ಹಾಡಾಗಿ ಹರಿದಾಳೆ

ಹಾಡಾಗಿ ಹರಿದಾಳೆ

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್ ಆರ್ ಲೀಲಾವತಿ
ಪ್ರಕಾಶಕರು
ವಿಕಾಸ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೪೦೦.೦೦, ಮುದ್ರಣ: ೨೦೨೩

ಹಿರಿಯ ಗಾಯಕಿ ಹೆಚ್ ಆರ್ ಲೀಲಾವತಿ ಅವರ ಆತ್ಮಕಥೆ “ಹಾಡಾಗ ಹರಿದಾಳೆ" ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಅದ್ಭುತವಾದ ಹಾಡುಗಳನ್ನು ಹಾಡಿರುವ ಲೀಲಾವತಿ ಅವರ ಸಂಗೀತ ಕಲಿಕೆಯ ಪಯಣ ಸುಗಮವಾಗಿರಲಿಲ್ಲ. ಹಾಡುವುದನ್ನು ಕಲಿಯಬೇಕೆನ್ನುವ ಹುಚ್ಚು (ಅವರೇ ಬರೆದಂತೆ) ಅವರನ್ನು ಅವರ ಗುರುಗಳು ನೀಡುತ್ತಿದ್ದ ಎಲ್ಲಾ ಕಿರುಕುಳಗಳನ್ನು ಸಹಿಸುವಂತೆ ಮಾಡಿತು. ಅವರ ಗುರುಗಳು ನೀಡುತ್ತಿದ್ದ ಶಿಕ್ಷೆಗಳು, ಕಿರುಕುಳಗಳು, ಕ್ರೌರ್ಯಗಳನ್ನು ಓದುವಾಗ ಕಣ್ಣಲ್ಲಿ ನೀರು ಜಿನುಗುತ್ತದೆ. ಸಾಧನೆಯ ಹಾದಿಯಲ್ಲಿ ಇವೆಲ್ಲವನ್ನೂ ಮರೆತ ಲೀಲಾವತಿ ಅವರು ಬಹಳ ಸೊಗಸಾಗಿ ತಮ್ಮ ಪಯಣವನ್ನು ಈ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಈ ಹೊತ್ತಗೆಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಿ ಹೆಚ್ ಎಸ್ ವೆಂಕಟೇಶಮೂರ್ತಿ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ...

“ಪದ್ಮಚರಣರ ಸಂಗೀತ, ಲೀಲಾವತಿಯವರ ಗಾಯನ ಅತ್ಯಂತ ಜನಪ್ರಿಯವಾಗಿದ್ದ ಕಾಲವದು. ಲೀಲಾವತಿ ಕನ್ನಡ ಕಾವ್ಯ ಗಾಯನದ ಅನಭಿಷಿಕ್ತ ಸಾಮ್ರಾಜ್ಞಿಯಾಗಿಯೇ ಮೆರೆದರು. ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ಹಾಡಿ ಅಪಾರ ಜನಪ್ರಿಯತೆ ಗಳಿಸಿದರು. ಇದೆಲ್ಲಾ ಹೊರಗೆ ಕಾಣುವ ಸಂಗತಿ ಆಯಿತು. ಮುಳ್ಳು ಬೇಲಿಯ ಹೂವಾಗಿ ಲೀಲಾವತಿ ದಶಕಗಳ ಕಾಲ ನರಳಿದ ಹೃದಯ ವಿದ್ರಾವಕ ಕಥೆ ಹೊರ ಜಗತ್ತಿಗೆ ಅವರ ಆತ್ಮಕಥೆಯ ಮೂಲಕ ಪರಿಚಯವಾಗುತ್ತಿದೆ. ಅವರು ಪಟ್ಟ ನೋವು, ಹಿಂಸೆ, ಅವಮಾನ ಅವರನ್ನು ಸದಾ ಗಂಭೀರವಾದ ಆತಂಕದಲ್ಲಿ ಇರಿಸಿತ್ತು.

'ಹಾವಿನ ಹೆಡೆಯ ಕೆಳಗೆ ನಡುಗುತ್ತಾ ಕೂತ ಕಪ್ಪೆ' ಯನ್ನು ತಮಗೆ ಹೋಲಿಸಿಕೊಂಡು ತಾವು ತಮ್ಮ ಗುರುಗಳ ಕಪಿಮುಷ್ಟಿಯಲ್ಲಿ ಸಿಲುಕಿ ನರಳಿದ್ದನ್ನು ಲೀಲಾವತಿ ಚಿತ್ರವತ್ತಾಗಿ ವರ್ಣಿಸಿದ್ದಾರೆ. ಅವರ ಮತ್ತು ಪದ್ಮಚರಣ ಅವರ ಸಂಬಂಧ ಬಹು ವಿಲಕ್ಷಣವಾದುದು. ದಶಕಗಳ ಕಾಲ ಆ ಗುರು ಮನೆಗೆ ಬಂದು ಕನ್ನಡ ಭಾವಗೀತೆಗಳನ್ನು ಆಕೆಗೆ ಕಲಿಸುತ್ತಿದ್ದರು. ಅವೆಲ್ಲಾ ಅವರ ಅದ್ಭುತ ಕಲಾ ಸೃಷ್ಟಿಗಳು ಹೌದು. ಆದರೆ ಮಾನಸಿಕವಾಗಿ ಆತ ಶಿಷ್ಯೆಗೆ ಕೊಡುತ್ತಿದ್ದ ಹಿಂಸೆ, ಮಾಡುತ್ತಿದ್ದ ಅವಮಾನ, ತೋರುತ್ತಿದ್ದ ಕ್ರೌರ್ಯವನ್ನು ಲೀಲಾವತಿ ಬರೆದಿರುವುದನ್ನು ಓದಿದಾಗ ಹೃದಯ ಕರಗಿ ಹೋಗುತ್ತದೆ. ಅವರ ಶಿಷ್ಠೆಯಾಗಿ ಅದ್ಭುತವಾದ ಗೀತೆಗಳನ್ನು ಕಲಿಯಬೇಕೆಂಬ ಹುಚ್ಚಿಗಾಗಿ ತಾವು ಆ ಎಲ್ಲ ಹಿಂಸೆ ಅನುಭವಿಸಿದ್ದಾಗಿ ಲೀಲಾವತಿ ಬರೆದುಕೊಳ್ಳುತ್ತಾರೆ.

ವಿವಾಹದ ವಿಷಯದಲ್ಲೂ ಅವರಿಗೆ ಅನ್ಯಾಯವಾಗುತ್ತದೆ. ಒಂದು ಮಗುವಾದ ಮೇಲೆ ಗಂಡನೆನಿಸಿಕೊಂಡವನು ಅವರಿಂದ ದೂರವಾಗುತ್ತಾನೆ. ಅದು ಇನ್ನೊಂದು ದಾರುಣ ಕಥೆ. ಮಗ ಎಂದರೆ ಲೀಲಾವತಿ ಅವರಿಗೆ ಜೀವ, ಅವನನ್ನು ಅಕ್ಕರೆಯಿಂದ ಸಾಕಿ ಬೆಳೆಸುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿ ತಮ್ಮ ತವರಿನಿಂದ ಸಿಕ್ಕ ನೈತಿಕ ಬಲ ಮತ್ತು ಆಸರೆಯನ್ನು ಲೀಲಾವತಿ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ರಘುರಾಮರ ಪ್ರವೇಶ ಲೀಲಾವತಿಯ ಬದುಕಿನಲ್ಲಿ ವಸಂತ ಪರ್ವವನ್ನು ತಂದಿತೆನ್ನಬೇಕು. ರಘುರಾಮರನ್ನು ಲೀಲಾವತಿ ಮದುವೆಯಾಗುತ್ತಾರೆ. ಮಹಾ ಹೆಂಗರುಳಿನ ರಘುರಾಮ್ ಲೀಲಾವತಿಗೆ ತಾಯ ಅಕ್ಕರೆಯನ್ನು ಉಣಿಸುತ್ತಾರೆ. ಅವರೂ ಕಲಾವಿದರು.

ರಘುರಾಮ್‌ ಲೀಲಾವತಿ ಜೋಡಿ ಅಪೂರ್ವವಾದ ಜೋಡಿ. ಆ ಗುರು, ಈ ಪತಿ ಸ್ವಭಾವದಲ್ಲಿ ತದ್ವಿರುದ್ಧ ಕಲಾವತಿಯಾಗಿ ತಮ್ಮ ಬದುಕಿನ ಪೂರ್ವಾರ್ಧದಲ್ಲಿ ವಿಕಸಿತವಾಗಿದ್ದ ಲೀಲಾವತಿಯ ಬದುಕು, ಲೀಲಾವತಿಯಾಗಿಯೂ ವಿಕಸನಗೊಂಡ ಕಾಲ ಅವರ ಬದುಕಿನ ಉತ್ತರಾರ್ಧ. ಲೀಲಾವತಿ ಸ್ವತಃ ಬರೆಯುತ್ತಾರೆ. ರಾಗ ಸಂಯೋಜಿಸುತ್ತಾರೆ. ಗುರುವಿನಿಂದ ದೂರವಾಗಿ ಸ್ವತಂತ್ರವೂ ಸುಂದರವೂ ಆದ ಬದುಕನ್ನು ತಮ್ಮ ಪತಿಯ ದೆಸೆಯಿಂದ ಬದುಕುತ್ತಾರೆ.”