ಹಸಿರು ಹಾದಿಯ ಕಥನ
ರೈತ ಹೋರಾಟಗಾರ ಹೆಚ್ ಆರ್ ಬಸವರಾಜಪ್ಪನವರ ಐದು ದಶಕಗಳ ಹೋರಾಟದ ಹಿನ್ನೋಟವೇ 'ಹಸಿರು ಹಾದಿಯ ಕಥನ' ಎಂಬ ಕೃತಿ. ಬಸವರಾಜಪ್ಪನವರ ಮಾತುಗಳನ್ನು ಗಿರೀಶ್ ತಾಳೀಕಟ್ಟೆ ಹಾಗೂ ಕೆ ಎಲ್ ಅಶೋಕ್ ಅವರು ಸೊಗಸಾಗಿ ನಿರೂಪಿಸುತ್ತಾ ಅಕ್ಷರರೂಪಕ್ಕೆ ಇಳಿಸಿದ್ದಾರೆ. ೮೦ರ ದಶಕದಲ್ಲಿ ಆರಂಭವಾದ ರೈತ ಚಳುವಳಿಯಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಬಸವರಾಜಪ್ಪನವರು ಇಂದಿಗೂ ಅಷ್ಟೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ರೈತರ ಮನೆ ಜಪ್ತಿಗೆ ಪ್ರತಿಯಾಗಿ ಬಸವರಾಜಪ್ಪನವರ ನೇತೃತ್ವದಲ್ಲಿ ಭದ್ರಾವತಿಯ ತಹಶೀಲ್ದಾರ್ ಮನೆ ಜಪ್ತಿ ಮಾಡುವ ಹೋರಾಟ ನಡೆದಿತ್ತು. ಅಲ್ಲಿಂದ ಆರಂಭವಾಗಿ ದೆಹಲಿಯಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ನಿರ್ದೇಶಕರ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದ್ದರು. ನಾಗಸಮುದ್ರ ಗೋಲೀಬಾರ್ ವಿರುದ್ಧ ಹಲವು ವರ್ಷಗಳ ಕಾಲ ರೈತ ಹೋರಾಟ ಮುನ್ನಡೆಸಿದ್ದ ಎಚ್ ಆರ್ ಬಸವರಾಜಪ್ಪನವರ ಐದು ದಶಕಗಳ ಸುದೀರ್ಘ ಹೋರಾಟದ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
ಭಗವತೀಕೆರೆಯ ರೈತ ಕಡಿದಾಳ್ ಶಾಮಣ್ಣ ಇವರು ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. "ಕರ್ನಾಟಕ ರಾಜ್ಯ ರೈತ ಸಂಘವು ಕೇವಲ ರೈತರನ್ನು ಪ್ರತಿನಿಧಿಸುವ ಸಂಘಟನೆ ನಾತ್ರ ಆಗಿರಲಿಲ್ಲ. ಅದು ಸಾಮಾಜಿಕ, ರಾಜಕೀಯ, ಆರ್ಥಿಕ ಚಳುವಳಿಯೂ ಆಗಿತ್ತು. ಯಾವುದೇ ಚಳುವಳಿಯನ್ನು ನಾವು ಉದ್ದೇಶಪೂರ್ವಕವಾಗಿ ತಿದಿ ಊದಿ ಉದ್ದೀಪಿಸಲು ಸಾಧ್ಯವಿಲ್ಲ. ಜನತೆಯಲ್ಲಿ ವ್ಯವಸ್ಥೆ ಮೇಲಿನ ಸಹನೆ ಹದ್ದು ಮೀರುವ ಹಂತ ತಲುಪಿದಾಗ ಚಳುವಳಿಗಳು ರೂಪುಗೊಳ್ಳಲು ಭೂಮಿಕೆ ಸಿದ್ಧವಾಗುತ್ತದೆ. ಕಾಲದ ಆ ಅಪೇಕ್ಷೆಗೆ ನಾವು ಪ್ರಜಾತಾಂತ್ರಿಕ ನೆಲೆಗಳಲ್ಲಿ ಕ್ರೋಢೀಕರಣದ ರೂಪ ಕೊಟ್ಟಾಗ ಚಳುವಳಿ ಮೈದುಂಬುತ್ತದೆ. ಅಲ್ಲಿಯವರೆಗೂ ಚಳುವಳಿಗಾರರು ಸೋಲಿನ ಹತಾಶೆಗಳನ್ನು ಲೆಕ್ಕಿಸದೆ ನಿರಂತರ ಪ್ರಯತ್ನಶೀಲರಾಗಿರಬೇಕು.
೧೯೭೨ರಲ್ಲೇ ನಾವು ಶಿವಮೊಗ್ಗ ಕಬ್ಬು ಬೆಳೆಗಾರರ ಸಂಘವನ್ನು ಹುಟ್ಟುಹಾಕಿದರೂ, ೧೯೮೦ರ ನರಗುಂದ ಬಂಡಾಯದವರೆಗೆ ನಮಗೆ ಹೇಳಿಕೊಳ್ಳುವಂತಹ ಭೂಮಿಕೆ ಒದಗಿಬರಲಿಲ್ಲ. ಆದರೂ ನಮ್ಮ ರೈತಪರ ಹೋರಾಟಗಳು ನಿರಂತರವಾಗಿದ್ದವು. ಆ ನಿರಂತರತೆಯೇ ಚಳವಳಿಯ ಜೀವಾಳ. ಇವತ್ತಿನ ಚಳವಳಿಗಾರರು ಇದನ್ನು ಮರೆಯಬಾರದು.
ರೈತ ಸಂಘಕ್ಕೆ ಪ್ರಬಲ ಅಡಿಪಾಯ ಒದಗಿಸಿದ್ದು ಶಿವಮೊಗ್ಗ. ರಾಜ್ಯಮಟ್ಟದಲ್ಲಿ ರುದ್ರಪ್ಪನವರು, ಎಂಡಿಎನ್, ಸುಂದ್ರೇಶ್ ಹೇಗೆ ಗಟ್ಟಿ ನಾಯಕತ್ವ ಒದಗಿಸಿದರೋ ಹಾಗೆ ಆರಂಭದ ದಿನಗಳಲ್ಲಿ ಶಿವಮೊಗ್ಗದಲ್ಲಿ ರೈತ ಸಂಘಕ್ಕೆ ದಿಟ್ಟ ನಾಯಕತ್ವ ಒದಗಿಸಿದವರಲ್ಲಿ ಬಸವರಾಜಪ್ಪನವರೂ ಒಬ್ಬರು. ರೈತ ಸಂಘದ ಬಗ್ಗೆ ಅವರಿಗಿದ್ದ ಬದ್ಧತೆ, ಸಮರ್ಪಣಾಭಾವ ಪ್ರಶ್ನಾತೀತ. ಅವೆಲ್ಲವೂ ಈ ಕೃತಿಯಲ್ಲಿ ಅನಾವರಣಗೊಂಡಿದೆ. ರೈತ ಸಂಘದ ಏಳು ಬೀಳುಗಳ ಸ್ಥೂಲ ನೋಟ ಇಲ್ಲಿದೆ. ಮುಂದಿನ ಪೀಳಿಗೆಯವರಿಗೆ ಈ ಕೃತಿ ಒಂದು ಆಕರವಾಗಬಲ್ಲದು ಎಂಬುದು ನನ್ನ ಅಭಿಮತ." ಎಂದು ಅಭಿಪ್ರಾಯ ಪಟ್ಟಿದ್ದಾರೆ ಕಡಿದಾಳ್ ಶಾಮಣ್ಣ. ಪುಸ್ತಕ ೩೩೦ ಪುಟಗಳನ್ನು ಹೊಂದಿದೆ.