ಹಸಿರು ಮೂಡಲಿ

ಹಸಿರು ಮೂಡಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಹೆಚ್ ವಿ ಮೀನಾ
ಪ್ರಕಾಶಕರು
ಸಹನಾ ಪಬ್ಲಿಕೇಷನ್ಸ್, ರಾಜರಾಜೇಶ್ವರೀನಗರ, ಬೆಂಗಳೂರು - 560098
ಪುಸ್ತಕದ ಬೆಲೆ
ರೂ. 135.00, ಮುದ್ರಣ: 2022

ಕಥೆಯ ಮೂಲಕವೇ ಅನೇಕ ವಿಷಯಗಳ ಮಾಹಿತಿ ನೀಡುವ ಕೆಲಸವನ್ನು ಲೇಖಕಿಯಾದ ಹೆಚ್ ವಿ ಮೀನಾ ಮಾಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಶೇಷ ದಿನಗಳು, ಅವುಗಳ ಮಹತ್ವ , ಪರಿಸರಕ್ಕೆ ಸಂಬಂಧಿಸಿದ ವೃತ್ತಿ ಜೀವನವನ್ನು ಹೇಗೆ ಬೆಳೆಸಬಹುದೆನ್ನುವ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಮಕ್ಕಳಿಗೆ ಶುಚಿತ್ವದ ಮಹತ್ವವನ್ನು ಬೋಧಿಸುವ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ದುಶ್ಚಟಗಳಿಂದ ಆಗುವ ಹಾನಿಗಳನ್ನು ಕಥೆಯ ರೂಪದಲ್ಲಿ ವಿವರಿಸಿದ್ದಾರೆ. 

“ಹಸಿರು ಮೂಡಲಿ” ಎಂಬ‌ ಹೆಚ್.ವಿ ಮೀನಾ ಅವರ ಮಕ್ಕಳ ಪುಸ್ತಕ. ಇಂದಿನ ಯುವಜನತೆ ಹೇಗೆ ಕೇವಲ ಓದು ಎನ್ನುವ ಸ್ಪರ್ಧೆಗೆ ಬೀಳದೆ, ತಮ್ಮ ಅಮೂಲ್ಯವಾದ ಬಾಲ್ಯದ ಸಂತೋಷದ ಕ್ಷಣಗಳನ್ನು ಅನುಭವಿಸಬಹುದು ಎನ್ನುವುದರ ಕುರಿತಾಗಿದೆ. ಇಂದು ಹೆತ್ತವರು ಕೂಡಾ ತಮ್ಮ ಮಕ್ಕಳನ್ನು ಕೇವಲ ಪರೀಕ್ಷೆಗೆ ತಯಾರಿ ಮಾಡುವುದರಲ್ಲಿ ನಿರತರಾಗುತ್ತಿದ್ದಾರೆಯೇ ಹೊರತು, ಮಕ್ಕಳ ಆಸಕ್ತಿಯ ವಿಷಯವನ್ನು ಅರಿತುಕೊಂಡು, ಪ್ರೋತ್ಸಾಹಿಸುವ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಕತೆಯ ಮೂಲಕ ಸೂಕ್ಷ್ಮವಾಗಿ ಹೇಳಿದ್ದಾರೆ.

ರಾಜು ಎನ್ನುವ ಸಮಾಜಮುಖಿ ಕೆಲಸ ಮಾಡುವ ಮನಸ್ಸಿನ ಹುಡುಗ. ಆತನ ಕೆಲಸಗಳನ್ನು ತಂದೆ ವಿರೋಧಿಸಿದರೂ ಕೂಡ ತಾಯಿಯ ಸಹಾಯದಿಂದ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದ. ತನ್ನ ಪಠ್ಯಕ್ಕಿಂತಲೂ ಹೆಚ್ಚು ತನ್ನ ಸುತ್ತಮುತ್ತಲಿನ ಪರಿಸರ, ಗಿಡಮರ, ಪ್ರಾಣಿ ಪಕ್ಷಿಗಳ ಕುರಿತು ರಾಜುವಿಗೆ ಹೆಚ್ಚಿನ ಆಸಕ್ತಿ. ರಾಜುವಿನ ತಂದೆಗೆ ಮಾತ್ರ ತನ್ನ ಮಗ ಒಳ್ಳೆಯ ಅಂಕ ಪಡೆಯಬೇಕು, ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಆಸೆ‌. ಇಲ್ಲಿ ರಾಜುವಿನ ತಂದೆಯ ಪಾತ್ರ ಸಮಾಜದಲ್ಲಿ ಕಾಣುವ ಹೆಚ್ಚಿನ ಹೆತ್ತವರ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಪ್ರತಿ ಹೆತ್ತವರಿಗೂ ಕೂಡ ತನ್ನ ಮಗ ಅಥವಾ ಮಗಳು ಒಳ್ಳೆಯ ಅಂಕ ಪಡೆಯಬೇಕೆನ್ನುವ ಮಹತ್ವಕಾಂಕ್ಷೆ ಇರುತ್ತದೆ. ಇಲ್ಲಿ ರಾಜುವಿನ ತಾಯಿ ಒಂದು ಹಂತದವರೆಗೆ ಗಂಡನನ್ನು ಸಹಿಸಿಕೊಂಡು ನಂತರ ಮಗನ ಕನಸನ್ನು ನನಸು ಮಾಡುವಲ್ಲಿ ಆಸರೆಯಾಗುತ್ತಾರೆ. ಅತ್ತ ಗಂಡನ ಮಾತು ಕೇಳುವುದೋ, ಇತ್ತ ಮಗನಿಗೆ ನೆರವಾಗುವುದೋ ಎನ್ನುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವ ಮಹಿಳೆಯರ ಪ್ರತಿನಿಧಿಯಾಗಿದ್ದಾರೆ

ಕಥೆಯ ಮೂಲಕವೇ ಅನೇಕ ವಿಷಯಗಳ ಮಾಹಿತಿ ನೀಡುವ ಕೆಲಸವನ್ನು ಲೇಖಕಿ ಮಾಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಶೇಷ ದಿನಗಳು, ಅವುಗಳ ಮಹತ್ವ , ಪರಿಸರಕ್ಕೆ ಸಂಬಂಧಿಸಿದ ವೃತ್ತಿ ಜೀವನವನ್ನು ಹೇಗೆ ಬೆಳೆಸಬಹುದೆನ್ನುವ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಮಕ್ಕಳಿಗೆ ಶುಚಿತ್ವದ ಮಹತ್ವವನ್ನು ಬೋಧಿಸುವ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ದುಶ್ಚಟಗಳಿಂದ ಆಗುವ ಹಾನಿಗಳನ್ನು ಕಥೆಯ ರೂಪದಲ್ಲಿ ವಿವರಿಸಿದ್ದಾರೆ.

ಸರಳ ಕನ್ನಡದಲ್ಲಿ ಬರೆದಿರುವ ಈ ಪುಸ್ತಕವು ಆಂಗ್ಲ ಮಾಧ್ಯಮದಲ್ಲಿ ಓದುವ ಮಕ್ಕಳಿಗೂ ಕೂಡ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ದೊಡ್ಡ ಅಕ್ಷರಗಳಲ್ಲಿ ಮೂಡಿ ಬಂದಿರುವ ಪುಸ್ತಕದ ಪ್ರತಿಪುಟದಲ್ಲಿರುವ ಸುಂದರ ಚಿತ್ರಗಳು ಓದುವ ಕುತೂಹಲವನ್ನು ಹೆಚ್ಚಿಸುತ್ತದೆ.

- ಅಶ್ವಿನಿ ಸುನೀಲ್