ಹಾಯ್ ಕಂಡ ಸ್ವಾಮಿಗಳು

ಹಾಯ್ ಕಂಡ ಸ್ವಾಮಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

ರವಿ ಬೆಳಗೆರೆಯವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಪಟ ಸ್ವಾಮಿಗಳ ಬಗ್ಗೆ ವರದಿಗಳ ಸಂಗ್ರಹವೇ ‘ಹಾಯ್ ಕಂಡ ಸ್ವಾಮಿಗಳು' ಎನ್ನುವ ಕೃತಿ. ಈ ಪುಸ್ತಕ ರವಿ ಬೆಳಗೆರೆ ಅವರ ನಿಧನದ ನಂತರ ಅವರ ಮಗಳು ಭಾವನಾ ಬೆಳಗೆರೆ ಅವರ ಮುತುವರ್ಜಿಯಲ್ಲಿ ಹೊರಬಂದಿದೆ. ಈ ಕೃತಿಯ ಬೆನ್ನುಡಿಯಲ್ಲಿ ಸ್ವತಃ ಭಾವನಾ ಬೆಳಗೆರೆ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ.. 

“ಹಿಂದೂಧರ್ಮ, ಗೋರಕ್ಷಣೆ, ಕೇಸರಿ ಉಡುಪು, ಇದು ಈಗ ಭಾರತದಲ್ಲಿ ವಿಪರೀತವಾಗಿ ದುರುಪಯೋಗವಾಗುತ್ತಿರುವ ಮಾರಾಟದ ಸರಕುಗಳು. ಕಾವಿಯನ್ನು ತೊಟ್ಟು, ಹಿಂದೂ ಧರ್ಮ ಹಾಗೂ ಗೋರಕ್ಷಣೆಯ ಮುಖವಾಡ ಹೊತ್ತ ವ್ಯಕ್ತಿಯು ಯಾವುದೇ ಅಪರಾಧ ಮಾಡಿದರೂ ಮಾಫಿ. ಪೊಲೀಸ್ ಹಾಗೂ ನ್ಯಾಯಾಲಯಗಳಿಂದ ತಪ್ಪಿಸಿಕೊಳ್ಳಲು ಪ್ರಬಲವಾದ ಗುರಾಣಿಯಾಗಿ ಬಳಸಲ್ಪಡುತ್ತಿರುವ ಈ ಅಸ್ತ್ರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಧರ್ಮದ್ರೋಹಿ ಮತ್ತು ದೇಶದ್ರೋಹಿ ಎಂಬ ಪಟ್ಟ ಖಚಿತ! ಶುರುವಿನಿಂದಲೂ ಹಾಯ್! ಇಂತಹ ಪಟ್ಟಗಳನ್ನು ಹೊತ್ತು ನಕಲಿ ಕಾವಿಧಾರಿಗಳ ಮುಖವಾಡವನ್ನು ಬಯಲಿಗೆಳೆಯುತ್ತ ಬಂದಿದೆ. ಈ ಪುಸ್ತಕ ಕೂಡ ಅಂತಹದ್ದೇ ಒಂದು ಪ್ರಯತ್ನ. ಹಾಯ್ ಆರಂಭದಿಂದಲೂ ಇಲ್ಲಿಯವರೆಗೆ ಪ್ರಕಟಗೊಂಡ ವರದಿಗಳನ್ನು ಈ ಹೊತ್ತಿಗೆಯ ರೂಪದಲ್ಲಿ ಪ್ರಕಟಿಸುತ್ತಿದೆ. ನಿಮಗೆ ಮುಸ್ಲಿಂ ಮುಲ್ಲಾಗಳು, ಕ್ರಿಶ್ಚಿಯನ್ ಪಾದ್ರಿಗಳ ಅನಾಚಾರ ಕಾಣುವುದಿಲ್ಲವೆ? ಎಂಬ ಪ್ರಶ್ನೆಯನ್ನು ಬಹಳಷ್ಟು ಮಂದಿ ಕೇಳಿದ್ದಾರೆ. ಮುಸ್ಲಿಂ ಕುರಿತು ನಮ್ಮ ಪ್ರಕಾಶನ ಪ್ರಕಟಿಸಿದ ‘ನೀನಾ ಪಾಕಿಸ್ತಾನ’ ಮತ್ತು ‘ಮುಸ್ಲಿಂ’ ಎಂಬ ಪುಸ್ತಕ ಕನ್ನಡ ಸಾರಸತ್ವ ಲೋಕದಲ್ಲೊಂದು ದಾಖಲೆಯನ್ನೆ ನಿರ್ಮಿಸಿದೆ. ಇದು ನಿಮ್ಮ ಗಮನಕ್ಕಿರಲಿ. ಇಷ್ಟಕ್ಕೂ ಇದು ನಮ್ಮ ಧರ್ಮ. ನಮ್ಮ ಧರ್ಮದೊಳಗೆ ನುಸುಳಿರುವ ಕ್ರಿಮಿಗಳನ್ನು ನಾವೇ ಹೊಡೆದಟ್ಟಬೇಕು. ಗೀತಾಚಾರ್ಯ ಶ್ರೀಕೃಷ್ಣ ಹೇಳಿದ್ದು ಇದನ್ನೆ. ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ…”

ಈ ಪುಸ್ತಕದಲ್ಲಿ ೩೫ ಸ್ವಾಮಿಗಳ ಬಗ್ಗೆ ಪ್ರಕಟಿತ ವರದಿಗಳಿವೆ. ಶಿರಸಿಯ ಶ್ರೀ ಶ್ರೀಧರ ಪಾದುಕಾಶ್ರಮ, ಕೆಂಗಾಪುರದ ಕಪಟ ಸ್ವಾಮಿ, ಮರಕಡದ ಸ್ವಾಮೀಜಿ, ಗುಲ್ಪರ್ಗಾದ ಪವಾಡ ಪುರುಷ, ರಾಮಚಂದ್ರಾಪುರ ಮಠದ ಸ್ವಾಮಿ, ಗಂಗಾವತಿಯ ಸಿರಿವಾರದ ವಂಚಕ, ರಾಣಿಬೆನ್ನೂರಿನ ವಂಚಕ ಜ್ಯೋತಿಷಿ, ಪರಮಹಂಸ ನಿತ್ಯಾನಂದ ಸ್ವಾಮಿ, ಶಿವಪುರದ ಸ್ವಾಮಿ, ಮಾತೆ ಮಹಾದೇವಿ, ಉಡುಪಿಯ ಶಿರೂರು ಸ್ವಾಮಿ, ಜಮಖಂಡಿ ಸ್ವಾಮಿ ಹೀಗೆ ಹತ್ತು ಹಲವಾರು ಸ್ವಾಮಿಗಳು, ಜ್ಯೋತಿಷಿಗಳು, ಪವಾಡ ಪುರುಷರ ಬಗ್ಗೆ ಸಮಗ್ರ ಮಾಹಿತಿಗಳಿವೆ. ಈ ವರದಿಗಳಲ್ಲಿ ಯಾವುದೇ ಫೋಟೋಗಳನ್ನು ಬಳಸದೇ ಇರುವುದು ಒಂದು ಕೊರತೆ. ಸುಮಾರು ೧೭೬ ಪುಟಗಳ ಈ ಕೃತಿಯನ್ನು ‘ನೋಡಿ ಸ್ವಾಮಿ ನಾವ್ ಇರೋದು ಹೀಗೆ ಅನ್ನುವ ಎಲ್ಲಾ ‘ಸ್ವಾಮಿ'ಗಳಿಗೆ ಅರ್ಪಣೆ ಮಾಡಲಾಗಿದೆ !