ಹಸಿವು ನೀಗಿದರೆ ಶೈಕ್ಷಣಿಕ ಗೆಲುವು

ಹಸಿವು ನೀಗಿದರೆ ಶೈಕ್ಷಣಿಕ ಗೆಲುವು

ಹಸಿದವನಿಗೆ ಅನ್ನ ನೀಡಬೇಕೆ ಹೊರತು ವೇದಾಂತವನ್ನಲ್ಲ ಎಂದಿದ್ದರು ಸ್ವಾಮಿ ವಿವೇಕಾನಂದರು. ಹಸಿದ ವಿದ್ಯಾರ್ಥಿಗಳನ್ನು ಮುಂದೆ ಕೂರಿಸಿಕೊಂಡು ಬೋಧನೆ ಮಾಡುವ ಆಧುನಿಕ ಅವಸ್ಥೆ ಕೂಡ ಮಹನೀಯರ ಶತಮಾನದ ಹಿಂದಿನ ಮಾತಿಗೆ ಹೊಂದಿಕೆ ಆಗುವಂಥ ಸಂಗತಿ. ವಿದ್ಯಾರ್ಥಿಗಳ ಹಸಿವು ಲೆಕ್ಕಿಸದೆ ಶಿಕ್ಷಣ ಧಾರೆಯೆರೆಯುವ ಪರಂಪರೆ ಬಹುತೇಕ ಕಾಲೇಜುಗಳಲ್ಲಿ ಈಗಲೂ ಜೀವಂತವೇ. ಆದರೆ, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅಧ್ಯಾಪಕ ವೃಂದ ಈ ವಿಚಾರದಲ್ಲಿ ಕಣ್ತೆರೆದು ನೋಡುವ ಕೆಲಸ ಮಾಡಿ, ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಹಸಿದ ಹೊಟ್ಟೆಯಲ್ಲಿ ತರಗತಿಗೆ ಹಾಜರಾಗುವ ವಿದ್ಯಾರ್ಥಿನಿಯರಿಗೆ ‘ಸಂತೃಪ್ತಿ’ ಯೋಜನೆ ಮೂಲಕ ಉಚಿತ ಊಟ ನೀಡುವ ಅಧ್ಯಾಪಕರ ಮಾನವೀಯ ಕಾರ್ಯ ಸಮಾಜದ ಶ್ಲಾಘನೆಗೆ ಪಾತ್ರವಾಗಿದೆ. 

ನಗರದ, ಪಟ್ಟಣದ ಕಾಲೇಜುಗಳಿಗೆ ದೂರದ ಹಳ್ಳಿಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಬೆಳಿಗ್ಗೆ ಎಂಟು ಗಂಟೆಗೆ ತರಗತಿ ಆರಂಭವೆಂದರೆ, ಇವರೆಲ್ಲ ಒಂದೆರಡು ತಾಸು ಪೂರ್ವದಲ್ಲಿಯೇ ಮನೆ ಬಿಟ್ಟಿರುತ್ತಾರೆ. ಎಷ್ಟೋ ವಿದ್ಯಾರ್ಥಿಗಳು ಉಪಹಾರವನ್ನೂ ಸೇವಿಸದೇ ತರಗತಿಯಲ್ಲಿ ನಾಲ್ಕೈದು ತಾಸು ಕುಳಿತು ಪಾಠ ಆಲಿಸುತ್ತಾರೆ. ಒಟ್ಟಾರೆ ಇಡೀ ಅರ್ಧ ದಿನ ಇವರು ಕಿಂಚಿತ್ತೂ ಆಹಾರವನ್ನೂ ಸೇವಿಸದೆ ಅನಾರೋಗ್ಯಕ್ಕೂ ತುತ್ತಾಗುತ್ತಾರೆ. ಬೆಳೆಯುವ ವಯಸ್ಸಿನ ಮಕ್ಕಳು ಹೀಗೆ ಆಹಾರವಿಲ್ಲದೆ ಶೈಕ್ಷಣಿಕ ದಿನಚರಿಯನ್ನು ಸಾಗಿಸುವುದೂ ಸಮಾಜದ ಕಣ್ಣೆದುರಿನ ಘೋರ ದುರಂತ.

ಆಹಾರದ ಕೊರತೆಯಿಂದ, ಹಸಿವಿನಿಂದ ಯಾರೂ ಬಳಲಬಾರದು ಎಂಬ ಆಶಯದಿಂದ ಆಹಾರ ಭದ್ರತಾ ಕಾಯಿದೆಯನ್ನು ಒಪ್ಪಿಕೊಂಡ ರಾಷ್ಟ್ರ ನಮ್ಮದು. ಇದರ ಮುಂದುವರಿದ ಭಾಗವೆಂಬಂತೆ ತಮಿಳುನಾಡಿನಲ್ಲಿ ಕೆ.ಕಾಮರಾಜನ್ ಅವರ ಆಡಳಿತವಿದ್ದಾಗ ಬಿಸಿಯೂಟ ಅಳವಡಿಸಿಕೊಂಡ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವೂ ಹೆಚ್ಚತೊಡಗಿತು. ಎಷ್ಟೋ ಬಡ ವಿದ್ಯಾರ್ಥಿಗಳು ಒಂದು ಹೊತ್ತಿನ ಊಟಕ್ಕಾಗಿ ಶಾಲೆ ಬಾಗಿಲಿಗೆ ಬರತೊಡಗಿದರು. ಅಲ್ಲಿಯ ತನಕ ಯಾರಿಗೂ ಅಷ್ಟಾಗಿ, ಶಿಕ್ಷಣ ಮತ್ತು ಊಟಕ್ಕಿರುವ ನಂಟು ಗಮನಕ್ಕೂ ಬಂದಿರಲಿಲ್ಲ.

ಮಹಾರಾಣಿ ಕಾಲೇಜಿನಲ್ಲಿ ಪ್ರಾಂಶುಪಾಲರು, ಅಧ್ಯಾಪಕರು ತಮ್ಮ ಸಂಭಾವನೆಯ ಪುಟ್ಟ ಭಾಗವನ್ನು ‘ಸಂತೃಪ್ತಿ' ಎಂಬ ಮಾನವೀಯ ಕಾರ್ಯಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಇದು ಕೇವಲ ಆ ಕಾಲೇಜಿನ ಪರಿಸ್ಥಿತಿಯೆಂದು ಸರಕಾರ ಸುಮ್ಮನಾಗದೇ, ರಾಜ್ಯದ ಎಲ್ಲ ಕಾಲೇಜುಗಳಿಗೂ ಹಸಿದ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ಕೈಜೋಡಿಸುವುದು ಅವಶ್ಯ ಕೂಡ. ಬಡತನ, ಆಹಾರ ಅಲಭ್ಯತೆ ಕಾರಣದಿಂದ ಕಾಲೇಜು ಶಿಕ್ಷಣದಿಂದ ವಿಮುಖರಾಗುತ್ತಿರುವವರ ಸಂಖ್ಯೆ ಇಳಿಮುಖವಾಗಲೂ ಬಹುದು. ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಹಲವು ಯೋಜನೆಗಳಿಗೆ ಮೊದಲಿನಿಂದಲೂ ಕೇಂದ್ರ ಸರಕಾರ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ರಾಜ್ಯ ಸರಕಾರಗಳು ಇದಕ್ಕೆ ಪೂರಕವಾಗಿ ನಡೆದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ವಿದ್ಯಾರ್ಥಿಗಳ ಹಸಿವು ನೀಗಿದರಷ್ಟೇ, ಶೈಕ್ಷಣಿಕ ಗೆಲುವೂ ಸಾಧ್ಯ. ಸರಕಾರ ಇತ್ತ ನೋಡಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೮-೦೧-೨೦೨೩   

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ