ಹಸಿರು ಹಂಪೆ

ಹಸಿರು ಹಂಪೆ

ಪುಸ್ತಕದ ಲೇಖಕ/ಕವಿಯ ಹೆಸರು
ವಿಂಗ್ ಕಮಾಂಡರ್ ಬಿ.ಎಸ್.ಸುದರ್ಶನ್
ಪ್ರಕಾಶಕರು
ಬದನಗೋಡು ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೯೯.೦೦

ಕೇವಲ ಸನಾತನ ಧರ್ಮದ ಉಳುವಿಗೋಸ್ಕರ ಉದ್ಭವಗೊಂಡ ಸಾಮ್ರಾಜ್ಯ ನಮ್ಮ ಕರ್ನಾಟಕ ಸಾಮ್ರಾಜ್ಯ. ಆ ಸಾಮ್ರಾಜ್ಯದ ಮುಕುಟಮಣಿ ಶ್ರೀ ಕೃಷ್ಣದೇವರಾಯರ 551 ನೇ ಜನ್ಮ ಜಯಂತಿ ಇಂದು (ಜನವರಿ ೧೭) ಈ ಸಂದರ್ಭದಲ್ಲಿ ನಮ್ಮ ಪುಸ್ತಕ ‘ಹಸಿರು ಹಂಪೆ’ ಒಂದು ಅಧ್ಯಾಯ...ನಿಮಗೋಸ್ಕರ

ಕೃಷ್ಣಾ ನೀ ಬೇಗನೇ ಬಾರೋ....

ಇವತ್ತು ಬ್ರಹ್ಮಮಹೂರ್ತದಿಂದಲೇ ಹೊಸಪೇಟೆಯ ಈ ಗುರುಕುಲದಲ್ಲಿ ಸಂಭ್ರಮವೋ ಸಂಭ್ರಮ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದು, ಇವತ್ತು ಗುರುಪೂರ್ಣಿಮೆ, ಇದಕ್ಕೆ ವ್ಯಾಸ ಪೂರ್ಣಿಮೆಯಂತಲೂ ಕರೆಯುತ್ತಾರೆ. ವೇದವ್ಯಾಸ ಮಹರ್ಷಿಗಳ ಜನ್ಮದಿನ. ಈ ವರ್ಷದ ಗುರುಪೂಜೆಯ ಸಮಾರಂಭದಂದು ಅದೆಂತಹ ಅದೃಷ್ಟ ನಮ್ಮದು ಅಂದರೆ ಸ್ವತಃ ವ್ಯಾಸರಾಜತೀರ್ಥರು ಇವತ್ತು ಗುರುಕುಲದಲ್ಲಿದ್ದಾರೆ. ಅವರ ಜೊತೆಯಲ್ಲಿ ಅಷ್ಟದಿಗ್ಗಜರು, ಸಾಮ್ರಾಜ್ಯದ ಹೆಸರಾಂತ ಕವಿಗಳು, ವಿದ್ವಾಂಸರುಗಳು. ಇವರದ್ದೆಲ್ಲಾ ಒಂದು ಗುಂಪಾದರೆ, ಪುರಂದರದಾಸರ ಮುಂದಾಳತ್ವದಲ್ಲಿ ದಾಸ ಸಮೂಹ ಇನ್ನೊಂದೆಡೆ. ಇವರೆಲ್ಲರೂ ಇಂದಿನ ಗುರು ಪೂಜೆಯನ್ನು ನೆರವೇರಿಸಲು ಗುರುಕುಲದಲ್ಲಿ ಕಾಯುತ್ತಿದ್ದಾರೆ. ಹಿಂದಿನ ರಾತ್ರಿಯ ಸಭೆಯಲ್ಲಿ ವ್ಯಾಸತೀರ್ಥರು  ಎಲ್ಲಾರನ್ನೂ ಸಂಭೋದಿಸಿ ಹೇಳಿದ್ದರು,

" ನಾಳೆಯ ಮುಖ್ಯ ಸಮಾರಂಭವೆಂದರೆ ಕೃಷ್ಣದೇವರಾಯರು ಸೇನೆಯೊಂದಿಗೆ ನಗರ ಪ್ರವೇಶ ಮಾಡುವವರಿದ್ದಾರೆ.  ಕೃಷ್ಣದೇವರಾಯರು ಕಳುಹಿಸಿರುವ ಸಂದೇಶದಂತೆ ನಗರಪ್ರವೇಶವಾದ ನಂತರ ಅವರು ನೆರೆವೇರಿಸುವ ಮೊದಲ ಕಾರ್ಯ ಗುರುಪೂಜೆಯಂತೆ, ಹಾಗಾಗಿ ಇಲ್ಲಿ ಗುರುಕುಲದಲ್ಲಿ ನಡೆಯುವ ಕಾರ್ಯಗಳನ್ನೆಲ್ಲಾ ಅಷ್ಟೊತ್ತಿಗೆ ಪೂರ್ಣಗೊಳಿಸಿಬಿಡಿ"

ಸೂರ್ಯೋದಯವಾಗುತ್ತಲೇ ಗುರುಕುಲದ ಹಿಂಭಾಗದ ತುಂಗಭದ್ರಾ ನದೀತೀರದಲ್ಲಿ ಗುರುಪೂಜೆಯ ಏರ್ಪಾಡು ಮಾಡಲಾಗಿದೆ. ರಾಜಗುರು ವ್ಯಾಸತೀರ್ಥರಿಗೆಂದೇ ನಿರ್ಮಿಸಲಾದ ಒಂದು ಎತ್ತರದ ಮಂಟಪವನ್ನು ಹಲವಾರು ವಿಧದ ಸುವಾಸಿತ ಹೂಗಳು, ತುಳಸಿಗಳಿಂದ ಅಲಂಕರಿಸಲಾಗಿದೆ. ಪಾದಪೂಜೆಯ ಪರಿಕರಗಳು, ದೀಪ ಧೂಪಗಳನ್ನು ಒಂದು ದೊಡ್ಡ ಹರಿವಾಣದಲ್ಲಿ ಕೆಳಗೆ ಜೋಡಿಸಿಡಲಾಗಿದೆ. ಅವರ ಪೀಠದ ಮುಂದೆ ಅರ್ಧಚಂದ್ರಾಕಾರದಲ್ಲಿ  ಕುಳಿತ ಪ್ರತಿಯೊಬ್ಬ ಭಕ್ತರಿಗೂ ಒಂದೊಂದು ಹರಿವಾಣದಲ್ಲಿ ಎಲ್ಲಾ ಪೂಜಾ ಸಾಮಗ್ರಿಗಳನ್ನು ಕೊಡಲಾಗುತ್ತಿದೆ. ವ್ಯಾಸತೀರ್ಥರ ಪೀಠದಿಂದ ಹಿಡಿದು ನದೀತೀರದವರೆಗೆ ನೂರಾರು ಶಿಷ್ಯರು ಕುಳಿತ ಈ ಅರ್ಧ ಚಂದ್ರಾಕಾರದ ಸಾಲಿನ ವ್ಯಾಸ ದೊಡ್ಡದಾಗುತ್ತಾ  ನದೀತೀರದವರೆಗೂ ಹೋಗುತ್ತದೆ. ಈ ಗುರುಕುಲದ ಗುರುವಾದ ನಮ್ಮ ತಂದೆ  ವಿಠ್ಠಲಶರ್ಮರು ವ್ಯಾಸತೀರ್ಥರ ಪಾದಪೂಜೆ ಮಾಡಿ ಪೂಜೆ ಪ್ರಾರಂಭಿಸುತ್ತಿದ್ದಂತೆ ಎಲ್ಲರೂ ತಮ್ಮ ತಮ್ಮ ಪೂಜೆಯ ಹರಿವಾಣದಲ್ಲಿ ಗುರುಪೂಜೆಯನ್ನು ನೆರವೇರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಇನ್ನೇನು ಸೂರ್ಯೋದಯವಾಗಲಿದೆ ಎನ್ನುವಷ್ಟರಲ್ಲೇ ಎಲ್ಲರೂ ನದಿಯಲ್ಲಿ ಮಿಂದು ತಮ್ಮ ತಮ್ಮ ಪೂಜಾಸ್ಥಾನದಲ್ಲಿ ಕುಳಿತುಕೊಂಡರು. ಸ್ವಲ್ಪ ಸಮಯದಲ್ಲೇ ವ್ಯಾಸತೀರ್ಥರು ಆಗಮಿಸಿ ತಮ್ಮ ಪೀಠವನ್ನಲಂಕರಿಸಿದರು.

ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ.

ಸಾಮೂಹಿಕ ಪ್ರಾರ್ಥನೆಯಿಂದ ಪ್ರಾರಂಭವಾದ ಪೂಜೆಯು ವಿಧಿವತ್ತಾಗಿ, ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಾ ಸಾಗಿತು. ವ್ಯಾಸತೀರ್ಥರು ಧ್ಯಾನದಲ್ಲಿ ಕುಳಿತಿದ್ದರು. ಈ ದಿನ ವಿಶೇಷ ಮಂತ್ರಗಳಾದಂತಹ, ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ "ಗುರು ಗೀತಾ" ಮಂತ್ರದ ಪಠಣ ಗುರುಕುಲದ ವಿಧ್ಯಾರ್ಥಿ ಸಮೂಹದಿಂದ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ  ವಿಶೇಷ ಭಜನೆಗಳು, ಕೀರ್ತನೆಗಳ ಗಾಯನ ಮತ್ತು ಹೋಮಗಳನ್ನು ಕೃಷ್ಣದೇವರಾಯರ ಆಗಮನಾನಂತರ ನೆರವೇರಿಸಲಾಗುವುದು.

ಪೂಜಾವಿಧಿಗಳು ಸಂಪೂರ್ಣಗೊಂಡ ನಂತರ ವ್ಯಾಸತೀರ್ಥರ ಪ್ರವಚನಕ್ಕಾಗಿ ಭಕ್ತಗಣ ಕಾಯುತ್ತಿದ್ದರೆ, ಆದರೆ ರಾಜಗುರುಗಳು ಧ್ಯಾನದಿಂದ ಹೊರಬರುತ್ತಿಲ್ಲ. ಹರಿಯುತ್ತಿರುವ ನದಿಯ ಜುಳುಜುಳು, ನದೀತೀರದಲ್ಲಿನ ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಸಂಪೂರ್ಣ ನೀರವತೆ. ಕಣ್ಣುಮಚ್ಚಿ ಧ್ಯಾನದಲ್ಲಿದ್ದ ವ್ಯಾಸತೀರ್ಥರು ಅದು ಯಾವಾಗ ಹಾಡಲು ಶುರುಮಾಡಿದರೋ ಗೊತ್ತಾಗಲಿಲ್ಲ...

"ಕೃಷ್ಣಾ ನೀ ಬೇಗನೆ ಬಾರೋ

ಬೇಗಾನೇ ಬಾರೋ ಮುಖವನ್ನು ತೋರೋ...

ಇವೇ...ಎರಡು ಸಾಲುಗಳನ್ನು ಪುನರಾವರ್ತೀಸುತ್ತಿದ್ದಾರೆ. ಪಲ್ಲವಿ ಅನುಪಲ್ಲವಿ ಎಲ್ಲಾ ಈ ಎರಡು ಸಾಲುಗಳಲ್ಲೇ ಮಿಳಿತವಾಗಿದೆ. ಪುರಂದದಾಸರು ಎರಡೂ ಕೈ ಎತ್ತಿ ಗುರುವಂದನೆಯನ್ನು ಸಲ್ಲಿಸಿ ಅವರೂ ಈ ಗಾನಸುಧೆಯಲ್ಲಿ ತಲ್ಲೀನರಾಗುತ್ತಾರೆ. ಎಲ್ಲರ ಮುಖದಲ್ಲಿ ಆಶ್ಚರ್ಯ, ಈ ಕೀರ್ತನೆಯನ್ನು ವ್ಯಾಸತೀರ್ಥರು ರಚಿಸಿ ಹಾಡಿದ್ದು ಉಡುಪಿಯ ಕೃಷ್ಣದೇವಾಲಯದಲ್ಲಿ ಅಂತಾ ಕೆಲವರಿಗಷ್ಟೇ ಗೊತ್ತಿತ್ತು. ಆದರೆ ಇವತ್ತು ಗುರುಪೂಜೆಗೆಂದು ಕುಳಿತವರಿಗೆ ಈ ಕೀರ್ತನೆಯನ್ನು ಅದರ ಕತೃವಿನಿಂದಲೇ ಕೇಳುವ ಸೌಭಾಗ್ಯ! ವ್ಯಾಸತೀರ್ಥರನ್ನು ಹತ್ತಿರದಿಂದ ಬಲ್ಲವರಿಗೆ ಈ ಹಾಡು ಕೃಷ್ಣದೇವರಾಯರಿಗೆ ಸಂಭೋದಿತವೇ ಎನಿಸಲಾರಂಭಿಸಿತು. ಇದ್ದರೂ ಇರಬಹುದು, ರಾಜಗುರು ಮತ್ತು ಕೃಷ್ಣದೇವರಾಯರಿನ ನಡುವಿನ ಬಾಂಧವ್ಯ ಅಂತಹದ್ದು.

ಕೃಷ್ಣದೇವರಾಯರು ಸೈನ್ಯದೊಂದಿಗೆ ರಾಯಚೂರಿಗೆ ಹೋದಾಗ ವ್ಯಾಸತೀರ್ಥರು ತಿರುಪತಿಗೆ ತುರ್ತಾಗಿ ಹೋಗಬೇಕಾದ ಸಂಧರ್ಭ ಬಂದೊದಗಿತಂತೆ. ಗುರುವಿನ ಆಶೀರ್ವಾದವಿಲ್ಲದೆ ಯುಧ್ಧಕ್ಕೆ ಹೊರಟುಬಿಟ್ಟೆ ಎನ್ನುವ ಕೊರಗಿನಲ್ಲಿದ್ದರಂತೆ ರಾಯರು. ಅಂತೂ ಯುಧ್ಧದಲ್ಲಿ ಅಧ್ಭುತ ಜಯಗಳಿಸಿ ಈಗ ಮರುಳುತ್ತಿದ್ದಾರೆ, ಅದೂ ಗುರುಪೂರ್ಣಿಮೆಯ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ,  ನಗರಪ್ರವೇಶಿಸಲು,ರಾಜಗುರುವನ್ನು ಪೂಜಿಸಲು...ಆರಾಧಿಸಲು. 

ರಾಯರಿಗೆ ಅಂತಹ ಭಕ್ತಿ ಇದ್ದದ್ದಕ್ಕೆ ತಾನೆ ವ್ಯಾಸತೀರ್ಥರು ಹನ್ನೆರಡು ವರ್ಷಗಳ ನಿರಂತರವಾಗಿ ಸೇವೆ ಸಲ್ಲಿಸಿತ್ತಿದ್ದ ನೆಲೆ ತಿರುಪತಿಯನ್ನು ಬಿಟ್ಟು ಬಂದಿದ್ದು. ವ್ಯಾಸತೀರ್ಥರು ತಿರುಪತಿಗೆ ಬರುವುದಕ್ಕೂ ಮನ್ನ ತಿರಪತಿಯಲ್ಲಿ ಕರ್ಮಕಾಂಡ ತಾಂಡವವಾಡುತ್ತಿತ್ತು. ಪೂಜಾರಿಗಳ ದುರಾಸೆ, ಆಡಳಿತ ವರ್ಗದ ಭ್ರಷ್ಟಾಚಾರ, ಸೈನಿಕರ ದಬ್ಬಾಳಿಕೆ, ಕ್ರೌರ್ಯ ಗಳಿಂದಾಗಿ ತಿರುಪತಿಯ ಪವಿತ್ರತೆಯೇ ಅಳಿಸಿಹೋಗುವ ಅಂಚಿನಲ್ಲಿತ್ತು. ತಿರುಪತಿಯನ್ನು ಉಳಿಸಲು ಒಂದು ಪವಾಡ ನಡೆರಬೇಕಿತ್ತು, ಒಬ್ಬ ಪವಾಡ ಪುರುಷನಿಗಾಗಿ ಕಾಯುತ್ತಿತ್ತು…

ಆ ಪವಾಡ ಪುರುಷ ಮುಳಬಾಗಿಲಿನ ಶ್ರೀ ಮಠದಲ್ಲಿ ಬಹಳ ಆನಂದದಿಂದ ಆಧ್ಯಾತ್ಮದಲ್ಲಿ ತೊಡಗಿದ್ದರು. ಗುರುಗಳಾದ ಶ್ರೀಪಾದರಾಯರ ಮನಸ್ಸಿಲ್ಲದ ಮನಸ್ಸಿನಿಂದ ವ್ಯಾಸತೀರ್ಥರನ್ನು ತಿರುಪತಿಯನ್ನು ಪುನರುತ್ಥಾನಗೊಳಿಸಲು ಕಳುಹಿಸಿದರು. ಮುಖ್ಯ ಅರ್ಚಕರಾಗಿ, ಮುಖ್ಯ ಆಡಳಿತಾಧಿಕಾರಿ ಯಾಗಿ ವ್ಯಾಸತೀರ್ಥರಿಂದ ನಿರೀಕ್ಷಿಸಿದ್ದ ಪವಾಡ ನಡೆದೇಬಿಟ್ಟಿತು. ಪುನಃ ತಿರುಪತಿ ಭಕ್ತಿಯ, ದಾನದ, ಧಾರ್ಮಿಕತೆಯ ಕ್ಷೇತ್ರವಾಗಿ ಮರುಜೀವ ಪಡೆಯಿತು.

ಕೃಷ್ಣದೇವರಾಯರ ತಂದೆ ನರಸನಾಯಕರು ತಿರುಪತಿ ಶ್ರೀನಿವಾಸನ ಮಹಾಭಕ್ತರು. ತಿರುಪತಿಗೆ ಬಂದಾಗ ವ್ಯಾಸತೀರ್ಥರರ ಜೊತೆಗೆ ಅಲ್ಲಿಯ.ಅಭಿವೃದ್ಧಿಯ ಬಗ್ಗೆ ಚರ್ಚಿಸಿ, ಬಿಚ್ಚುಗೈಯಿಂದ ದೇಣಿಗೆ ಕೊಡುತ್ತಿದ್ದರು. ಹಂಪೆಯ ಬಳಿಯ ಚಂದ್ರಗಿರಿಯಲ್ಲಿ ವ್ಯಾಸತೀರ್ಥರಿಗೆಂದೇ ಎಂದು ಒಂದು ಮಠವನ್ನೂ ನಿರ್ಮಿಸಿದರು.

“ಗುರುಗಳೇ...ಈ ಸಾಮ್ರಾಜ್ಯವನ್ನು ಒಂದು ಬೃಹತ್ ಸನಾತನ ಧರ್ಮ ಸಾಮ್ರಾಜ್ಯವನ್ನಾಗಿ ಕಟ್ಟುವುವೆವು  ನಮ್ಮನ್ನು ಆಶೀರ್ವಾದಿಸಲು, ಮಾರ್ಗದರ್ಶನ ಮಾಡಲು ನೀವು ಸದಾ ನಮ್ಮ ಬಳಿಯಲ್ಲಿರಬೇಕು “ ಹೀಗೆ ಪರಿಪರಿಯಾಗಿ ನಿವೇದಿಸಿಕೊಂಡಿದ್ದಕ್ಕೆ ತಿರುಪತಿಯನ್ನು ಬಿಟ್ಟು ಹಂಪೆಗೆ ಬಂದು, ಧರ್ಮದ, ಸಾಮ್ರಾಜ್ಯದ, ಕೃಷ್ಣದೇವರಾಯರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರು ವ್ಯಾಸತೀರ್ಥರು. 

ಅಂತೂ ತಿರುಪತಿಯನ್ನು ಬಿಟ್ಟು ಹೊರಡುವುದಾಗಿ ನಿಶ್ಚಿಯಿಸಿದ ವ್ಯಾಸತೀರ್ಥರು ಶ್ರೀವೆಂಕಟೇಶನ ದರ್ಶನಕ್ಕೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡುವಾಗ, ವಿಗ್ರಹದ ಮೇಲೆ ಹೊದಿಸಿದ್ದ ಕೆಂಪು ಶಲ್ಯ ವ್ಯಾಸತೀರ್ಥರ ತಲೆಯ ಮೇಲೆ ಜಾರಿ ಬಿತ್ತಂತೆ. ಇದು ಆ ಶ್ರೀನಿವಾಸನ ಆಶೀರ್ವಾದ ಎಂದುಕೊಂಡು ಆ ಶಲ್ಯವನ್ನು ಹಂಪೆಗೆ ಬರುವಾಗ ತೆಗೆದುಕೊಂಡು ಬಂದರಂತೆ. ಮುಂದೊಮ್ಮೆ ಸಾಮ್ರಾಜ್ಯಕ್ಕೆ ಕುಹುಯೋಗದ ಕಂಟಕ ಬಂದಾಗ, ಕೃಷ್ಣದೇವರಾಯರ ಪ್ರಾಣ ರಕ್ಷಿಸಲು ಸ್ವತಃ ತಾವೇ ಸಿಂಹಾಸನವನ್ನು ಮೂರುದಿನದ ಮಟ್ಟಿಗೆ ಅಲಂಕರಿಸಿದರಂತೆ. ಮೂರನೇ ದಿನ ಕಾಳಿಂಗ ಸರ್ಪದ ರೂಪದಲ್ಲಿ ಆ ಕುತ್ತು ಬಂದೆರಗಿದಾಗ ಅದೇ ಕೆಂಪು ಶಲ್ಯವನ್ನು ಕಾಳಿಂಗ ಸರ್ಪದ ಮೇಲೆಸೆದು ಅದನ್ನು ಸುಟ್ಟು ಭಸ್ಮಮಾಡಿದರಂತೆ, ನಂತರ ಕೃಷ್ಣದೇವರಾಯರನ್ನು ಕೈಹಿಡಿದು ಪುನಃ ಸಿಂಹಾಸನದ ಮೇಲೆ ಕೂರಿಸಿ ಇನ್ನು ನಿಮ್ಮ ಕಂಟಕ ದೂರವಾಯಿತು ಎಂದು ಆಶೀರ್ವಾದಿಸಿದರಂತೆ. ರಾಜನನ್ನು  ಪ್ರಾಣಕಂಟಕದಿಂದ ಪಾರುಮಾಡಲು ತಾವೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಾಮ್ರಾಜ್ಯದ ರಕ್ಷಣೆ ಮಾಡಿದ ಈ ರಾಜಗುರುಗಳಿಗೆ ಅಂದಿನಿಂದ "ವ್ಯಾಸರಾಜ" ಎಂಬ ಬಿರುದು ಕೊಡಲಾಯಿತು.

ಈಗ ಭಕ್ತಿಪರವಶರಾಗಿ ಇವರು… ಕೃಷ್ಣಾ ನೀ ಬೇಗನೆ ಬಾರೋ...ಎಂದು ಹಾಡುತ್ತಿದ್ದಾರೆ..ಯಾವ ಕೃಷ್ಣನನ್ನು ಕಂಟಕದಿಂದ ಪಾರುಮಾಡಿದರೋ ಆ ಕೃಷ್ಣನನ್ನು ನೋಡಲು ಅಂತಹ ಉತ್ಕಟತೆ. ಅದೇ ಸಮಯಕ್ಕೆ ಈ ಗಾಯನಕ್ಕೆ ಉತ್ತರವೆನಿಸುವಂತೆ ಹೊಸಪೇಟೆಯ ಮುಖ್ಯದ್ವಾರದಿಂದ ಕಹಳೆಗಳ ಧ್ವನಿ ಮೊಳಗಲಾರಂಭಿಸಿತು... ಕೃಷ್ಣದೇವರಾಯರ ಆಗಮನವಾಗುತ್ತಿದೆ ಎನ್ನುವ ಸಂದೇಶದೊಂದಿಗೆ. ಇತ್ತ ರಾಜಗುರುಗಳು ಭಾವಪರವಶರಾಗಿ ಕೃಷ್ಣನನ್ನು ಬೇಗ ಬರಲು ಕರೆಯುವ ಹಾಡು ಹಾಡುತ್ತಿದ್ದರೆ ಅತ್ತ ರಾಯರು ಅಷ್ಟೇ ಉತ್ಸಾಹದಿಂದ ನಗರ ಪ್ರವೇಶ ಮಾಡುತ್ತಿದ್ದಾರೆ. ಹೆಬ್ಬಾಗಿಲಿನಲ್ಲಿ ರಾಣಿಯವರು ತಮ್ಮ ಸಖಿಯರೊಂದಿಗೆ ಕೃಷ್ಣದೇವರಾಯರಿಗೆ, ವಿಜಯನಗರದ ಸೈನ್ಯಕ್ಕೆ ವಿಜಯದಾರತಿಯನ್ನು ನೆರೆವೇರಿಸುವ ಕಾರ್ಯಕ್ರಮದ ಉಸ್ತುವಾರಿ ಅನಂತಶಾಸ್ತ್ರಿಗಳ ಜೊತೆಗೆ ನನ್ನನ್ನೂ ನಿಯಮಿಸಿದ್ದರಿಂದ ನಾವು ಹೆಬ್ಬಾಗಿಲಿನ ಕಡೆ ತ್ವರಿತವಾಗಿ ಬಂದು ತಲುಪಿದೆವು.

ಇಡೀ ಹೊಸಪೇಟೆಯನ್ನು ನವವಧುವಿನಂತೆ ಶೃಂಗರಿಸಿದ್ದಾರೆ. ಕಣ್ಣು ಹಾಯುವ ತನಕ ವರ್ಣರಂಜಿತ ದೃಷ್ಯ. ರಾಜಬೀದಿಯ ಇಕ್ಕೆಲೆಗಳಲ್ಲಿ ನೆರೆದಿದ್ದ ನೂರಾರು ಸಖಿಯರು ಬೀದಿಯನ್ನು ಬಣ್ಣ ಬಣ್ಣಗಳ ಹೂವಿನ ಹಾಸಿಗೆಯನ್ನಾಗಿಸಿ ಬಿಟ್ಟಿದ್ದರು. ಸ್ವಾಗತಂ...ಸುಸ್ವಾಗತಂ..ಗಾಯಕರ ಒಕ್ಕೊರಲಿನ ಹಾಡು ತಾರಕಕ್ಕೇರುತ್ತಿದ್ದಂತೆ ಕೃಷ್ಣದೇವರಾಯರ ಆನೆಯ ಪ್ರವೇಶವಾಗುತ್ತದೆ. ಮುಖ್ಯದ್ವಾರದಿಂದ ಸುಮಾರು ದೂರದಲ್ಲಿರುವಾಗಲೇ ಕೃಷ್ಣದೇವರಾಯರು ಅಂಬಾರಿಯಿಂದ ಕೆಳಗಿಳಿದು ಮುಖ್ಯದ್ವಾರದ ಕಡೆಗೆ ನಡೆಯಲು ಪ್ರಾರಂಭಿಸುತ್ತಾರೆ.

ಅಲಾಲಾ ಅದೇನು ಠೀವಿ..ಅದೇನು ಗಂಡುಗಲಿಯ ನಡೆಗೆ! ಎರಡೂ ಕೈಗಳನ್ನು ಬೀಸುತ್ತಾ ಒಂದು ಸುತ್ತು ನಿಂತಲ್ಲೇ ಎಲ್ಲರೆಡೆಗೆ ನೋಡುತ್ತಿದ್ದಂತೇ ಸಖಿಯರು ಅವರ ಮೇಲೆ ಹೂವಿನ ಮಳೆಯನ್ನು ಹರಿಸುತ್ತಾರೆ. ದೊರೆಯನ್ನು ಅನುಸರಿಸಿ ಎಲ್ಲಾ ದಂಡನಾಯಕರುಗಳು ತಮ್ಮ ತಮ್ಮ ಆನೆ ಕುದುರೆಗಳಿಂದ ಕೆಳಗಿಳಿದು ರಾಯರ ಹಿಂದೆಯೇ ನಡೆಯಲಾರಂಬಿಸುತ್ತಾರೆ.

ಹೆಬ್ಬಾಗಿಲಿನಲ್ಲಿ ಆರತಿ ತಟ್ಟೆಯೊಂದಿಗೆ ನಿಂತಿದ್ದ ರಾಣಿಯರನ್ನು ನೋಡುತ್ತಾ ಕೃಷ್ಣದೇವರಾಯರು ಅವರ ಕಡೆಗೂ ಕೈ ಬೀಸುತ್ತಾ ಬದಿಗೆ ಸರಿಯುತ್ತಾರೆ. ಈಗ ಸ್ವಲ್ಪ ಗಲಿಬಿಲಿ..ದಂಡನಾಯಕರುಗಳಲ್ಲಿ , ರಾಯರು ಬದಿಗೆ ಸರಿದರೆ ತಾವೇನು ಮಾಡಬೇಕು? ಕೃಷ್ಣದೇವರಾಯರು ಒಬ್ಬೊಬ್ಬ ದಂಡನಾಯಕರನ್ನೂ ಮುಂದೆ ತಳ್ಳುತ್ತಾರೆ..ನೀವು ಮೊದಲು ಪ್ರವೇಶಿಸಿ, ಹೋಗಿ ನಾವು ಹಿಂದಿನಿಂದ ಬರುತ್ತೇವೆ...ಎನ್ನುತ್ತ ಒಬ್ಬೊಬ್ಬರರ ಹೆಗಲಿನ ಮೇಲೆ ಕೈ ಇರಿಸಿ ಮುನ್ನಡಿಯಿರಿ ಎಂದು ಇನ್ನೊಂದು ಕೈಯಿಂದ ಸನ್ನೆ ಮಾಡುತ್ತಾರೆ.

ಈಗ ಈ ದಂಡನಾಯಕರುಗಳನ್ನು ರಾಣಿಯರಿಗೆ ಪರಿಚಯಿಸಿ ಕೊಡುವುದು ಅನಂತ ಶಾಸ್ತ್ರಿಗಳದ್ದು. ಸುಮಾರು ಮೂರೂವರೆ ತಿಂಗಳು ಸೈನ್ಯದ ಜೊತೆ ಶಿಬಿರದಲ್ಲಿದ್ದ ಅನಂತಶಾಸ್ತ್ರಿಗಳು ಈ ದಂಡನಾಯಕರುಗಳಿಗೆ ಎಷ್ಟು ಆತ್ಮೀಯವಾಗಿದ್ದರು ಎನ್ನುವುದು ಅವರತ್ತ ಮುಗುಳ್ನಗೆಯೆಂದಿಗೆ ವಂದಿಸಿದಾಗಲೇ ಅರ್ಥವಾಯಿತು. ಈಗ ಶಾಸ್ತ್ರಿಗಳು ಮುಂದೆ ಬಂದು ರಾಣಿಯರಿಗೆ ಒಬ್ಬೊಬ್ಬ ದಂಡನಾಯಕರುಗಳನ್ನು ಪರಿಚಯಿಸಿಕೊಡುತ್ತಾರೆ..

ಇವರು..ಹಂಡೆ ಮಲ್ಲರಾಯರು ...

ರಾಣಿಯರು ಅವರಿಗೆ ಆರತಿ ಬೆಳಗಿ ಹಣೆಗೆ ತಿಲಕವಿಡುತ್ತಾರೆ.

ಇವರು ಬೋಯ ರಾಮಪ್ಪ..

ಇವರು ಕನ್ನಡ ಬಸವಪ್ಪ ನಾಯಕ...

ಇವರು ವಿಠಲಪ್ಪ ನಾಯಿಡು..

ಇವರು ಅಕ್ಕಪ್ಪ ನಾಯಿಡು..

ಹೀಗೆ ಇಪ್ಪತ್ತಾರು ದಂಡನಾಯಕರುಗಳ ವಿಜಯದಾರತಿಯನ್ನು ರಾಣಿಯರು ನೆರವೇರಿಸುತ್ತಾರೆ. ಅದೆಂತಹ ಜ್ಞಾಪಕ ಶಕ್ತಿ ನಮ್ಮ ಅನಂತಶಾಸ್ತ್ರಿಗಳದು, ಒಬ್ಬೊಬ್ಬ ದಂಡನಾಯಕರುಗಳ ಹೆಸರನ್ನು ನೆನಪಿಟ್ಟುಕೊಂಡಿದ್ದಾರೆ. ಈಗ ಬರುತ್ತಾರೆ ಶ್ರೀರಂಗಪಟ್ಟಣದ ಕುಮಾರ ವೀರಯ್ಯ ಮತ್ತು ಅವರ ಅಳಿಯ ಕೃಷ್ಣದೇವರಾಯರು. ಒಮ್ಮೆಲೇ ನೆರೆದಿದ್ದ ಜನಸ್ತೋಮದಲ್ಲಿ ವಿದ್ಯುತ್ ಸಂಚಲನವಾದಂತೆ. ಎವೆಇಕ್ಕಿದರ ಎಲ್ಲಿ ಈ ದೃಷ್ಯ ಮರೆಯಾಗಿಬಿಡುತ್ತೋ ಎನ್ನುವಂತೆ ಜನಸ್ತೋಮ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದಾರೆ.

ಪಟ್ಟದರಾಣಿ ತಿರುಮಲಾಂಬೆ ಆರತಿ ತಟ್ಟೆ ಹಿಡಿದು ತಮ್ಮ ತಂದೆಯ ಮುಂದೆ ನಿಲ್ಲುತ್ತಾರೆ. ರಾಣಿ ಚಿನ್ನಮ್ಮದೇವಿ ಆರತಿ ತಟ್ಟೆಯೊಂದಿಗೆ ಕೃಷ್ಣದೇವರಾಯರ ಮುಂದೆ ನಿಲ್ಲುತ್ತಾರೆ. ಇವರಿಬ್ಬರ ನಡುವೆ ಮಗು ತಿರುಮಲರಾಯ.

ಸುತ್ತಲೂ ನಡೆಯುತ್ತಿದ್ದ ಸಂಭ್ರಮಗಳಿಂದ ಸ್ವಲ್ಪ ಗಲಿಬಿಲಿಗೊಂಡಿದ್ದ ಮಗು ತಂದೆಯ ಮುಖವನ್ನು ಕಂಡದ್ದೇ ಅಪ್ಪಾಜೀ...ಎಂದು ಅವರಕಡೆ ಓಡಲು ಕೃಷ್ಣದೇವರಾಯರೂ ಓಡಿಬಂದು ಮಗುವನ್ನೆತ್ತಿಕೊಂಡು ಮುದ್ದಿನ ಮಳೆಗರೆಯುತ್ತಾರೆ. ಈಗ ರಾಣಿಯರಿಬ್ಬರೂ ನಸುನಗುತ್ತಾ ತಾತ, ತಂದೆ ಮತ್ತು ಮಗು, ಮೂವರನ್ನು ಸೇರಿಸಿ  ವಿಜಯದಾರತಿಯನ್ನು ಬೆಳಗುತ್ತಲೇ..ನಿಂತಿದ್ದ ಜನಸ್ತೋಮ ಗಗನ ಬಿರಿಯುವಂತೆ ಜಯಕಾರ ಹಾಕುತ್ತಾರೆ.....

"ಶ್ರೀ ಕೃಷ್ಣದೇವರಾಯರಿಗೆ ಜಯವಾಗಲಿ" "ಕರ್ನಾಟಕ ರಾಜ್ಯ ರಮಾರಮಣ..ಬಹುಪರಾಕ್"

-ವಿಂಗ್ ಕಮಾಂಡರ್ ಸುದರ್ಶನ

ಮಾಹಿತಿ: ಕಾರ್ತಿಕೇಯನ್ ಎಸ್.ಎನ್.