ಹಾರಾಡುವ ಮೀನು ಮತ್ತು ಶಾರ್ಕ್ ಗಳು ! (ಭಾಗ ೧)
ವಿಶಾಲವಾದ ಸಮುದ್ರದ ನೀರಿನಲ್ಲಿ ಹಾರಾಡುವ ಮೀನುಗಳನ್ನು ಪ್ರಪಂಚದೆಲ್ಲೆಡೆ ಕಾಣಬಹುದು. ಇವುಗಳ ದೋಣಿಯಾಕಾರದ ದೇಹರಚನೆಯೇ ಹಾರಟಕ್ಕೆ ನೆರವು ನೀಡಿದೆ. ತೆಳುವಾದ ದುಂಡನೆಯ ದೇಹ ದೊಡ್ಡದಾದ ರೆಕ್ಕೆಯಂತಹ ಈಜು ರೆಕ್ಕೆಗಳು, ನೀರಿನಿಂದ ಮೇಲಕ್ಕೇರಿ ಇವಕ್ಕೆ ಹಾರುವಂತಹ ವೇಗವನ್ನು ನೀಡಬಲ್ಲವು.
ಹಾರುವ ಮೀನಿನ ವಿಶೇಷತೆ: ಈ ಹಾರಾಡುವ ಮೀನುಗಳಿಗೆ ನೂರಾರು ಶತ್ರುಗಳು ! ಈ ಶತ್ರುಗಳಿಂದ ಪಾರಾಗಲು ನೀರಿನಿಂದ ಮೇಲಕ್ಕೇರಿ ಹಾರಾಡುವ ತಂತ್ರವನ್ನು ಇವು ಬೆಳೆಸಿಕೊಂಡಿರಬಹುದೇನೋ? ಮ್ಯಕರಲ್, ಟ್ಯೂನಾ (ಕತ್ತಿ ಮೀನು), ಮರ್ಲಿನ್ ನಂತಹ ದೊಡ್ಡ ಜಾತಿಯ ಮೀನುಗಳು ಇವುಗಳ ಬೇಟೆಯಾಡಲು ಹೊಂಚು ಹಾಕುತ್ತವೆ. ಈ ಹಾರಾಡುವ ಮೀನುಗಳಲ್ಲಿ ಸುಮಾರು ೪೦ ಪ್ರಭೇಧಗಳಿವೆ. ಈ ಹಾರಾಡುವ ರೆಕ್ಕೆಗಳ ಜತೆಯಲ್ಲಿ ಉದ್ದವಾದ ಬಾಲವಿದ್ದು, ಕೆಳಭಾಗ ತೆಳುವಾಗಿದ್ದು ಹಾರಾಟಕ್ಕೆ ಸಹಕರಿಸುತ್ತದೆ. ಇದರ ಪಕ್ಕೆಲುಬಿನಲ್ಲಿ ಇನ್ನೆರಡು ಈಜುರೆಕ್ಕೆಗಳು ತೆಳುವಾಗಿದ್ದು ಇವು ಹಾರಾಟಕ್ಕೆ ಅನುವು ಮಾಡಿಕೊಡುತ್ತವೆ.
೪೦೦ ಮೀಟರ್ ಎತ್ತರದ ಹಾರಾಟ ದಾಖಲೆ: ಇದರ ಮೇಲಕ್ಕೇರುವ ಪ್ರಕ್ರಿಯೆ ಅಥವಾ ಹಾರಾಟ ನೀರಿನೊಳಗಿಂದಲೇ ಪ್ರಾರಂಭವಾಗುತ್ತದೆ. ಇದು ಮೇಲಕ್ಕೇರುವ ಮುನ್ನ ನೀರಿನಲ್ಲಿ ಸುಮಾರು ಗಂಟೆಗೆ ೬೦ ಕಿ.ಮೀ. ವೇಗವನ್ನು ಗಳಿಸಿಕೊಳ್ಳುತ್ತದೆ. ಇದು ಈ ಗರಿಷ್ಟ ವೇಗವನ್ನು ತಲುಪುತ್ತಿದ್ದಂತೆಯೇ ತನ್ನ ದಿಕ್ಕನ್ನು ಮೇಲಕ್ಕೆ ತಿರುಗಿಸುತ್ತದೆ. ನೀರಿನಿಂದ ಹೊರಕ್ಕೆ ಚಿಮ್ಮುತ್ತಿದ್ದಂತೆಯೇ ಅದು ತನ್ನ ನಾಲ್ಕೂ ರೆಕ್ಕೆಗಳನ್ನು ಬಡಿಯಲಾರಂಬಿಸುತ್ತದೆ. ತನ್ನ ಮೊದಲ ನೆಗೆತದಲ್ಲಿ ೧.೨ ಮೀಟರ್ ಎತ್ತರಕ್ಕೆ ಹಾರುವ ಈ ಮಿಂಚು ನಂತರ ಸುಮಾರು ೨೦೦ ಮೀಟರ್ ಗಳ ಎತ್ತರದವರೆಗೂ ಹಾರಾಟ ನಡೆಸಬಲ್ಲದು. ನೀರಿಗಿಳಿಯಬೇಕೆಂದಾಗ ರೆಕ್ಕೆಗಳನ್ನು ಮಡಚಿ ಸಮುದ್ರಕ್ಕೆ ಮರಳುತ್ತದೆ. ಇದರ ದಾಖಲೆಯ ಎತ್ತರದ ಹಾರಾಟ ೪೦೦ ಮೀಟರ್.
ಈ ಸಮುದ್ರದ ಹಾರಾಡುವ ಮೀನುಗಳಿಗೆ ಬೆಳಕೆಂದರೆ ತುಂಬಾ ಪ್ರೀತಿ. ಬೆಳಕಿನೆಡೆಗೆ ಬಹುಬೇಗ ಆಕರ್ಷಿತಗೊಂಡು ಅದರೆಡೆಗೆ ಚಲಿಸಿಬಿಡುತ್ತವೆ. ಇವುಗಳ ಈ ದುರ್ಬಲತೆಯನ್ನೇ ಬಳಸಿಕೊಳ್ಳುವ ಸಮುದ್ರದ ಬಹುತೇಕ ದಾಳಿಕೋರ ಜಲಚರ ಹಾಗೂ ಮೀನುಗಾರರು ಇವುಗಳನ್ನು ಸುಲಭವಾಗಿ ಬೇಟೆಯಾಡಿ ಬಿಡುತ್ತಾರೆ.
ಶಾರ್ಕ್ ತಿಮಿಂಗಿಲಗಳು: ಈ ಶಾರ್ಕ್ ತಿಮಿಂಗಿಲಗಳು ಸಮುದ್ರದ ಅತ್ಯಂತ ದೊಡ್ಡ ಮೀನುಗಳು. ಇವು ಸುಮಾರು ೪೦ ಅಡಿ ಉದ್ದದವರೆಗೂ ಬೆಳೆಯಬಲ್ಲವು. ಆಶ್ಚರ್ಯವೆಂದರೆ ಈ ಶಾರ್ಕ್ ಗಳಿಗೆ ಸಣ್ಣ ಜಲಚರಗಳು ಬಹುಮುಖ್ಯ ಆಹಾರ. ಇದರ ಜತೆಯಲ್ಲಿ ಸಣ್ಣಪುಟ್ಟ ಮೀನುಗಳು ಕೂಡ !
ಈ ಶಾರ್ಕ್ ತಿಮಿಂಗಿಲಗಳು ಪ್ರಪಂಚದ ಎರಡನೆಯ ದೊಡ್ದ ಜಲಚರಗಳಾಗಿದ್ದು, ಬಿಸಿಲು ಕಾಯಿಸಿಕೊಳ್ಳುವ ಜಲಚರಗಳಾಗಿವೆ. ಇವು ತಮ್ಮ ಭಯಾನಕವಾದ ಹಲ್ಲುಗಳನ್ನು ತೆರೆದು ಬಾಯಿಯನ್ನು ಅಗಲಿಸಿದರೆ ಸಾಕು, ಬೇಟೆ ತಾನಾಗಿಯೇ ಬಲೆಗೆ ಬಿದ್ದಂತೆ! ಇವು ಅಗಲವಾದ ಚಪ್ಪಟೆ ತಲೆಯನ್ನು ಹೊಂದಿದ್ದು ಬಾಯಿಯ ಮೇಲ್ಭಾಗದಲ್ಲಿ ಮೊಂಡಾದ ಮೂತಿಯಿದೆ. ಬಾಯಿಯ ಅಕ್ಕಪಕ್ಕಗಳಲ್ಲಿ ಹೊರಚಾಚಿರುವ ಕಿವಿರುಗಳಿವೆ. ಇವುಗಳ ಬೆನ್ನು ಮತ್ತು ಪಕ್ಕೆಲುಬುಗಳಲ್ಲಿ ಬೂದು ಮತ್ತು ಕಂದು ಬಣ್ಣದ ಕಲೆಗಳು ಹಾಗೂ ನೇರ ಮತ್ತು ಅಡ್ಡಗೆರೆಗಳು ಕಂಡುಬರುತ್ತವೆ. ಇದರ ಹೊಟ್ಟೆಯ ತಳಭಾಗ ಮಾತ್ರ ಬಿಳಿಯಾಗಿದೆ. ಇದರ ಬೆನ್ನೆಲುಬಿನ ಅಕ್ಕ-ಪಕ್ಕಗಳಲ್ಲಿ ಎರಡು ಈಜುರೆಕ್ಕೆಗಳಿವೆ. ಇದಕ್ಕೆ ದೊಡ್ಡದಾದ ಈಜು ಬಾಲವೂ ಇದೆ.
ಸಾಮಾನ್ಯವಾಗಿ ಈ ಶಾರ್ಕ್ ತಿಮಿಂಗಿಲಗಳು ಉಷ್ಣವಲಯದ ಸಮುದ್ರದ ಬಿಸಿನೀರಿನ ವಾಸಿಗಳು. ಈ ಜೀವಿಗಳು ಪ್ರತಿ ವಸಂತ ಕಾಲದಲ್ಲಿ ಮಧ್ಯ ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಇಲ್ಲಿ ಈ ಶಾರ್ಕ್ ಗಳಿಗೆ ಬೇಕಾಗುವ ಆಹಾರ ಯಥೇಚ್ಛವಾಗಿ ದೊರೆಯುತ್ತದೆ.
(ಇನ್ನೂ ಇದೆ)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ