ಹಾಗಾದರೆ ನೀನ್ಯಾರು?

ಹಾಗಾದರೆ ನೀನ್ಯಾರು?

ಈ ವೇದ - ಉಪನಿಷತ್ತುಗಳು, ಸ್ಮೃತಿಗಳು, ಭಗವದ್ಗೀತೆಯ ಶ್ಲೋಕಗಳನ್ನು ಸಂಪೂರ್ಣ ಅರೆದು ಕುಡಿದು ಅದರ ಎಲ್ಲಾ ಸಾರವನ್ನು ತಿಳಿದಿರುವ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದರೆ ಯಾಕೋ ಅಸಹಜ - ವಿಚಿತ್ರ - ಸಂಕುಚಿತ ಮನೋಭಾವದವರು ಎನಿಸುತ್ತದೆ. ಮಹಾತ್ಮ ಗಾಂಧಿಯವರ ಸರಳತೆ - ಸತ್ಯ - ಅಹಿಂಸೆಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುತ್ತಾ ಅವರ ಪ್ರತಿ ದಿನಚರಿಯನ್ನು ತಾನೇ ನೋಡಿದಂತೆ ಹೇಳುವ ವ್ಯಕ್ತಿಗಳೊಂದಿಗೆ ಸಂಭಾಷಣೆ ನಡೆಸಿದರೆ ಕೃತಕತೆಯ ಅವಾಸ್ತವಿಕ ವ್ಯಕ್ತಿತ್ವದವರು ಎನಿಸುತ್ತದೆ.

ಖುರಾನಿನ ಪ್ರತಿ ಶ್ಲೋಕಗಳನ್ನು ಕಂಠಪಾಠ ಮಾಡಿಕೊಂಡು ಅದರ ಪ್ರತಿ ಶಬ್ದಗಳನ್ನು ಅರ್ಥೈಸಿ ಹೇಳುವ ವ್ಯಕ್ತಿಗಳೊಂದಿಗಿನ ಮಾತುಕತೆ ಏನೋ ನಿಗೂಢ - ವಿಚಿತ್ರ - ಭಯ ಮಿಶ್ರಿತ ಆಶ್ಚರ್ಯಕರವಾಗಿರುತ್ತದೆ. ಅಂಬೇಡ್ಕರ್ ಅವರ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡಿ ಮಾತಿಗೊಮ್ಮೆ ಅವರ ವಿಚಾರಗಳನ್ನು ಉದಾಹರಿಸುವ ವ್ಯಕ್ತಿಗಳ ಜೊತೆಗೆ ಚರ್ಚಿಸಿದರೆ ಎಲ್ಲೋ ದಾರಿ ತಪ್ಪಿರಬೇಕು ಎಂಬ ಅನುಮಾನ ಮೂಡಿ ಕಸಿವಿಸಿಯಾಗುತ್ತದೆ.

ಬೈಬಲ್ ಅನ್ನು ಪ್ರತಿಕ್ಷಣವೂ ಕಂಕುಳಲ್ಲಿ ಇಟ್ಟುಕೊಂಡು ಏಸುವೇ ಮೈಮೇಲೆ ಬಂದಂತೆ ಮಾತನಾಡುವ ವ್ಯಕ್ತಿಗಳೊಡನೆ ಚರ್ಚಿಸಿದರೆ ಕಪಟಿಗಳೂ, ಯಾರೋ ಅಪರಿಚಿತರು ಎಂಬ ಭಾವನೆ ಉಂಟಾಗುತ್ತದೆ. ವಿವೇಕಾನಂದರ ಅಪರಾವತಾರ ಎಂಬಂತೆ ಅವರ ಸಂಪೂರ್ಣ ಜೀವನ ಚರಿತ್ರೆಯನ್ನು ಓದಿಕೊಂಡವರ ಬಳಿ ಸಂವಹನ ನಡೆಸಿದರೆ, ಅವರೊಬ್ಬರೇ ಭಾರತೀಯ ಸಂಸ್ಕೃತಿಯ ವಕ್ತಾರರೆಂಬ ಹುಸಿ ದೇಶಭಕ್ತಿಯ ಸ್ವಾರ್ಥದ - ದುರಹಂಕಾರದ ವಾಸನೆ ಮನಸ್ಸಿಗೆ ತಾಗುತ್ತದೆ.

ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಬಸವಣ್ಣನವರ ಬಗ್ಗೆ ಸದಾ ಅತಿರೇಕದ ಭಾವನೆ ವ್ಯಕಪಡಿಸುತ್ತಾ ಲಿಂಗ ವಿಭೂತಿ ಪ್ರವಚನಗಳಲ್ಲಿ ಕಳೆಯುವ ಕೆಲವರನ್ನು ನೋಡಿದಾಗ ಎಲ್ಲೋ ಇವರು ಬದುಕಿನ ಸವಾಲುಗಳಿಗೆ ಹೆದರಿ ಪಲಾಯನ ಮಾಡಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ. ಪ್ರತಿ ಸಂದರ್ಭವನ್ನೂ ಬಡತನ ಶೋಷಣೆ ದೌರ್ಜನ್ಯ ಹಿಂಸೆಗಳ ಹಿನ್ನೆಲೆಯಲ್ಲಿಯೇ ಗ್ರಹಿಸುವ ಮಾರ್ಕ್ಸ್‌ವಾದವನ್ನು ಉಸಿರಾಗಿಸಿಕೊಂಡಿರುವವರೊಂದಿಗೆ ಮಾತನಾಡಿದರೆ ಅವರ ಆಕ್ರೋಶದ ಮಾತು ಕೇಳಿಯೇ ಭಯ ಮಿಶ್ರಿತ ಆತಂಕವಾಗುತ್ತದೆ.

ನನ್ನ ತಾಯಿ, ನನ್ನ ಭಾಷೆ, ನನ್ನ ಜಾತಿ, ನನ್ನ ಧರ್ಮ, ನನ್ನ ದೇಶ ಹೀಗೆ ಅವಶ್ಯಕತೆ ಇಲ್ಲದಿದ್ದರೂ ಅದನ್ನು ಪ್ರಸ್ತಾಪಿಸುವ ಸಂಧರ್ಭವಲ್ಲದಿದ್ದರೂ ಪ್ರತಿ ಮಾತಿಗೂ ಇದನ್ನೇ ಗುರಾಣಿಯಾಗಿ ಬಳಸುವವರೊಂದಿಗೆ ಚರ್ಚಿಸಿದರೆ ಅಸಹನೆ ಮಿಶ್ರಿತ ಹಾಸ್ಯಾಸ್ಪದವಾದ ಪ್ರತಿಕ್ರಿಯೆ ಮೂಡುತ್ತದೆ. ಈ ರೀತಿಯಲ್ಲಿ ಇನ್ನೂ ಅನೇಕ ವ್ಯಕ್ತಿಗಳು ನಮ್ಮ ನಡುವೆ ಕಾಣಿಸುತ್ತಾರೆ. ಯಾವುದೋ ಸಿದ್ದಾಂತಕ್ಕೋ ವಾದಕ್ಕೋ ದಾಸರಾದಾಗ ಈ ಮನಸ್ಥಿತಿ ಉಂಟಾಗುತ್ತದೆ. ಅತಿಯಾದ ಅಂಧಾಭಿಮಾನ - ಅಜ್ಞಾನ - ಸಮಷ್ಟಿ ಪ್ರಜ್ಞೆಯ ಕೊರತೆಯೂ  ಇದಕ್ಕೆ ಕಾರಣವಾಗಿರಬಹುದು. ಆ,

ನನಗೆ ಕೇಳಿಸುತ್ತಿದೆ ನಿಮ್ಮ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ .

 " ಹಾಗಾದರೆ ನೀನ್ಯಾರು ? " 

ನಾನೂ ಕೂಡ ಈ ವ್ಯವಸ್ಥೆಯ ಒಂದು ಭಾಗವಾಗಿರುವುದರಿಂದ ಇವುಗಳಲ್ಲಿ ಯಾವುದಾದರೂ ಒಂದು ಆಗಿರಬಹುದು. ಆದರೆ ಇದು ಅಷ್ಟು ಒಳ್ಳೆಯ ವ್ಯಕ್ತಿತ್ವವಲ್ಲ ಎಂಬ ಅಭಿಪ್ರಾಯ ನನ್ನದಾಗಿರುವುದರಿಂದ  ನಾನು ಯಾವ ಇಸಂಗೂ ಒಳಗಾಗದ ಸಹಜವಾದ ಜೀವಪರವಾದ ನಿಲುವು ಹೊಂದಲು ಪ್ರಯತ್ನಿಸುತ್ತಿರುತ್ತೇನೆ.  ಹಾಗೆಯೇ ಎಲ್ಲರೂ ಈ ವಾದಗಳನ್ನು ಇಸಂಗಳನ್ನು ಅರಿತು ಅವುಗಳಿಂದ ಸ್ಪೂರ್ತಿ ಮಾರ್ಗದರ್ಶನ ಪಡೆದರೂ ಯಾವುದೋ ಒಂದಕ್ಕೆ ಅಡಿಯಾಳಾಗದೆ ಅವುಗಳನ್ನು ಮೀರಿ ಮಾನವೀಯ ಮೌಲ್ಯಗಳ ಜೀವನ ಶೈಲಿ ರೂಪಿಸಿಕೊಂಡು ಸಮಾಜದಲ್ಲಿ ಶಾಂತಿ ಸಹಭಾಳ್ವೆ ಮತ್ತು ಬದುಕಿನಲ್ಲಿ ನೆಮ್ಮದಿ ಕಾಣುವಂತಾಗಲಿ ಎಂದು ಆಶಿಸುತ್ತಾ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ