ಹಾಡುವ ಕೋಗಿಲೆಗಳ ದುರಂತ ಕಥನ

ಯಾವುದೇ ಹಾಡುಗಾರನಿಗೆ ತನ್ನ ಕಂಠವೇ ಅಮೂಲ್ಯ ಸಾಧನ. ಆ ಕಂಠದಿಂದ ಸುಮಧುರ ಸಂಗೀತ ಗಾನ ಹೊರಬರದೇ ಇದ್ದರೆ ಆತನ ಅಥವಾ ಆಕೆಯ ಜೀವನವೇ ಬರಡು. ಅವರ ನಂತರದ ಜೀವನ ಬದುಕಿದ್ದೂ ಸತ್ತಂತೆಯೇ. ಈ ಕಾರಣದಿಂದಲೇ ಎಲ್ಲಾ ಗಾಯಕರು ತಮ್ಮ ಕಂಠವನ್ನು ಬಹಳ ಜೋಪಾನ ಮಾಡುತ್ತಾರೆ. ಕಂಡದ್ದೆಲ್ಲಾ ತಿನ್ನದೇ, ಕುಡಿಯದೇ ತಮ್ಮ ಸ್ವರ ಪೆಟ್ಟಿಗೆಯನ್ನು ಕಾಪಾಡಿಕೊಳ್ಳುತ್ತಾರೆ. ವಿದೇಶಗಳಲ್ಲಂತೂ ತಮ್ಮ ಕಂಠಕ್ಕೆ ಕೋಟಿಗಟ್ಟಲೆ ಹಣದ ವಿಮೆ ಮಾಡಿಸಿಕೊಂಡವರೂ ಇದ್ದಾರೆ. ಏಕೆಂದರೆ ಕಂಠ ಅಮೂಲ್ಯ.
ಮಧುರ ಕಂಠದ ಗಾಯಕ ಅಥವಾ ಗಾಯಕಿಯೊರ್ವಳಿಗೆ ಆರೋಗ್ಯ ಸಮಸ್ಯೆ ಕಾಡಿ ಗಂಟಲಿನಿಂದ ಹಾಡು ಹೊರಡದೇ ಇದ್ದರೆ... ಅವರ ಭವಿಷ್ಯ ಏನಾದೀತು? ಈ ಬಗೆಯ ಕಲ್ಪನೆಯೇ ಬಹಳ ಹೆದರಿಕೆ ಹುಟ್ಟಿಸುವಂತದ್ದು. ಅದರಲ್ಲೂ ಖ್ಯಾತ ಗಾಯಕರಾಗಿದ್ದರಂತೂ ಅವರ ಗಾಯನ ವೃತ್ತಿಗೇ ಎಳ್ಳುನೀರು ಬಿಡಬೇಕಾದ ಅನಿವಾರ್ಯತೆ ಒದಗಬಹುದು. ಇಲ್ಲಿ ಖ್ಯಾತನಾಮರಾದ ಮೂರು ಗಾಯಕರ ವೃತ್ತಿ ಜೀವನಕ್ಕೇ ಮುಳುವಾದ ಆರೋಗ್ಯ ಸಮಸ್ಯೆಯ ಬಗ್ಗೆ ಮಾಹಿತಿ ಒದಗಿಸಲಾಗಿದೆ. ನಾವು ಅಂದುಕೊಂಡದ್ಡೇ ಯಾವತ್ತೂ ನಡೆಯುವುದಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆ. ಇಲ್ಲಿರುವುದು ಮೂರು ಉದಾಹರಣೆಯಷ್ಟೇ. ಹಲವಾರು ಗಾಯಕರು ತಮ್ಮ ಆರೋಗ್ಯದ ಸಮಸ್ಯೆ ಮತ್ತು ಚಟಗಳಿಂದ ಧ್ವನಿ ಕಳೆದುಕೊಂಡು ಬಡವಾಗಿದ್ದಾರೆ. ಕೆಲವರು ಮತ್ತೆ ದನಿಯನ್ನು ಗಳಿಸಿಕೊಂಡಿದ್ದಾರೆ.
ಕಿವಿಯ ಸಂಪರ್ಕ ಕಡಿದುಕೊಂಡ ಅಲ್ಕಾ ಯಾಜ್ಞಿಕ್: ಬಾಲಿವುಡ್ ಚಿತ್ರರಂಗದ ಹಿನ್ನಲೆ ಗಾಯನದಲ್ಲಿ ಅಲ್ಕಾ ಯಾಜ್ಞಿಕ್ ಬಹುದೊಡ್ಡ ಹೆಸರು. ೯೦ರ ದಶಕದಲ್ಲಿ ಇವರ ಮತ್ತು ಉದಿತ್ ನಾರಾಯಣ್ ಅವರ ಹಾಡಿನ ಜೋಡಿ ಬಹು ಜನಪ್ರಿಯವಾಗಿತ್ತು. ಆದರೆ ಇತ್ತೀಚೆಗೆ ಅಲ್ಕಾ ಅವರನ್ನು ಕಿವಿಯ ಸಮಸ್ಯೆ ಬಾಧಿಸುತ್ತಿದೆ. ಕಿವಿಗೆ ತಗುಲಿದ ಸೋಂಕಿನಿಂದಾಗಿ ಅವರಿಗೆ ಕಿವುಡುತನದ ಮತ್ತು ಸಂವಹನದ ಸಮಸ್ಯೆ ಕಾಡುತ್ತಿದೆ. ಸಂವೇದನಾ ನರದ ಸಮಸ್ಯೆಯಿಂದ ಇವರಿಗೆ ಹಾಡುಗಳನ್ನು ಸರಿಯಾದ ಧಾಟಿಯಲ್ಲಿ ಹಾಡಲಾಗುತ್ತಿಲ್ಲ. ಕಿವಿಯ ಕಿವುಡುತನ ಕಾಡುತ್ತಿರುವುದರಿಂದ ಈ ಕೋಗಿಲೆ ಹಾಡಲಾರದೇ ತತ್ತರಿಸುತ್ತಿದೆ. ವೈದ್ಯರೂ ಇವರ ಸಮಸ್ಯೆಯನ್ನು ಗುಣಪಡಿಸಲು ಪ್ರಯತ್ನಿಸುತ್ತಿದ್ದರೂ ಇದೊಂದು ಅಪರೂಪದ ಸಮಸ್ಯೆಯಾಗಿರುವುದರಿಂದ ಸಂಪೂರ್ಣ ಸರಿಯಾಗುವುದು ಕಷ್ಟ ಸಾಧ್ಯ ಎನ್ನುತ್ತಿದ್ದಾರೆ.
ತಮ್ಮ ಸಮಸ್ಯೆಯ ಬಗ್ಗೆ ತಿಳಿದುಕೊಂಡಿರುವ ಅಲ್ಕಾ ಯಾಜ್ಞಿಕ್ ಭರವಸೆ ಕಳೆದುಕೊಂಡಿಲ್ಲ. ತಮ್ಮ ಅಭಿಮಾನಿಗಳಿಗೆ ಅವರು “ನಾನು ನನ್ನ ಸಂವೇದನಾ ನರದ ಸಮಸ್ಯೆಯಿಂದ ಶೀಘ್ರ ಗುಣಮುಖರಾಗಿ ಮತ್ತೆ ಗಾಯನ ಲೋಕಕ್ಕೆ ಮರಳುತ್ತೇನೆ" ಎಂದು ಸಾಂತ್ವನ ಭರಿತ ಧೈರ್ಯ ಹೇಳಿದ್ದಾರೆ. ನಿರಂತರ ಹೆಡ್ ಫೋನ್ ಬಳಕೆಯಿಂದ ಈ ಸಮಸ್ಯೆ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ವೈದ್ಯರು. ಏನಾದರಾಗಲಿ, ಅಲ್ಕಾ ಯಾಜ್ಞಿಕ್ ಮೊದಲಿನಂತೇ ತಮ್ಮ ಸುಮಧುರ ಕಂಠದಿಂದ ನಮ್ಮನ್ನೆಲ್ಲಾ ರಂಜಿಸಲಿ ಎನ್ನುವುದೇ ಸಾವಿರಾರು ಅಭಿಮಾನಿಗಳ ಒಕ್ಕೊರಲ ಮನದಾಳದ ಮಾತು.
ಹಾಡು ಮರೆತ ರಾಗೇಶ್ವರಿ: ಒಂದು ಸಮಯದಲ್ಲಿ ಖ್ಯಾತ ಪಾಪ್ ಸಿಂಗರ್ ಆಗಿ ಹೆಸರು ಮಾಡಿದ್ದ ರಾಗೇಶ್ವರಿ ಈಗ ರಾಗಗಳನ್ನು ಮರೆತಿದ್ದಾರೆ. ಆಂಖೇ, ಮೈ ಖಿಲಾಡಿ ತೂ ಅನಾಡಿ ಮುಂತಾದ ಸೂಪರ್ ಹಿಟ್ ಬಾಲಿವುಡ್ ಚಲನ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದ ಈ ಗಾಯಕಿ ಈಗ ಅಕ್ಷರಶಃ ಹಾಡುಗಳನ್ನು ಮರೆತೇ ಬಿಟ್ಟಿದ್ದಾರೆ. ೨೦೦೦ರಲ್ಲಿ ಮಲೇರಿಯಾದಿಂದ ಬಳಲಿದ ಇವರು ಅದರಿಂದ ಗುಣಮುಖರಾದರೂ ನಂತರದ ದಿನಗಳಲ್ಲಿ ಬೆಲ್ಸ್ ಪಾಲ್ಸಿ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾದರು. ಇದರಿಂದ ಇವರ ಮುಖದ ಎಡಭಾಗ ಪಾರ್ಶ್ವವಾಯುಗೆ ತುತ್ತಾಗಿ, ಮಧುರ ಕಂಠ ಗೊಗ್ಗರು ಧ್ವನಿಯಾಗಿ ಬದಲಾಯಿತು. ಇದರಿಂದಾಗಿ ಅವರಿಗೆ ಹಾಡುವುದು ಬಿಡಿ, ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಕ್ರಮೇಣ ವೈದ್ಯಕೀಯ ಚಿಕಿತ್ಸೆ, ಫಿಸಿಯೋಥೆರಪಿ, ಇಲೆಕ್ಟ್ರಿಕಲ್ ಸ್ಟಿಮ್ಯೂಲೇಶನ್, ಯೋಗ ಮುಂತಾದುವುಗಳ ನೆರವಿನಿಂದ ಬಹಳಷ್ಟು ಸುಧಾರಿಸಿಕೊಂಡಿದ್ದಾರೆ. ಆದರೆ ಅವರ ಕಂಠ ಮಾತ್ರ ಅವರಿಂದ ಮುನಿಸಿಕೊಂಡಿದೆ. ಭವಿಷ್ಯದ ಪಾಪ್ ತಾರೆ ಎನ್ನುವ ಹಣೆಪಟ್ಟಿಯೊಂದಿಗೆ ಯಶಸ್ಸಿನ ಉತ್ತುಂಗದಲ್ಲಿದ್ದ ರಾಗೇಶ್ವರಿ ಈಗ ಎಲ್ಲವನ್ನೂ ಬಿಟ್ಟು ಲಂಡನ್ ನಲ್ಲಿ ನೆಲೆ ನಿಂತಿದ್ದಾರೆ. ಈ ಆರೋಗ್ಯ ಸಮಸ್ಯೆ ಸುಮಧುರ ಗಾಯಕಿಯ ಜೊತೆಗೆ ಉತ್ತಮ ನಟಿಯನ್ನೂ ಕಸಿದುಕೊಂಡದ್ದು ದುರಂತವೇ ಸರಿ.
ಗುಣಮುಖರಾದ ಜಸ್ಟಿನ್ ಬೀಬರ್: ತಮ್ಮ ಮಗನ ಮದುವೆಯನ್ನು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಅದ್ದೂರಿಯಾಗಿ ಮಾಡುತ್ತಿರುವ ಮುಖೇಶ್ ಅಂಬಾನಿಯವರು ಈ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಲು ಕೆನಡಾದ ಖ್ಯಾತ ಪಾಪ್ ಸಿಂಗರ್ ಜಸ್ಟಿನ್ ಬೀಬರ್ ಅವರನ್ನು ಕರೆಸಿದ್ದಾರೆ. ಇವರ ಕಾರ್ಯಕ್ರಮಕ್ಕೆ ಅಂಬಾನಿಯವರು ವೆಚ್ಚ ಮಾಡುತ್ತಿರುವ ಹಣ ಕೇವಲ ೮೩ ಕೋಟಿ ! ಹೌದು, ಇಷ್ಟೊಂದು ದುಬಾರಿಯಾಗಿರುವ ಈ ಜಸ್ಟಿನ್ ಬೀಬರ್ ಎಂಬ ಪಾಪ್ ಹಾಡುಗಾರ ಕೆಲವು ವರ್ಷಗಳ ಹಿಂದೆ ಹಾಡಲಾರದೇ ತೆರೆಯ ಮರೆಗೆ ಸರಿದಿದ್ದರು. ೨೦೨೨ರಲ್ಲಿ ತಾವು ಒಪ್ಪಿ ಕೊಂಡಿದ್ದ ಹಲವಾರು ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು. ಇವರಿಗೆ ರಾಮ್ಸೆ ಹಂಟ್ ಸಿಂಡ್ರೋಮ್ (Ramsay hunt Syndrome) ಎಂಬ ಸಮಸ್ಯೆ ಕಾಡಿತ್ತು. ಒಂದು ಕಿವಿಯ ಸಮೀಪದ ಮುಖದ ನರದ ಮೇಲಾಗುವ ವೈರಸ್ ನ ಪ್ರಭಾವದಿಂದ ಈ ಸಮಸ್ಯೆ ಉಂಟಾಗಿ ಬೀಬರ್ ಅವರಿಗೆ ಒಂದು ವರ್ಷ ಹಾಡು ಹಾಡಲಾಗಲೇ ಇಲ್ಲ. ಈ ವೈರಸ್ ಕಾರಣದಿಂದ ಮುಖಕ್ಕೆ ಪಾರ್ಶ್ವವಾಯು ಸಮಸ್ಯೆ ಕಾಡಬಹುದು, ಮುಖದಲ್ಲಿ ದದ್ದುಗಳೇಳಬಹುದು. ಬೀಬರ್ ಅವರ ಮುಖದ ಎಡಭಾಗಕ್ಕೆ ಈ ಸಮಸ್ಯೆಯಾಗಿತ್ತು. ಆದರೆ ಅವರ ಅದೃಷ್ಟ ದೊಡ್ಡದಿತ್ತು. ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಯಾಗದೇ ಇದ್ದುದರಿಂದ ಈಗ ಅವರು ಸಂಪೂರ್ಣ ಗುಣಮುಖರಾಗಿ ತಮ್ಮ ಅಭಿಮಾನಿಗಳನ್ನು ರಂಜಿಸಲು ಭಾರತಕ್ಕೆ ಬಂದಿಳಿಯಲಿದ್ದಾರೆ.
ಇಲ್ಲಿರುವುದು ಕೆಲವೇ ಕೆಲವು ಖ್ಯಾತ ಸೆಲೆಬ್ರಿಟಿಗಳ ದುರಂತ ಕಥನ. ಇನ್ನೂ ಹಲವಾರು ಮಂದಿ ತಮ್ಮ ಆರೋಗ್ಯ ಸಮಸ್ಯೆಯಿಂದ ಬಳಲಿ ಹಾಡು ಹಾಡಲಾರದೇ ಮರೆಗೆ ಸರಿದವರಿದ್ದಾರೆ. ಇಂತಹ ಹಾಡುಗಾರರ ಆರೋಗ್ಯ ಸುಧಾರಿಸಲಿ. ಅವರು ಮತ್ತೆ ತಮ್ಮ ಕೋಗಿಲೆ ಕಂಠದ ಗಾಯನದಿಂದ ಅಭಿಮಾನಿಗಳನ್ನು ರಂಜಿಸಲಿ ಎನ್ನುವುದೇ ಹಾರೈಕೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ