಿರುವ ಕೊನೆಯ ಕಥೆ ‘ಮುಸಲ್ಮಾನಳ ಕಥೆ' ನಮ್ಮ ಪ್ರಸ್ತುತ ಸನ್ನಿವೇಷಕ್ಕೆ ಬಹಳ ಹೊಂದುತ್ತದೆ. ಈ ಕಥೆಯು ರವೀಂದ್ರನಾಥ ಠಾಕೂರರ ಕೊನೆಯ ಕಥೆ ಎಂದು ಅನುವಾದಕರು ಟಿಪ್ಪಣಿ ಬರೆದಿದ್ದಾರೆ. ಅನಾರೋಗ್ಯದ ಕಾರಣದಿಂದ ಬೇರೆಯವರಿಗೆ ಹೇಳಿ ಬರೆಸಿದ ಕಥೆ ಇದಂತೆ. ರವೀಂದ್ರರು ನಿಧನ ಹೊಂದಿದ ಬಳಿಕ ಇದು ಬೆಳಕಿಗೆ ಬಂತು ಎಂದಿದ್ದಾರೆ. ಕಥೆಯ ಹೂರಣ ಚೆನ್ನಾಗಿದೆ. ವಿದೂಷಕ, ಮಿನು, ಸುಭಾ, ಮಾಶಿ ಮೊದಲಾದ ಕಥೆಗಳೂ ಬಹಳ ಚೆನ್ನಾಗಿವೆ. 

ಸುಮಾರು ನೂರು ಪುಟಗಳ ಈ ಪುಸ್ತಕದಲ್ಲಿರುವ ಕಥೆಗಳನ್ನು ಓದಿದಾಗ ಖ್ಯಾತ ಕವಿಯೆಂದು ಮಾತ್ರ ತಿಳಿದಿದ್ದ ರವೀಂದ್ರನಾಥ ಠಾಕೂರರ ಸಣ್ಣ ಕಥೆಗಳ ಬಗ್ಗೆಯೂ ನಮಗೆ ತಿಳಿದು ಬರುತ್ತದೆ.