ಹಸಿವು (ಚಿತ್ರಕ್ಕೊಂದು ಭಾವ)

ಹಸಿವು (ಚಿತ್ರಕ್ಕೊಂದು ಭಾವ)

(ಚಿತ್ರಗಳಲ್ಲಿ ಭಾವನೆಗಳನ್ನು ಹುಡುಕುವ ಪ್ರಯತ್ನ ಆರಂಭಿಸಿದ್ದೇನೆ)

ಒಂದು ಪುಟ ಅಥವಾ ಒಂದು ಪುಸ್ತಕ ಹೇಳುವ ಕಥೆಯನ್ನು ಬರಿಯ “ಒಂದು ಚಿತ್ರ” ಹೇಳಬಲ್ಲದಂತೆ, ಈ ಮಾತು ಎಷ್ಟು ಸತ್ಯ ಅನಿಸುತ್ತಿದೆ ಅಲ್ಲವೇ,

ಮೇಲಿನ ಚಿತ್ರ ನೋಡಿದಾಗ, ಬಂದ ಆಲೋಚನೆಗಳು, ಒಳ ತುಡಿತಗಳು ಅದೆಷ್ಟು !!!! ಬಹುಷಃ ಚಿತ್ರವನ್ನು ಪದಗಳಲ್ಲಿ ಬಂದಿಸುವುದೇ ವ್ಯರ್ಥ ಪ್ರಯತ್ನ ಎನಿಸಿಬಿಡುತ್ತದೆ. ಪುಟ್ಟ ಮಗು ಒಂದು ಅನ್ನದ ತಟ್ಟೆಯ ಎದುರಲ್ಲಿ ಕುಳಿತು ಹಸಿವನ್ನು ಒಳಗೆಲ್ಲೋ ಬಚ್ಚಿಟ್ಟು ತನ್ನದೇ ಭಾಷೆಯಲ್ಲಿ, ತನ್ನ ಕಲ್ಪನೆಯ ದೇವನಿಗೋ ಅಥವಾ ಅನ್ನದಾತನಿಗೋ ನಮನ ಸಲ್ಲಿಸುತ್ತಿದೆ,

ಹಸಿವು ಮನುಷ್ಯನ ಅಸ್ತಿತ್ವಕ್ಕೆ ಒಂದು ಕೈಗನ್ನಡಿ. ಹಸಿವೆ ಇಲ್ಲದ ಮನುಷ್ಯ ಇರಲು ಸಾಧ್ಯವೇ ಇಲ್ಲ. ಮಾನವನ ಪ್ರತಿ ಚಲನ-ವಲನದ ಹಿಂದೆಯೂ ಹಸಿವಿನ ಆರ್ಭಟ ಇಲ್ಲದಿಲ್ಲ. ದೇಹ ದೇಶ ಭಾಷೆ ಎಲ್ಲವನ್ನೂ ಮೀರಿದ್ದು ಹಸಿವು ಮಾತ್ರ, ಹಸಿವೆಗಳಲ್ಲಿ ಅನೇಕ ವಿದಗಳಿದ್ದರೂ, ಇಲ್ಲಿರುವುದು ಮುಗ್ಧ ಹೊಟ್ಟೆಯ ಹಸಿವು,

ಮುಗ್ಧವಾದ ತನ್ನ ಮನದೊಳಗೆ, ಪುಟ್ಟ ಪುಟ್ಟ ಕೈಗಳಿಂದ ಆ ಮಗು ಏನು ಯೋಚಿಸುತ್ತಿರಬಹುದು, ಎನ್ನುವುದೇ ಪ್ರಶ್ನೆಯಾಗಿ ಕಾಡುತ್ತಿದೆ, ಅದರ ಕಪ್ಪು ಮುಖದ ಮೇಲಿನ ಸಿಗ್ಧ ಸೌಂದರ್ಯ, ಹಾಗು ಅದರ ಉಬ್ಬಿದ ಮೃಧು ಕೆನ್ನೆಗಳು ಮಗು ಸಹಜ ಪ್ರೇಮದ ಸೆಲೆಯನ್ನು ಮನದೊಳಗೆ ಹುಟ್ಟಿಸುತ್ತದೆ, ಮಗು ಕುಳಿತ ಜಾಗದ ಅವಲೋಕನ ಮಾಡಿದರೆ, ಅದಕ್ಕೆ ತಾಯಿಯ ಮಡಿಲಿನ ಅಭಾವ ಎದ್ದು ಕಾಣುತ್ತದೆ. ಅದರ ತಲೆಗೆ ಹಾಕಿದ ಬಣ್ಣದ ರಿಬ್ಬನ್ನು, ಹೆಣ್ತನದ ಸೌಂದರ್ಯವನ್ನು ಹೊರಸೂಸುತ್ತದೆ, ಮತ್ತೆ ಅದರ ಕೈಗೆ ಕಟ್ಟಿದ ಅಷ್ಟು ದಾರಗಳು ಹಾಗು ಒಂದು ಪುಟ್ಟ ಬಳೆ ಕೈಯ ಅಂದವನ್ನು ಹೆಚ್ಚಿಸಿವೆ.

ಸಹಜ ಸೌಂದರ್ಯದ, ಪದಗಳಿಗೆ ನಿಲುಕದ, ಗಾಡವಾದ ಏಕಾಗ್ರತೆಯಲ್ಲಿ ಕುಳಿತಂತೆ ಕಾಣುವ ಮುದ್ದು ಮಖವನ್ನು ನೋಡಿದರೆ, ಎಲ್ಲೋ ಓಂದು ಕಡೆ ಬಾಲ್ಯ ನೆನಪಾಗುತ್ತದೆ, ಹಸಿವಿನೊಂದಿಗೆ ನಡೆಸಿದ ಸೆಣೆಸಾಟ ನೆನಪಾಗುತ್ತದೆ. ಭಾರತದಲ್ಲಿ ಮಾತ್ರ ಹೀಗಾಗಲು ಸಾಧ್ಯ ಎಂದು ಕೆಲವರು ಹೇಳುವುದುಂಟು. ಇನ್ನು ಮುಂದೆ ಆ ಮಾತುಗಳನ್ನು ನಿಲ್ಲಿಸುವುದೇ ಒಳ್ಳೆಯದೆನಿಸುತ್ತದೆ.

ಜಾಗತೀಕರಣದ ಪ್ರತಿನಿಧಿಗಳಂತೆ, ನಮ್ಮ ಮಕ್ಕಳನ್ನು ಅಕ್ಷರಗಳ ಗೂಡೊಳಗೆ ತುಂಬಿ, ಮಗುಸಹಜ ಮುಗ್ಧತೆಯನ್ನು ಕೊಂದು, ಅವರನ್ನು ಆದಷ್ಟು ಬೇಗ ಯುದ್ದಕ್ಕೆ ತಯಾರಿಸುವಂತೆ ತಯಾರಿಸಿ, ಮಕ್ಕಳ ಮೊದಲ ಶತ್ರುಗಳು ನಾವೇ ಆಗುತ್ತಿದ್ದೇವೆ ಎನಿಸುತ್ತಿದೆ.

ಮನದೊಳಗೆ ನಡೆಯುವ ಅನೇಕ ಮೌನ ಸಂವಾದಗಳಿಗೆ, ಭಾವವನ್ನು ಕೆರಳಿಸಿ, ಉದ್ವಿಗ್ನಗೊಳಿಸುವ ಈ ಚಿತ್ರ,  ತನ್ಮಯತೆಯಿಂದ ಮಗುವಿನ ಆನಂದವನ್ನು, ಅದರ ಮುಗ್ಧತೆಯನ್ನು ಸೆರೆಹಿಡಿದು ತೋರಿಸುತ್ತಿದೆ,,,

ತಣಿಯಲಿ ಆ ಮಗುವಿನ ಹಸಿವು ಎಂದು ಪ್ರಾರ್ಥಿಸುತ್ತ, ಭಾವದೊಳಗೆ ಕರಗಿಬಿಡುತ್ತೇನೆ.

(ಚಿತ್ರಕೃಪೆ : ಅಂತರ್ಜಾಲ)

–ಜೀ ಕೇ ನ

ಮುಗ್ಧಸಿಂಚನ‌

Comments

Submitted by H A Patil Sat, 11/01/2014 - 19:34

ನವೀನ ರವರಿಗೆ ವಂದನೆಗಳು
ಮುಗ್ಧ ಮಗುವಿನ ಚಿತ್ರ ಮತ್ತು ಅದರ ಆಂತರ್ಯವನ್ನು ತಾವು ಬಿಡಿಸಿಟ್ಟ ಪರಿ ನನ್ನನ್ನು ಗಾಢವಾಗಿ ತಟ್ಟಿದೆ. ಸದಾ ಕಾಲ ನೋಡಿದಾಗೊಮ್ಮೆ ಕಾಡುವ ಚಿತ್ರ ಮಗುವಿನ ಕುರಿತ ತಮ್ಮ ಕಳಕಳಿಗೆ ಧನ್ಯವಾದಗಳು.