ಹಸಿರು ಚಹಾ ಆರೋಗ್ಯದಾಯಕವೇ?

ಹಸಿರು ಚಹಾ ಆರೋಗ್ಯದಾಯಕವೇ?

ಕೋವಿಡ್ ೧೯ ಸಾಂಕ್ರಾಮಿಕ ಮಹಾಮಾರಿ ಭಾರತಕ್ಕೆ ಬಂದ ಮೇಲೆ ಎಲ್ಲರಿಗೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ಬಂದಿದೆ. ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಬೆಳೆಸಲು ಜನರು ಈಗ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಯಾವ ಕಷಾಯವಾದರೂ ಆಗಬಹುದು, ಯಾವುದೇ ಹುಲ್ಲು, ಯಾವುದೇ ಬೇರು ತಿನ್ನಲು ತಯಾರಿದ್ದಾರೆ. ಕೆಲವರು ಅಪರಿಮಿತ ಪ್ರಮಾಣದಲ್ಲಿ ಈ ಕಷಾಯಗಳನ್ನು ಕುಡಿದದ್ದರಿಂದ ಕೆಲವು ಅಡ್ಡ ಪರಿಣಾಮಗಳೂ ಆಗಿವೆ. ನಮ್ಮ ದೇಹ ಎಷ್ಟು ಅಗತ್ಯವೋ ಅಷ್ಟು ಮಾತ್ರ ತೆಗೆದುಕೊಳ್ಳುತ್ತೆ. ಆದುದರಿಂದ ನಿಗದಿತ ಪ್ರಮಾಣದಲ್ಲಿ ಮಾತ್ರ ಯಾವುದೇ ಮದ್ದು ತೆಗೆದುಕೊಳ್ಳುವುದು ಒಳಿತು.

ಇರಲಿ, ನಾವೀಗ ಹಸಿರು ಚಹಾ ಅರ್ಥಾತ್ ಗ್ರೀನ್ ಟೀ ವಿಷಯಕ್ಕೆ ಬರೋಣ. ಕಳೆದ ಒಂದು ದಶಕದಿಂದ ಹಸಿರು ಟೀ ಬಗ್ಗೆ ತುಂಬಾನೇ ಪ್ರಚಾರವಾಗತೊಡಗಿರುವುದು ನಿಮ್ಮ ಗಮನಕ್ಕೆ ಬಂದಿರಲೂ ಬಹುದು. ಸುಮಾರು ಐದು ವರ್ಷಗಳ ಹಿಂದೆ ನಾನು ಕೇರಳ ರಾಜ್ಯದ ಮುನ್ನಾರ್ ಗೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ಟೀ ಮ್ಯೂಜಿಯಂಗೆ ಭೇಟಿ ನೀಡಿದ್ದೆ. ಅಲ್ಲಿಯ ಗೈಡ್ ಚಹಾದ ಔಷಧೀಯ ಗುಣಗಳನ್ನು ತಿಳಿಸುತ್ತಾ, ಚಹಾ ಗಿಡವು ನಿಜವಾಗಿಯೂ ಸಂಜೀವಿನಿ ಗಿಡ. ಏಕೆಂದರೆ ಟೀ ಸಸ್ಯವನ್ನು ಒಮ್ಮೆ ನೀವು ನೆಟ್ಟರೆ ಅದು ವಯಸ್ಸಾಗಿ ಸಾಯುವುದೇ ಇಲ್ಲ. ಭಾರತದಲ್ಲಿ ಮೊದಲು ನೆಟ್ಟ ಚಹಾ ಸಸ್ಯ (ತಮಿಳುನಾಡಿನಲ್ಲಿದೆ) ಈಗಲೂ ಜೀವಂತವಾಗಿದೆಯಂತೆ. ಅದಕ್ಕೆ ಸುಮಾರು ನಾಲ್ಕು ಶತಮಾನಗಳಷ್ಟು ವಯಸ್ಸಾಗಿದೆಯಂತೆ. ಚಹಾ ಗಿಡದ ಚಿಗುರುಗಳನ್ನೇ ಕೀಳುವುದರಿಂದ ಗಿಡವು ಮರವಾಗುವ ಅವಕಾಶ ಕಡಿಮೆ. ಚಿಗುರುಗಳನ್ನು ಕಿತ್ತಂತೆ ಅದು ಮತ್ತೆ ಚಿಗುರಿ ಪೊದೆಯಂತೆ ಬೆಳೆಯುತ್ತದೆ. ಆದುದರಿಂದ ಅದರ ವಯಸ್ಸು ಕಂಡು ಹಿಡಿಯುವುದು ಕಷ್ಟಕರ. ಅಲ್ಲಿಯ ಗೈಡ್ ಹೇಳಿದ ಪ್ರಕಾರ ನಾವು ಪ್ರತೀದಿನ ಚಹಾ ಸೇವನೆಯನ್ನು (ಹಾಲು ಮತ್ತು ಸಕ್ಕರೆಯನ್ನು ಹಾಕದೆ) ಮಾಡಿದರೆ ನಮ್ಮ ದೇಹವು ಸರ್ವ ರೋಗಗಳಿಂದ ಮುಕ್ತವಾಗುತ್ತದೆ ಅಂತೆ.

ಏನಾದರಾಗಲಿ, ಈಗ ಹಸಿರು ಚಹಾ ಪ್ರಚಲಿತದಲ್ಲಿರುವ ಸಂಗತಿ. ಅದರಲ್ಲಿರುವ ಆಂಟಿಆಕ್ಸಿಡೆಂಟ್ ಗುಣಗಳು ನಿಮ್ಮ ದೇಹದಲ್ಲಿರುವ ಬೊಜ್ಜನ್ನು ಕಮ್ಮಿ ಮಾಡುತ್ತದೆ. ನಿಮ್ಮಲ್ಲಿ ಲವಲವಿಕೆಯನ್ನು ಉಂಟು ಮಾಡುತ್ತದೆ. ನಿಮ್ಮ ದೇಹದಲ್ಲಿರುವ ರಕ್ತ ಕಣಗಳನ್ನು ಶುದ್ಧಗೊಳಿಸುತ್ತದೆ ಎಂದೆಲ್ಲಾ ಹೇಳುತ್ತಾರೆ. ಇದರಲ್ಲಿ ಸತ್ಯ ಎಷ್ಟು? ಸುಳ್ಳು ಎಷ್ಟು? 

ಹಸಿರು ಚಹಾ ಹುಡಿ ಮತ್ತು ನಾವು ಸಾಮಾನ್ಯವಾಗಿ ಬಳಸುವ ಕಪ್ಪು ಚಹಾ ಹುಡಿ ಎರಡನ್ನೂ ಒಂದೇ ಜಾತಿಯ ಚಹಾ ಗಿಡ (Camellia Sinesis) ಮುಖಾಂತರವೇ ಪಡೆದುಕೊಳ್ಳಲಾಗುತ್ತದೆ. ಆದರೆ ಅದನ್ನು ಸಂಸ್ಕರಿಸುವ ವಿಧಾನ ಮಾತ್ರ ಬೇರೆ ಬೇರೆ. ಚಹಾ ಗಿಡದ ಎಲೆಗಳನ್ನು ಒಣಗಿಸಿ, ಉತ್ಕರ್ಷಣಗೊಳ್ಳದಂತೆ (Fermentation) ಸ್ವಲ್ಪ ಬೆಚ್ಚಗೆ ಬಿಸಿ ಮಾಡಿ ಪಡೆದ, ಇನ್ನೂ ಹಸಿರು ಬಣ್ಣ ಉಳಿಸಿಕೊಂಡಿರುವ ಚಹಾ ಎಂದರೆ ಅದು ಹಸಿರು ಚಹಾ. ಚಹಾ ಗಿಡದ ಎಲೆಗಳನ್ನು ಹಾಗೆಯೇ ಬಿಟ್ಟರೆ ಕಾಲಾಂತರದಲ್ಲಿ ಅದು ಕಪ್ಪಾಗುತ್ತದೆ. ಎಲೆಗಳನ್ನು ಕಾರ್ಖಾನೆಗಳಲ್ಲಿ ನಿಯಂತ್ರಿತ ಉಷ್ಣಾಂಶದಲ್ಲಿ ಅಥವಾ ತೇವದಲ್ಲಿ ಉತ್ಕರ್ಷಿಸಿದರೆ ಅದು ಕಪ್ಪಾಗುತ್ತದೆ. ಇದು ಕಪ್ಪು ಚಹಾ. ಹಸಿರು ಚಹಾದಲ್ಲಿರುವ ರಾಸಾಯನಿಕಗಳು ರೂಪಾಂತರವಾಗುವುದರಿಂದ ಚಹಾ ಕಪ್ಪಾಗುತ್ತದೆ. ಸುಮಾರು ೧೭ನೇ ಶತಮಾನದವರೆಗೆ ಎಲ್ಲರೂ ಹಸಿರು ಚಹಾವನ್ನೇ ಕುಡಿಯುತ್ತಿದ್ದರಂತೆ. ಒಮ್ಮೆ ಚೀನಾ ದೇಶ ಹಡಗಿನಲ್ಲಿ ಹೊರದೇಶಗಳಿಗೆ ಚಹಾ ಎಲೆಯನ್ನು ಸಾಗಾಟ ಮಾಡುವ ಸಂದರ್ಭದಲ್ಲಿ ಉಷ್ಣಾಂಶದ ಬದಲಾವಣೆಯಿಂದ ಅಕಸ್ಮಾತ್ ಅದು ಕಪ್ಪು ಬಣ್ಣಕ್ಕೆ ತಿರುಗಿತಂತೆ. ಅಂದಿನಿಂದ ಎಲ್ಲೆಡೆ ಕಪ್ಪು ಚಹಾದ ಬಳಕೆ ರೂಢಿಗೆ ಬಂತು.

ಚಹಾವನ್ನು ಕಂಡು ಹಿಡಿದ ಚರಿತ್ರೆ ಬಗ್ಗೆ ನಿಖರವಾದ ಉಲ್ಲೇಖಗಳು ಕಾಣುವುದಿಲ್ಲ. ಆದರೆ ಚಹಾವನ್ನು ಬೇರೆ ಬೇರೆ ರೂಪದಲ್ಲಿ ಸಾವಿರಾರು ವರ್ಷಗಳಿಂದ ಉಪಯೋಗಿಸುತ್ತಿದ್ದರೆಂದು ದಾಖಲೆಗಳು ಹೇಳುತ್ತವೆ. ಹಸಿರು ಚಹಾ ಬಳಕೆಯ ಬಗ್ಗೆ ಹಲವಾರು ಕಥೆಗಳೂ ಇವೆ. ಮೈಓನಾಐಸಿ (Myoan Eisai) ಎಂಬ ಬೌದ್ಧ ಸನ್ಯಾಸಿಯು ೬ನೇ ಶತಮಾನದ ಸುಮಾರಿಗೆ ಜಪಾನ್ ದೇಶಕ್ಕೆ ಹಸಿರು ಚಹಾವನ್ನು ಪರಿಚಯಿಸಿದನಂತೆ. ಅದಕ್ಕೂ ಮೊದಲು ಚೀನಾ ದೇಶದಲ್ಲಿ ಹಸಿರು ಚಹಾ ಬಳಕೆಯಲ್ಲಿತ್ತು ಎಂದು ಕತೆಗಳು ಹೇಳುತ್ತವೆ. ನಂತರ ೧೬ನೇ ಶತಮಾನದಲ್ಲಿ ಒಬ್ಬ ಕ್ರೈಸ್ತ ಪಾದ್ರಿ ಹಸಿರು ಚಹಾವನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸಿದ. ಆ ಬಳಿಕ ಚಹಾ ಒಂದು ಅಂತರಾಷ್ಟ್ರೀಯ ಪೇಯ ಎಂದು ಕರೆಯಲ್ಪಟ್ಟಿತು. ಚೀನಾದಿಂದ ವಿದೇಶಗಳಿಗೆ ನಿಯಮಿತವಾಗಿ ಚಹಾ ಹಾಗೂ ತಂಬಾಕು ರಫ್ತು ಪ್ರಾರಂಭವಾಯಿತು.

ಭಾರತದಲ್ಲಿ ಖ್ಯಾತವಾದ ಚಹ ಅಸ್ಸಾಂ ಚಹಾ. ಅಸ್ಸಾಂ ಚಹಾವನ್ನು ಕಂಡು ಹಿಡಿದ ಶ್ರೇಯ ವಿಲಿಯಂ ಬ್ರೂಸ್ ಎಂಬ ಬ್ರಿಟೀಷ್ ಅಧಿಕಾರಿಗೆ ಸಲ್ಲುತ್ತದೆ. ವಿಲಿಯಂ ಬ್ರೂಸ್ ನ ಅಣ್ಣ ರಾಬರ್ಟ್ ಬ್ರೂಸ್  ೧೮೨೩ರಲ್ಲಿ ಭಾರತಕ್ಕೆ ಬಂದಾಗ ಅಸ್ಸಾಂ ಪ್ರದೇಶದಲ್ಲಿ ಚಹಾ ಬೆಳೆಯುವುದನ್ನು ಕಂಡಿದ್ದ. ಈ ವಿಷಯವು ಅಣ್ಣನಿಂದ ವಿಲಿಯಂ ಬ್ರೂಸ್ ಗೆ ತಿಳಿಯಿತು. ಅವನು ತನ್ನ ಮನೆಯ ತೋಟದಲ್ಲಿ ಚಹಾದ ಗಿಡಗಳನ್ನು ಬೆಳೆದ. ನಂತರ ಚೀನಾದಲ್ಲಿ ಬೆಳೆಯುತ್ತಿದ್ದ ಚಹಾ ಗಿಡಗಳೂ, ಅವನ ತೋಟದಲ್ಲಿ ಬೆಳೆಯುತ್ತಿದ್ದ ಗಿಡಗಳು ಒಂದೇ ಎಂದು ಪ್ರಯೋಗಗಳಿಂದ ತಿಳಿದ ಬಳಿಕ ಬ್ರಿಟೀಷ್ ಸರಕಾರ ಭಾರತದಲ್ಲಿ ಚಹಾ ಗಿಡಗಳನ್ನು ಬೆಳೆಸಲು ಅನುಮತಿಯನ್ನು ನೀಡಿತು. ೧೮೩೯ರಲ್ಲಿ ಮೊದಲ ಬಾರಿಗೆ ಅಸ್ಸಾಂ ಚಹಾವನ್ನು ಇಂಗ್ಲೆಂಡ್ ಗೆ ಕಳುಹಿಸಲಾಯಿತು ಮತ್ತು ಅದಕ್ಕೆ ಅಲ್ಲಿ ಆದರದ ಸ್ವಾಗತ ಸಿಕ್ಕಿದ್ದು ಭಾರತದಲ್ಲಿ ಚಹಾ ಉದ್ಯಮದ ಉಗಮಕ್ಕೆ ನಾಂದಿಯಾಯಿತು.   

ಹಸಿರು ಚಹಾದಲ್ಲಿ ಅಲ್ಪ ಪ್ರಮಾಣದಲ್ಲಿ ಕೆಫೀನ್ ಇರುತ್ತದೆ. ಕಾಫಿಯಲ್ಲಿ ಅಧಿಕ ಪ್ರಮಾಣದಲ್ಲಿರುವ ಕೆಫೀನ್, ಕಾಫಿಯನ್ನು ಅಥವಾ ಚಹಾವನ್ನು ಕುಡಿದಾಗ ನಮ್ಮ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ. ಹಸಿರು ಚಹಾದಲ್ಲಿ ಕೆಫೀನ್ ಪ್ರಮಾಣ ಕಾಫಿಯಲ್ಲಿರುವ ಪ್ರಮಾಣದ ಮೂರನೇ ಒಂದು ಭಾಗ ಅಷ್ಟೇ. ದಿನಕ್ಕೆ ಎರಡು ಬಾರಿ ಹಸಿರು ಚಹಾ ಸೇವನೆ ಚೇತೋಹಾರಿ. ಹೆಚ್ಚಿನ ಪ್ರಮಾಣದಲ್ಲಿ ಚಹಾ ಸೇವನೆ ಅದು ವ್ಯಸನಕ್ಕೆ ಕಾರಣವಾಗಬಹುದು. ಹಸಿರು ಚಹಾದಲ್ಲಿ ಫ್ಲೆವನಾಲ್, ಫ್ಲೆವನ್ ಡಯಾಲ್ ಹಾಗೂ ಫಿನಾಲಿಕ ಆಸಿಡ್ ಸೇರಿದಂತೆ ಹಲವಾರು ಫಾಲಿಫಿನಾಲುಗಳ ಅಂಶಗಳಿವೆ. ಇವುಗಳು ಚಹಾದ ಔಷಧೀಯ ಗುಣಗಳಿಗೆ ಕಾರಣವಾದ ಅಂಶಗಳು. ಕಪ್ಪು ಚಹಾ ಹುಡಿಯಲ್ಲಿ ಇವುಗಳ ಪ್ರಮಾಣ ಶೇ ೨೦ ಇರುತ್ತದೆ. ಈ ಹುಡಿಯನ್ನು ಬಿಸಿ ನೀರಿನಲ್ಲಿ ಕುದಿಸಿದಾಗ ಅವುಗಳು ತಮ್ಮ ಔಷಧೀಯ ಗುಣಗಳನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತವೆ. 

ಹಸಿರು ಚಹಾವು ಕ್ಯಾನ್ಸರ್ ಕಾರಕ ಅಂಶಗಳನ್ನು ನಾಶ ಪಡಿಸುವ ಗುಣಹೊಂದಿದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಹಸಿರು ಚಹಾಕ್ಕೆ ಹಾಲು ಮತ್ತು ಸಕ್ಕರೆ ಹಾಕದೇ ಕುಡಿದರೆ ಮಾತ್ರ ಅದರ ಸಹಜ ಗುಣಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತವೆ. ಸಕ್ಕರೆ ಇಲ್ಲದೇ ಕುಡಿಯಲು ಕಷ್ಟವೆನಿಸಿದರೆ ಜೇನು ತುಪ್ಪವನ್ನು ಸೇರಿಸಬಹುದು. ಹಸಿರು ಚಹಾದಲ್ಲಿರುವ ಫಾಲಿಫಿನಾಲುಗಳು ಸಂಧಿವಾತ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹ, ಹೃದಯ ರೋಗ ಹಾಗೂ ಬೊಜ್ಜು ಇರುವವರು ಹಸಿರು ಚಹಾವನ್ನು ನಿಯಮಿತವಾಗಿ ಕುಡಿದರೆ ಆರೋಗ್ಯದಾಯಕ. ಆದರೆ ಹಸಿರು ಚಹಾದ ಸೇವನೆ ಗರ್ಭಿಣಿಯರಿಗೆ ಹಾನಿಕಾರಕವೆಂದು ಕೆಲವು ಸಂಶೋಧನಾ ಫಲಿತಾಂಶಗಳು ಹೇಳುತ್ತವೆ. ಆದುದರಿಂದ ಹಸಿರು ಚಹಾ ಸೇವನೆಯಿಂದ ಗರ್ಭಿಣಿಯರು ದೂರವಿರುವುದು ಒಳಿತು. 

ಹಲವಾರು ವರ್ಷಗಳಿಂದ ಚಹಾ ಸೇವನೆ ನಮ್ಮ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಆದುದರಿಂದ ಚಹಾ ಆಗಲೀ ಕಾಫಿಯಾಗಲೀ ಕಮ್ಮಿ ಕುಡಿಯುವುದು ಒಳ್ಳೆಯದು. ಅತಿಯಾದ ಸೇವನೆಯಿಂದ ಮಾದಕ ದೃವ್ಯದಂತೆ ವ್ಯಸನಕ್ಕೂ ಕಾರಣವಾಗಬಹುದು. ಹಲವಾರು ಬಗೆಯ ಗ್ರೀನ್ ಟೀ ಗಳು ಮಾರುಕಟ್ಟೆಯಲ್ಲಿವೆ. ಕಳಪೆ ದರ್ಜೆಯ ಚಹಾ ಹುಡಿಗಳನ್ನು ಗಮನಿಸಿ ಅದರಿಂದ ದೂರವಿರಿ. ನಿಯಮಿತವಾಗಿ ಹಸಿರು ಚಹಾ ಸೇವನೆ ಆರೋಗ್ಯದಾಯಕ. 

ಚಿತ್ರ ಕೃಪೆ: ಅಂತರ್ಜಾಲ ತಾಣ