ಹಸಿರುಬಣ್ಣದ ಪಂಚರಂಗಿ ಗಿಳಿ

ಹಸಿರುಬಣ್ಣದ ಪಂಚರಂಗಿ ಗಿಳಿ

ಹಸಿರು ಬಣ್ಣದ ಪಕ್ಷಿ ಯಾವುದು ಎಂದು ಯಾರನ್ನಾದರೂ ಕೇಳಿದರೆ ಹೆಚ್ಚಿನ ಜನ ಥಟ್ಟನೇ ಹೇಳುವ ಹೆಸರು ಗಿಳಿ.. ಗಿಳಿ ನಮಗೆಲ್ಲಾ ಅಷ್ಟೊಂದು ಚಿರಪರಿಚಿತವಾದ ಹಕ್ಕಿ. ಮುದ್ದಿನ ಗಿಣಿಯೆ ಬಾರೆ, ಮುತ್ತನು ತರುವೆ ಬಾರೆ ಎನ್ನುವ ಹಾಡು

ಅರೆರೆರೆ ಗಿಣೀರಾಮ, ಹೋಯ್‌ ಪಂಚರಂಗೀ ರಾಮ, ಮುಂತಾದ ಹಲವು ಸಿನೆಮಾ ಹಾಡು ನೀವೆಲ್ಲ ಖಂಡಿತಾ ಕೇಳಿರುತ್ತೀರಿ..

ಒಂದು ಕಾಲದಲ್ಲಿ ಹಲವಾರು ಮನೆಗಳಲ್ಲಿ ಗಿಣಿಯನ್ನು ಸಾಕುತ್ತಿದ್ದರು.. ಗಿಳಿಗಳು ಮನುಷ್ಯನಂತೆ ಮಾತನಾಡಬಲ್ಲವು ಎಂದೆಲ್ಲ ನನ್ನ ಬಾಲ್ಯದಲ್ಲಿ ನನ್ನ ಸಹಪಾಠಿಗಳು ಹೇಳುತ್ತಿದ್ದರು. ಅವಳಿ-ಜವಳಿ ಗಿಳಿಮರಿಗಳ ಕಥೆಯನ್ನು ನೀವೂ ಕೇಳಿರಬೇಕಲ್ಲ.. ಕಟುಕನ ಜೊತೆ ಬೆಳೆದ ಗಿಳಿ ಕಟುವಾಗಿ ಮಾತನಾಡಿತು, ಆದರೆ ಸಾಧುವಿನ ಮನೆಯಲ್ಲಿ ಬೆಳೆದ ಗಿಳಿ ಮೃದುವಾಗಿ ಮಾತನಾಡಿತು. ನಾವು ಯಾರಜೊತೆಗೆ ಬೆಳೆಯುತ್ತೇವೋ ಅವರಂತೆಯೇ ನಮ್ಮ ಸ್ವಭಾವವೂ ಇರುತ್ತದೆ.. ಇಂತಹ ಹಲವಾರು ನೀತಿಕಥೆಗಳಲ್ಲಿ ಗಿಳಿಗಳನ್ನು ಒಂದು ಪಾತ್ರವಾಗಿ ನೀವು ಖಂಡಿತಾ ನೋಡಿರುತ್ತೀರಿ... 

ನಾನು ಮೈಸೂರಿನಲ್ಲಿ ನನ್ನ ಶಿಕ್ಷಕ ತರಬೇತಿಯನ್ನು ಪಡೆಯುತ್ತಿದ್ದಾಗ ಪ್ರತಿದಿನ ಸಾವಿರಾರು ಗಿಳಿಗಳು ನೋಡಲು ಸಿಗುತ್ತಿದ್ದವು. ಎಲ್ಲಿ ಅಂತ ಕೇಳ್ತೀರಾ.. ಮೈಸೂರು ಅರಮನೆಯ ಪಕ್ಕವೇ ಇದ್ದ ನಗರ ಬಸ್‌ ನಿಲ್ದಾಣದಲ್ಲಿ. ಅಲ್ಲಿ ಹಲವಾರು ದೊಡ್ಡ ಮರಗಳು ಇರಿತ್ತಿದ್ದವು.. ಸಂಜೆಯಾದರೆ ಸಾಕು ಅಲ್ಲಿ ಸಾವಿರಾರು ಗಿಳಿಗಳು ಜಮಾಯಿಸುತ್ತಿದ್ದವು..  ಅವುಗಳ ಶಬ್ದ ಎಷ್ಟು ಇರುತ್ತಿತ್ತು ಎಂದರೆ ನಾವು ಸಹಪಾಠಿಗಳು ಪರಸ್ಪರ ಮಾತನಾಡಿದ್ದೂ ನಮಗೆ ಕೇಳುತ್ತಿರಲಿಲ್ಲ.. 

ನಮ್ಮ ಮನೆಯ ಹತ್ತಿರವೇ ಇದ್ದ ನಾಗಬನದಲ್ಲಿ ಒಂದು ದೊಡ್ಡದಾದ ಹುಣಸೇ ಮರ ಇತ್ತು. ಬೇಸಗೆ ಕಾಲದಲ್ಲಿ ಹುಣಸೇ ಹಣ್ಣು ಆಗುವಾಗಲಂತೂ ಮರದಲ್ಲಿ ಸದಾ ಗಿಳಿಗಳು ನೋಡಲು ಸಿಗುತ್ತಿದ್ದವು. ಆದರೆ ಪೇಟೆ ಪಟ್ಟಣಗಳಲ್ಲಿ ಇಂದು ಅಷ್ಟೊಂದು ಸಂಖ್ಯೆಯಲ್ಲಿ ಗಿಳಿಗಳು ನೋಡಲು ಸಿಗುವುದು ಅಪರೂಪ. ಇದೇಕೆ ಹೀಗೆ ಎಂದು ಹುಡುಕುತ್ತಾ ಹೋದಾಗ ತಿಳಿದ ವಿಷಯ ಇದು.. ಗಿಳಿಗಳು ಗೂಡು ಮಾಡವುದು ಮರದ ಪೊಟರೆಗಳಲ್ಲಿ. ಅದರಲ್ಲೂ ಹಳೆಯ ತೆಂಗಿನ ಮರದ ಕಾಂಡದಲ್ಲಿ ತೂತುಗಳಿದ್ದರೆ ಅಲ್ಲಿ ಗಿಳಿ ತನ್ನ ಗೂಡು ಮಾಡಿರುವುದನ್ನು ಬಹಳ ಜನ ಪಕ್ಷಿವೀಕ್ಷಕರು ದಾಖಲೆ ಮಾಡಿದ್ದಾರೆ. ಇತ್ತೀಚೆಗೆ ಬದಲಾದ ಕೃಷಿಪದ್ಧತಿಯಲ್ಲಿ ಎತ್ತರದ ಹಳೇ ತೆಂಗಿನ ಮರಗಳ ಬದಲಾಗಿ ಕಡಿಮೆ ಎತ್ತರದ ಹೆಚ್ಚು ಫಸಲು ಕೊಡುವ ಸಸಿಗಳನ್ನು ನೆಟ್ಟು ಬೆಳೆಸುತ್ತಾರೆ. ಸಿಡಿಲು ಬಡಿದು ತುದಿ ಸುಟ್ಟುಹೋದ ತೆಂಗಿನ ಮರಗಳು ನೋಡಲು ಸಿಗುವುದೇ ಅಪರೂಪ. ಜೊತೆಗೆ ಪೇಟೆಗಳಲ್ಲಿ ಅಭಿವೃದ್ಧಿ, ಹೌಸಿಂಗ್‌ ಲೇಔಟ್‌ ಮುಂತಾದ ಹೆಸರಿನಲ್ಲಿ ಮರಗಳನ್ನು ಕಡಿದು, ಕಟ್ಟಡ ಕಟ್ಟಿ ಆನಂತರ ಕೃತಕವಾದ ಗಾರ್ಡನ್‌ ಎಂಬ ಕಾಡುಗಳನ್ನು ನಮ್ಮ ಸಂತೋಷಕ್ಕಾಗಿ ಬೆಳೆಸುತ್ತಿದ್ದೇವೆ. ಇವುಗಳೆಲ್ಲವೂ ಹಕ್ಕಿಗಳು ಗೂಡುಮಾಡುವ ಸಾಧ್ಯತೆಗೆ ಸವಾಲು ಒಡ್ಡುತ್ತಿದೆ.. 

ಹಾಗೆಂದು ಗಿಳಿಗಳನ್ನು ನೋಡಬೇಕು ಎಂಬ ಕಾರಣಕ್ಕಾಗಿ ಅವುಗಳನ್ನು ಹಿಡಿದು ಸಾಕುವ ಕೆಲಸಕ್ಕೆ ಕೈಹಾಕಬೇಡಿ.. ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪ್ರಕಾರ ಇಂದು ಗಿಳಿಗಳನ್ನು ಸಾಕುವುದು ಅಪರಾಧ. ಸಾಕುವ ಸಲುವಾಗಿಯೇ ಲವ್‌ ಬರ್ಡ್‌ ಎಂಬ ಗಿಳಿಯಂತೆ ಬಾಗಿದ ಕೊಕ್ಕಿನ ಪುಟಾಣಿ ಹಕ್ಕಿಯನ್ನು ಹಲವು ಮನೆಗಳಲ್ಲಿ ಸಾಕುತ್ತಾರೆ. ಬೇಸಗೆ ಕಾಲದಲ್ಲಿ ನಮ್ಮ ಶಾಲೆಯ ಪಕ್ಕದ ಗುಡ್ಡದಲ್ಲಿ ಗೇರು ಹಣ್ಣು ಹೆಕ್ಕಲು ಹೋಗುವಾಗ ಹದವಾಗಿ ಬಲಿತ ಗೇರುಹಣ್ಣುಗಳನ್ನು ತಿನ್ನಲು ತಮ್ಮ ಮರಿಗಳನ್ನೂ ಕರೆದುಕೊಂಡು ಗಿಳಿವಿಂಡು ಬರುತ್ತವೆ.. 

Plum-headed Parakeet, 

Rose-ringed Parakeet, 

Malbar (Blue winged) Parakeet

Vernal Hanging Parrot

ಇವು ನಮ್ಮ ಕರ್ನಾಟಕದಲ್ಲಿ ನೋಡಬಹುದಾದ ಗಿಳಿಗಳು.. ಸಾಮಾನ್ಯ ಜನವರಿಯಿಂದ ಮೇ ತಿಂಗಳಿನ ನಡುವೆ ಇವುಗಳ ಸಂತಾನಾಭಿವೃದ್ಧಿ ಕಾಲ. ನಿಮ್ಮ ಸುತ್ತ ಮುತ್ತಲೂ ಈ ಗಿಳಿಗಳು ನೋಡಲು ಸಿಗಬಹುದು.. ಅವುಗಳ ಬಗೆಗೆ ಹಲವಾರು ಕಥೆಗಳೂ ನಿಮಗೆ ಗೊತ್ತಿರಬಹುದು.

-ಅರವಿಂದ ಕುಡ್ಲ, ಬಂಟ್ವಾಳ