ಹಾಗೇ ಸುಮ್ಮನೆ-೧

ಹಾಗೇ ಸುಮ್ಮನೆ-೧

ಹಾಗೇಸುಮ್ಮನೆ...
ಅಂದಕ್ಕೆ ರಾಜಮುಡಿ , ಚೆಂದಕ್ಕೆ ವೈರಮುಡಿ ಬನ್ನಿ ಮೇಲುಕೋಟೆಗೆ......ಹೀಗೊಂದು ಹುಡುಗಿ ಹಾಡುತ್ತಾ ಕುಳಿತಿತ್ತು ಮೇಲುಕೋಟೆಯ ನರಸಿಂಹನ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ...ಅದಾಗಿ ಸುಮಾರು 20 ವರ್ಷಗಳೇ ಕಳೆದಿದೆ. ಮೇಲುಕೋಟೆಯ ದಿವ್ಯ ಚರಿತೆಯಂತೆಯೇ ಅಲ್ಲಿ ಆಗಿ ಹೋದ ಮಹನೀಯರ ಬಗ್ಗೆ ವಿಚಾರಗಳ ಅರಿವು ಸಿಕ್ಕಾಗ ಆ ನೆಲ ಎಂಥ ದಿವ್ಯವಾದದ್ದು ಎಂಬ ಭಾವವನ್ನು ಮನಸ್ಸು ಅನುಭವಿಸಿದೆ. ಈ ನೆಲದಲ್ಲಿ ನಾವೂ ಒಂದು ಭಾಗವಾಗಿದ್ದಿದ್ದರೆ ಎಂಬ ಹಂಬಲವನ್ನು ಮನಸ್ಸು ಬೇಡುತ್ತಿತ್ತು..
ಆದರೆ ನನ್ನ ಮತ್ತು ಮೇಲುಕೋಟೆಯ ಸಂಬಂಧ ಇದ್ದುದ್ದು ಕೇವಲ ಚೆಲುವನಾರಾಯಣನ ವೈರಮುಡಿ ಉತ್ಸವದ ಬಗ್ಗೆ ಪತ್ರಿಕಾ ವರದಿ ಓದುವುದು, ನನ್ನ ಭಾವ ಶ್ರೀರಾಂ ಅವರ ಕುಟುಂಬ ಮನೆದೇವರಾದ ಮೇಲುಕೋಟೆಯ ನರಸಿಂಹನ ದೇಗುಲಕ್ಕೆ ಹೋದಾಗ ಅವರೊಡನೆ ಹೋಗುವುದು ಮತ್ತು ಕವಿ ಪುತಿನ ಅವರಬಗ್ಗೆ ಪ್ರಸ್ತಾಪವಾದಾಗ ಮಾತ್ರ. ಮೇಲುಕೋಟೆಯ ಬಗ್ಗೆ ಸೀಮಿತ ಸಂಬಂಧವಷ್ಟೆ.
ಆದರೆ ಮುಂದೊಂದು ದಿನ ನಾನು ಮೇಲುಕೋಟೆಯ ಪ್ರಮುಖ ಘಟನಾವಳಿಯೊಂದರಲ್ಲಿ ಪ್ರತ್ಯಕ್ಷದರ್ಶಿಯಾಗುತ್ತೇನೆ ಎಂಬ ಸಣ್ಣ ಸುಳಿವೂ ನನ್ನಲ್ಲಿರಲಿಲ್ಲ. ಅದು ನನ್ನದೇ ಸುಕೃತ. ಪುಣ್ಯವಿಶೇಷವೂ ಹೌದು. ಅದಕ್ಕೂ ಮುನ್ನ ಒಂದು ಚಿಕ್ಕ ಹಿನ್ನೆಲೆ...
ಮೇಲುಕೋಟೆ ಚೆಲುವನಾರಾಯಣ ಮೈಸೂರು ಅರಸರ ಆರಾಧ್ಯದೈವ. ಶ್ರೀಮನ್ಮಹಾರಾಜ ಚಿಕ್ಕದೇವರಾಜ ಒಡೆಯರ್ ಮಹಾಸ್ವಾಮಿಗಳು ಚಿಕ್ಕದೇವರಾಜ ಬಿನ್ನಪವನ್ನು ಅರ್ಪಿಸಿದ್ದು ಈ ಚೆಲುವನಿಗೆ. ದಕ್ಷಿಣ ಭಾರತದ ಪ್ರಸಿದ್ಧ ಶ್ರೀವೈಷ್ಣವ ಕೇಂದ್ರವಾದ ಇಲ್ಲಿ ಭಗವದ್ರಾಮಾನುಜರು 20 ವರ್ಷನೆಲೆಸಿದ್ದರು. ಅವರ ಜೀವಂತ ಪ್ರತೀಕವೆನಿಸಿದ ಪೇಶುಂ ರಾಮಾನುಜರು ಇರುವುದಿಲ್ಲಿ. ಈ ಪುಣ್ಯ ಭೂಮಿಯಲ್ಲಿ ಆಗಿಹೋದ ಹಲವಾರು ಮಹನೀಯರು ಇಂದಿಗೂ ಪ್ರಾತ: ಸ್ಮರಣೀಯರು. ಅಂತಹವರಲ್ಲೊಬ್ಬರು ಐಶಾಮಿ ಶ್ರೀನಿವಾಸಯ್ಯಂಗಾರರು, ಅವರು ಎಲ್ಲರನ್ನೂ ಅಯ್ಯಾ..ಸ್ವಾಮಿ ಎಂದೇಕರೆಯುತ್ತಿದ್ದರಂತೆ. ಹಾಗಾಗಿ ಅವರ ವಂಶಕ್ಕೆ ಐಶಾಮಿ ಎಂಬ ಹೆಸರಾಯಿತು. ಅಂತಹ ವಂಶದ ಶ್ರೀನಿವಾಸಯ್ಯಂಗಾರರು ಮೇಲುಕೋಟೆಯಲ್ಲಿ ಅಷ್ಟತೀರ್ಥದ ಬೀದಿಗೆ ಸ್ವತ:ಕಲ್ಲು ಹಾಸುಗಳನ್ನು ಹಾಸಿದ ಕಷ್ಟಜೀವಿ.
ಅವರವಂಶದಲ್ಲಿ ಬಂದ ಮತ್ತೊಂದು ಚೇತನ ಐಶಾಮಿ ನರಸಿಂಹ ಅಯ್ಯಂಗಾರ್ ಸ್ವಾಮಿ. ಹುಟ್ಟಿದ್ದು ಮೇಲುಕೋಟೆಯಲ್ಲಿ. ಜೀವನವಿಡೀ ಮಾಡಿದ್ದು ಚೆಲುವನಾರಾಯಣನ ಕೈಂಕರ್ಯವನ್ನು. ಇಂಟರ್ ಮೀಡಿಯಟ್ ಮುಗಿಸಿ ಬನಾರಸ್ ಹಿಂದೂ ವಿ.ವಿಯಲ್ಲಿ ಓದುವ ಅವಕಾಶವಿದ್ದರೂ ಮೇಲುಕೋಟೆಯ ಸಂಸ್ಕøತ ಪಾಠಶಾಲೆಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದರು. 25 ವರ್ಷಗಳಿಗೂ ಹೆಚ್ಚು ಕಾಲಪುರಾಣ ವಾಚನ ಕೈಂಕರ್ಯವನ್ನು ಚೆಲುವನಾರಾಯಣನಿಗೆ ಸಲ್ಲಿಸಿದ ಹಿರಿಮೆ ಇವರದು. ಮೇಲುಕೋಟೆಯ ಚರಿತ್ರೆಯಲ್ಲಿ ಬಹುಶ: ಚಿರಕಾಲ ನೆನಪಿನಲ್ಲಿ ಉಳಿಯುವ ಮತ್ತು ಸದಾ ನೆನಪಿನಲ್ಲಿಯೇ ಉಳಿಯುವ ದಿವ್ಯ ಚೇತನ ಐಶಾಮಿ ನರಸಿಂಹ ಐಯ್ಯಂಗಾರ್ಯರು.
ಇಲ್ಲಿ ನನಗೊಂದು ಕಲ್ಪನೆ ಮೂಡುತ್ತಿದೆ. ಐಶಾಮಿ ನರಸಿಂಹ ಅಯ್ಯಂಗಾರ್ಯರು ಚೆಲುವನಾರಾಯಣನಲ್ಲಿ ಸದಾ ಬೇಡುತ್ತಿದ್ದರೇನೋ- ಸ್ವಾಮಿ, ಸದಾ ಕಾಲ ನನ್ನ ವಂಶದವರು ನಿನ್ನನ್ನೇ ಸೇವಿಸುತ್ತಾ ಇದ್ದಾರೆ. ನನ್ನ ಮತ್ತು ನನ್ನ ಮಕ್ಕಳಸೇವೆಯೂ ನಿನಗೇ ಸಮರ್ಪಿತ.ಅವರ ಮನಸ್ಸನ್ನು ಸದಾಕಾಲ ನಿನ್ನ ಸೇವೆಯಲ್ಲಿಯೇ ಇರುವಂತೆ ಹರಸು. ನಿನ್ನ ಸೇವೆಯಲ್ಲಿಯೇ ಮುಳುಗಿ ಹೋಗುವ ಭಾಗ್ಯವನ್ನು ನನ್ನ ಮಕ್ಕಳಿಗೆ ಕೊಡು ಎಂದು !
ಅದೇ ಪ್ರಾರ್ಥನೆಯನ್ನು ಭಗವದ್ರಾಮಾನುಜರಲ್ಲಿಯೂ ಸದಾ ಬೇಡುತ್ತಿದ್ದರು ಎಂದು ನನಗನಿಸುತ್ತದೆ. ಯಾಕೆ ಎಂದು ಮುಂದೆ ಉತ್ತರಿಸುತ್ತೇನೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲೊಂದು ಮಠ. ಯದುಗಿರಿ ಯತಿರಾಜ ಮಠ. ಅದರಲ್ಲಿ ಸದಾಕಾಲ ಇರುತ್ತಿದ್ದ ಸ್ವಾಮಿಗಳು ಕಾಲವಾದರು ಎಂದು ಕೇಳಿದಾಗ ನನಗೆ ಅದೊಂದು ಸಣ್ಣ ಸುದ್ದಿ ಅಷ್ಟೇ. ಏಕೆಂದರೆ ಅಲ್ಲೊಂದು ಮಠವಿದೆ ಎಂಬುದೇ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಗೊತ್ತಿದ್ದರೂ ಎಲ್ಲೋ ಕೆಲವರಿಗೆ ಮಾತ್ರ. ಗೋಕುಲಾಷ್ಟಮಿ ತಿಂಡಿ ಖರೀದಿಸಲು ಹೋಗುವವರಿಗೆ ಮಾತ್ರ ಆ ಮಠ ಬಹಳ ಚೆನ್ನಾಗಿ ಗೊತ್ತಿತ್ತು. ಹಾಗೆಂದು ಆ ಮಠವನ್ನು ನಾನು ತೆಗಳುತ್ತಿಲ್ಲ. ಮಠದ ವ್ಯಾಪ್ತಿ ಬಹು ಸೀಮಿತವಾಗಿ, ಕೇವಲ ಸಾಂಪ್ರದಾಯಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗಿತ್ತು . ಸ್ವಾಮಿಗಳು ಕಾಲವಾದ ನಂತರ ಮುಂದೆ ಯಾರೆಂಬ ಪ್ರಶ್ನೆ ಭಕ್ತರಲ್ಲಿ. ಏಕೆಂದರೆ ಯತಿರಾಜ ಮಠದ ಸ್ವಾಮಿಗಳೇ ಮೇಲುಕೋಟೆಯ ಚೆಲುವನಾರಾಯಣನ ಪ್ರಥಮ ಪೂಜೆಗೆ ಪಾರಂಪರಿಕ ಹಕ್ಕುದಾರರು. ಹೀಗೇ ಹತ್ತು ವರ್ಷ ಕಳೆಯಿತು. ಚೆಲುವನಾರಾಯಣನಿಗೆ ಬಹುಮುಖ್ಯವಾಗಿ ಭಗವದ್ರಾಮಾನುಜರಿಗೆ ಬೇಸರವಾಯಿತು ಎನಿಸುತ್ತದೆ. ಯತಿರಾಜ ಮಠಕ್ಕೆ ಮುನ್ನಡೆಸುವವರು ಬೇಕಾಗಿದ್ದಾರೆಂಬ ಭಕ್ತರ ಬೇಡಿಕೆ ಈಡೇರುವ ಕಾಲಬಂದಿತು. ಬಂದು ಮತ್ತೆ ಮುಂದಕ್ಕೆ ಹೋಯಿತು.
ಅದೊಂದು ದಿನ ಹಿಂದೆ ಐಶಾಮಿ ಶ್ರೀ ನರಸಿಂಹ ಐಯ್ಯಂಗಾರ್ ಅವರು ಚೆಲುವನಾರಾಯಣ ಮತ್ತು ರಾಮಾನುಜರಲ್ಲಿ ಬೇಡುತ್ತಿದ್ದ ಮಾತು ಆ ರಾಮಾನುಜರ ನೆನಪಿಗೆ ಬಂದಿತು. ನರಸಿಂಹ ಐಯ್ಯಂಗಾರ್ ಅವರ ಪುತ್ರನನ್ನು ಯದುಗಿರಿ ಯತಿರಾಜ ಮಠದ ಪೀಠಾಧ್ಯಕ್ಷರನ್ನಾಗಿ ಮಾಡಬೇಕೆಂಬ ಆದೇಶ ಭಕ್ತರಿಗೆ ಹೋಯಿತು. ರಾಮಾನುಜರ ಅಣತಿಯಂತೆ ಭಕ್ತರು ಮುಂದಾದರು. 4 ವರ್ಷಗಳ ಹಿಂದೆ ಮೇಲುಕೋಟೆಯ ಯದುಗಿರಿ ಯತಿರಾಜ ಮಠಕ್ಕೆ ನಮ್ಮ ನಡುವಿನ ಸಂತ ತಿರುನಾರಾಯಣ ಅಯ್ಯಂಗಾರ್ ಅವರು ಪೀಠಾಧಿಪತಿಯಾಗಿ ನೇಮಕವಾದರು. ನೇಮಿಸಿದ್ದು ರಾಮಾನುಜರೇ. ಸಾಕ್ಷಿಯಾದದ್ದು ಭಕ್ತರು. ಅದೀಗ ಇತಿಹಾಸದ ಒಂದು ಭಾಗ. "ತಿರು" ಯತಿರಾಜ ಮಠದ ಜೀಯರ್ ಆಗಿ ಬಂದ ಕೂಡಲೇ ಯತಿರಾಜ ಮಠ ನವವಧುವಿನಂತೆ ಕಂಗೊಳಿಸಿತು. ಅತ್ಯಂತ ಉತ್ಸಾಹದಿಂದ ಸಾಮಾಜಿಕವಾಗಿ ಕೈಂಕರ್ಯ ಸಲ್ಲಿಸಲಾರಂಭಿಸಿತು. ಸೀಮಿತವಾಗಿದ್ದ ಮಠ ಸಾರ್ವಜನಿಕವಾಗಿ ವೈಭವದಿಂದ ಮೆರೆಯಲಾರಂಭಿಸಿತು. ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮಿಗಳು ಅಭಿನವ ರಾಮಾನುಜರೆಂದೇ ಮನೆ ಮಾತಾದರು.
ಜೀಯರ್ ಸ್ವಾಮಿಗಳು ಮಠಕ್ಕೆ ಬಂದ ಕೂಡಲೇ ಮೊದಲು ಮಾಡಿದ್ದು ಮಠದಾಡಳಿತವನ್ನು ತಹಬದಿಗೆ ತಂದದ್ದು. ಸಮರ್ಥರಿಗೆ ಅದರ ನಿರ್ವಹಣೆಯನ್ನು ಒಪ್ಪಿಸಿದ್ದು. ಮಠದಮೂಲಕ ಸಾಮಾಜಿಕ ಕೈಂಕರ್ಯಗಳನ್ನು ಆರಂಭಿಸಿದ್ದು. ಮಠದಲ್ಲಿ ಪ್ರತೀ ದಿನವೂ ನೂರಾರು ಜನರಿಗೆ ಜಾತಿ ಬೇಧವಿಲ್ಲದೆ ಮದ್ಯಾನ್ಹದ ಪ್ರಸಾದ ನೀಡಲಾರಂಭಿಸಿದ್ದು., ಪ್ರತೀ ದಿನವೂ ಮದ್ಯಾನ್ಹದ ಹೊತ್ತು ಪ್ರಸಾದ ಸ್ವೀಕರಿಸುವ ಜನಸ್ತೋಮ ತೃಪ್ತರಾಗಿ ಹೋಗುವ ಮುನ್ನ ಒಮ್ಮ ಮನದಲ್ಲಿಯೇ ಅನ್ನದಾತ ಸುಖೀಭವ..ಎನ್ನುವುದು ಯಾರಿಗೆಂದು ತಿಳಿದಿರುವುದಿಲ್ಲ. ಆದರೆ ಆ ಹಾರೈಕೆ ಮುಟ್ಟುವುದು ಜೀಯರ್ ಸ್ವಾಮಿಗಳಿಗೆ. ಅವರು ಅದನ್ನು ಅರ್ಪಿಸುವುದು ಭಗವದ್ರಾಮಾನುಜರಿಗೆ.
ಮಠದಲ್ಲಿ ಪ್ರತಿ ದಿನವೂ ಒಂದಲ್ಲಾ ಒಂದು ಕೈಂಕರ್ಯ,ಕಾರ್ಯಕ್ರಮ. ಸಾಂಸ್ಕøತಿಕ, ಧಾರ್ಮಿಕ ಪ್ರವಚನಗಳು. ಬರುವ ನೂರಾರು ಭಕ್ತರಿಗೆಸಾಂತ್ವನ ಹೇಳುವುದು ಜೀಯರ್ ಪರಿಪಾಠ. ಪ್ರತಿದಿನ ಮಠದಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಿಸಿಯೂಟ ಕಳಿಸುವ ವ್ಯವಸ್ಥೆ. ಅದು ಜೀಯರ್ ಅವರ ಬಹು ಪ್ರಿಯವಾದ ಕೈಂಕರ್ಯ. ( ಹಿಂದೆ ಪೂರ್ವಾಶ್ರಮದಲ್ಲಿದ್ದಾಗ ಬಹಳಷ್ಟು ಬಾರಿ ಅವರ ಕೈಯ ರುಚಿ ಕಂಡವನು ನಾನು. ಬಹುಶ: ಅವರು ಸನ್ಯಾಸಾಶ್ರಮ ಸ್ವೀಕಾರಕ್ಕೆ ಮುನ್ನ ಅವರ ಕೈಯ ಅಡುಗೆಯನ್ನು ಕಡೇಬಾರಿ ತಿನ್ನುವ ಭಾಗ್ಯ ಸಿಕ್ಕಿದ್ದು ನನಗೆ!)ಮಠದಲ್ಲಿ ಒಂದು ಕಡೆ ಗೋಶಾಲೆ. ಮುದ್ದಾದ ಹಸುಗಳನ್ನು ಸಾಕಿರುವ ಜೀಯರ್ ಕೈಂಕರ್ಯ ನಮ್ಮಂಥಹ ಅಸಡ್ಡೆಯ ರೈತರಿಗೊಂದು ಪಾಠವೇ. ಮೇಲುಕೋಟೆಯ ಬಳಿಯಿರುವ ಕೆರೆ ತೊಣ್ಣೂರಿನಲ್ಲಿ ಭಗವದ್ರಾಮಾನುಜರ ದಿವ್ಯ ಪ್ರಥಿಮೆ ಸ್ಥಾಪಿಸಿ,ಅಲ್ಲಿ ಮಠದಶಾಖೆ ಆರಂಭಿಸಿ ಅಲ್ಲಿನ ಜನರಲ್ಲಿ ಪರಿವರ್ತನೆ ತಂದ ಮಹಾನ್ ಚೇತನ ಜೀಯರ್ ಸ್ವಾಮಿಗಳು. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿಯೂ ರಾಮಾನುಜರ ಸಾನಿಧ್ಯ, ಮಠದ ಶಾಖೆ ಆರಂಬಿಸುವಲ್ಲಿಯೂ ಜೀಯರ್ ಅವರ ಮಾರ್ಗದರ್ಶನ ವರ್ಣನಾತೀತ. ಮಠದ ಶಾಖೆಗಳಲ್ಲಿ ಒಂದು ಶಿಸ್ತು ಮತ್ತು ಬದ್ದತೆಯನ್ನು ತಂದಿದ್ದು ಜೀಯರ್ ಸ್ವಾಮಿಗಳೇ ಎಂಬುದು ವಾಸ್ತವಿಕ ಸತ್ಯ.
ತೊಂಡನೂರು ಮೇಲುಕೋಟೆಯ ಬಳಿ ಇರುವ ರಾಮಾನುಜರ ಅಭಿಮಾನ ಸ್ಥಳ. ಅಲ್ಲಿನ ಕೆರೆ ನಿರ್ಮಿಸಿದ್ದು ರಾಮಾನುಜರು. ಆ ದಿವ್ಯ ಗ್ರಾಮದಲ್ಲಿ ಜೀಯರ್ ಸ್ವಾಮಿಗಳು ಯತಿರಾಜಮಠದ ಶಾಖೆ ಆರಂಭಿಸಿದರು. ಎರಡನೇ ಚಾತುರ್ಮಾಸ ವೃತವನ್ನು ಅಲ್ಲಿಯೇ ಕೈಗೊಂಡರು. ಆಗ ಅಲ್ಲಿ ಆದ ಸಾಮಾಜಿಕ ಪರಿವರ್ತನೆ ನಂಬಲಸಾದ್ಯ. ಅಲ್ಲಿನ ಜನರ ಜೊತೆ ಸ್ವಾಮಿಗಳು ಬೆರೆತ ರೀತಿ ಅಲ್ಲಿನ ಜನಗಳಿಗೆ ಒಂದು ರೀತಿಯ ಉತ್ಸಾಹ ತುಂಬಿತು. ನಂಬಿ ನಾರಾಯಣನನ್ನು ನಂಬಿದಂತೆಯೇ ಜೀಯರ್ ಸ್ವಾಮಿಗಳನ್ನೂ ನಂಬಿರುವುದು ವಿಶೇಷ. ಅಲ್ಲಿನ ಕೆರೆ ದಂಡೆಯಲ್ಲಿ ಭಗವದ್ರಾಮಾನುಜರ ದಿವ್ಯ ಮಂದಸ್ಮಿತ ಪ್ರತಿಮೆ ಸ್ಥಾಪನೆಮಾಡಿದ್ದು ಮತ್ತೊಂದು ವಿಶೇಷ. ಜಾಗತಿಕ ಸ್ಥಾನ ದೊರೆಯಿತು ತೊಂಡನೂರಿಗೆ.
ರಾಮಾನುಜರು ಕರ್ನಾಟಕಕ್ಕೆ ಬಂದು 1 ಸಾವಿರ ವರ್ಷವಾದ ಹಿನ್ನೆಲೆಯಲ್ಲಿ ಜೀಯರ್ ಅವರಲ್ಲಿ ಮೂಡಿದ್ದು ವಿಶ್ವಮಂಗಳ ಮಹೋತ್ಸವದ ಕಲ್ಪನೆ. ಅದು ಜೀಯರ್ ಅವರ ಅತೀ ದೊಡ್ಡ ಮಹತ್ಸಾಧನೆ. ರಾಷ್ಟ್ರದಾದ್ಯಂತ ಇರುವ ರಾಮಾನುಜೀಯರ ಸಮ್ಮಿಲನ-ಸಮ್ಮೇಳನವದು. ನ ಭೂತೋ-ನ ಭವಿಷ್ಯತಿ.
ಜೀಯರ್ ಸ್ವಾಮಿಗಳ ಪೂರ್ವಾಶ್ರಮದಲ್ಲಿ ಅವರೊಡನೆ ಕಳೆದ ಕ್ಷಣಗಳ ನೆನಪು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಹಲವು ಬರಹಗಳಿಗೆ ಅಕ್ಷರ ರೂಪ ಕೊಡುವ ಮಹಾಭಾಗ್ಯ ನನ್ನದಾಗಿತ್ತೆಂಬುದೇ ನನಗೊಬ್ಬನಿಗೇ ಇರುವ ಹೆಮ್ಮೆ. ( ಕುಮಾರವ್ಯಾಸ ಹೇಳುತ್ತಾನೆ " ವೀರನಾರಾಯಣನೆ ಕವಿ-ಲಿಪಿಕಾರ ಕುಮಾರವ್ಯಾಸ ಎಂಬಂತೆ, ತಿರುನಾರಾಯಣನದೆ ಬರಹ-ನಾನು ಲಿಪಿಕಾರ..!) ಅವರ ಕೈಯಡುಗೆ ಅಮೋಘ. ಅವರ ಮನೆಗೆ ಹೋದಾಗಲೆಲ್ಲ ನನ್ನನ್ನು ಸೆಳೆಯುತ್ತಿದ್ದುದು ತಿರು ಅವರು ಇದ್ದ ಸಾಂಪ್ರದಾಯಿP ರೀತಿ. ಸ್ವಲ್ಪವೂ ರಾಜಿ ಮಾಡಿಕೊಳ್ಳದೆ ಇದ್ದ ಅತ್ಯಂತ ಕರ್ಮಠವಾದ ಆಚರಣೆ ಅವರದು. ಇದ್ದದ್ದು ಸನ್ಯಾಸಿಯ ಚರ್ಯೆ. ಅಂತಹ ಸಮಯದಲ್ಲಿ ಅವರು ಯತಿರಾಜಮಠಕ್ಕೆ ನಿಯುಕ್ತರಾದಾಗ ಅವರ ಕೈಯಡುಗೆಯ ರುಚಿ ದೂರವಾಯ್ತಲ್ಲಾ ಎಂಬ ಬೇಸರ ನನ್ನ ಮಂದಮತಿಗೆ. ಅವರ ಪಟ್ಟಾಭಿಷೇಕ ಮಹೋತ್ಸವ ಒಂದು ಅಪೂರ್ವ ಘಟನೆ ಮೇಲುಕೋಟೆಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು. ಆ ಘಟನೆಗೆ ನಾನೂ ಸಾಕ್ಷಿಯಾಗಿದ್ದೆ ಎಂಬ ಹೆಮ್ಮೆ ನನ್ನದು. ಅವರು ಜೀಯರ್ ಆದ ನಂತg ನಮಗೆ ರಾಮಾನುಜರು ಹೇಗಿದ್ದರು ಎಂಬ ಸಾಕ್ಷಾತ್ತಾದನುಭವ ನಿತ್ಯ ಆಗುತ್ತಲಿದೆ. ಜೀಯರ್ ಸ್ವಾಮಿಗಳ ಭಕ್ತಿಗೆ ಮೆಚ್ಚಿ ಶ್ರೀನಿವಾಸನೂ ಮಠಕ್ಕೆ ಆಗಮಿಸಿದ. ಜೀಯರ್ ಆನಂದತುಂದಿಲರಾಗಿ ಸ್ವಾಗತಂ ಶ್ರೀನಿವಾಸ ಎಂಬ ಕಾರ್ಯಕ್ರಮ ನಡೆಸಿದ್ದು ಈಗ ಇತಿಹಾಸ. ಬೇಲೂರು ಚೆನ್ನಿಗನಿಗೆ ಪುಷ್ಪಯಾಗ ನಡೆಸಿದ್ದು, ಭಕ್ತರೊಡನೆ ಬದರೀ ಯಾತ್ರೆ ಕೈಗೊಂಡದ್ದು, ಮಠದಲ್ಲಿ ನಡೆಯುವ ಮಾರ್ಹಳಿ ಸಂಗೀತೋತ್ಸವ, ಹೀಗೆ ನಿತ್ಯ ನಿರಂತರ ಚಟುವಟಿಕೆಗಳ ಕೇಂದ್ರ ಯತಿರಾಜ ಮಠ. ಯತಿರಾಜರು ಬದುಕಿದ್ದಾಗ ನಾವಿರಲಿಲ್ಲ. ಈಗ ಯತಿರಾಜರ ಜೊತೆಯೇ ನಾವಿದ್ದೇವೆ ಎಂಬ ಭಾಗ್ಯ ನಮ್ಮದಾಗಿರುವುದು ನಮ್ಮದೇ ಸುಕೃತ.
ಆಗಾಗಮಠಕ್ಕೆ ಹೋಗುತ್ತಿರುವ ನನಗೆ ಮಠದಲ್ಲಿ ಆದ ಆಗುತ್ತಿರುವ ಬದಲಾವಣೆಗಳ ಅರಿವಿದೆ. ಮಠ ಈಗ ಜೀವಂತಿಕೆಯಿಂದ ನಳನಳಿಸುತ್ತಿದೆ. ಜೀಯರ್ ಅವರ ದರ್ಶನಕ್ಕಾಗಿ ನೂರಾರು ಕಿಲೋಮೀಟರ್ ಗಳಿಂದ ಬರುವವರು ಇದ್ದಾರೆ. ಜೀಯರ್ ಅವರ ನುಡಿಗಳು ಅವರಿಗೆ ಸಾಂತ್ವನ, ನೈತಿಕ ಸ್ಥೈರ್ಯ ನೀಡುತ್ತಿರುವುದು ನಿತ್ಯ ನೋಟ.ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ಕಲೆ ಮತ್ತು ಕಲಾವಿದರನ್ನು ಪೋಷಿಸುತ್ತಿರುವುದು ಜೀಯರ್ ಅವರ ಮತ್ತೊಂದು ವಿಶೇಷತೆ.
ಇಂತಹ ಜೀಯರ್ ಸ್ವಾಮಿಗಳ ಬಗ್ಗೆ ಬರೆದಷ್ಟೂ ಬರೆವುದಿದೆ. ಈ ಲೇಖನದ ಆರಂಭದಲ್ಲಿ ಐಶಾಮಿ ನರಸಿಂಹ ಅಯ್ಯಂಗಾರ್ಯರು ಚೆಲುವ ನಾರಾಯಣ ಮತ್ತು ರಾಮಾನುಜರಲ್ಲಿ ಬೇಡಿಕೊಳ್ಳುತ್ತಿದ್ದ ಬಗ್ಗೆ ಪ್ರಸ್ತಾಪಿಸಿದ್ದೇನೆ ಅಲ್ಲವೇ? ಅದು ನನ್ನ ಕಲ್ಪನೆಯಾದರೂ ಬಹುಶ: ಅದು ನಿಜವಾದ ವಿಚಾರ. ಏಕೆಂದರೆ ಅವರ ಬೇಡಿಕೆಯನ್ನು ಸಾಕಾರಗೊಳಿಸಿದ ಚೆಲುವನಾರಾಯಣ ಮತ್ತು ರಾಮಾನುಜರ ವರಪ್ರಸಾದವೇ ಜೀಯರ್ ಸ್ವಾಮಿಗಳು. ಅಂತಹ ಬೇಡಿಕೆಯನ್ನು ಸದಾ ದೇವರಿಗೆ ಇಡುತ್ತಾ ಚೆಲುವನಾರಾÀಯಣನ ಸೇವೆಯನ್ನೇ ಮಾಡುತ್ತಿದ್ದ ದಿವ್ಯ ಚೇತನ ಉಭಯ ವೇದಾಂತ ನಲ್ಲಾನ್ ಚಕ್ರವರ್ತಿ ಐಶಾಮಿ ನರಸಿಂಹ ಅಯ್ಯಂಗಾರವರ ಜನ್ಮ ಶತಾಬ್ದಿ ಆಚರಣೆಯನ್ನು ಮಾಡುತ್ತಿರುವುದು ನಿಜಕ್ಕೂ ಅತ್ಯಂತ ಶ್ಲಾಘನೀಯವಾದುದು.

ಈ ಲೇಖನ ಬರೆಯಲು ಪ್ರೇರಣೆಯೂ ಅವರೆ. ಏಕೆಂದರೆ ನಮಗೆ ಅಭಿನವ ರಾಮಾನುಜರನ್ನು ನೀಡಿದ ಚೇತನವೇ ಅವರಲ್ಲವೆ?

ಯತಿರಾಜ ಮಠದ ಜೀಯರ್ ಸ್ವಾಮಿಗಳ ಹೆಗಲೆಣೆಯಾಗಿರುವವರು ಶ್ರೀಕಾರ್ಯಂ ರಂಗಣ್ಣ. ಜೀಯರ್ ಸ್ವಾಮಿಗಳ ಯಾವುದೇ ಕಲ್ಪನೆಗೆ ಮೂರ್ತರೂಪ ನೀಡುವ, ಸದಾ ಹಸನ್ಮುಖಿಯಾದ, ಸಹನೆಯ ಪ್ರತಿರೂಪವಾದ ರಂಗಣ್ಣ ಅವರ ಕಾಯಕನಿಷ್ಟೆ ಮಠದ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ಎಂದರೆ ಅತಿಶಯೋಕ್ತಿಯಲ್ಲ.
ಜೀಯರ್ ಸ್ವಾಮಿಗಳಿಗೆ ಪ್ರಸಾದ ಕೈಂಕರ್ಯ ಮಾಡುವ ಮತ್ತೊಂದು ಹಿರಿಯ ಚೇತನ ರಂಗಾಮಾಮ .ಅತ್ಯಂತ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿ ಪ್ರಸ್ತುತ ಜೀಯರ್ ಅವರಿಗೆ ಪ್ರಸಾದ ಕೈಂಕರ್ಯವನ್ನು ಶ್ರದ್ಧಾ ಭಕ್ತಿಯಿಂದಮಾಡುವರಂಗಾಮಾಮ ಅವರಿಗೆ ಬಹುಶ: 70 ದಾಟಿರಬೇಕು. ಆದರೆ 20 ರ ಹರಯದವರನ್ನೂ ನಾಚಿಸುವ ಉತ್ಸಾಹ ಅವರದು. ಒಮ್ಮೆ ಜೀಯರ್ ಸ್ವಾಮಿಗಳು ತಿರುಪತಿಗೆ ಹೋಗಿ ಬರುತ್ತಿದ್ದಾಗ ಅವರ ವಾಹನ ಅಫಘಾತಕ್ಕೀಡಾಯಿತು. ಜೊತೆಯಲ್ಲಿದ್ದ ರಂಗಾಮಾಮ ಅವರಿಗೂ ಪೆಟ್ಟಾಗಿ ತಲೆಯಲ್ಲಿ ರಕ್ತ ಒಸರುತ್ತಿದ್ದರೂ ಲೆಕ್ಕಿಸದೆ ಮಠದಲ್ಲಿ ಸ್ನಾನ ಮಾಡಿ ಜೀಯರ್ ಸ್ವಾಮಿಗಳಿಗೆ ಪ್ರಸಾದ ಮಾಡಿ ಅರ್ಪಿಸಿದ ಕಾಯಕ ನಿಷ್ಟೆಯ ಜೀವಿ ರಂಗಾಮಾಮ. ಇನ್ನ ಮಠದ ಎಲ್ಲ ವ್ಯವಹಾರಗಳನ್ನು ಸುಲಲಿತವಾಗಿ ನಡೆಸುತ್ತಿರುವ, ಒಮ್ಮೆಯೂ ನಗದೆ ಸದಾ ಸೀರಿಯಸ್ಸಾಗಿಯೇ ಇರುವ ರಾಮಾನುಜ ಅವರ ಕರ್ತವ್ಯ ನಿಷ್ಟೆ ಮಠದ ಆಸ್ತಿ. ಇನ್ನು ಶ್ರೀ ಮಠದ ಚಾಲಕನಾಗಿರುವ ವಿಜಯಸಾರಥಿಯ ಉತ್ಸಾಹ ಗಮನಾರ್ಹ. ಜೊತೆಗೆ ಶ್ರೀಮಠದ ಕೆಳಗಿರುವ ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸುವ, ದೇವರಲಂಕಾರವನ್ನು ವೃತದಂತೆ ಮಾಡುವ ಶ್ರೀಕಾಂತ್ ಅವರು, ಮಠದ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ಭಾಗಿಯಾಗುವವರು... ಹೀಗೆ ಸದಾ ಆರೋಗ್ಯಕರ ವರ್ಚಸ್ಸಿನಿಂದ, ಉತ್ಸಾಹ ತುಂಬುತ್ತಿರುವ ಯಾವುದೇ ಜಾತಿ ಭೇಧ ವಿಲ್ಲದೆ ಸರ್ವರಿಗೂ ಒಳಿತನ್ನೇ ಬಯಸುವ ಯತಿರಾಜ ಮಠದ ಪರಿಸರವೇ ಬಹು ಸುಂದರ...