ಹಸಿರು ಟೊಮ್ಯಾಟೋ ಚಟ್ನಿ

ಹಸಿರು ಟೊಮ್ಯಾಟೋ ಚಟ್ನಿ

ಬೇಕಿರುವ ಸಾಮಗ್ರಿ

8-9 ಹಸಿರು ಟೊಮ್ಯಾಟೋ ಕಾಯಿಗಳು 
5-6 ಹಸಿ ಮೆಣಸಿನಕಾಯಿಗಳು
7 ಎಸಳು ಬೆಳ್ಳುಳ್ಳಿ
ಒಂದು ಹಿಡಿ ಉರಿಗಡಲೆ 
ಒಂದು ಹಿಡಿ ತುರಿದ ತೆಂಗಿನ ಕಾಯಿ 
ಸ್ವಲ್ಪ ಕೊತ್ತಂಬರಿ ಸೊಪ್ಪು 
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಬೇಕಾದರಷ್ಟು
ಒಗ್ಗರಣೆಗೆ : 3 ಚಮಚ ಎಣ್ಣೆ, ಸಾಸಿವೆ, ಇಂಗು , ಕರಿಬೇವಿನ ಎಸಳುಗಳು, ಒಂದು ಹಿಡಿ ಸಣ್ಣಗೆ ಹೆಚ್ಚಿದ ಈರುಳ್ಳಿ 

ತಯಾರಿಸುವ ವಿಧಾನ

1. ಹಸಿರು ಟೊಮ್ಯಾಟೋ ಕಾಯಿಗಳನ್ನ ಮತ್ತು ಹಸಿ ಮೆಣಸಿನ ಕಾಯಿಗಳನ್ನ ಪಾತ್ರೆಯಲ್ಲಿ ಹಾಕಿ ನೀರು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ರಿನಲ್ಲಿ ಹಾಕಿದರೆ ಒಂದು ವಿಷಲ್ ಸಾಕು.
2. ನಂತರ ಎರಡನೇ ಚಿತ್ರದಲ್ಲಿರುವಂತೆ ತುರಿದ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಉರಿಗಡಲೆ ಹಾಕಿ ಒಳಕಲ್ಲಿನಲ್ಲಿ ಅಥವಾ ಮಿಕ್ಸರಿನಲ್ಲಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ. ಕೊನೆಗೆ ಬೇಯಿಸಿದ ಟೊಮ್ಯಾಟೋ, ಮೆಣಸಿನಕಾಯಿಯನ್ನ ಸೇರಿಸಿ ಒಂದೆರಡು ಸುತ್ತು ರುಬ್ಬಿರಿ.
3. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ, ಇಂಗು, ಕರಿಬೇವಿನ ಎಸಳುಗಳನ್ನ ಹಾಕಿ ನಂತರ ರುಬ್ಬಿಕೊಂಡ ಮಿಶ್ರಣವನ್ನ ಸುರಿದು ಒಂದೆರಡು ನಿಮಿಷ ಕುದಿಸಿದರೆ ಟೊಮ್ಯಾಟೋ ಚಟ್ನಿ ರೆಡಿ.
ಈ ಟೊಮ್ಯಾಟೋ ಚಟ್ನಿ ಚಪಾತಿ, ದೋಸೆ,ರೊಟ್ಟಿ ಮತ್ತು ಅನ್ನದೊಟ್ಟಿಗೆ ರುಚಿಯಾಗಿರತ್ತೆ. ನೀವೂ ಕೂಡ ಇದನ್ನ ಮಾಡಿ ಸವಿದು ನೋಡಿ :)
ಬಳಕೆ: ಫ್ರಿಜ್ಜಿನಲ್ಲಿಟ್ಟರೆ ಒಂದೆರಡು ದಿನ
ಚಿತ್ರಕೃಪೆ: ಸ್ವಂತದ್ದು
ಧನ್ಯವಾದಗಳು
ಸವಿತ ಎಸ್ ಆರ್

Comments

Submitted by ಗಣೇಶ Fri, 10/03/2014 - 22:50

ಸವಿತಾ ಅವರೆ,

"ಹಸಿರು" ಟೊಮೆಟೋ ಚಟ್ನಿಯ ಫೋಟೋಗಳನ್ನು ನೋಡಿಯೇ "ಹಸಿವು" ಜಾಸ್ತಿಯಾಯಿತು. ಜತೆಯಲ್ಲಿ ದೋಸೆ ಬೇರೆ..:)

Submitted by venkatb83 Mon, 10/06/2014 - 19:28

ಊಟ ತಿಂಡಿ ವಿಷ್ಯದಲ್ಲಿ ನಮ್ಮ ಗಣೇಶ್ ದೇವರು -ಗಣೇಶ್ ಅಣ್ಣಾ ನಂತರ ನಂತರದ ಸ್ಥಾನ ನಮ್ಮದೇ ...!!
ನೆಟ್ಟಿನಲ್ಲಿ -ದಿನ ನಿತ್ಯದ ಪತ್ರಿಕೆ ಇತ್ಯಾದಿಗಳಲ್ಲಿ ನಾ ಹುಡುಕೋದು -ಇದ್ದರೆ ಪೇಪರ್ ಕಟ್ಟಿಂಗ್ ಕಟ್ ಮಾಡಿ ಇಟ್ಟುಕೊಂಡು ಆ ರುಚಿ ತಯಾರಿಸಲು ಪ್ರಯತ್ನಿಸುವೆ .. ನೀವ್ ಇಲ್ಲಿ ಚಿತ್ರ ಸಮೇತ ನೀಡಿರುವ ಸರಳಡುಗೆ ವಿಧಾನ ನೋಡಿ ಓದಿ ಬಾಯಲ್ಲಿ ನೀರೂರಿದ್ದು ಸತ್ಯ ..!!  ಈ ತರ್ಹದ ಬರಹಗಳನ್ನು ಸದಾ ಬರೆಯಿರಿ ಎಂದು ಕೋರುವೆ ....
ಶುಭವಾಗಲಿ

ನನ್ನಿ

\|/ 

Submitted by ಗಣೇಶ Mon, 10/13/2014 - 01:04

In reply to by venkatb83

:) ಈಗ ಬೀಟ್ರೂಟ್ ಲಡ್ಡುನಲ್ಲೂ ಇದೇ ಪ್ರತಿಕ್ರಿಯೆ ನೋಡಿದೆ. ಅಲ್ಲಿ ಬಿಟ್ರೂ ಇಲ್ಲಿ ಮಿಸ್ ಮಾಡಬಾರದೆಂದು ನಮ್ಮ ಸಪ್ತಗಿರಿವಾಸಿ ಎರಡೆರಡು ಬಾರಿ ನೆನಪಿಸಿದ್ದಾರೆ. :)

...ಊಟಕೆ ಬಾರೋ ಗಣೇಶಾಆಆ.......ತಯಾರಿದ್ದೇನಲ್ಲಾ..:)

ಆ "ದೊಡ್ಡ ಗಣೇಶ"ನ ದಯದಿಂದ ಊಟ-ತಿಂಡಿ ವಿಷಯದಲ್ಲಿ ಪಥ್ಯ-ಡಯಟ್ ಇತ್ಯಾದಿ ಇದುವರೆಗೆ ಇರಲಿಲ್ಲ. ಕೊನೆಯವರೆಗೂ ಊಟ-ತಿಂಡಿ-ಹಣ್ಣುಗಳನ್ನು ನೆಮ್ಮದಿಯಿಂದ ಹೊಟ್ಟೆತುಂಬಾ:) ತಿನ್ನುವಂತೆ ನನಗೂ, ನನ್ನ ಹಾಗೇ ತಿನ್ನುವ ನಿಮಗೆಲ್ಲರಿಗೂ ಆ ದೇವರು ಅನುಗ್ರಹಿಸಲಿ ಎಂದು ಬೇಡುವೆ.

Submitted by Vinutha B K Fri, 04/14/2017 - 17:12

ಸವಿತವ್ರೆ ತುಂಬ ದಿನಗಳಿಂದ‌ ಕೆಲ್ಸದ‌ ಒತ್ತಡದಿಂದ‌ ಸಂಪದ‌ ದಿಂದ‌ ದೂರ‌ ಇದ್ದೆ ,ಹಾಗಾಗಿ ಇವಾಗ ಪ್ರತಿಕ್ರಿಯೆ.
ಹಸಿರು ಟೊಮ್ಯಾಟೋ ಚಟ್ನಿ ,ಬಾಯಿ ನೀರಿಸುತ್ತೆ ಅದರ‌ ರುಚಿ ಗೊತ್ತಿದ್ದವರಿಗೆ.ನಂಗು ಅದೆ ಅಗ್ತಾ ಇರೊದು..ತುಂಬಾ ಚೆನ್ನಾಗಿ ಬರೆದಿದ್ದೀರಿ.
ಇದೆ ಸಾಮಗ್ರಿಗಳ‌ ಜೊತೆ ಹಸಿರು ಟೊಮ್ಯಾಟೋ ಬದಲಾಗಿ ಹಸಿರು ಬದನೆಕಾಯಿ ಹಾಕಿ ಮಾಡಿದರು ,ಸಕತ್ ರುಚಿ ಯ‌ ಚಟ್ನಿ ಮಾಡ್ಬಹುದು.ಈ ಚಟ್ನಿ ಜೊತೆ ಸ್ವಲ್ಪನೆ ಮೊಸರು ಹಾಕೊಂಡ್ರೆ ರೊಟ್ಟಿ ಜೊತೆ ಮಜನೆ ಬೇರೆ.