ಹಸಿ ಬಟಾಣಿಯ ಪ್ರಯೋಜನಗಳು

ಈಗ ಹಸಿ ಬಟಾಣಿ ಕೋಡುಗಳು ಮಾರುಕಟ್ಟೆಗೆ ಬರುವ ಸಮಯ. ಒಣಗಿದ ಬಟಾಣಿಗಳನ್ನು ಬಳಸಿ ಎಷ್ಟೇ ಚೆನ್ನಾಗಿ ಪದಾರ್ಥಗಳನ್ನು ಮಾಡಿದರೂ ಅದರ ರುಚಿ ಈ ಹಸಿ ಬಟಾಣಿಗೆ ಸರಿ ಹೊಂದುವುದಿಲ್ಲ. ಹಸಿ ಬಟಾಣಿಯ ರುಚಿಯೇ ಬೇರೆ. ಇದರಿಂದ ಮಾಡುವ ಪುಲಾವ್, ಪಾವ್ ಬಾಜಿ ಮಸಾಲೆ, ಬಟಾಣಿ ಗಸಿ, ಬಟಾಣಿ ಚಿಲ್ಲಿ, ಪಲ್ಯ ಮೊದಲಾದುವುಗಳಿಗೆ ಅದರದ್ದೇ ಆದ ವಿಶೇಷ ಸ್ವಾದ ಬಂದಿರುತ್ತದೆ. ಈ ಕಾರಣದಿಂದ ಹಸಿ ಬಟಾಣಿ ಕೋಡು ಮಾರುಕಟ್ಟೆಗೆ ಬಂದಾಗ ಉತ್ತಮ ಧಾರಣೆ ಇರುತ್ತದೆ. ಕೆಲವು ಕಂಪೆನಿಗಳು ಹಸಿ ಬಟಾಣಿಗಳನ್ನು ಶೀತಲೀಕರಿಸಿ ಪ್ಯಾಕೆಟ್ ರೂಪದಲ್ಲಿ ಮಾರುತ್ತಿವೆ. ಹಸಿ ಬಟಾಣಿ ಕೋಡುಗಳು ಸಿಗದೇ ಇದ್ದ ಸಮಯದಲ್ಲಿ ಬೇಕಾದರೆ ಅದನ್ನು ಬಳಸಿಕೊಳ್ಳಬಹುದು. ಆದರೆ ತಾಜಾ ಬಟಾಣಿಗಳು ಸಿಗುವಾಗ ಶೀತಲೀಕರಿಸಿದ ಬಟಾಣಿ ಬಳಸಬೇಡಿ. ಕೆಲವು ಕಂಪೆನಿಗಳು ಬಟಾಣಿಗಳು ತಾಜಾ ಮತ್ತು ಹಸಿರು ಬಣ್ಣದಿಂದ ಕಂಗೊಳಿಸಲು ಅದಕ್ಕೆ ಹಾನಿಕಾರಕ ಬಣ್ಣಗಳನ್ನು ಬಳಸುತ್ತಾರೆ. ಇದು ಅಪಾಯಕಾರಿ. ಶೀತಲೀಕರಿಸಿದ ಬಟಾಣಿಗಳನ್ನು ಕೊಳ್ಳುವಾಗ ಪ್ರಸಿದ್ಧ ಕಂಪೆನಿಯ ಬಟಾಣಿಗಳನ್ನೇ ಖರೀದಿಸಿ.
ಈ ಹಸಿರು ಬಟಾಣಿಗಳಲ್ಲಿ ಎ, ಬಿ, ಸಿ, ಇ, ಕೆ ಸೇರಿದಂತೆ ಬಹು ಪ್ರಮುಖ ವಿಟಮಿನ್ ಅಂಶಗಳು ಅಡಕವಾಗಿವೆ. ದಿನಂಪ್ರತಿ ನಿಮ್ಮ ಆಹಾರದಲ್ಲಿ ಬಟಾಣಿ ಕಾಳುಗಳನ್ನು ಬಳಸಿದರೆ ನಿಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ಒಂದಿಷ್ಟು ಗಮನ ಹರಿಸೋಣ.
ಹಸಿ ಬಟಾಣಿಗಳು ಸಮೃದ್ಧ ಪ್ರೋಟೀನ್ ಆಗರ. ಇವುಗಳು ದೇಹದ ಆರೋಗ್ಯಕ್ಕೆ ಬಲು ಉಪಕಾರಿ. ವಿಟಮಿನ್ ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಫೈಟೋನ್ಯೂಟ್ರಿಯಂಟ್ ಗಳು ಕಣ್ಣುಗಳನ್ನು ಆರೋಗ್ಯವಾಗಿಡುತ್ತವೆ. ನಮ್ಮ ದೇಹಕ್ಕೆ ತಗುಲಬಹುದಾದ ಹಲವು ಕ್ಯಾನ್ಸರ್ ಗಳನ್ನು ದೂರವಿಡುತ್ತವೆ. ದೇಹಕ್ಕೆ ಅಗತ್ಯವಾಗಿ ಬೇಕಾದ ಕ್ಯಾರೋಟಿನಾಯ್ಡ್ ಗಳಾದ ಲ್ಯೂಟಿನ್, ಜಿಯಾಕ್ಸಾಂಥಿನ್ ಗಳು ಹಸಿ ಬಟಾಣಿಗಳಲ್ಲಿ ಕಂಡುಬರುತ್ತವೆ. ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲಾರ್ ಡಿಜೆನರೇಶನ್, ಕಣ್ಣಿನ ಪೊರೆ ಮುಂತಾದ ದೀರ್ಘಕಾಲದ ಸಮಸ್ಯೆಗಳಿಂದ ರಕ್ಷಣೆ ನೀಡಲು ಈ ಪೋಷಕಾಂಶಗಳು ಸಹಾಯ ಮಾಡುತ್ತವೆ. ಹಾನಿಕಾರಕ ನೀಲಿ ಬೆಳಕಿನಿಂದಲೂ ರಕ್ಷಣೆ ನೀಡುತ್ತವೆ. ಹಸಿ ಬಟಾಣಿಗಳಲ್ಲಿ ಬಹಳಷ್ಟು ಪ್ರಮಾಣದ ಫೈಬರ್ ಗಳಿವೆ. ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಈ ಕಾರಣಕ್ಕೇ ಹಸಿ ಬಟಾಣಿಗಳನ್ನು ನಿರಂತರವಾಗಿ ಸೇವಿಸಬೇಕು.
ಕೌಮೆಸ್ಟ್ರೋಲ್ ಎಂಬ ಪೋಷಕಾಂಶ ಹಸಿ ಬಟಾಣಿಗಳಲ್ಲಿವೆ. ಇದು ಹೊಟ್ಟೆಯ ಕ್ಯಾನ್ಸರ್ ನಿಂದ ರಕ್ಷಣೆಗೆ ಸಹಾಯ ಮಾಡುತ್ತದೆ. ೨೦೦೯ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಪ್ರತಿ ದಿನ ಹಸಿ ಬಟಾಣಿ ಮತ್ತು ಇತರ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್ ಬರುವ ಸಾಧ್ಯತೆ ಶೇ ೫೦ ರಷ್ಟು ಕಡಿಮೆಯಾಗುತ್ತದೆ. ಈ ಹಸಿ ಬಟಾಣಿಗಳನ್ನು ಬೇಯಿಸದೇ ಹೀಗೇ ಹಸಿಯಾಗಿಯೂ ತಿನ್ನುವುದು ರುಚಿಕರ ಮತ್ತು ಆರೋಗ್ಯಕ್ಕೆ ಪೂರಕ.
ಮಧುಮೇಹ ಅಥವಾ ಡಯಾಬಿಟೀಸ್ ಇರುವ ವ್ಯಕ್ತಿಗಳೂ ಹಸಿ ಬಟಾಣಿಯನ್ನು ಸೇವನೆ ಮಾಡಬಹುದು. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯು ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುತ್ತದೆ. ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮರೆಗುಳಿತನ ಎದುರಿಸುವವರಲ್ಲಿ ಹಸಿ ಬಟಾಣಿ ಎಷ್ಟರ ಮಟ್ಟಿಗೆ ಸಹಕಾರ ನೀಡಬಲ್ಲದು ಎನುವ ಬಗ್ಗೆ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಹಸಿ ಬಟಾಣಿಗಳ ಸೇವನೆಯಿಂದ ಉರಿಯೂತದ ಸಮಸ್ಯೆ ನಿವಾರಣೆಯಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆ, ಸಂಧಿವಾತ ಮೊದಲಾದುವುಗಳಿಂದ ಪರಿಹಾರ ಸಿಗುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಫೈಬರ್ ಕೂಡಾ ಈ ಹಸಿ ಬಟಾಣಿಗಳಲ್ಲಿ ಹೇರಳವಾಗಿವೆ. ಹಸಿ ಬಟಾಣಿಯು ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಕಾರಣದಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತದೆ.
ಹಸಿ ಬಟಾಣಿ ಕೋಡುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದಾಗ ಅದನ್ನು ಖರೀದಿಸಿ ಆಹಾರದೊಂದಿಗೆ ಬಳಸಿ. ಬೆಲೆ ಸ್ವಲ್ಪ ಕಡಿಮೆ ಇದ್ದಾಗ ಜಾಸ್ತಿ ಖರೀದಿಸಿ ಕೋಡುಗಳಿಂದ ಬಿಡಿಸಿ ಅವುಗಳನ್ನು ಗಾಳಿಯಾಡದ ಡಬ್ಬಗಳಲ್ಲಿ ತುಂಬಿ ಫ್ರೀಜರ್ ನಲ್ಲಿ ಇಟ್ಟರೆ ಬಹು ಸಮಯ ಕೆಡದೇ ಉಳಿಯುತ್ತದೆ. ಮಾರುಕಟ್ಟೆಯಲ್ಲಿ ತಾಜಾ ಸಿಗುವ ಸಮಯದಲ್ಲಿ ಯತೇಚ್ಛವಾಗಿ ಬಟಾಣಿಯನ್ನು ನಿಮ್ಮ ಆಹಾರದಲ್ಲಿ ಬಳಸಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ