ಹಾಗೇ ಸುಮ್ಮನೇ...!
*ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ. ಅದು ಉಪ್ಪನ್ನು ಹೀರ್ಕೊಳುತ್ತೆ.*
ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ, ಸಾಲದ ಹೊರೆಯೇರಿದಾಗ ತೀರ್ಸೋಕೆ.
*ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್ಣೀರು ಬರಲ್ಲ.*
ದುಃಖದಿಂದ ಕಣ್ಣೀರು ಬಂದಾಗ, ನೀರು ಕುಡಿದು ಜೋರಾಗಿ ನಕ್ಕರೆ ಕಣ್ಣೀರು ಕಾಣೋಲ್ಲ
*ಎಷ್ಟೊತ್ತಾದರೂ ಕುಕ್ಕರ್ ಕೂಗ್ತಾ ಇಲ್ಲ ಅಂದ್ರೆ ಒಳಗೆ ತಳ ಹಿಡೀತಿದೆ ಅಂತ ಅರ್ಥ*
ಏನ್ ಕೇಳಿದ್ರೂ ಹೆಂಡ್ತಿ ಮೌನವಾಗಿದಾಳೆ ಅಂದ್ರೆ ಒಳಗೆ ಉರೀತಿದೆ ಅಂತ ಅರ್ಥ.
*ಬೇಳೆ ಬೇಯೋಕೆ ಚಿಟಿಕೆ ಅರಿಶಿನ, ಮಿಳ್ಳೆ ಎಣ್ಣೆ ಸಹಕಾರಿ.*
ಬದುಕು ಅಂದಗಾಣಿಸೋಕೆ ಹಿಡಿಯಷ್ಟು ಪ್ರೀತಿ, ಮುಷ್ಟಿಯಷ್ಟು ಕಾಳಜಿ ಸಹಕಾರಿ.
*ಹಿಟ್ಟು ಚೆನ್ನಾಗಿ ನಾದಿದರೆ ಜೋಳದ ರೊಟ್ಟಿ ಹರಿಯೋಲ್ಲ ಹೇಗೆ ತಟ್ಟಿದರೂ*
ಸಂಬಂಧಗಳೂ ಹಾಗೇನೆ, ನಾದಿ ಹದವಾಗಿದ್ದರೆ ತಟ್ಟಿದರೂ, ಲಟ್ಟಿಸಿದರೂ, ಬಿಸಿ ಮೇಲೆ ಬೇಯಿಸಿದರೂ ಹರಿಯೋಲ್ಲ .
*ಅಲಸಂದೆ, ಹುರುಳಿ, ಹೆಸರಿನಂತಹ ಕಾಳುಗಳನ್ನು ನೀರಿಗೆ ಹಾಕಿದಾಗ ಜೊಳ್ಳು ಕಾಳುಗಳು ತೇಲುತ್ತದೆ*
ಗೆಳೆಯರೂ ಹಾಗೇ ಅಲ್ವಾ, ನಾವು ತಾಪತ್ರಯದ ನೀರಿಗೆ ಬಿದ್ದಾಗ ಜೊಳ್ಯಾರು, ಗಟ್ಟಿ ಯಾರು ಅಂತ ಗೊತ್ತಾಗತ್ತೆ.
*ಕಾಫಿ ಬಟ್ಟಲು ಖಾಲಿಯಾಗಿ ಕೊನೇಲಿ ಉಳಿಯೋ ಕಾಫಿ ಬಸಿಯೋಕೆ ತುಂಬ ರುಚಿ*
ಗಳಿಸಿದ್ದ ಗೆಳೆತನ,ಪ್ರೀತಿ, ಆಸ್ತಿನೂ ಹಾಗೇ ಕಳ್ದೋಗುತ್ತೆ ಅನ್ನೋವಾಗ ನಂಟಿನ ಅಂಟು ಜಾಸ್ತಿಯಾಗುತ್ತೆ.
*ಅಗ್ಗಿಷ್ಟಿಕೇಲಿ ಅಡುಗೆ ಮಾಡೋವಾಗ ಪಾತ್ರೆ ತಳಕ್ಕೆ ಬೂದೀನೋ ಅಕ್ಕಿಹಿಟ್ಟೋ ಹಚ್ತೀವಿ ಪಾತ್ರೆ ಮಸಿ ಹಿಡೀದಿರ್ಲಿ ಅಂತ*
ಅನವಶ್ಯಕ ನಿಂದನೆಗಳಿಗೂ ಹಾಗೇ, ನಿರ್ಲಕ್ಷ್ಯ ದ ಕೋಟಿಂಗ್ ಮಾಡಿಬಿಡಬೇಕು. ನೋವು ಅಂಟೋಲ್ಲ, ಅಂಟಿದರೂ ಕೊಡವಿದರೆ ಉದುರಿಹೋಗುತ್ತೆ..
*ಸಾರು ಹುಳಿ ಕುದ್ಯೋವಾಗ ಚೂರು ಬೆಲ್ಲ ಹಾಕ್ತೀವಿ ಘಾಟು ಹೋಗೋಕೆ*
ದಾಂಪತ್ಯದಲ್ಲೂ ತುಸು ಸೈರಣೆ ಬೆರೆಸಿ, ಕಲಹದ ಘಾಟು ತಡ್ಯೋಕೆ.
*ಹಾಲು ಒಡೆದರೆ ಸಂಸ್ಕರಿಸಿ ಖೋವಾನೋ ಪನೀರನ್ನೋ ಮಾಡಬಹುದು.*
ಸಂಬಂಧ ಒಡೆದರೆ ಹೀಗ್ಮಾಡೋಕಾಗೋಲ್ಲ. ಜೋಪಾನ..
*ಕಾದ ಎಣ್ಣೆಗೆ ಸಣ್ಣ ಹನಿ ನೀರು ಸಿಡಿದ್ರೂ ಚಟಪಟ ಚಟಪಟ ಅಂತ ಬೈಯುತ್ತೆ...*
ನೊಂದ ಮನಸ್ಸೂ ಹಾಗೇನೆ ಸಣ್ಣ ಸಣ್ಣ ಮಾತಿಗೆಲ್ಲ ಸಿಡಿದೇಳತ್ತೆ.
*ಮಾಡಿಟ್ಟ ಅಡುಗೇಲಿ ಪದೇ ಪದೇ ಕೈಯಾಡಿಸ್ತಾ ಇದ್ರೆ, ಬೇಗ ಹಳಸೋಗತ್ತೆ...*
ಹಳೇ ವಿಚಾರಗಳನ್ನು ಪದೇ ಪದೇ ಕೆದಕ್ತಾ ಇದ್ರೂ ಅಷ್ಟೇ, ಸಂಬಂಧ ಹಳಸುತ್ತೆ.
*ಫ್ರಿಡ್ಜಲ್ಲಿಟ್ಟ ಹಲಸಿನ ತೊಳೆ, ಅಲ್ಲಿರೋ ಎಲ್ಲ ವಸ್ತುವಿನೊಳಗೂ ತನ್ನ ಸುವಾಸನೆ ಸೇರಿಸಿಬಿಡುತ್ತೆ.*
ಸಹೃದಯರೂ ಹಾಗೇ ಅಲ್ವಾ, ತಾವಿರೋ ತಾವಿನಲ್ಲೆಲ್ಲ ಸಜ್ಜನಿಕೆ ಹರಡ್ತಾರೆ..
*ಸಿಹಿ ತಿಂಡಿ ಮಧುಮೇಹ ಹೆಚ್ಚು ಮಾಡುತ್ತೆ* *ಕಹಿ ಹಾಗಲ,ಮೆಂತ್ಯ, ಅಮೃತ ಬಳ್ಳಿ ಈ ರೋಗಕ್ಕೆ ಔಷಧಿಯಂತೆ*
ಕೆಲವರ ಮಾತುಗಳೂ ಹಾಗೇನೇ, ಸಿಹಿಯಲ್ಲಿ ಕುಟಿಲತೆ, ಕಹಿಯಲ್ಲಿ ಕಾಳಜಿ.
*ಮೊಸರನ್ನ ಉಪ್ಪಿನ ಕಾಯಿ, ಊಟ ಮುಗಿಸಿ ತಟ್ಟೆ ಬಳಿದು ಕೈ ಬೆರಳುಗಳನ್ನು ಸಂಕೋಚವಿಲ್ಲದೇ ನೆಕ್ಕಬೇಕು..*
ಬದುಕನ್ನೂ ಹಾಗೇ,ಸಣ್ಣ ಸಣ್ಣ ಖುಷಿ ಅನುಭವಿಸುತ್ತಾ ಬದುಕಬೇಕು.
*ಲೈಫ್ ಈಸ್ ಬ್ಯುಟಿಫುಲ್ BUT ನಾವು ಹೇಗೆ ಸ್ವೀಕಾರ ಮಾಡ್ತೀವಿ ಅನ್ನೋದರ ಮೇಲೆ ಅವಲಂಬಿಸಿದೆ*
-ಹಾ ಮ ಸತೀಶ್ (ಸಂಗ್ರಹ)