ಹಾಗೇ ಸುಮ್ಮನೇ...!
ನಿನ್ನೆ ನನ್ನ ಕಚೇರಿಗೆ ಒಂದು ಪ್ರಮಾಣ ಪತ್ರವನ್ನು ನೋಟರಿ ಮಾಡಿಸುವ ಉದ್ದೇಶದಿಂದ ಒಬ್ಬಾಕೆ ತುಂಬಾ ಇಳಿವಯಸ್ಸಿನ ಮಹಿಳೆಯನ್ನು ಓರ್ವ ನಡು ವಯಸ್ಸಿನ ಗಂಡಸು ಕರೆದುಕೊಂಡು ಬಂದಿದ್ದರು. ಪರಿಚಯ ಕೇಳಲಾಗಿ ಆತ ಆ ಮುದಿ ಹೆಂಗಸಿನ ಮಗನೆಂಬುದು ತಿಳಿಯಿತು. ನೋಟರಿ ಮಾಡುವ ಉದ್ದೇಶಕ್ಕೆ ಆಯಮ್ಮನ ಆಧಾರ್ ಕಾರ್ಡ್ ಕೇಳಿದೆ. ಆಧಾರ್ ಕಾರ್ಡಿನಲ್ಲಿ ಆಕೆಯ ಜನ್ಮ ದಿನಾಂಕ 1938ನೇ ಇಸವಿ ತೋರಿಸುತ್ತಿತ್ತು.
“ನಿಮ್ಮ ವಯಸ್ಸೆಷ್ಟಮ್ಮಾ?!” ಅಂತ ಕೇಳಿದೆ.
“ನಂಗೆ ಮೊನ್ನೇ ಸಂಕ್ರಮಣಕ್ಕೆ 88 ವರ್ಷ ಭರ್ತಿ ಆಯ್ತು!” ಅಂದರು.
“ಅಲ್ಲಮ್ಮಾ, ನಿಮ್ಮ ಆಧಾರ್ ಕಾರ್ಡಲ್ಲಿ ನಿಮ್ಮ ಜನ್ಮ ದಿನಾಂಕ 1938 ಅಂತ ತೋರಿಸುತ್ತಿದೆಯಲ್ಲಾ? ಆ ಪ್ರಕಾರ ನಿಮ್ಗೆ 85 ವರ್ಷ ಆಗುತ್ತಲ್ಲಾ?!” ಅಂದೆ.
“ಅದು ಹೇಗಂದ್ರೆ, ಕ್ಯಾಲೆಂಡರ್ ಪ್ರಕಾರ 85 ವರ್ಷ, ಅಧಿಕ ಮಾಸ ಎಲ್ಲಾ ಸೇರಿಸಿದ್ರೆ 88 ವರ್ಷಗಳಾಗ್ತದೆ!” ಅಂತೇಳಿ ಮುಗುಳ್ನಕ್ಕರು.
ನನಗನ್ನಿಸುವುದು ಬಹುಶಃ ಒಂದು ಎಂಬತ್ತು ವರ್ಷ ವಯಸ್ಸಾಗುವವರೆಗೆ ವಯಸ್ಸು ಕೇಳಿದರೆ ಹೆಚ್ಚಿನೆಲ್ಲರೂ ಎರಡೆರಡು ಮೂರ್ಮೂರು ವರ್ಷ ಕಡಿಮೆ ಹೇಳುವವರೇ. ಒಂದು ಬಾರಿ ಎಂಬತ್ತು ವರ್ಷ ಕಳೀತಾ, ಆಮೇಲೆ ಮೂರ್ನಾಲ್ಕು ವರ್ಷ ಸೇರಿಸಿ ಹೇಳುವುದರಲ್ಲೇ ಖುಷಿಯಿರುತ್ತದೆಯೇನೋ ಅಲ್ಲವಾ?!
-”ಮೌನಮುಖಿ”
(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ