ಹಾತೆಗಳ ಕಥೆ !

ಕಳೆದ ವಾರ ಅಡುಗೆ ಮನೆಯ ಅಕ್ಕಿ, ಗೋಧಿ ಮುಂತಾದ ಧಾನ್ಯಗಳಲ್ಲಿ ಅಡಗಿ ಕೂರುವ ಸೊರಬಿ (ಗುಗ್ಗುರು) ಕೀಟದ ಬಗ್ಗೆ ತಿಳಿದುಕೊಂಡಿರಿ. ಈ ವಾರ ಇಂಥದ್ದೇ ರೀತಿಯ ಉಪಟಳ ನೀಡುವ ಮತ್ತೊಂದು ಜೀವಿ ಹಾತೆ (Corcyra cephalonica) ಅಥವಾ ಪತಂಗದ ಕಥೆ ಹೇಳುವೆ. ಸೊರಬಿಗಳು ಧಾನ್ಯದ ಡಬ್ಬಿಯನ್ನು ತೆರೆದ ಕೂಡಲೇ ಒಳಹೊಕ್ಕು ಅಡಗಿಕೊಂಡರೆ ಹಾತೆಗಳು ತಮಗಿರುವ ರೆಕ್ಕೆಗಳ ಸಹಾಯದಿಂದ ಡಬ್ಬದಿಂದ ಹಾರಿಹೋಗುತ್ತವೆ. ನೀವು ಬಹುಸಮಯದಿಂದ ತೆರೆಯದ ಡಬ್ಬಗಳಲ್ಲಿ ಈ ರೀತಿಯ ಕೀಟಬಾಧೆ ಕಂಡು ಬಂದರೆ ನಿಮ್ಮ ಡಬ್ಬದಲ್ಲಿ ಇವುಗಳ ಸಾಮ್ರಾಜ್ಯ ಸೃಷ್ಟಿಯಾಗಿದೆ ಎಂದು ಅರ್ಥ.
Pyralidae ಎಂಬ ಕುಟುಂಬಕ್ಕೆ ಸೇರಿದ ಈ ಕೀಟಗಳನ್ನು ಆಂಗ್ಲ ಭಾಷೆಯಲ್ಲಿ ಸಾಮಾನ್ಯವಾಗಿ Moth ಎಂದು ಕರೆಯುತ್ತಾರೆ. ತಿಳಿ ಮೈಬಣ್ಣ, ೧೫-೧೮ ಮಿಮೀ ಅಗಲದ ಎರಡು ಜೊತೆ ರೆಕ್ಕೆಗಳಲ್ಲಿ ಒಂದು ಜೊತೆ ಕಂದು ಬಣ್ಣವಿದ್ದು, ಇನ್ನೊಂದು ಜೊತೆ ರೆಕ್ಕೆ ಪಾರದರ್ಶಕವಾಗಿರುತ್ತದೆ. ರೆಕ್ಕೆಯನ್ನು ಮುಟ್ಟಿದರೆ ನಿಮ್ಮ ಕೈಗೆ ತೆಳು ಕಂದು ಬಣ್ಣದಹುಡಿ ಮೆತ್ತಿಕೊಳ್ಳುತ್ತದೆ.
ಈ ಹಾತೆಗಳು ಧಾನ್ಯದ ಬಿರುಕಿನಲ್ಲಿ, ಡಬ್ಬಿಯ ಸಂದಿಗಳಲ್ಲಿ ನೂರಾರು ಮೊಟ್ಟೆಗಳನ್ನು ಇಡುತ್ತವೆ. ಕೆನೆ ಹಾಲಿನ ಬಣ್ಣದ ಮರಿಗಳು ಮೊಟ್ಟೆಯೊಡೆದು ಹೊರ ಬರುವಾಗ ಅತ್ಯಂತ ಚಿಕ್ಕದಾದ ಗಾತ್ರದಲ್ಲಿರುತ್ತವೆ. ಹೊರ ಬಂದ ತಕ್ಷಣ ತನ್ನ ಸುತ್ತಲಿರುವ ಆಹಾರ ವಸ್ತುವನ್ನು ಕಬಳಿಸಲು ಪ್ರಾರಂಭ ಮಾಡುತ್ತವೆ. ಈ ಮರಿಗಳು ಗಾತ್ರವನ್ನು ವೃದ್ಧಿಸಿಕೊಳ್ಳುತ್ತಿದ್ದಂತೆ ನಾಲ್ಕಾರು ಬಾರಿ ತಮ್ಮ ಚರ್ಮವನ್ನು ಕಳಚಿ (ಮಾಲ್ಪಿಂಗ್) ಬೆಳೆಯುತ್ತವೆ. ನಂತರದ ಹಂತದಲ್ಲಿ ಅದು ತನ್ನ ಸುತ್ತಲೂ ಒಂದು ತೆಳ್ಳನೆಯ ಬಲೆಯಂತಹ ವಸ್ತುವನ್ನು ಸ್ರವಿಸುತ್ತಾ ಒಂದು ಮುದ್ದೆಯಂತಹ ಕೋಶವನ್ನು ನಿರ್ಮಾಣ ಮಾಡಿಕೊಳ್ಳುತ್ತದೆ. ಹೀಗೆ ಅದು ಕೋಶಾವಸ್ಥೆಗೆ ಜಾರಿಕೊಳ್ಳುತ್ತದೆ. ಇದನ್ನು ಡಬ್ಬಿಯಲ್ಲಿ ಕಂಡಾಗ ನಮ್ಮ ಹಿರಿಯರು ‘ಮಾಲೆಗಟ್ಟಿದೆ' ಎಂದು ಹೇಳುತ್ತಿದ್ದರು.
ಒಂದೆರಡು ವಾರಗಳು ಕಳೆದ ಬಳಿಕ ಕೋಶಾವಸ್ಥೆಯಲ್ಲಿರುವ ಹುಳಗಳು ರೆಕ್ಕೆಯನ್ನು ಬೆಳೆಸಿಕೊಂಡು ಬೆಳೆದ ಹಾತೆಗಳಾಗಿ ಹೊರಬರುತ್ತವೆ. ಈ ಹಂತದಲ್ಲಿ ಅವು ಹೆಚ್ಚಿನ ಆಹಾರವನ್ನು ಸೇವಿಸುವುದಿಲ್ಲ. ಏಕೆಂದರೆ ಪ್ರೌಢ ಕೀಟಗಳ ಜೀವಿತಾವಧಿ ಕೇವಲ ಒಂದು ವಾರವಷ್ಟೇ. ಈ ಕಾರಣದಿಂದ ಪ್ರೌಢಾವಸ್ತೆಗೆ ಬಂದ ಕೀಟವು ನೀವು ಡಬ್ಬಿಯ ಮುಚ್ಚಳವನ್ನು ತೆಗೆದ ಕೂಡಲೇ ಹೊರಗಡೆ ಬಂದು ತನ್ನ ಸಂಗಾತಿಯನ್ನು ಹುಡುಕಲು ಹೋಗಿ ಬಿಡುತ್ತದೆ. ನೀವು ಡಬ್ಬವನ್ನು ತೆರೆಯದೇ ಇದ್ದಲ್ಲಿ ಡಬ್ಬದ ಒಳಗೇ ಸಂಗಾತಿಯನ್ನು ಹುಡುಕುತ್ತದೆ. ಈ ಮೂಲಕ ತನ್ನ ಸಂತತಿಯನ್ನು ಅದು ಮುಂದುವರೆಸುತ್ತದೆ.
ಮರಿಹುಳಗಳು ವಿಸರ್ಜಿಸುವ ಮಲ, ಅವುಗಳು ಬೆಳೆಯುವಾಗ ವಿಸರ್ಜಿಸುವ ಮೈಯ ಪೊರೆ, ಕೋಶಾವಸ್ಥೆಯ ಸಮಯದಲ್ಲಿ ಇದು ಕಟ್ಟಿಕೊಳ್ಳುವ ಮಾಲೆಯಂತಹ ವಸ್ತುಗಳಿಂದ ಡಬ್ಬದಲ್ಲಿರುವ ಆಹಾರ ವಸ್ತುಗಳು ಬಳಸಲು ಅಯೋಗ್ಯವಾಗಿ ಬಿಡುತ್ತದೆ. ಇಂತಹ ಆಹಾರ ವಸ್ತುಗಳನ್ನು ಬಳಸಿದರೆ ನಮಗೆ ಅನಾರೋಗ್ಯವಾಗುವ ಸಾಧ್ಯತೆ ಹೆಚ್ಚು. ಹಿಂದಿನ ಕಾಲದಲ್ಲಿ ಡಬ್ಬದಲ್ಲಿ ಇಂತಹ ವಸ್ತುಗಳು ಕಂಡರೆ ನಮ್ಮ ಹಿರಿಯರು ಅವುಗಳನ್ನು ಬಿಸಿಲಿನಲ್ಲಿ ಇರಿಸಿ, ಸ್ವಚ್ಚಗೊಳಿಸಿ, ತಮಗೆ ತಿಳಿದ ನಾನಾ ತಂತ್ರಗಳನ್ನು ಉಪಯೋಗಿಸಿ ಬಳಸುತ್ತಿದ್ದರು. ಆದರೂ ಆರೋಗ್ಯದ ದೃಷ್ಟಿಯಿಂದ ಇಂತಹ ಧಾನ್ಯಗಳನ್ನು ಆಹಾರಕ್ಕಾಗಿ ಬಳಸುವುದು ಅಪೇಕ್ಷಣೀಯವಲ್ಲ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ